Chitradurga Accident: ಚಿತ್ರದುರ್ಗದಲ್ಲಿ ಭೀಕರ ಅಪಘಾತ; ಲಾರಿಗೆ ಕಾರು ಡಿಕ್ಕಿಯಾಗಿ ಮೂವರ ಸಾವು, ಟೈರ್ ಸ್ಫೋಟದಿಂದ ದುರಂತ!
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೆ.ಆರ್. ಹಳ್ಳಿ ಗೇಟ್ ಸಮೀಪ ಭೀಕರ ಅಪಘಾತ ಸಂಭವಿಸಿದೆ. ಕೆ.ಆರ್. ಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸರಕು ಸಾಗಣೆ ಲಾರಿಯ ಟೈರ್ ದಿಢೀರನೆ ಸಿಡಿದಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಲಾರಿಗೆ ಹಿಂಬದಿ ಬರುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಕಾರಿನಲ್ಲಿದ್ದ ಮೂವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
-
ಚಿತ್ರದುರ್ಗ: ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿದ ಲಾರಿಗೆ ಹಿಂದಿನಿಂದ ಬಂದ ಕಾರು ಡಿಕ್ಕಿಯಾಗಿ ಮೂವರು ಯುವಕರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೆ.ಆರ್. ಹಳ್ಳಿ ಗೇಟ್ ಸಮೀಪ ಸಂಭವಿಸಿದೆ. ಮೃತರೆಲ್ಲರೂ ಕೊಪ್ಪಳ ಜಿಲ್ಲೆಯ ಕುಷ್ಟಗಿ ಮೂಲದವರೆಂದು ತಿಳಿದುಬಂದಿದೆ.
ಮಂಗಳವಾರ ಸಂಜೆ ಕೆ.ಆರ್. ಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದ ಸರಕು ಸಾಗಣೆ ಲಾರಿಯ ಟೈರ್ ದಿಢೀರನೆ ಸಿಡಿದಿದೆ. ಪರಿಣಾಮವಾಗಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯು ಹೆದ್ದಾರಿಯ ಎಡಭಾಗಕ್ಕೆ ತಿರುಗಿ ಅಡ್ಡಲಾಗಿ ನಿಂತಿದೆ. ಇದೇ ವೇಳೆ ಲಾರಿಯ ಹಿಂದೆಯೇ ವೇಗವಾಗಿ ಬರುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ.
ಅಪಘಾತದ ಭೀಕರತೆಗೆ ಕಾರಿನಲ್ಲಿದ್ದ ಕುಷ್ಟಗಿ ಮೂಲದ ಶಶಿಧರ್ (22) ಹಾಗೂ ಮಂಜುನಾಥ್ (22) ಎಂಬ ಯುವಕರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಬಸವರಾಜ್ (21) ಎಂಬಾತನನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗಮಧ್ಯೆಯೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹಿರಿಯೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಮಾಹಿತಿ ತಿಳಿದ ತಕ್ಷಣ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಜಖಂಗೊಂಡ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಲಬುರಗಿಯಲ್ಲಿ ತಾಂತ್ರಿಕ ದೋಷದಿಂದ ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಕಲಬುರಗಿ: ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತರಬೇತಿ ವಿಮಾನವೊಂದು ರೈತರ ಜಮೀನಿನಲ್ಲಿರುವ ತೊಗರಿ ಹೊಲದಲ್ಲಿ ತುರ್ತು ಭೂಸ್ಪರ್ಶ (Plane emergency landing) ಮಾಡಿದ್ದು, ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿ ಅಪಾಯದಿಂದ ಪಾರಾದ ಘಟನೆ ಮಂಗಳವಾರ ಕಲಬುರಗಿ ವಿಮಾನ ನಿಲ್ದಾಣ (Kalaburagi Airport) ಸಮೀಪದ ಮಾಡಬೂಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ವಿಮಾನವನ್ನು ಸುರಕ್ಷಿತವಾಗಿ ತೊಗರಿ ಹೊಲದಲ್ಲಿ ಇಳಿಸಿದ್ದಾರೆ. ಇದರಿಂದ ಸಂಭವಿಸಬಹುದಾಗಿದ್ದ ಭಾರಿ ದುರಂತ ತಪ್ಪಿದೆ. ಘಟನೆಯಲ್ಲಿ ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿಗೂ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.
ವಿಮಾನ ತುರ್ತು ಭೂಸ್ಪರ್ಶ ಮಾಡಿರುವ ಮಾಹಿತಿ ತಿಳಿಯುತ್ತಿದ್ದಂತೆ ಮಾಡಬೂಳ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷವೇ ಘಟನೆಗೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ವಿಮಾನ ನಿಲ್ದಾಣದ ಸಮೀಪವೇ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.