Vidisha Horror: ಲೀವ್ ಇನ್ ಸಂಗಾತಿಯನ್ನು ಕೊಂದು ಲಿಪ್‌ಸ್ಟಿಕ್‌ನಲ್ಲಿ ತಪ್ಪೊಪ್ಪಿಗೆ ಸಂದೇಶ ಬರೆದ ಪಾಪಿ
Madhya Pradesh News: ಮಧ್ಯ ಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಲೀವ್ ಇನ್ ಸಂಗಾತಿ ಮತ್ತು ಆಕೆಯ 3 ವರ್ಷದ ಮಗಳನ್ನು ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಬಳಿಕ ಗೋಡೆ ಮೇಲೆ ಲಿಪ್‌ಸ್ಟಿಕ್‌ನಲ್ಲಿ ತಪ್ಪೊಪ್ಪಿಗೆ ಸಂದೇಸ ಬರೆದಿದ್ದಾನೆ.

ಸಾಂಧರ್ಬಿಕ ಚಿತ್ರ.

ಭೋಪಾಲ್: ಮಧ್ಯ ಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಭೀಕರ ಅಪರಾಧ ಕೃತ್ಯವೊಂದು ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಲೀವ್ ಇನ್ ಸಂಗಾತಿ ಮತ್ತು ಆಕೆಯ 3 ವರ್ಷದ ಮಗಳನ್ನು ಕೊಲೆ ಮಾಡಿದ್ದಾನೆ. ಅಲ್ಲದೆ ಇಡೀ ದಿನ ಶವದ ಪಕ್ಕದಲ್ಲೇ ಕಾಲ ಕಳೆದಿದ್ದಾನೆ (Vidisha Horror). ಗಂಜ್‌ಬಸೋಡಾದ ವಾರ್ಡ್ ಸಂಖ್ಯೆ 8ರಲ್ಲಿ ನಡೆದ ಈ ಡಬಲ್ ಮರ್ಡರ್ ಪ್ರಕರಣ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ (Crime News). ಆರೋಪಿಯನ್ನು ಅಂಜು ವಿಶ್ವಕರ್ಮ ಆಲಿಯಾಸ್ ರಾಜ ಎಂದು ಗುರುತಿಸಲಾಗಿದೆ (Madhya Pradesh News). 36 ವರ್ಷದ ರಾಮ್‌ಸಖಿ ಕುಶ್ವಾಹ ಮತ್ತು ಆಕೆಯ ಮಾನ್ವಿ ಮೃತರು.
ಅಚ್ಚರಿ ಎಂದರೆ ಅಂಜು ವಿಶ್ವಕರ್ಮ ಇಬ್ಬರನ್ನು ಕೊಲೆ ಮಾಡಿದ ಬಳಿಕ ಲಿಪ್‌ಸ್ಟಿಕ್ ಬಳಸಿ ಗೋಡೆಯಲ್ಲಿ ತಪ್ಪೊಪ್ಪಿಗೆ ಸಂದೇಶ ಬರೆದಿದ್ದಾನೆ. ತಾನೇ ಈ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗಂಡನಿಂದ ಬೇರ್ಪಟ್ಟ ರಾಮ್‌ಸಖಿ ಕುಶ್ವಾಹ ಕೆಲವು ತಿಂಗಳಿಂದ ಅಂಜು ಜತೆ ಲೀವ್ ಇನ್ ಸಂಬಂಧದಲ್ಲಿದ್ದಳು. ಇತ್ತೀಚೆಗೆ ಈ ಜೋಡಿ ಮಧ್ಯೆ ನಿರಂತರವಾಗಿ ವಾಗ್ವಾದ ನಡೆಯುತ್ತಿತ್ತು. ಆದರೆ ಇದು ಕೊಲೆಯ ಮಟ್ಟಕ್ಕೆ ಹೋಗುತ್ತದೆ ಎಂದು ಊಹಿಸಿರಲಿಲ್ಲ ಎಂಬುದಾಗಿ ಸ್ಥಳೀಯರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Rajasthan Horror: ರಾಜಸ್ಥಾನದಲ್ಲೊಂದು ದೇಶವೇ ಬೆಚ್ಚಿ ಬೀಳುವ ಘಟನೆ; ದೂರವಾದ ಪತ್ನಿಯನ್ನು ಒಲಿಸಿಕೊಳ್ಳಲು 5 ವರ್ಷದ ಮಗುವನ್ನು ಕೊಂದ ಪಾಪಿ
ಗೋಡೆಯಲ್ಲಿ ಏನಿದೆ?
ʼʼಕೃತ್ಯ ನಡೆದ ಸ್ಥಳ ನೋಡಿ ನಾವೇ ಒಂದು ಕ್ಷಣ ದಂಗಾಗಿ ಹೋದೆವು. ತಾಯಿ-ಮಗಳನ್ನು ಕೊಲೆ ಮಾಡಿದ ಬಳಿಕ ಇಡೀ ದಿನ ಅಂಜು ಮೃತದೇಹದ ಪಕ್ಕದಲ್ಲೇ ಇದ್ದ. ಜತೆಗೆ ಗೋಡೆಯ ಮೇಲೆ ಲಿಪ್‌ಸ್ಟಿಕ್ ಬಳಸಿ ತನ್ನ ತಾನು ಈ ಕೃತ್ಯ ಎಸಗಿರುವುದಾಗಿ ಬರೆದುಕೊಂಡಿದ್ದಾನೆʼʼ ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ. ʼʼನಾನು ಆಕೆಯನ್ನು ಕೊಂದೆ. ಆಕೆ ನನ್ನ ಬಳಿ ಸುಳ್ಳು ಹೇಳಿದಳು. ಆಕೆ ಬೇರೋಬ್ಬನ ಜತೆ ಸಂಬಂಧ ಬೆಳೆಸಿಕೊಂಡಿದ್ದಳುʼʼ ಎಂದು ಕೊಲೆಗೆ ಕಾರಣವನ್ನು ಗೋಡೆಯಲ್ಲಿ ಬರೆದಿದ್ದಾನೆ.
ಅದಾಗ್ಯೂ ಆತ ಸ್ಥಳದಿಂದ ಪರಾರಿಯಾಗಿದ್ದ. ಪ್ರಕರಣ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಗೋಡೆಯಲ್ಲಿನ ಬರಹ ಪ್ರಮುಖ ಸಾಕ್ಷ್ಯಾಧಾರ ಒದಗಿಸಿತು. ಫೊರೆನ್ಸಿಕ್ ತಜ್ಞರು ಈ ಸಂದೇಶವನ್ನು ಕೊಲೆ ನಡೆದ ಕೆಲವೇ ಹೊತ್ತಲ್ಲಿ ಬರೆಯಲಾಗಿದೆ ಎಂದು ತಿಳಿಸಿದರು. ಇದು ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ಇದರ ಆಧಾರದಲ್ಲಿ ಅಂಜುವನ್ನು ವಶಕ್ಕೆ ಪಡೆಯಲಾಯಿತು.
ಎಸ್‌ಪಿ ಹೇಳಿದ್ದೇನು?
ಘಟನೆ ಬಗ್ಗೆ ಮಾಹಿತಿ ನೀಡಿದ ಎಸ್‌ಪಿ ಪ್ರಶಾಂತ್ ಚೌಬೆ, ʼʼಗಂಡನಿಂದ ಬೇರ್ಪಟ್ಟ ಈ ಮಹಿಳೆ ಅಂಜು ಜತೆ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಳು. ಪ್ರಾಥಮಿಕ ತನಿಖೆಯ ಪ್ರಕಾರ ಆಕೆ ಮತ್ತು ಆಕೆಯ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಕೊಲೆಗೈದ ಅಂಜುವನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆʼʼ ಎಂದು ವಿವರಿಸಿದ್ದಾರೆ. ಅಂಜು ವಿಶ್ವಕರ್ಮನ ಮಾನಸಿಕ ಸ್ಥಿತಿಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.