2,000 ರೂಪಾಯಿವರೆಗಿನ ಯುಪಿಐ ಪಾವತಿ ಉಚಿತ: ಅದಕ್ಕಿಂತ ಹೆಚ್ಚಿನ ಮೊತ್ತವಾದರೆ ಶುಲ್ಕ ಪಾವತಿಸಬೇಕ? ಪೇಮೆಂಟ್ಸ್ ಕಾಯ್ದೆಗೆ ತಿದ್ದುಪಡಿ ತಂದ ಕೇಂದ್ರ
UPI Payments: ಯುಪಿಐ ಮೂಲಕ ಹಣ ಪಾವತಿಸುವುದು ಭಾರತೀಯರಲ್ಲಿ ಹಲವರಿಗೆ ದೈನಂದಿನ ಅಭ್ಯಾಸವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ಕುರಿತು ನಡೆಯುತ್ತಿರುವ ಚರ್ಚೆಗಳು ಸಾರ್ವಜನಿಕರಲ್ಲಿ ದೊಡ್ಡ ಪ್ರಶ್ನೆಯೊಂದನ್ನು ಹುಟ್ಟುಹಾಕಿವೆ. ಈ ಬಗ್ಗೆ ಮೂಡಿರುವ ಗೊಂದಲಗಳಿಗೆ ಇಲ್ಲಿದೆ ಉತ್ತರ.
ಸಾಂದರ್ಭಿಕ ಚಿತ್ರ -
ನವದೆಹಲಿ, ಸೆ.15: ಭಾರತೀಯರು ಡಿಜಿಟಲ್ ವ್ಯವಸ್ಥೆಯನ್ನು (Digital Payments) ಬಳಸಿ ಕೆಲವು ವರ್ಷಗಳೇ ಉರುಳಿವೆ. ಯುಪಿಐ (UPI) ಮೂಲಕ ಹಣ ಪಾವತಿಸುವುದು ಈಗ ಹಲವರಿಗೆ ದೈನಂದಿನ ಅಭ್ಯಾಸವಾಗಿದೆ. ಕೇವಲ ಒಂದು ಕ್ಯುಆರ್ ಕೋಡ್ ಸ್ಕ್ಯಾನ್, ಯುಪಿಐ ಪಿನ್ ನಮೂದಿಸಿದರೆ ಸಾಕು, ಕ್ಷಣಾರ್ಧದಲ್ಲಿ ಪಾವತಿ ಮುಗಿದುಹೋಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ಕುರಿತು ನಡೆಯುತ್ತಿರುವ ಚರ್ಚೆಗಳು ಸಾರ್ವಜನಿಕರಲ್ಲಿ ದೊಡ್ಡ ಪ್ರಶ್ನೆಯೊಂದನ್ನು ಹುಟ್ಟುಹಾಕಿವೆ. ಭವಿಷ್ಯದಲ್ಲಿ ದೊಡ್ಡ ಮೊತ್ತದ ಯುಪಿಐ ಪಾವತಿಗಳನ್ನು ಮಾಡಲು ಬಳಕೆದಾರರು ಶುಲ್ಕ ಪಾವತಿಸಬೇಕಾಗುತ್ತದೆಯೇ? ಎಂಬ ಗೊಂದಲವೂ ಮೂಡಿದೆ.
ಈ ಗೊಂದಲದ ನಡುವೆಯೇ ಕೇಂದ್ರ ಸರ್ಕಾರವು ಮಹತ್ವದ ಸ್ಪಷ್ಟನೆಯೊಂದನ್ನು ನೀಡಿದೆ. 2,000 ರೂಪಾಯಿವರೆಗಿನ ಯಾವುದೇ ಯುಪಿಐ ವಹಿವಾಟುಗಳಿಗೆ ಬ್ಯಾಂಕ್‌ಗಳಾಗಲಿ ಅಥವಾ ಪಾವತಿ ಸೇವಾ ಸಂಸ್ಥೆಗಳಾಗಲಿ (PhonePe, Google Pay ಇತ್ಯಾದಿ) ಯಾವುದೇ ಪ್ರತ್ಯಕ್ಷ ಅಥವಾ ಪರೋಕ್ಷ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ಹೇಳಿದೆ.
