Murder Case: ದತ್ತ ಜಯಂತಿ ಬ್ಯಾನರ್ ಗಲಾಟೆ; ಕಾಂಗ್ರೆಸ್ ಕಾರ್ಯಕರ್ತನ ಕೊಲೆ
Chikkamagaluru News: ದತ್ತ ಜಯಂತಿ ಬ್ಯಾನರ್ ತೆರವು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಶುರುವಾದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಕೊಲೆಯಾಗಿದೆ. ಚಿಕ್ಕಮಗಳೂರಿನ ಸಖರಾಯಪಟ್ಟಣ ಬಸ್ ನಿಲ್ದಾಣದ ಮುಂಭಾಗ ಬ್ಯಾನರ್ ವಿಚಾರಕ್ಕೆ ಭಜರಂಗದಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ಸಂಭವಿಸಿತ್ತು.
ಕೊಲೆಯಾದ ವ್ಯಕ್ತಿ ಗಣೇಶ್ (ಸಂಗ್ರಹ ಚಿತ್ರ) -
ಚಿಕ್ಕಮಗಳೂರು: ದತ್ತ ಜಯಂತಿ ಬ್ಯಾನರ್ ತೆರವು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಶುರುವಾದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಕೊಲೆಯಾಗಿದೆ. ಚಿಕ್ಕಮಗಳೂರಿನ ಸಖರಾಯಪಟ್ಟಣ ಬಸ್ ನಿಲ್ದಾಣದ ಮುಂಭಾಗ ಬ್ಯಾನರ್ ವಿಚಾರಕ್ಕೆ ಭಜರಂಗದಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ಸಂಭವಿಸಿತ್ತು. ಘರ್ಷಣೆ ವೇಳೆ ಗಣೇಶ್ ಎಂಬಾತನನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಭಜರಂಗದಳ ಕಾರ್ಯಕರ್ತರಾದ ಸಂಜಯ್, ಮಿಥುನ್ ಎಂಬುವವರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಮೇಲೆ ಮಚ್ಚಿನಿಂದ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ದಾಳಿ ನಡೆಸಿದ ಸ್ಥಳದಲ್ಲಿಯೇ ಗಣೇಶ್ ಸಾವನ್ನಪ್ಪಿದ್ದಾನೆ. ಆರೋಪಿ ಸಂಜಯ್ ತಲೆಗೂ ಗಂಭೀರ ಗಾಯವಾಗಿದ್ದು, ಈತನನ್ನು ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಮತ್ತೋರ್ವ ಆರೋಪಿ ಮಿಥುನ್ ಸದ್ಯ ತಲೆ ಮರೆಸಿಕೊಂಡಿದ್ದಾನೆ. ಗಣೇಶ್ ತಲೆ ಭಾಗಕ್ಕೆ ಮಚ್ಚಿನಿಂದ ದಾಳಿ ನಡೆಸಿದ ಪರಿಣಾಮ ಆತ ಸಾವನ್ನಪ್ಪಿದ್ದು, ಆತನ ಮೃತದೇಹವನ್ನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಘಟನೆಯ ನಂತರ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ ಶಾಸಕ ಆನಂದ್, ‘ಬ್ಯಾನರ್ ತೆರವು ವಿಚಾರವಾಗಿ ಗಲಾಟೆ ನಡೆದಿದೆ. ನಂತರ ಗಣೇಶ್ ಅವರನ್ನು ಕರೆಸಿ ಕೊಲೆ ಮಾಡಿದ್ದಾರೆ. ಈ ಪ್ರಕರಣದಲ್ಲಿ 8 ಜನರು ಶಾಮೀಲಾಗಿರುವ ಶಂಕೆ ಇದೆ. ಕೆಲವು ದಿನಗಳಿಂದಲೇ ಎರಡು ಗುಂಪುಗಳ ನಡುವೆ ಉದ್ವಿಗ್ನತೆ ಇತ್ತು. ಪೊಲೀಸರು ಸಮಯಕ್ಕೆ ಕ್ರಮ ಕೈಗೊಂಡಿದ್ದರೆ ಈ ಘಟನೆ ತಪ್ಪಿಸಬಹುದಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಾಕು ಇರಿತ
ಪ್ರತ್ಯೇಕ ಘಟನೆಯಲ್ಲಿ, ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೋರ್ವ ಕಾಂಗ್ರೆಸ್ (Congress) ಯುವ ಮುಖಂಡನಿಗೆ ಚಾಕುವಿನಿಂದ ಇರಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ತೇರಂಬಳ್ಳಿಯಲ್ಲಿ ನಡೆದಿದೆ. ತೇರಂಬಳ್ಳಿ ಗ್ರಾಮದ ರಾಜಣ್ಣ ಎಂಬ ವ್ಯಕ್ತಿಯಿಂದ ಕೈ ಮುಖಂಡ ಸುನೀಲ್ಗೆ ಚಾಕು ಇರಿಯಲಾಗಿದೆ. ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಕುವಿನಿಂದ ಇರಿದ ಹಿನ್ನಲೆ ರಕ್ತಸ್ರಾವ ಉಂಟಾಗಿ ಸುನೀಲ್ ಅಸ್ವಸ್ಥರಾಗಿದ್ದಾರೆ. ಕೂಡಲೇ ಗಾಯಾಳು ಸುನೀಲ್ನನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.