ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

HMT Fake Watch Sales: ಆನ್‌ಲೈನ್‌ನಲ್ಲಿ ನಕಲಿ ಎಚ್‌ಎಂಟಿ ವಾಚ್‌ಗಳ ಮಾರಾಟ: ಫ್ಲಿಪ್‌ಕಾರ್ಟ್‌ಗೆ ನೋಟಿಸ್ ಜಾರಿ

ಎಚ್‌ಎಂಟಿ ಬ್ರ್ಯಾಂಡ್‌ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡು ಕೆಲವು ಕಿಡಿಗೇಡಿಗಳು ಆನ್‌ಲೈನ್‌ನಲ್ಲಿ ನಕಲಿ ವಾಚ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆನ್‌ಲೈನ್‌ನಲ್ಲಿ ಅತ್ಯಂತ ಕಳಪೆ ಗುಣಮಟ್ಟದ ನಕಲಿ ಎಚ್‌ಎಂಟಿ ವಾಚ್‌ಗಳ ಮಾರಾಟ ಹಿನ್ನೆಲೆಯಲ್ಲಿ ಫ್ಲಿಪ್‌ಕಾರ್ಟ್ ಸಂಸ್ಥೆಗೆ ಲೀಗಲ್‌ ನೋಟಿಸ್‌ ನೀಡಲಾಗಿದೆ.

ಆನ್‌ಲೈನ್‌ನಲ್ಲಿ ನಕಲಿ ಎಚ್‌ಎಂಟಿ ವಾಚ್ ಮಾರಾಟ: ಫ್ಲಿಪ್‌ಕಾರ್ಟ್‌ಗೆ ನೋಟಿಸ್

-

Prabhakara R
Prabhakara R Nov 21, 2026 3:42 PM

ಬೆಂಗಳೂರು: ದೇಶದ ಐಕಾನಿಕ್ ವಾಚ್ ತಯಾರಕ ಸಂಸ್ಥೆ ಎಚ್‌ಎಂಟಿ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ವಾಚ್‌ಗಳ (HMT Fake Watch Sales) ಮಾರಾಟ ಬೆಳಕಿಗೆ ಬಂದಿದ್ದು, ಈ ಸಂಬಂಧ ಕಂಪನಿಯು ಕಾನೂನು ಕ್ರಮಕ್ಕೆ ಮುಂದಾಗಿದೆ. ಇತ್ತೀಚಿನ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕೇಂದ್ರ ಸಚಿವ ಚ್.ಡಿ. ಕುಮಾರಸ್ವಾಮಿ ಅವರು 'ಎಚ್‌ಎಂಟಿ ಕನ್ನಡಿಗ' ನೂತನ ವಾಚ್ ಸರಣಿಯನ್ನು ಲೋಕಾರ್ಪಣೆ ಮಾಡಿದ ಬಳಿಕ ಎಚ್‌ಎಂಟಿ ವಾಚ್‌ಗಳಿಗೆ ಬೇಡಿಕೆ ಹೆಚ್ಚಾಗಿತ್ತು.

ಈ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡು ಕೆಲವು ಕಿಡಿಗೇಡಿಗಳು ಆನ್‌ಲೈನ್‌ನಲ್ಲಿ ನಕಲಿ ವಾಚ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಕಂಪನಿಯ ಬಳಿ ಸ್ಟಾಕ್ ಇಲ್ಲದ ವಾಚ್‌ಗಳು ಸಹ ಆನ್‌ಲೈನ್‌ನಲ್ಲಿ ಲಭ್ಯವಿರುವುದನ್ನು ಗಮನಿಸಿದ ಎಚ್‌ಎಂಟಿ ಸಿಎಂಡಿ ರಮೇಶ್ ಅವರು ಸ್ವತಃ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಫ್ಲಿಪ್‌ಕಾರ್ಟ್‌ನಲ್ಲಿ ತಮ್ಮದೇ ಹೆಸರಿನಲ್ಲಿ 290 ರೂಪಾಯಿಗೆ ವಾಚ್ ಆರ್ಡರ್ ಮಾಡಿದ್ದಾರೆ. ತಲುಪಿದ ಪಾರ್ಸೆಲ್ ತೆರೆದು ನೋಡಿದಾಗ ಅದು ಅತ್ಯಂತ ಕಳಪೆ ಗುಣಮಟ್ಟದ ನಕಲಿ ಎಚ್‌ಎಂಟಿ ವಾಚ್ ಎಂಬುದು ಬಯಲಾಗಿದೆ. ಈ ಹಿನ್ನೆಲೆಯಲ್ಲಿ ನಕಲಿ ವಾಚ್‌ಗಳ ಮಾರಾಟಕ್ಕೆ ಕಡಿವಾಣ ಹಾಕುವಂತೆ ಫ್ಲಿಪ್‌ಕಾರ್ಟ್ ಸಂಸ್ಥೆಗೆ ಎಚ್‌ಎಂಟಿ ಲೀಗಲ್ ನೋಟಿಸ್ ಜಾರಿ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲೂ ಎಚ್‌ಎಂಟಿ ರಿಫರ್ಬಿಷ್ಡ್ ವಾಚ್‌ಗಳ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ಪ್ರಚಾರ ಮಾಡಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆ ಎನ್ನಲಾಗಿದೆ. ಇಂತಹ ಸುಳ್ಳು ಪ್ರಚಾರ ನಡೆಸುತ್ತಿದ್ದ ಹಲವರಿಗೆ ಕಂಪನಿ ನೋಟಿಸ್ ನೀಡಿದೆ. ಅಲ್ಲದೆ, ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಕ್ಲಾಸಿಕ್ ಟೈಮ್ ಮಳಿಗೆಯಲ್ಲೂ ನಕಲಿ ಎಚ್‌ಎಂಟಿ ವಾಚ್‌ಗಳನ್ನು ಅಸಲಿ ಎಂದು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಮೇರೆಗೆ ಮಳಿಗೆಯ ಮಾಲೀಕರಿಗೂ ನೋಟಿಸ್ ನೀಡಲು ಕಂಪನಿ ನಿರ್ಧರಿಸಿದೆ.

ಎಚ್‌ಎಂಟಿ ವಾಚ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ದುರುಪಯೋಗಪಡಿಸಿಕೊಂಡು ಚೀನಾ ಮಾರುಕಟ್ಟೆಯಿಂದ ನಕಲಿ ವಾಚ್‌ಗಳನ್ನು ತರಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಆತಂಕವೂ ವ್ಯಕ್ತವಾಗಿದೆ. ಕಂಪನಿ ಮತ್ತೆ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಇಂತಹ ನಕಲಿ ವಹಿವಾಟುಗಳಿಂದ ಬ್ರ್ಯಾಂಡ್ ಮೌಲ್ಯಕ್ಕೆ ಧಕ್ಕೆ ಉಂಟಾಗುವುದಲ್ಲದೆ, ಗ್ರಾಹಕರ ನಂಬಿಕೆಯೂ ಕುಸಿಯುವ ಅಪಾಯವಿದೆ ಎಂದು ಕಂಪನಿ ತಿಳಿಸಿದೆ.

ಇದೇ ಮೊದಲ ಬಾರಿಗೆ ಲಾಭ ಗಳಿಸಿದ ಜಾವಾ-ಯೆಜ್ಡಿ-ಬಿಎಸ್‌ಎ: 2027ರಲ್ಲಿ 4 ಹೊಸ ಬೈಕ್ ಬಿಡುಗಡೆಗೆ ಕ್ಲಾಸಿಕ್ ಲೆಜೆಂಡ್ಸ್ ಸಜ್ಜು

ನಕಲಿ ವಾಚ್ ಮಾರಾಟದ ವಿರುದ್ಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಎಚ್‌ಎಂಟಿ ಸಂಸ್ಥೆ, ಕಾನೂನು ಹೋರಾಟವನ್ನು ತೀವ್ರಗೊಳಿಸಿದೆ. ಗ್ರಾಹಕರು ಮೋಸ ಹೋಗದಂತೆ ಎಚ್ಚರಿಕೆ ವಹಿಸಬೇಕು ಮತ್ತು ಅಧಿಕೃತ ಮಳಿಗೆಗಳಲ್ಲೇ ವಾಚ್ ಖರೀದಿಸಬೇಕು ಎಂದು ಸಿಎಂಡಿ ರಮೇಶ್ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಎಂ.ಜಿ. ರಸ್ತೆ, ಬಳ್ಳಾರಿ ರಸ್ತೆ ಹಾಗೂ ಜಾಲಹಳ್ಳಿಯಲ್ಲಿರುವ ಎಚ್‌ಎಂಟಿ ಮ್ಯೂಸಿಯಂನಲ್ಲಿ ಮಾತ್ರ ಅಧಿಕೃತವಾಗಿ ಹೆಚ್‌ಎಂಟಿ ವಾಚ್‌ಗಳು ಲಭ್ಯವಿವೆ ಎಂದು ಕಂಪನಿ ಸ್ಪಷ್ಟಪಡಿಸಿದೆ.