Frude Case: 2 ಕೋಟಿ ರೂ. ಎಗರಿಸಿ ಗರ್ಲ್‌ಫ್ರೆಂಡ್ ಜತೆ ಪೊಲೀಸಪ್ಪ ಜೂಟ್! ಇವ್ನು ಸಿಕ್ಕಿ ಬಿದ್ದಿದ್ದೇ ರೋಚಕ
ದೆಹಲಿ ಪೊಲೀಸ್ (Delhi Police) ಸಬ್ ಇನ್ಸ್‌ಪೆಕ್ಟರ್ (Sub-Inspector) ಒಬ್ಬರು 2 ಕೋಟಿ ರೂಪಾಯಿಗಳನ್ನು ಕದ್ದು ತನ್ನ ಸಬ್ ಇನ್ಸ್‌ಪೆಕ್ಟರ್ ಗೆಳತಿಯೊಂದಿಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಉತ್ತರ-ಪೂರ್ವ ಜಿಲ್ಲೆಯ ಸೈಬರ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಅಂಕುರ್ ಮಲಿಕ್, ನಕಲಿ ದೂರುದಾರರ ಹೆಸರಿನಲ್ಲಿ ಕೋರ್ಟ್ ಆದೇಶ ಪಡೆದು ಕಳವು ಮಾಡಿದ ಹಣವನ್ನು ತನ್ನ ಪರಿಚಿತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾನೆ.


ನವದೆಹಲಿ: ಹಲವಾರು ಸೈಬರ್ ವಂಚನೆ ಪ್ರಕರಣಗಳನ್ನು (Cyber Fraud Cases,) ಭೇದಿಸಲು ಸಹಾಯ ಮಾಡಿದ ದೆಹಲಿ ಪೊಲೀಸ್ (Delhi Police) ಸಬ್ ಇನ್ಸ್‌ಪೆಕ್ಟರ್ (Sub-Inspector) ಒಬ್ಬರು 2 ಕೋಟಿ ರೂಪಾಯಿಗಳನ್ನು ಕದ್ದು ತನ್ನ ಸಬ್ ಇನ್ಸ್‌ಪೆಕ್ಟರ್ ಗೆಳತಿಯೊಂದಿಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಕದ್ದ ಹಣವನ್ನು ಗೋವಾ, ಮನಾಲಿ ಮತ್ತು ಜಮ್ಮು ಮತ್ತು ಕಾಶ್ಮೀರ ಹೀಗೆ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಹಾಗೂ ಮಜಾ ಮಾಡಲು ಬಳಸುತ್ತಿದ್ದರು ಎಂದು ವರದಿಯಾಗಿದೆ.
ಉತ್ತರ-ಪೂರ್ವ ಜಿಲ್ಲೆಯ ಸೈಬರ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಅಂಕುರ್ ಮಲಿಕ್, ನಕಲಿ ದೂರುದಾರರ ಹೆಸರಿನಲ್ಲಿ ಕೋರ್ಟ್ ಆದೇಶ ಪಡೆದು ಕಳವು ಮಾಡಿದ ಹಣವನ್ನು ತನ್ನ ಪರಿಚಿತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾನೆ. 2021ರ ಬ್ಯಾಚ್‌ನ ಅಧಿಕಾರಿಯಾದ ಮಲಿಕ್, ಏಳು ದಿನಗಳ ವೈದ್ಯಕೀಯ ರಜೆಯ ಮೇಲೆ ತೆರಳಿದ್ದವರು ಕರ್ತವ್ಯಕ್ಕೆ ಮರಳಿರಲಿಲ್ಲ. ಅದೇ ಸಮಯದಲ್ಲಿ, ಅದೇ ಬ್ಯಾಚ್‌ನ ಜಿಟಿಬಿ ಎನ್‌ಕ್ಲೇವ್ ಠಾಣೆಯ ಸಬ್-ಇನ್ಸ್‌ಪೆಕ್ಟರ್ ನೇಹಾ ಪೂನಿಯಾ ಕೂಡ ಕಾಣೆಯಾಗಿದ್ದಾರೆ.
