ಬೆಂಗಳೂರು ಏರ್‌ಪೋರ್ಟ್ ಸಿಟಿಯಲ್ಲಿ ತಲೆ ಎತ್ತಲಿದೆ ಬೃಹತ್ ಕನ್ವೆನ್ಷನ್ ಸೆಂಟರ್: ಪ್ರೆಸ್ಟೀಜ್ ಗ್ರೂಪ್‌ನೊಂದಿಗೆ BACL ಒಪ್ಪಂದ
ಬೆಂಗಳೂರು ಏರ್‌ಪೋರ್ಟ್ ಸಿಟಿಯ ಆವರಣದಲ್ಲಿ ಅತ್ಯಾಧುನಿಕ ಸಮಗ್ರ ತಾಣವೊಂದು ತಲೆ ಎತ್ತಲಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಸಮಾವೇಶ ಕೇಂದ್ರ ಹಾಗೂ ಪ್ರದರ್ಶನ ವೇದಿಕೆಗಳನ್ನು ಒಳಗೊಂಡ ಈ ತಾಣವನ್ನು ಸಹಭಾಗಿತ್ವದಲ್ಲಿ ನಿರ್ಮಿಸುವುದಾಗಿ ಪ್ರೆಸ್ಟೀಜ್ ಗ್ರೂಪ್ ಹಾಗೂ ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿ. (ಬಿಎಸಿಎಲ್) ಗುರುವಾರ ಘೋಷಿಸಿವೆ.
ಪ್ರೆಸ್ಟೀಜ್ ಗ್ರೂಪ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿ. -
ಬೆಂಗಳೂರು, ಜೂ.11: ಬೆಂಗಳೂರು ಏರ್‌ಪೋರ್ಟ್ ಸಿಟಿಯ ಆವರಣದಲ್ಲಿ ಅತ್ಯಾಧುನಿಕ ಸಮಗ್ರ ತಾಣವೊಂದು ತಲೆ ಎತ್ತಲಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಸಮಾವೇಶ ಕೇಂದ್ರ ಹಾಗೂ ಪ್ರದರ್ಶನ ವೇದಿಕೆಗಳನ್ನು ಒಳಗೊಂಡ ಈ ತಾಣವನ್ನು ಸಹಭಾಗಿತ್ವದಲ್ಲಿ ನಿರ್ಮಿಸುವುದಾಗಿ ಪ್ರೆಸ್ಟೀಜ್ ಗ್ರೂಪ್ (Prestige Group) ಹಾಗೂ ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿ. (ಬಿಎಸಿಎಲ್) (BACL) ಗುರುವಾರ ಘೋಷಿಸಿವೆ.
ಇದೊಂದು ಸಂಪೂರ್ಣ ಸಂಯೋಜಿತ ತಾಣವಾಗಿದ್ದು, ಕೇವಲ ಸಭೆ-ಸಮಾರಂಭಗಳಿಗೆ ಮಾತ್ರ ಸೀಮಿತವಾಗಿರದೆ, ವಾಣಿಜ್ಯ ಮತ್ತು ಮನರಂಜನೆಯ ಬೃಹತ್ ಹಬ್ ಆಗಿ ರೂಪುಗೊಳ್ಳಲಿದೆ.,
ಏನೆಲ್ಲ ಇರಲಿದೆ?
- ಅಂತಾರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಸಮಾವೇಶ ಹಾಗೂ ಪ್ರದರ್ಶನ ಕೇಂದ್ರ.
- ಜಾಗತಿಕವಾಗಿ ಖ್ಯಾತಿ ಪಡೆದಿರುವ 'ಸೇಂಟ್ ರೆಜಿಸ್' ಮತ್ತು ಮ್ಯಾರಿಯಟ್ ಮಾರ್ಕ್ವಿಸ್ ಬ್ರ್ಯಾಂಡ್‌ಗಳ ಐಷಾರಾಮಿ ಹೋಟೆಲ್‌ಗಳು.
- ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಕಲಾ ಮಂದಿರ.
- ಕಾರ್ಪೋರೇಟ್ ಕಂಪನಿಗಳಿಗಾಗಿ ಪ್ರೀಮಿಯಂ ಕಚೇರಿ ಸ್ಥಳಗಳು.
- ಜತೆಗೆ ಉನ್ನತ ದರ್ಜೆಯ ರೆಸ್ಟೋರೆಂಟ್‌ಗಳು ಇರಲಿವೆ.
ಬೆಂಗಳೂರಿಗೆ ಏನು ಲಾಭ?
ಪ್ರಸ್ತುತ ಜಾಗತಿಕ ಕಂಪನಿಗಳು ತಮ್ಮ ಸಭೆ - ಸಮಾರಂಭಗಳು, ಸಮ್ಮೇಳನಗಳು ಮತ್ತು ವಸ್ತು ಪ್ರದರ್ಶನಗಳನ್ನು ಏರ್ಪಡಿಸಲು ನಗರದಲ್ಲಿ ಅತ್ಯುತ್ತಮ ಮೂಲಸೌಕರ್ಯವಿರುವ ಅಂತಾರಾಷ್ಟ್ರೀಯ ಗುಣಮಟ್ಟದ ಸ್ಥಳಗಳನ್ನು ಹುಡುಕುತ್ತಿವೆ. ಈ ಹೊಸ ಕನ್ವೆನ್ಷನ್ ಸೆಂಟರ್ ನಿರ್ಮಾಣದಿಂದ ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಕಾರ್ಯಕ್ರಮಗಳು ಇನ್ನು ಮುಂದೆ ಬೆಂಗಳೂರಿನಲ್ಲಿ ನಡೆಯಲಿವೆ.
