ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ನೇಹಿತೆಯ ಮನೆಯೊಳಗೆ 10ನೇ ತರಗತಿ ಬಾಲಕನ ಶವ ಪತ್ತೆ: 2 ಕುಟುಂಬಗಳ ನಡುವೆ ಘರ್ಷಣೆ, ಪೊಲೀಸರಿಗೆ ಗಾಯ

Faridabad Crime News: ಹರಿಯಾಣದ ಫರಿದಾಬಾದ್‌ನ ಖಾಸಗಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನೊಬ್ಬ ಸಹಪಾಠಿ ಬಾಲಕಿಯ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾನೆ. ಬಾಲಕ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಬಾಲಕಿಯ ಕುಟುಂಬದವರು ಮಾಹಿತಿ ನೀಡಿದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಸಹಪಾಠಿಯ ಮನೆಯೊಳಗೆ 10ನೇ ತರಗತಿಯ ಬಾಲಕನ ಶವ ಪತ್ತೆ

ಸಾಂದರ್ಭಿಕ ಚಿತ್ರ -

Priyanka P
Priyanka P Oct 9, 2026 5:41 PM

ಚಂಡೀಗಢ, ಅ. 9: ಸಹಪಾಠಿ ಬಾಲಕಿಯ ಮನೆಯೊಳಗೆ 10ನೇ ತರಗತಿಯ ಬಾಲಕ ಶವವಾಗಿ ಪತ್ತೆಯಾದ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ (Faridabad Crime News) ನಡೆದಿದೆ. ಫರಿದಾಬಾದ್‌ನ ಖಾಸಗಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಮತ್ತು ಆತನ ಸಹಪಾಠಿ ಬಾಲಕಿ ಇಬ್ಬರೂ ಅಪ್ರಾಪ್ತ ವಯಸ್ಕರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ (crime news). ಬಾಲಕನನ್ನು ಕೊಲೆ ಮಾಡಲಾಗಿದೆ ಎಂದು ಆತನ ಕುಟುಂಬ ಆರೋಪಿಸಿದೆ. ಆದರೆ ಆತ ತಮ್ಮ ಮನೆಯ ಹುಡುಗಿಯನ್ನು ಹಿಂಬಾಲಿಸುತ್ತಿದ್ದ. ಗುರುವಾರ (ಅ. 8) ರಾತ್ರಿ ತಮ್ಮ ಮನೆಯೊಳಗೆ ನುಸುಳಿ ನೇಣು ಬಿಗಿದುಕೊಂಡ ಎಂದು ಬಾಲಕಿ ಕುಟುಂಬ ಹೇಳಿದೆ.

17 ವರ್ಷದ ಮೃತ ಬಾಲಕ ಸಾಯಿ ನಗರ ಭಾಗ-2ರ ನಿವಾಸಿಯಾಗಿದ್ದು, ಶಿವಶಕ್ತಿ ಎನ್ಕ್ಲೇವ್‌ನಲ್ಲಿರುವ ಬಾಲಕಿಯ ನಿವಾಸಕ್ಕೆ ಹೋಗಿದ್ದ. ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಬಾಲಕಿಯ ಕುಟುಂಬದವರು ಮಾಹಿತಿ ನೀಡಿದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ನಂತರ ಬಾಲಕನ ಕುಟುಂಬ ಕೂಡ ಸ್ಥಳಕ್ಕೆ ತಲುಪಿತು. ನಂತರ ಘರ್ಷಣೆ ಭುಗಿಲೆದ್ದಿತು.