ಸೆಪ್ಟೆಂಬರ್ 14ರಂದು ಹೊರಡಿಸಲಾದ ಅಧಿಸೂಚನೆಯ ಮೂಲಕ ಹಣಕಾಸು ಸಚಿವಾಲಯವು 2,000 ರೂಪಾಯಿವರೆಗಿನ ಯುಪಿಐ ವಹಿವಾಟುಗಳು ಮತ್ತು ರುಪೇ-ಚಾಲಿತ ಡೆಬಿಟ್ ಕಾರ್ಡ್ ಪಾವತಿಗಳನ್ನು ಎಲೆಕ್ಟ್ರಾನಿಕ್ ವಿಧಾನಗಳಾಗಿ ನಿರ್ದಿಷ್ಟಪಡಿಸಿದೆ. ಇವುಗಳ ಮೇಲೆ ಬ್ಯಾಂಕ್‌ಗಳು ಮತ್ತು ಸಿಸ್ಟಮ್ ಪೂರೈಕೆದಾರರು ಶುಲ್ಕ ವಿಧಿಸಲು ಸಾಧ್ಯವಿಲ್ಲ.
ಅಮೆರಿಕಕ್ಕೂ ಶೀಘ್ರದಲ್ಲಿಯೇ ಯುಪಿಐ ಎಂಟ್ರಿ: ಭಾರತದ ಡಿಜಿಟಲ್ ಶಕ್ತಿಗೆ ಮತ್ತೊಂದು ಜಾಗತಿಕ ಮೈಲುಗಲ್ಲು!
ಈ ನಿರ್ದಿಷ್ಟ ವಿಧಾನಗಳ ಮೂಲಕ ಪಾವತಿ ಮಾಡುವ ಅಥವಾ ಸ್ವೀಕರಿಸುವ ವ್ಯಕ್ತಿಯ ಮೇಲೆ ಯಾವುದೇ ಬ್ಯಾಂಕ್ ಅಥವಾ ಸಿಸ್ಟಮ್ ಪೂರೈಕೆದಾರರು ನೇರವಾಗಿ ಅಥವಾ ಪರೋಕ್ಷವಾಗಿ ಶುಲ್ಕ ವಿಧಿಸಲು ಸಾಧ್ಯವಿಲ್ಲ ಎಂದು ಅಧಿಸೂಚನೆಯು ನಿರ್ದಿಷ್ಟವಾಗಿ ಹೇಳುತ್ತದೆ.
ಇದರರ್ಥ 2,000 ರೂಪಾಯಿವರೆಗೆ ಯುಪಿಐ ಪಾವತಿ ಮಾಡುವ ಗ್ರಾಹಕರು, ಬ್ಯಾಂಕ್ ಅಥವಾ ಪಾವತಿ ಸೇವಾ ಸಂಸ್ಥೆಗಳು ಯಾವುದೇ ವಹಿವಾಟು ಶುಲ್ಕವನ್ನು ವಿಧಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ. ಇದೇ ರೀತಿಯ ವಿನಾಯಿತಿಯು ರೂಪೇ ಡೆಬಿಟ್ ಕಾರ್ಡ್‌ಗಳ ಮೂಲಕ ಮಾಡಲಾಗುವ ಪಾವತಿಗಳಿಗೂ ಅನ್ವಯಿಸುತ್ತದೆ.
ಸರ್ಕಾರ ನಿಜಕ್ಕೂ ಏನು ಹೇಳಿದೆ?
ಕೇಂದ್ರ ಹಣಕಾಸು ಸಚಿವಾಲಯವು ಸೆಪ್ಟೆಂಬರ್ 14ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, 2,000 ರೂಪಾಯಿವರೆಗಿನ ಯುಪಿಐ ವಹಿವಾಟುಗಳು ಮತ್ತು ರುಪೇ ಚಾಲಿತ ಡೆಬಿಟ್ ಕಾರ್ಡ್ ಪಾವತಿಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳೆಂದು ನಿರ್ದಿಷ್ಟಪಡಿಸಿದ್ದು, ಇವುಗಳ ಮೇಲೆ ಬ್ಯಾಂಕ್‌ಗಳು ಮತ್ತು ಪಾವತಿ ಸೇವಾ ಸಂಸ್ಥೆಗಳು ಯಾವುದೇ ಶುಲ್ಕವನ್ನು ವಿಧಿಸುವಂತಿಲ್ಲ.