ಈ ಕೇಂದ್ರವು ವಿಮಾನ ನಿಲ್ದಾಣದ ಪಕ್ಕದಲ್ಲೇ ಇರುವುದರಿಂದ ವಿದೇಶಿ ಪ್ರಯಾಣಿಕರು, ಕಾರ್ಪೊರೇಟ್ ಕಂಪನಿಗಳ ಪ್ರತಿನಿಧಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಅಷ್ಟೇ ಅಲ್ಲದೆ ಈ ತಾಣವು ಬೆಂಗಳೂರಿನ ಜಾಗತಿಕ ಪ್ರವೇಶ ದ್ವಾರದ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸಲಿದೆ.
ಆರ್ಥಿಕ ಬೆಳವಣಿಗೆಗೆ ನೆರವು
ಈ ಬೃಹತ್ ಯೋಜನೆಯ ಕುರಿತು ಮಾತನಾಡಿರುವ ಪ್ರೆಸ್ಟೀಜ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಇರ್ಫಾನ್ ರಜಾಕ್, ನಗರಗಳ ಆರ್ಥಿಕ ಬೆಳವಣಿಗೆಗೆ ನೆರವಾಗುವಂತಹ ಐತಿಹಾಸಿಕ ತಾಣಗಳನ್ನು ನಿರ್ಮಿಸುವುದು ನಮ್ಮ ಗುರಿ. ಆತಿಥ್ಯ, ವ್ಯಾಪಾರ, ಸಂಸ್ಕೃತಿ ಮತ್ತು ಲೈಫ್‌ಸ್ಟೈಲ್ ಅನುಭವಗಳನ್ನು ಒಂದೇ ಸೂರಿನಡಿ ತರುವ ಮೂಲಕ, ಭಾರತದಲ್ಲಿ 'ಮಿಕ್ಸೆಡ್ ಯೂಸ್ ಡೆವಲಪ್ಮೆಂಟ್' ಕ್ಷೇತ್ರಕ್ಕೆ ನಾವು ಹೊಸ ಭಾಷ್ಯ ಬರೆಯುತ್ತಿದ್ದೇವೆ. ಬಿಎಸಿಎಲ್ ಜತೆಗಿನ ಈ ಪಾಲುದಾರಿಕೆಯು ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಘನತೆಯನ್ನು ಮತ್ತಷ್ಟು ಹೆಚ್ಚಿಸಲಿದೆʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಂಡಿ ಮತ್ತು ಸಿಇಒ ಹರಿ ಮರಾರ್ ಪ್ರತಿಕ್ರಿಯಿಸಿ, ನಗರಾಭಿವೃದ್ಧಿಯ ಮುಂದಿನ ಹಂತವು ವಾಣಿಜ್ಯೋದ್ಯಮ, ಪ್ರತಿಭೆ ಮತ್ತು ನವೀನ ಆಲೋಚನೆಗಳನ್ನು ಒಗ್ಗೂಡಿಸುವ ವಿಶಿಷ್ಟ ತಾಣಗಳನ್ನು ನಿರ್ಮಿಸುವ ಸಾಮರ್ಥ್ಯದ ಮೇಲೆ ನಿರ್ಧಾರವಾಗಲಿದೆ. ಪ್ರೆಸ್ಟೀಜ್ ಗ್ರೂಪ್‌ನೊಂದಿಗಿನ ನಮ್ಮ ಸಹಭಾಗಿತ್ವ ಈ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಏರ್‌ಪೋರ್ಟ್ ನಗರಗಳು ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕೇಂದ್ರಗಳಾಗಿ ಬೆಳೆಯುತ್ತಿದ್ದು, ಇಂತಹ ಯೋಜನೆಗಳು ಅವುಗಳ ಸುತ್ತಲಿನ ಪರಿಸರ ವ್ಯವಸ್ಥೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಲಿವೆ. ಈ ಹೊಸ ತಾಣವು ಏರ್‌ಪೋರ್ಟ್ ಪ್ರದೇಶದ ದೀರ್ಘಕಾಲೀನ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಅವರು ವಿವರಿಸಿದರು.
ಈ ಕೇಂದ್ರವು ಅಂತಾರಾಷ್ಟ್ರೀಯ ಸಮ್ಮೇಳನ, ಪ್ರದರ್ಶನ, ಕಾರ್ಪೊರೇಟ್ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಸಮಾರಂಭಗಳಿಗೆ ಈ ಪ್ರದೇಶದ ಪ್ರಮುಖ ತಾಣಗಳಲ್ಲಿ ಒಂದಾಗಿ ಹೊರಹೊಮ್ಮುವ ನಿರೀಕ್ಷೆಯಿದೆ.
ಭವಿಷ್ಯದ ಎಐ ತಜ್ಞರನ್ನು ರೂಪಿಸಲು ಮುಂದಾದ ಕಾಗ್ನಿಜೆಂಟ್, ಯುವ ಎಂಜಿನಿಯರ್‌ಗಳಿಗೆ ಬಂಪರ್ ಅವಕಾಶ!
ಭಾರತದ ನವೋದ್ಯಮ ಮತ್ತು ತಂತ್ರಜ್ಞಾನ ರಾಜಧಾನಿಯಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತಿರುವ ಬೆಂಗಳೂರಿನಲ್ಲಿ, ಈ ಯೋಜನೆಯು ಆರ್ಥಿಕ ಬೆಳವಣಿಗೆ, ವ್ಯವಹಾರಿಕ ಪ್ರವಾಸೋದ್ಯಮ, ಹೂಡಿಕೆ ಹಾಗೂ ವೇಗವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿಯೂ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ.