Dowry Case: ವರದಕ್ಷಿಣೆಗಾಗಿ ಚಿತ್ರಹಿಂಸೆ; ಬಿಸಿ ಚಾಕುವನ್ನು ಪತ್ನಿ ಬಾಯಿಗಿಟ್ಟ ಪತಿರಾಯ
ವರದಕ್ಷಿಣೆ ಸಂಬಂಧಿತ ದೌರ್ಜನ್ಯ ಪ್ರಕರಣವೊಂದರಲ್ಲಿ, 23 ವರ್ಷದ ಮಹಿಳೆಯೊಬ್ಬಳಿಗೆ ಆಕೆಯ ಪತಿ ಚಿತ್ರ ಹಿಂಸೆ ನೀಡಿದ್ದಾನೆ. ಆಕೆಯನ್ನು ಕಟ್ಟಿಹಾಕಿ, ಬಾಯಿಗೆ ಬಿಸಿಮಾಡಿದ ಚಾಕುವನ್ನು ಇರಿಸಿದ್ದಾನೆ. ಸಂತ್ರಸ್ತೆಯ ಪ್ರಕಾರ, ