ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭೋಗನಂದೀಶ್ವರನ ಸನ್ನಿಧಾನದಲ್ಲಿ ನೂರಾರು ವರ್ಷಗಳಿಂದ ನಡೆದಿದೆ ನಂದಿಗಿರಿ ಪ್ರದಕ್ಷಿಣೆಯೆಂಬ ವಿಶಿಷ್ಟ ಆಚರಣೆ

ದೇವರನಾಮಗಳನ್ನು ಭಜಿಸುತ್ತಾ ಭಗವಂತನನ್ನು ಹೃದಯದಲ್ಲಿ ಆರಾಧಿಸುತ್ತಾ ನಂದಿಗ್ರಾಮ ದಲ್ಲಿರುವ ಭೋಗನಂದೀಶ್ವರನಿಗೆ ಪೂಜೆ ಸಲ್ಲಿಸಿ ಪ್ರಾರಂಭವಾಗುವ ಕಾಲ್ನಡಿಗೆ ಪ್ರಯಾಣವು ನಂದಿ ಬೆಟ್ಟದ ಬುಡವನ್ನು ಒಂದು ಸುತ್ತು ಬಳಸಿ ಬರುವುದಕ್ಕೆ ಗಿರಿಪ್ರಕ್ಷಿಣೆ ಎನ್ನುತ್ತಾರೆ. ಇದು ಸುಮಾರು ೧೬ ಕಿ.ಮೀ. ಅಂತರ ಹೊಂದಿದ್ದು ಬೆಳಿಗ್ಗೆ ೬.೩೦ಕ್ಕೆ  ಪ್ರಾರಂಭವಾಗುವ ಗಿರಿ ಪ್ರದಕ್ಷಿಣಿ ೧೦ಕ್ಕೆ ಮುಗಿಯುತ್ತದೆ.

ನೂರಾರು ವರ್ಷಗಳಿಂದ ನಡೆದಿದೆ ನಂದಿಗಿರಿ ಪ್ರದಕ್ಷಿಣೆ- ವಿಶಿಷ್ಟ ಆಚರಣೆ

Ashok Nayak Ashok Nayak Jul 22, 2025 12:02 AM

ಮುನಿರಾಜು ಎಂ ಅರಿಕೆರೆ

ಚಿಕ್ಕಬಳ್ಳಾಪುರ : ಇತಿಹಾಸ ಪ್ರಸಿದ್ದ ಭೋಗನಂದೀಶ್ವರನ ಸನ್ನಿಧಾನದಲ್ಲಿ ನೂರಾರು ವರ್ಷ ಗಳಿಂದ ಸದ್ದಿಲ್ಲದೆ ನಡೆದುಕೊಂಡು ಬಂದಿರುವ ಧಾರ್ಮಿಕ ಆಚರಣೆಯ ಹೆಸರೇ ನಂದಿಗಿರಿ ಪ್ರದಕ್ಷಿಣೆಯಾಗಿದೆ. ಭಕ್ತಿಯೊಂದಿಗೆ ಮೇಳೈಸಿರುವ ಆರೋಗ್ಯ ಸುಧಾರಣೆಯ ಮಹಾಮಂತ್ರವೆಂಬ ಗಿರಿ ಪ್ರದಕ್ಷಿಣೆಯು ವರ್ಷದಿಂದ ವರ್ಷಕ್ಕೆ ಅಕ್ಷಯವಾಗುತ್ತಾ ಸಾಗಿದ್ದು,ಜಿಲ್ಲಾಡಳಿತದ ನೆರವಿಲ್ಲದಿದ್ದರೂ ಭಕ್ತಾಧಿಗಳ ಅಭಯದ ನೆರವಿನಲ್ಲಿ ಅನೂಚಾನವಾಗಿ ಸಾಗಿಬಂದಿರುವುದು ಸೋಜಿಗವೇ ಸರಿ.

ಏನಿದು ಗಿರಿ ಪ್ರದಕ್ಷಿಣೆ?

ದೇವರನಾಮಗಳನ್ನು ಭಜಿಸುತ್ತಾ ಭಗವಂತನನ್ನು ಹೃದಯದಲ್ಲಿ ಆರಾಧಿಸುತ್ತಾ ನಂದಿಗ್ರಾಮ ದಲ್ಲಿರುವ ಭೋಗನಂದೀಶ್ವರನಿಗೆ ಪೂಜೆ ಸಲ್ಲಿಸಿ ಪ್ರಾರಂಭವಾಗುವ ಕಾಲ್ನಡಿಗೆ ಪ್ರಯಾಣವು  ನಂದಿ ಬೆಟ್ಟದ ಬುಡವನ್ನು ಒಂದು ಸುತ್ತು ಬಳಸಿ ಬರುವುದಕ್ಕೆ ಗಿರಿಪ್ರಕ್ಷಿಣೆ ಎನ್ನುತ್ತಾರೆ.ಇದು ಸುಮಾರು ೧೬ ಕಿ.ಮೀ. ಅಂತರವನ್ನು ಹೊಂದಿದ್ದು ಬೆಳಿಗ್ಗೆ ೬.೩೦ಕ್ಕೆ  ಪ್ರಾರಂಭವಾಗುವ ಗಿರಿ ಪ್ರದಕ್ಷಿಣಿ ೧೦ಕ್ಕೆ ಮುಗಿಯುತ್ತದೆ.ಆದರೆ ಈ ಬಾರಿ ಮದ್ಯಾಹ್ನವಾದರೂ ಭಕ್ತಾದಿಗಳು ಜಮೆಯಾಗುತ್ತಲೇ ಗಿರಿ ಪ್ರದಕ್ಷಿಣೆ ಮಾಡಿದ್ದು ವಿಶೇಷ.

ಇದನ್ನೂ ಓದಿ: Chikkaballapur News: ತಪ್ಪು ಬಚ್ಚಿಟ್ಟುಕೊಳ್ಳಲು ಪೊಲೀಸ್ ಇಲಾಖೆ ದುರ್ಬಳಕೆ: ಸಿ.ಮುನಿರಾಜು ವಿರುದ್ದ ಸುಳ್ಳು ಪ್ರಕರಣ ದಾಖಲು

ಆಷಾಡದ ಕೊನೇ ಸೋಮವಾರ!!
ನಂದಿಗಿರಿ ಪ್ರದಕ್ಷಿಣೆಯನ್ನು ಭಕ್ತಾಧಿಗಳು ಆಷಾಡಮಾಸದ ಕೊನೇ ಸೋಮವಾರವೇ ನಡೆಸಿ ಕೊಂಡು ಬರಲು ಕಾರಣ ಈ ಮಾಸದ ಧಾರ್ಮಿಕ ಜಡತೆ ದೂರಾಗಲಿ ಎನ್ನುವುದೇ ಆಗಿದೆ.ಮೇಲಾಗಿ ಎಲ್ಲ ಕಾಲಕ್ಕೂ ಭಗವಂತನ ಪೂಜೆ ನಿರ್ವಿಘ್ನವಾಗಿ ನಡೆಯುವಂತೆ ಮಾನವ ಜೀವನದ ಬದುಕೂ ಸಾಗಲಿ, ಶ್ರಾವಣದಲ್ಲಿ ಪ್ರಕೃತಿ ಸಮೃದ್ಧಿಯಿಂದ ಕೂಡಿರುವಂತೆ ಮಾನವರ ಬದುಕೂ ಇರಲಿ ಎನ್ನುವ ಬೇಡಿಕೆಯನ್ನು ಭಗವಂತನಿಗೆ ಅರ್ಪಿಸುವ ಉದ್ದೇಶದಿಂದ ಗಿರಿ ಪ್ರದಕ್ಷಿಣೆ ನಡೆಸಲಾಗುತ್ತಿದೆ. ದೇಹದಂಡನೆಯ ಮೂಲಕ ದೇವರಿಗೆ ಪ್ರಿಯವಾಗುವ ಇಲ್ಲಿನ ಕ್ರಿಯೆ ವಿಶಿಷ್ಟವಾಗಿದೆ.

ಭೋನಂದೀಶ್ವರನ ಬಲ

ಗಿರಿಪ್ರದಕ್ಷಿಣೆಯು ನೂರಾರು ವರ್ಷಗಳಿಂದ ನಿರ್ವಿಘ್ನವಾಗಿ ನಡೆದುಕೊಂಡು ಬರಲು ಭೋಗ ನಂದೀಶ್ವರನ ಶ್ರೀರಕ್ಷೆಯ ಬಲವೇ ಕಾರಣವಾಗಿದೆ ಎಂಬುದು ಆಸ್ತಿಕ ಮಹಾಜನತೆಯ ಮಾತಾಗಿದೆ. ಇದೇ ಕಾರಣಕ್ಕೆ ಮೊದಲ ಮತ್ತು ಕೊನೆಯ ಪೂಜೆ ಇಲ್ಲಿಯೇ ನಡೆಯುವುದು ವಿಶೇಷ. ಇಂತಹ ಧಾರ್ಮಿಕ ಕ್ಷೇತ್ರವು ೯ನೇ ಶತಮಾನದಲ್ಲಿ ಗಂಗರಸರ ಕಾಲದಲ್ಲಿ ನಿರ್ಮಾಣವಾಗಿದೆ. ಭೋಗನಂದೀ ಶ್ವರ ದೇವಾಲಯದ ವಿಶಾಲ ಪ್ರಾಂಗಣದಲ್ಲಿ ಅರುಣಾಚಲೇಶ್ವರ, ಮತ್ತು ಭೋಗನಂದೀಶ್ವರ ಮೂರ್ತಿಗಳ ನಡುವೆ ಉಮಾಮಹೇಶ್ವರಿ ದೇವಾಲಯವಿದೆ.ಸದ್ಯ ಪುರಾತತ್ವ ಇಲಾಖೆಯ ಆಡಳಿತ ದಲ್ಲಿದೆ. ದಕ್ಷಿಣದಲ್ಲಿರುವ ಅರುಣಾಚಲೇಶ್ವರ ದೇಗುಲವನ್ನು ತಲಕಾಡಿನ ಗಂಗರು ನಿರ್ಮಿಸಿದ್ದು, ಉತ್ತರಕ್ಕಿರುವ ಭೋಗನಂದೀಶ್ವರ ದೇಗುಲವನ್ನು ಚೋಳರು ನಿರ್ಮಿಸಿದರು ಎಂಬ ಬಗ್ಗೆ ಇತಿಹಾ ಸದ ದಾಖಲೆಗಳು ಹೇಳುತ್ತವೆ.ಇಲ್ಲಿನ ಕುಸುರಿ ಕಲೆ ನೋಡುಗರ ಕಣ್ಮನ ಸೆಳೆಯುವಂತಿದ್ದು ಇದನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸಲು ಶಾಸಕ ಪ್ರದೀಪ್ ಈಶ್ವರ್ ಪ್ರಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ದೇವಾಂಗರ ಭಕ್ತಿಗೆ 85 ವರ್ಷ
ನಂದಿಗಿರಿ ಪ್ರದಕ್ಷಿಣೆಯು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದರೂ,ದೊಡ್ಡ ಮಟ್ಟದಲ್ಲಿ ಇದಕ್ಕೊಂದು ಸಮುದಾಯದ ಆಯಾಮವನ್ನು ಕೊಟ್ಟಿರುವುದು ಮಾತ್ರ ದೊಡ್ಡ ಬಳ್ಳಾಪುರದ ದೇವಾಂಗ ಸಮುದಾಯ ಎಂದರೆ ತಪ್ಪಿಲ್ಲ. ದೊಡ್ಡಬಳ್ಳಾಪುರ ನಗರದ ಕಲ್ಲುಪೇಟೆ ಯಲ್ಲಿರುವ ಶ್ರೀನಂದಿಗಿರಿ ಪ್ರದಕ್ಷಿಣಾ ಸೇವಾ ಟ್ರಸ್ಟ್ನವರು ಕಳೆದ 85 ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ಸಾಂಘಿಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ನಂದಿಗಿರಿ ಪ್ರದಕ್ಷಿಣೆಗೆ ಚಾಲನೆ ನೀಡಲು ಹಂಪಿ ಹೇಮಕೂಟ ಶ್ರೀಗಾಯಿತ್ರಿ ಪೀಠ ಮಹಾಸಂಸ್ಥಾನಾಧೀಶರಾದ ಶ್ರೀ ದಯಾನಂದಪುರ ಮಹಾಸ್ವಾಮೀಜಿ, ತಪಸೀಹಳ್ಳಿಯ ಪುಷ್ಪಾಂಡಜ ಮಹರ್ಷಿ ಆಶ್ರಮದ ದಿವ್ಯ ಜ್ಞಾನಾನಂದಸ್ವಾಮಿಗಳ ಸಾಕ್ಷಿಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಸುಬ್ಬರಾಯಪ್ಪ ಅವರು ಪ್ರಾರಂಭಿಸಿದ ಈ ಗಿರಿಪ್ರದಕ್ಷಿಣಿಗೆ ೮೫ ವರ್ಷ ಆಗಿದೆ.ನೇಯಿಗೆ ಕೆಲಸಗಾರರಿಗೆ ಆಷಾಡದಲ್ಲಿ ಕೆಲಸ ಇಲ್ಲವೆಂದು ಪ್ರಾರಂಭವಾದ ಈ ಕಾರ್ಯ ಇಲ್ಲಿವರೆಗೆ ಬಂದು ಮುಟ್ಟಿದೆ ಎನ್ನುವುದು ದೇವಾಂಗ ಸಮುದಾಯದ ಹಿರಿಯ ನಾಗರಾಜ್ ಅವರ ಮಾತು.

