ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Westarctica: ಗಾಜಿಯಾಬಾದ್‌ನಲ್ಲಿ ನಕಲಿ ‘ವೆಸ್ಟಾರ್ಕ್‌ಟಿಕಾ’ ರಾಯಭಾರ ಕಚೇರಿ ಪತ್ತೆ: ರಾಜತಾಂತ್ರಿಕ ಪ್ಲೇಟ್‌ನ ಕಾರುಗಳ ಜಪ್ತಿ

ಗಾಜಿಯಾಬಾದ್‌ನಲ್ಲಿ ನಕಲಿ ರಾಯಭಾರ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದನ್ನು ಪತ್ತೆ ಹಚ್ಚಲಾಗಿದ್ದು, ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಒಬ್ಬನನ್ನು ಬಂಧಿಸಿದೆ. ಐಷಾರಾಮಿ 2 ಅಂತಸ್ತಿನ ಕಟ್ಟಡವನ್ನು ಬಾಡಿಗೆ ಕಟ್ಟಡದಲ್ಲಿ ಅಮೆರಿಕದ ನೌಕಾಪಡೆಯ ಅಧಿಕಾರಿಯೊಬ್ಬರು ಸ್ಥಾಪಿಸಿದ ಮೈಕ್ರೋನೇಷನ್ ‘ವೆಸ್ಟಾರ್ಕ್ಟಿಕಾ’ದ ರಾಯಭಾರ ಕಚೇರಿಯಾಗಿ ನಡೆಸುತ್ತಿದ್ದ ಹರ್ವರ್ಧನ್ ಜೈನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವೆಸ್ಟಾರ್ಕ್ಟಿಕಾ ಹೆಸರಿನ ನಕಲಿ ರಾಯಭಾರ ಕಚೇರಿ ಪತ್ತೆ

ನಕಲಿ ರಾಯಭಾರಿ ಕಚೇರಿ

Profile Sushmitha Jain Jul 23, 2025 10:42 PM

ಲಖನೌ: ಉತ್ತರ ಪ್ರದೇಶದ (Uttar Pradesh) ವಿಶೇಷ ಕಾರ್ಯಪಡೆ (Special Task Force) ಘಟಕವು ಬುಧವಾರ ಗಾಜಿಯಾಬಾದ್‌ನ (Ghaziabad) ಕವಿ ನಗರದಲ್ಲಿ ‘ವೆಸ್ಟಾರ್ಕ್‌ಟಿಕಾ’ (Westarctica) ಎಂಬ ಸ್ವಯಂ-ಘೋಷಿತ ಮೈಕ್ರೊನೇಷನ್ ಹೆಸರಿನಲ್ಲಿ ನಡೆಯುತ್ತಿದ್ದ ನಕಲಿ ರಾಯಭಾರ ಕಚೇರಿಯನ್ನು(Embassy) ಪತ್ತೆ ಹಚ್ಚಿದೆ. ಯಾವುದೇ ರಾಷ್ಟ್ರದಿಂದ ಮಾನ್ಯತೆ ಪಡೆಯದ ಈ ಕಾಲ್ಪನಿಕ ರಾಷ್ಟ್ರವನ್ನು ಯುಎಸ್ ಮಾಜಿ ನೌಕಾಪಡೆ ಅಧಿಕಾರಿಯೊಬ್ಬರು ಸ್ಥಾಪಿಸಿದ್ದರು. ಆರೋಪಿಯಾದ ಹರ್ಷವರ್ಧನ್ ಜೈನ್‌ನನ್ನು (Harsh Vardhan Jain) ರಾಯಭಾರಿಯಂತೆ ವೇಷ ಧರಿಸಿ, ಈ ನಕಲಿ ಕಚೇರಿಯನ್ನು ಬಾಡಿಗೆ ಮನೆಯಿಂದ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ.

ಹರ್ಷವರ್ಧನ್ ನಾನು ವೆಸ್ಟಾರ್ಕ್‌ಟಿಕಾ, ಸಬೋರ್ಗಾ, ಪೌಲ್ವಿಯಾ ಮತ್ತು ಲೊಡೋನಿಯಾದಂತಹ ಅಪರಿಚಿತ ಮೈಕ್ರೊನೇಷನ್‌ಗಳ ರಾಯಭಾರಿ ಎಂದು ಬಿಂಬಿಸಿಕೊಂಡಿದ್ದ. ಆತ ತನ್ನ ವಾಹನಗಳಿಗೆ ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ಬಳಸುತ್ತಿದ್ದ ಜತೆಗೆ, ಈ ಕಾಲ್ಪನಿಕ ರಾಷ್ಟ್ರಗಳ ಹೆಸರಿನಲ್ಲಿ ಪಾಸ್‌ಪೋರ್ಟ್, ಗುರುತಿನ ಚೀಟಿಗಳು, ಮತ್ತು ನಕಲಿ ಅಧಿಕೃತ ದಾಖಲೆಗಳನ್ನು ನೀಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

STF ದಾಳಿಯಲ್ಲಿ ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳಿರುವ ನಾಲ್ಕು ವಾಹನಗಳು, 12 ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳು, ಭಾರತದ ವಿದೇಶಾಂಗ ಸಚಿವಾಲಯದ ಮುದ್ರೆಯಿರುವ ನಕಲಿ ದಾಖಲೆಗಳು, ಎರಡು ನಕಲಿ PAN ಕಾರ್ಡ್‌ಗಳು ಮತ್ತು ವಿವಿಧ ದೇಶಗಳು ಹಾಗೂ ಕಂಪನಿಗಳ 34 ರಬ್ಬರ್ ಸ್ಟಾಂಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಜತೆಗೆ, 44.7 ಲಕ್ಷ ರೂ. ನಗದು, ವಿದೇಶಿ ಕರೆನ್ಸಿ ಮತ್ತು ಎರಡು ನಕಲಿ ಪತ್ರಿಕಾ ಗುರುತಿನ ಚೀಟಿಗಳು ಸಿಕ್ಕಿವೆ. ಇದು ಆರ್ಥಿಕ ವಂಚನೆ ಅಥವಾ ಅಂತಾರಾಷ್ಟ್ರೀಯ ಸಂಪರ್ಕಗಳ ಸಾಧ್ಯತೆಯನ್ನು ಸೂಚಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ದಾಳಿಯಲ್ಲಿ ಶೆಲ್ ಕಂಪನಿಗಳಿಗೆ ಸಂಬಂಧಿತ ದಾಖಲೆಗಳೂ ದೊರೆತಿವೆ. ಉತ್ತರ ಪ್ರದೇಶ ಪೊಲೀಸರು ಹರ್ಷವರ್ಧನ್ ಜೈನ್‌ನನ್ನು ಬಂಧಿಸಿದ್ದು, ಈ ಜಾಲದ ಇತರ ಸಂಪರ್ಕಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.