Smartphone: ಮೊಬೈಲ್ ಉತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿದ ಭಾರತ; ರಫ್ತು ಶೇ. 127ರಷ್ಟು ಹೆಚ್ಚಳ
ವಿಶ್ವದ ಮೂರನೇ ಆರ್ಥಿಕ ರಾಷ್ಟ್ರದ ಆಶಯದಲ್ಲಿ ಅಗಾಧ ಬೆಳವಣಿಗೆ ಸಾಧಿಸುತ್ತಿರುವ ಭಾರತ, ಮೊಬೈಲ್ ಉದ್ಯಮದಲ್ಲಿ ಎರಡನೇ ಅತಿ ದೊಡ್ಡ ದೇಶವಾಗಿ ಹೊರ ಹೊಮ್ಮಿದೆ. ಭಾರತದ ಮೊಬೈಲ್ ಫೋನ್ ರಫ್ತು ಒಂದೇ ದಶಕದಲ್ಲಿ 127 ಪಟ್ಟು ಹೆಚ್ಚಳ ಕಂಡಿದ್ದು, ಭವಿಷ್ಯದಲ್ಲಿ ಭಾರತ ಜಾಗತಿಕ ಉತ್ಪಾದನಾ ಹಬ್ ಆಗುವತ್ತ ದಾಪುಗಾಲಿರಿಸಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಕಳೆದ 10 ವರ್ಷಗಳಲ್ಲಿ ಭಾರತದಿಂದ (India) ಮೊಬೈಲ್ ಫೋನ್ ರಫ್ತು (Mobile Phone Exports) 127 ಪಟ್ಟು ಏರಿಕೆಯಾಗಿದ್ದು, 2014-15ರಲ್ಲಿ 1,500 ಕೋಟಿ ರೂ. ಆಗಿದ್ದ ರಫ್ತು 2024-25ರಲ್ಲಿ 2 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆ ರಾಜ್ಯ ಸಚಿವ (Minister of state for Electronics and IT) ಜಿತಿನ್ ಪ್ರಸಾದ (Jitin Prasada) ಲೋಕಸಭೆಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.
ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ (LSEM) ಅದರಲ್ಲಿಯೂ ಮೊಬೈಲ್ ಉತ್ಪಾದನೆಗೆ ಸಂಬಂಧಿಸಿ ಪ್ರೋತ್ಸಾಹಕ ಯೋಜನೆಯನ್ನು (PLI) ರೂಪಿಸಲಾಗಿತ್ತು. “PLI ಯೋಜನೆಯಡಿ ಈವರೆಗೆ 12,390 ಕೋಟಿ ರೂ. ಹೂಡಿಕೆ ಆಕರ್ಷಿತವಾಗಿದ್ದು, 8,44,752 ಕೋಟಿ ರೂ. ಉತ್ಪಾದನೆ, 4,65,809 ಕೋಟಿ ರೂ. ರಫ್ತು ಮತ್ತು 1,30,330 ನೇರ ಉದ್ಯೋಗಗಳನ್ನು ಜೂನ್ 2025ರವರೆಗೆ ಸೃಷ್ಟಿಸಲಾಗಿದೆ” ಎಂದು ಸಚಿವರು ವಿವರಿಸಿದ್ದಾರೆ.
2014-15ರಲ್ಲಿ ದೇಶದ ಮೊಬೈಲ್ ಫೋನ್ ಬೇಡಿಕೆಯ 75% ಆಮದಿನಿಂದ ಪೂರೈಸಲಾಗುತ್ತಿತ್ತು, ಆದರೆ 2024-25ರಲ್ಲಿ ಇದು ಕೇವಲ 0.02%ಕ್ಕೆ ಇಳಿದಿದೆ. “PLI ಯೋಜನೆಯಿಂದ ಭಾರತವು ಮೊಬೈಲ್ ಫೋನ್ ಆಮದುದಾರರಿಂದ ರಫ್ತುದಾರರಾಗಿ ಪರಿವರ್ತನೆಯಾಗಿದೆ. ಭಾರತವು ಈಗ ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಉತ್ಪಾದನಾ ದೇಶವಾಗಿದೆ” ಎಂದು ಜಿತಿನ್ ಪ್ರಸಾದ ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: MP Fund: ಶಿಕ್ಷಣಕ್ಕೆ ಡಿಜಿಟಲ್ ಸ್ಪರ್ಶ; ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ 100 ಶಾಲೆಗಳ ಸ್ಮಾರ್ಟ್ ಕ್ಲಾಸ್ ಯೋಜನೆಗೆ 1.46 ಕೋಟಿ ರೂ. ಅನುದಾನ
ಐಟಿ ಹಾರ್ಡ್‌ವೇರ್‌ಗಾಗಿ PLI ಯೋಜನೆ 2.0ರಡಿ 717.13 ಕೋಟಿ ರೂ. ಹೂಡಿಕೆಯಾಗಿದ್ದು, 12,195.84 ಕೋಟಿ ರೂ. ಉತ್ಪಾದನೆ ಮತ್ತು 5,056 ನೇರ ಉದ್ಯೋಗಗಳು ಸೃಷ್ಟಿಯಾಗಿವೆ. ಕಳೆದ 5 ವರ್ಷಗಳಲ್ಲಿ (2020-21ರಿಂದ) ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರದಲ್ಲಿ ಒಟ್ಟು 4,071 ಮಿಲಿಯನ್ ಡಾಲರ್‌ನ ವಿದೇಶಿ ನೇರ ಹೂಡಿಕೆ (FDI) ಆಗಿದ್ದು, ಇದರಲ್ಲಿ 2,802 ಮಿಲಿಯನ್ ಡಾಲರ್ MeitY PLI ಫಲಾನುಭವಿಗಳಿಂದ ಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಯೋಜನೆಯು ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರವನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸಿದ್ದು, ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಮಹತ್ವದ ಕೊಡುಗೆ ನೀಡಿದೆ. ಭಾರತದ ಮೊಬೈಲ್ ಉತ್ಪಾದನಾ ಸಾಮರ್ಥ್ಯವು ಈಗ ಜಾಗತಿಕ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿದೆ.