ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dowry Harrasment: ವರದಕ್ಷಿಣೆಗೆ ಮತ್ತೊಂದು ಬಲಿ; ಪತಿಯ ಕಿರುಕುಳ ತಾಳಲಾರದೆ ಶಾರ್ಜಾದಲ್ಲಿ ಕೇರಳದ 29 ವರ್ಷದ ಮಹಿಳೆ ಸಾವು

Crime News: ಶಾರ್ಜಾದಲ್ಲಿ ಕೇರಳ ಮಹಿಳೆಯೊಬ್ಬರು ಪತಿಯ ವರದಕ್ಷಿಣೆ ಕಿರುಕುಳದಿಂದ ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಕೊಲ್ಲಂ ಮೂಲದ ಅತುಲ್ಯಾ ಶೇಖರ್‌ ಎಂದು ಗುರುತಿಸಲಾಗಿದೆ. ಇವರ ಪತಿ ಸತೀಶ್‌ ವರದಕ್ಷಿಣೆ ತರುವಂತೆ ನಿರಂತರವಾಗಿ ಪೀಡಿಸುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ.

ವರದಕ್ಷಿಣೆ ಕಿರುಕುಳ ತಾಳಲಾರದೆ ಕೇರಳದ 29 ವರ್ಷದ ಮಹಿಳೆ ಸಾವು

Profile Ramesh B Jul 21, 2025 4:26 PM

ಅಬುಧಾಬಿ: ವರದಕ್ಷಿಣೆಗೆ 29 ವರ್ಷದ ಮಹಿಳೆಯೊಬ್ಬರು ಬಲಿಯಾದ ಮತ್ತೊಂದು ಅಮಾನುಷ ಘಟನೆ ನಡೆದಿದೆ (Dowry Harrasment). ಕೇರಳ ಮೂಲದ ಮಹಿಳೆ ಯುಎಇಯ ಶಾರ್ಜಾದ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಗಂಡನ ಕಿರುಕುಳ ತಾಳಲಾರದೆ ಮೃತಪಟ್ಟಿದ್ದಾರೆ. ಮೃತರನ್ನು ಕೇರಳದ ಕೊಲ್ಲಂ ಮೂಲದ ಅತುಲ್ಯಾ ಶೇಖರ್‌ ಎಂದು ಗುರುತಿಸಲಾಗಿದೆ. 2014ರಲ್ಲಿ ಕೊಲ್ಲಂನ ಸತೀಶ್‌ನನ್ನು ವರಿಸಿದ್ದ ಅತುಲ್ಯಾ ಕೆಲವು ಸಮಯಗಳಿಂದ ಶಾರ್ಜಾದಲ್ಲಿ ನೆಲೆಸಿದ್ದರು (Crime News). ವರದಕ್ಷಿಣೆಗಾಗಿ ಪೀಡಿಸಿ ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಅತುಲ್ಯಾ ಪಾಲಕರು ಆರೋಪಿಸಿದ್ದಾರೆ.

ಜುಲೈ 19ರಂದು ಅತುಲ್ಯಾ ಮೃತಪಟ್ಟಿದ್ದಾರೆ. ಜುಲೈ 18 ಮತ್ತು 19ರಂದು ಅತುಲ್ಯಾಳನ್ನು ಪತಿ ಸತೀಶ್‌ ಕತ್ತು ಹಿಸುಕಿ, ಹೊಟ್ಟೆಗೆ ಒದ್ದು, ಪ್ಲೇಟ್‌ನಿಂದು ಹೊಡೆದು ಕೊಲೆ ಮಾಡಿದ್ದಾನೆ ಎಂದು ತಾಯಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಸತೀಶ್‌ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಮದುವೆಯಾದಾಗಿನಿಂದ ವರದಕ್ಷಿಣೆಗಾಗಿ ಅತುಲ್ಯಾಗೆ ಕಿರುಕುಳ ನೀಡಲಾಗುತ್ತಿತ್ತು ಎಂದು ತಾಯಿ ಹೇಳಿದ್ದಾರೆ. ಮದುವೆ ವೇಳೆಯೇ ವರದಕ್ಷಿಣೆಯಾಗಿ 40 ಸವರನ್‌ ಚಿನ್ನ ಮತ್ತು ಬೈಕ್‌ ನೀಡಲಾಗಿತ್ತು. ಇಷ್ಟಕ್ಕೆ ತೃಪ್ತನಾಗದ ಸತೀಶ್‌ ಮತ್ತೂ ಹಣ ತರುವಂತೆ ಪೀಡಿಸುತ್ತಿದ್ದ ಎಂದು ಆರೋಪಿಸಿದ್ದಾರೆ. ಸದ್ಯ ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.

ಘಟನೆ ವಿವರ

ಕೊಲ್ಲಂನ ರಾಜಶೇಖರನ್‌ ಪಿಳ್ಳೈ ಮತ್ತು ತುಳಸಿಭಾಯಿ ದಂಪತಿಯ ಕಿರಿಯ ಪುತ್ರಿ ಅತುಲ್ಯಾ. ಸತೀಶ್‌ ಮದ್ಯ ವ್ಯಸನಿಯಾಗಿದ್ದ ಎಂದು ರಾಜಶೇಖರನ್‌ ಪಿಳ್ಳೈ ಹೇಳಿದ್ದಾರೆ. ಕಂಠಪೂರ್ತಿ ಮದ್ಯ ಸೇವಿಸಿ ಬಂದು ಹಿಂಸೆ ನೀಡುತ್ತಿದ್ದ ಎಂದೂ ತಿಳಿಸಿದ್ದಾರೆ. ʼʼಈ ಹಿಂದೆ ಅತುಲ್ಯಾ ಮೇಲೆ ದೈಹಿಕ ಹಲ್ಲೆ ನಡೆಸಲಾಗಿತ್ತು. ಹೀಗಾಗಿ ಆಕೆಯನ್ನು ಮರಳಿ ಮನೆಗೆ ಕರೆತರಲು ಮುಂದಾಗಿದ್ದೆ. ಈ ವೇಳೆ ಆತ ಕ್ಷಮೆ ಕೋರಿದ್ದ. ಮಗಳು ಆತನ್ನು ಕ್ಷಮಿಸಿದ್ದಳು. ಅಲ್ಲಿಗೆ ಪ್ರಕರಣ ಇತ್ಯರ್ಥವಾಯ್ತು ಅಂದುಕೊಂಡಿದ್ದೆವುʼʼ ಎಂದು ನೋವು ತೋಡಿಕೊಂಡಿದ್ದಾರೆ.

ಯುಎಇಯಿಂದ ಮಾಧ್ಯಮದ ಜತೆ ಮಾತನಾಡಿದ ಸತೀಶ್‌ ತನ್ನ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದು, ಅತುಲ್ಯಾ ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ ಎಂದಿದ್ದಾನೆ. ʼʼಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಸಾವಿಗೆ ಕಾರಣವೇನು ಎಂಬುದು ನನಗೂ ಗೊತ್ತಿಲ್ಲʼʼ ಎಂದು ಹೇಳಿದ್ದಾನೆ.

ಅತುಲ್ಯಾ ಶರೀರದ ಮೇಲೆ ಗಾಯದ ಗುರುತುಗಳು ಗೋಚರಿಸುತ್ತಿದೆ. ಆಕೆಯ ಪತಿ ಪ್ಲಾಸ್ಟಿಕ್ ಸ್ಟೂಲ್ ಎತ್ತಿ ಹೊಡೆಯುತ್ತಿರುವುದನ್ನು ತೋರಿಸುವ ವಿಡಿಯೊಗಳನ್ನು ಆಕೆಯ ಕುಟುಂಬ ಬಿಡುಗಡೆ ಮಾಡಿದೆ.

image

ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂದರೆ ನಂಬಲು ಸಾಧ್ಯವಿಲ್ಲ. ಅವಳು ತನ್ನ ಮಗಳೊಂದಿಗೆ ತುಂಬಾ ಆತ್ಮೀಯ ಸಂಬಂಧ ಹೊಂದಿದ್ದಳು. ಆಕೆಯ ಸಾವು ಇನ್ನೂ ನಿಗೂಢವಾಗಿದೆ. ಆಕೆಗೆ ನಿಖರವಾಗಿ ಏನಾಯಿತು ಎಂಬುದನ್ನು ನಾವು ಕಂಡುಹಿಡಿಯಬೇಕು. ಸತೀಶ್‌ ಮದ್ಯ ವ್ಯಸನಿ. ಅವಳು ತನ್ನ ಸಂಸಾರಕ್ಕಾಗಿ ಎಲ್ಲ ಚಿತ್ರಹಿಂಸೆಯನ್ನು ಸಹಿಸಿಕೊಂಡಳು. ಈ ಹಿಂದೆಯೂ ಇಂತಹ ಸಮಸ್ಯೆ ಎದುರಾಗಿತ್ತು. ಆಗ ಪ್ರಕರಣವನ್ನೂ ದಾಖಲಿಸಿದ್ದೆವು. ಇದೀಗ ಅಳಿಯ ಧನದಾಹ ಮಗಳ ಜೀವನವನ್ನೇ ಬಲಿ ಪಡೆದಿದೆ.

-ರಾಜಶೇಖರನ್‌ ಪಿಳ್ಳೈ, ಅತುಲ್ಯಾ ತಂದೆ.

ಕೆಲವು ದಿನಗಳ ಹಿಂದೆ ಶಾರ್ಜಾದಲ್ಲಿ ಕೇರಳ ಮೂಲದ ವಿಪಂಜಿಕಾ ಮಣಿ (32) ಎನ್ನುವ ಮಹಿಳೆ ವರದಕ್ಷಿಣೆ ಕಿರುಕುಳ ತಾಳಲಾರದೆ ತಮ್ಮ ಪುಟ್ಟ ಮಗುವನ್ನು ಕೊಲೆ ಮಾಡಿ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದರು.