ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Belagavi Double Murder: ಜಮೀನು ವಿವಾದ; ಗ್ರಾಪಂ ಕಚೇರಿಯೊಳಗೇ ಮಾರಕಾಸ್ತ್ರಗಳಿಂದ ಕೊಚ್ಚಿ ತಂದೆ-ಮಗಳ ಕೊಲೆ

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ಘಟನೆ ನಡೆದಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿ ಅಣ್ಣತಮ್ಮಂದಿರ ನಡುವೆ ವ್ಯಾಜ್ಯವಿತ್ತು ಎನ್ನಲಾಗಿದೆ. ಈ ನಡುವೆ ವ್ಯಕ್ತಿಯೊಬ್ಬರು ಮಗಳ ಜತೆ ಗ್ರಾಮ ಪಂಚಾಯಿತಿಗೆ ಹೋದ ವೇಳೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಲಾಗಿದೆ.

ಗ್ರಾಪಂ ಕಚೇರಿಯೊಳಗೇ ಮಾರಕಾಸ್ತ್ರಗಳಿಂದ ಕೊಚ್ಚಿ ತಂದೆ-ಮಗಳ ಕೊಲೆ

-

Prabhakara R
Prabhakara R Sep 16, 2026 5:27 PM

ಬೆಳಗಾವಿ: ಗ್ರಾಮ ಪಂಚಾಯಿತಿ ಕಚೇರಿಗೆ ಬಂದಿದ್ದ ತಂದೆ-ಮಗಳನ್ನು ಬರ್ಬರವಾಗಿ ಹತ್ಯೆ (Belagavi Double Murder) ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ. ಮಾಜಿ ಯೋಧ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ ಶಶಿಕಲಾ ಕುಂದರಗಿ (26) ಹತ್ಯೆಯಾದವರು. ಘಟನೆಯಲ್ಲಿ ರುದ್ರಪ್ಪ ಅವರ ಕಾರು ಚಾಲಕನಿಗೂ ಗಂಭೀರ ಗಾಯಗಳಾಗಿವೆ.

ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ರುದ್ರಪ್ಪ ಹಾಗೂ ಅವರ ಅಣ್ಣತಮ್ಮಂದಿರ ನಡುವೆ ವ್ಯಾಜ್ಯವಿತ್ತು ಎನ್ನಲಾಗಿದೆ. ಆಸ್ತಿ ಪಾಲುದಾರಿಕೆಗೆ ಅರ್ಜಿ ಸಲ್ಲಿಸಲು ರುದ್ರಪ್ಪ ಗ್ರಾಮ ಪಂಚಾಯಿತಿಗೆ ಬಂದಿದ್ದ ವೇಳೆ ದಾಳಿ ನಡೆದಿದೆ. ರುದ್ರಪ್ಪ ಗ್ರಾಮ ಪಂಚಾಯಿತಿಗೆ ಬಂದಿರುವ ವಿಚಾರ ತಿಳಿದು ಅವರ ಸಹೋದರರಾದ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ಸಂಗಪ್ಪ ಅವರ ಪುತ್ರ ಮಡಿವಾಳಪ್ಪ ಕುಂದರಗಿ ಸೇರಿ ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಗ್ರಾಮ ಪಂಚಾಯಿತಿ ಒಳಗಡೆಯೇ ರುದ್ರಪ್ಪ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಈ ವೇಳೆ ತಂದೆಯನ್ನು ಬಿಡಿಸಲು ಮುಂದಾದ ಪುತ್ರಿ ಶಶಿಕಲಾ ಅವರ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.

38 ಗುಂಟೆ ಆಸ್ತಿಗೆ ಸಂಬಂಧಿಸಿ ಮೂವರು ಸಹೋದರರ ನಡುವೆ ವ್ಯಾಜ್ಯವಿತ್ತು. ಆಸ್ತಿಯನ್ನು ಮೂವರಿಗೆ ಹಂಚಿಕೆ ಮಾಡುವಂತೆ ಕೋರ್ಟ್ ಆದೇಶ ನೀಡಿತ್ತು ಎನ್ನಲಾಗಿದೆ. ಆದರೆ, ರುದ್ರಪ್ಪ ಅವರಿಗೆ ಬಂದಿದ್ದ ಜಮೀನನ್ನು ಅವರು ಮೊದಲೇ ಮಾರಿಕೊಂಡಿದ್ದು, ಉಳಿದ ಜಮೀನಿನಲ್ಲೂ ತಮಗೆ ಪಾಲು ಬೇಕು ಎಂದು ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ರುದ್ರಪ್ಪ ಅವರ ಹೆಸರಿನಲ್ಲಿ ಆಸ್ತಿ ಇರುವ ವಿಚಾರವೂ ಜಗಳಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

Hassan News: ಸ್ನೇಹಿತರ ಜತೆ ಟ್ರಿಪ್ ಹೋಗಿದ್ದ ಯುವತಿ ಹಾಸನದ ಲಾಡ್ಜ್‌ನಲ್ಲಿ ಅನುಮಾನಾಸ್ಪದ ಸಾವು!

ಇಂದು ಜಮೀನು ದಾಖಲೆ ಮಾಡಿಸಲು ರುದ್ರಪ್ಪ ಗ್ರಾಮ ಪಂಚಾಯಿತಿಗೆ ಬಂದಿದ್ದರು. ಈ ವೇಳೆ ಮಾರಕಾಸ್ತ್ರಗಳಿಂದ ರುದ್ರಪ್ಪ ಹಾಗೂ ಅವರ ಪುತ್ರಿ ಶಶಿಕಲಾ ಮೇಲೆ ದಾಳಿ ನಡೆದಿದ್ದು, ಇಬ್ಬರೂ ಮೃತಪಟ್ಟಿದ್ದಾರೆ. ಪೊಲೀಸರು ಭೇಟಿ ನೀಡಿ ಪರಿಶೀಲನ ನಡೆಸುತ್ತಿದ್ದಾರೆ.