ಕಾಣೆಯಾದ ವರದಿಯ ಬಳಿಕ, ತನಿಖೆಯಲ್ಲಿ ಮಲಿಕ್ ಸೈಬರ್ ಪ್ರಕರಣಗಳಿಂದ ವಸೂಲಾದ ಕೋಟಿಗಟ್ಟಲೆ ಹಣವನ್ನು ಕಳವು ಮಾಡಿದ್ದು, ಪೂನಿಯಾ ಅವರೊಂದಿಗೆ ವಿವಾಹೇತರ ಸಂಬಂಧದಲ್ಲಿದ್ದರು ಎಂದು ಬಯಲಾಗಿದೆ. ಇಬ್ಬರೂ ವಿವಾಹಿತರಾಗಿದ್ದು, ಮಲಿಕ್‌ನ ಪತ್ನಿ ಉತ್ತರ ಪ್ರದೇಶದ ಬರೌತ್‌ನಲ್ಲಿದ್ದರೆ, ಪೂನಿಯಾಳ ಪತಿ ದೆಹಲಿಯ ರೋಹಿಣಿಯಲ್ಲಿದ್ದಾರೆ.
ಈ ಸುದ್ದಿಯನ್ನು ಓದಿ: Maharashtra Crime: ವೇಟ್ ಮಾಡಿ ಅಂದಿದ್ದೇ ತಪ್ಪಾಯ್ತು; ಸ್ವಲ್ಪ ಹೊತ್ತು ಕಾಯಿರಿ ಎಂದಿದ್ದ ರಿಸೆಪ್ಷನಿಸ್ಟ್ ಮೇಲೆ ರೋಗಿಯ ಸಂಬಂಧಿಯಿಂದ ಹಲ್ಲೆ
2021ರಲ್ಲಿ ಸ್ನೇಹಿತರಾದ ಮಲಿಕ್ ಮತ್ತು ಪೂನಿಯಾ ಈ ವಂಚನೆಗೆ ಯೋಜನೆ ರೂಪಿಸಿದ್ದರು. ತಾಂತ್ರಿಕ ಕಣ್ಗಾವಲು ಮತ್ತು ಗುಪ್ತಚರ ಮಾಹಿತಿಯಿಂದ ಪೊಲೀಸರು ನಾಲ್ಕು ತಿಂಗಳ ಹುಡುಕಾಟದ ಬಳಿಕ ಇವರನ್ನು ಇಂದೋರ್‌ನಲ್ಲಿ ಬಂಧಿಸಿದ್ದಾರೆ. ಇವರು ನಕಲಿ ಗುರುತಿನೊಂದಿಗೆ ಹೊಸ ಜೀವನ ಆರಂಭಿಸಲು ಯೋಜಿಸಿದ್ದರು. 1 ಕೋಟಿ ರೂ. ಮೌಲ್ಯದ ಚಿನ್ನ, 11 ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್, ಮೂರು ATM ಕಾರ್ಡ್‌ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೊಹಮ್ಮದ್ ಇಲಿಯಾಸ್, ಆಫಿ ಉರ್ಫ್ ಮೋನು, ಮತ್ತು ಶಾದಾಬ್ ಎಂಬ ಮೂವರ ಖಾತೆಗಳನ್ನು ಹಣ ವರ್ಗಾವಣೆಗೆ ಬಳಸಿಕೊಂಡಿದ್ದರಿಂದ ಅವರನ್ನೂ ಬಂಧಿಸಲಾಗಿದೆ. ಯಾರೂ ಹಣ ನಮ್ಮದೆಂದು ಕೇಳಲು ಬರುವುದಿಲ್ಲ ಎಂದು ಮಲಿಕ್, ನಕಲಿ ದಾಖಲೆಗಳಿಂದ ಕೋರ್ಟ್‌ನಿಂದ ಹಣ ಬಿಡುಗಡೆ ಮಾಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