ಯಾವುದೇ ಬ್ಯಾಂಕ್ ಅಥವಾ ಪಾವತಿ ಸೇವಾ ಸಂಸ್ಥೆಯು ಈ ನಿರ್ದಿಷ್ಟಪಡಿಸಿದ ಮಾಧ್ಯಮಗಳ ಮೂಲಕ ಹಣ ಪಾವತಿಸುವ ಅಥವಾ ಸ್ವೀಕರಿಸುವ ವ್ಯಕ್ತಿಯ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದೇ ಶುಲ್ಕವನ್ನು ಹೇರುವಂತಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
“11 ದೇಶಗಳಲ್ಲಿ ಯುಪಿಐ ಕಾರ್ಯನಿರ್ವಹಿಸುತ್ತಿದೆ”: ಜಾಗತಿಕ ವ್ಯಾಪ್ತಿ ಮತ್ತಷ್ಟು ಹೆಚ್ಚಳ ಎಂದ ಪ್ರಧಾನಿ ಮೋದಿ
2,000 ರೂ.ಗಿಂತ ಹೆಚ್ಚಿನ ಯುಪಿಐ ಪಾವತಿಗಳಿಗೆ ಶುಲ್ಕ?
2,000 ರೂಪಾಯಿಗಿಂತ ಹೆಚ್ಚಿನ ಯುಪಿಐ ಪಾವತಿಗಳಿಗೆ ಯಾವುದೇ ಶುಲ್ಕ ಅನ್ವಯಿಸುವುದಿಲ್ಲ. ಕೇಂದ್ರ ಸರ್ಕಾರ ಹೊರಡಿಸಿರುವ ಇತ್ತೀಚಿನ ಅಧಿಸೂಚನೆಯಲ್ಲಿ, ಯಾವುದೇ ವ್ಯಕ್ತಿಯು ರೂ. 2000 ಕ್ಕಿಂತ ಹೆಚ್ಚಿನ ಮೊತ್ತದ ಯುಪಿಐ ಪಾವತಿ ಮಾಡಿದರೆ ಅದಕ್ಕೆ ಕಡ್ಡಾಯವಾಗಿ ಶುಲ್ಕ ಪಾವತಿಸಬೇಕು ಎಂದು ಎಲ್ಲಿಯೂ ಹೇಳಿಲ್ಲ. ʼʼಬೀದಿ ಬದಿ ವ್ಯಾಪಾರಿಗಳು, ಸಣ್ಣ ಅಂಗಡಿ ಮಾಲಕರು, ಟ್ಯಾಕ್ಸಿ ಚಾಲಕರು ಮತ್ತು ಸಾಮಾನ್ಯ ಗ್ರಾಹಕರಿಗೆ ಯುಪಿಐ ಸೇವೆ ಸಂಪೂರ್ಣ ಉಚಿತವಾಗಿ ಮುಂದುವರಿಯಲಿದೆʼʼ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
2,000 ರೂಪಾಯಿ ಮೊತ್ತದ ಅಂಕಿ-ಅಂಶವು ಅತ್ಯಂತ ಮಹತ್ವದ್ದಾಗಲು ಕಾರಣವೆಂದರೆ, ಸರ್ಕಾರದ ಇತ್ತೀಚಿನ ಅಧಿಸೂಚನೆಯು ಈ ಮಿತಿಯವರೆಗಿನ ಯುಪಿಐ ವಹಿವಾಟುಗಳನ್ನು ನಿರ್ದಿಷ್ಟವಾಗಿ ಸುರಕ್ಷಿತ ವರ್ಗ ಎಂದು ಗುರುತಿಸಿದೆ.
2,000 ರೂಪಾಯಿಗಿಂತ ಹೆಚ್ಚಿನ ಬೃಹತ್ ವಹಿವಾಟುಗಳ ಮೇಲೆ ಎಂಡಿಆರ್ ದರ ಅಥವಾ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅನ್ವಯಿಸುವ ನಿಬಂಧನೆಯನ್ನು ಪೇಮೆಂಟ್ಸ್ ತಿದ್ದುಪಡಿ ಕಾಯ್ದೆಯಲ್ಲಿ ತರಲಾಗಿದೆಯಾದರೂ, ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಭವಿಷ್ಯದಲ್ಲಿ ಈ ಶುಲ್ಕ ಜಾರಿಗೆ ಬಂದರೂ ಅದನ್ನು ದೊಡ್ಡ ವ್ಯಾಪಾರಿಗಳು ಪಾವತಿಸಬೇಕಿರುತ್ತದೆಯೇ ಹೊರತು ಸಾಮಾನ್ಯ ಗ್ರಾಹಕರು ಅಥವಾ ಸಣ್ಣ ವ್ಯಾಪಾರಿಗಳಿಗೆ ಅನ್ವಯವಾಗುವುದಿಲ್ಲ.