ಧಾರ್ಮಿಕತೆಯಲ್ಲಡಗಿದ ಆರೋಗ್ಯದ ಗುಟ್ಟು
ನಂದಿಗಿರಿ ಪ್ರದಕ್ಷಿಣೆಯು ಮೇಲ್ನೋಟಕ್ಕೆ ಧಾರ್ಮಿಕ ಆಚರಣೆಯಂತೆ ಕಂಡರೂ ಆಂತರ್ಯದಲ್ಲಿ ಆರೋಗ್ಯವನ್ನು ಕಾಪಾಡುವ ಕೈಗೊಳ್ಳಲೇ ಬೇಕಾದ ಮಹಾ ಗುಟ್ಟಡಗಿದೆ.ಕೈಕೆಸರಾದರೆ ಬಾಯಿ ಮೊಸರು ಎಂಬ ಗಾದೆಯನ್ನು ನೆನಪಿಸುವಂತಿರುವ ಈ ಆಚರಣೆಯು ಕೈಲಾಸಕ್ಕೆ ನಂಟನ್ನು ಹೊಂದಿದೆ.ಆಷಾಡ ಮಾಸದ ಕೊನೇ ಸೋಮವಾರ ನಂದಿಗಿರಿ, ದಿಬ್ಬಗಿರಿ ಬ್ರಹ್ಮಗಿರಿ, ಚೆನ್ನಗಿರಿ, ಸ್ಕಂದಗಿರಿಗಳ ಕಣಿವೆಯಲ್ಲಿ ಸಂಚಾರ ಮಾಡಿದರೆ ಕೈಲಾಸ ಪರ್ವತವನ್ನು ಸುತ್ತಿದ ಪುಣ್ಯ ಪ್ರಾಪ್ತಿ ಯಾಗಲಿದೆ ಎಂಬ ನಂಬಿಕೆಯಿದೆ. ೧೪ ಕಿ,ಮೀ.ನ ಈ ನಡಿಗೆಯಲ್ಲಿ ದೇಹ ಮತ್ತು ಮನಸ್ಸುಗಳ ಮಿಲನ ಸಾಧ್ಯವಾಗುವುದಲ್ಲದೆ ದೈಹಿಕ ಜಡತೆ ದೂರವಾಗಿ ಮನೋಲ್ಲಾಸ ಪ್ರಾರಂಭವಾಗುತ್ತದೆ.

ಸೇವೆಯ ಸಾರ್ಥಕತೆ
ಗಿರಿ ಪ್ರದಕ್ಷಿಣೆಗೆ ಬರುವ ಭಕ್ತಾಧಿಗಳಿಗೆ ನೀರು, ಮಜ್ಜಿಗೆ,ಅನ್ನದಾನ, ಪಾನಕ, ಪನ್ನೀರು ಸೇವೆ ಮಾಡಲು ಬರುವ ಸೇವಾಕರ್ತರಿಗೆ ಕಡಿಮೆಯಿಲ್ಲ. ಬೆಟ್ಟದ ಬುಡದಲ್ಲಿ ಬರುವ ಅಂಗಟ್ಟ, ಈರೇನ ಹಳ್ಳಿ, ಕುಡುವತಿ, ಕಾರಹಳ್ಳಿ ಕ್ರಾಸ್, ಬೆಟ್ಟದ ಕ್ರಾಸ್, ಹೆಗ್ಗಡಿಹಳ್ಳಿ ಗಾಂಧಿಪುರ ಮಾರ್ಗವಾಗಿ ಸಾಗಿ ಕಣಿವೆ ಬಸವಣ್ಣ ದೇವಾಲಯ ಮುಟ್ಟುವವರೆಗೆ ದಾರಿ ಉದ್ದಕ್ಕೂ ನೂರಾರು ಸೇವಾಕರ್ತರು ಗಿರಿ ಪ್ರದಕ್ಷಿಣೆ ಭಕ್ತರಿಗೆ ನಾನಾ ರೀತಿಯ ಸೇವೆಗಳನ್ನು ಒದಗಿಸಿ ಭಕ್ತಿಯನ್ನು ಮೆರೆಯುತ್ತಾರೆ.

ಎಲ್ಲರೂ ಭಾಗಿ
ಗಿರಿ ಪ್ರದಕ್ಷಿಣೆಯಲ್ಲಿ ವಯಸ್ಸಿನ ಅಂತರವಿಲ್ಲದೆ ಸಣ್ಣ ಮಕ್ಕಳು ಹರೆಯದ ಹುಡುಗ ಹುಡುಗಿಯರು, ಮುದುಕರಾದಿಯಾಗಿ ಎಲ್ಲಾ ವಯೋಮಾನವದರೂ ಭಾಗಿಯಾಗುತ್ತಾರೆ. ಇಂತಹ ಕಡೆ ಜಿಲ್ಲಾಡಳಿತ ಮುಂಜಾಗೃತಾ ಕ್ರಮವಾಗಿ ಪ್ರಥಮ ಚಿಕಿತ್ಸೆಯ ವ್ಯವಸ್ಥೆಯ ಜತೆಗೆ, ಒಂದು ಆಂಬ್ಯುಲೆನ್ಸ್ ಸೇವೆ ಯನ್ನೂ ಒದಗಿಸಲು ಮುಂದಾಗಬೇಕು.ಗಿರಿ ಪ್ರದಕ್ಷಿಣೆಯನ್ನು ಇನ್ನಷ್ಟು ಚೆನ್ನಾಗಿ ಮಾಡಲು ಯೋಜನೆ ರೂಪಿಸಬೇಕು. ಹೀಗಾದಲ್ಲಿ, ಹಂಪಿ ಉತ್ಸವದಂತೆ ಗಿರಿ ಪ್ರದಕ್ಷಿಣೆಯೂ ಅಲಂಕಾರಿಕವಾಗಿ ನಡೆದು ಜನರಲ್ಲಿ ಸಂಪನ್ಮೂಲಗಳ ಉಳಿವಿಗೆ ಕೈಜೋಡಿಸೋಣ ಎಂಬ ಜಾಗೃತಿ ಮೂಡಲಿದೆ ಎನ್ನುವುದು ಪ್ರೂಟ್ ಮಲ್ಲಣ್ಣ ಅವರ ಮಾತಾಗಿದೆ.

ಹೀಗೆ ಕಲಿಯುಗದ ಮಹಾನಡಿಗೆಯಲ್ಲಿ ಗರಿಪ್ರದಕ್ಷಿಣೆಯೂ ಒಂದಾಗಿದ್ದು,ಈ ನಡಿಗೆಗೆ ಚಿಕ್ಕ ಬಳ್ಳಾಪುರ, ಡೊಡ್ಡಬಳ್ಳಾಪುರ, ಕೋಲಾರ, ದೇವಹನಹಳ್ಳಿ, ವಿಜಯಪುರ, ಯಲಹಂಕ, ಬೆಂಗಳುರು, ತುಮಕೂರು ಭಾಗಗಳಿಂದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಇದೊಂದು ಗಿರಿಮಹೋತ್ಸವದಂತೆ ಆಗಿದೆ. ಜು.೨೧ರ ಸೋಮವಾರದ ಗಿರಿ ಪ್ರದಕ್ಷಿಣೆಯಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆದು ಧಾರ್ಮಿಕತೆಯ ಬೆಸುಗೆಯೊಂದಿಗೆ ಆರೋಗ್ಯ ಸುಧಾರಣೆಯ ಪಾಠವನ್ನು ಜಗತ್ತಿಗೆ ಸಾರಲಿ, ಆ ಮುಖೇನ ಗಿರಿಕಣಿವೆಗಳ ರಕ್ಷಣೆ ನಮ್ಮ ಹೊಣೆ ಎಂಬುದನ್ನು ಜನತೆ ಮನಗಾಣಲಿ ಎನ್ನುವುದು ಪತ್ರಿಕೆಯ ಕಾಳಜಿಯಾಗಿದೆ.