ಬಾಲಕನ ಕುಟುಂಬವು ಬಾಲಕಿಯ ಮನೆಗೆ ನುಗ್ಗಿ ಆಕೆಯ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿ, ಆತನನ್ನು ಕೊಲೆ ಮಾಡಿ, ಶವವನ್ನು ಸೀಲಿಂಗ್‌ಗೆ ನೇತುಹಾಕಿ ಆತ್ಮಹತ್ಯೆ ಎಂದು ಬಿಂಬಿಸಲಾಗಿದೆ ಎಂದು ಆರೋಪಿಸಿದ್ದಾರೆ ಎಂದು ಪೊಲೀಸ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ವಿದ್ಯಾರ್ಥಿನಿ ಜತೆ ಚಾಟ್‌: ಮನೆಗೆ ಭೇಟಿ ನೀಡಿದಾಗ ದೌರ್ಜನ್ಯ ಎಸಗಿದ ಕಾಮುಕ ಶಿಕ್ಷಕ

ಬಾಲಕನ ಕುಟುಂಬಸ್ಥರು ಇಡೀ ಮನೆಯನ್ನು ಧ್ವಂಸಗೊಳಿಸಿದ್ದಾರೆ. ಬಳಿಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು, ಈಗಾಗಲೇ ಸ್ಥಳದಲ್ಲಿದ್ದು ತನಿಖೆ ನಡೆಸುತ್ತಿದ್ದ ಪೊಲೀಸರ ಜತೆಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನೂ ಸ್ಥಳಕ್ಕೆ ಕರೆಸಲಾಯಿತು. ಈ ಘರ್ಷಣೆಯಲ್ಲಿ ಇಬ್ಬರು ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅವರು ಹೇಳಿದ್ದಾರೆ. ಎರಡೂ ಕುಟುಂಬಗಳನ್ನು ಘರ್ಷಣೆ ನಿಯಂತ್ರಿಸಲು ಪೊಲೀಸರು ಸುಮಾರು ಒಂದು ಗಂಟೆ ಪ್ರಯತ್ನಿಸಬೇಕಾಗಿತು. ಸದ್ಯ ಪರಿಸ್ಥಿತಿ ತಿಳಿಯಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಬಾಲಕಿಯ ಮನೆಯಿಂದ ಮೃತದೇಹವನ್ನು ವಶಕ್ಕೆ ತೆಗೆದುಕೊಂಡು ಬಾದ್‌ಶಾ ಖಾನ್ ಸಿವಿಲ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದ್ದು, ಬಾಲಕ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾನೆಯೇ ಅಥವಾ ಕೊಲೆಯಾಗಿದ್ದಾನೆಯೇ ಎಂಬುದು ಶವಪರೀಕ್ಷೆಯಿಂದ ತಿಳಿದುಬರಲಿದೆ ಎಂದು ಅವರು ಹೇಳಿದ್ದಾರೆ.

ಬಾಲಕ ಸಾಯಿ ಕಿರುಕುಳ ನೀಡಿದ್ದಕ್ಕಾಗಿ ಶಾಲೆಯಲ್ಲಿ ದೂರು ದಾಖಲಿಸಿದ್ದೆವು ಎಂದು ಬಾಲಕಿ ಕುಟುಂಬ ಹೇಳಿದೆ. ಬಳಿಕ ಅವನು ಕ್ಷಮೆಯಾಚಿಸಿದ್ದ. ಶಾಲೆಯಲ್ಲಿ ಅವಳನ್ನು ಮತ್ತೆ ಹಿಂಬಾಲಿಸುವುದಿಲ್ಲ ಎಂದು ಭರವಸೆ ನೀಡಿದ್ದ. ಪ್ರಾಂಶುಪಾಲರು, ಶಿಕ್ಷಕರು ಮತ್ತು ಸಹಪಾಠಿಗಳನ್ನು ವಿಚಾರಣೆ ಮಾಡಿದ ನಂತರ ಈ ವಿಚಾರಗಳು ಸ್ಪಷ್ಟವಾಗುತ್ತವೆ ಎಂದು ಬಾಲಕಿಯ ಕುಟಂಬಸ್ಥರು ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು. ವರದಿ ಬಂದ ಬಳಿಕ ಬಾಲಕನ ಸಾವಿಗೆ ಕಾರಣ ಸ್ಪಷ್ಟವಾಗುತ್ತದೆ ಎಂದು ಪೊಲೀಸರು ವಿವರಿಸಿದ್ದಾರೆ.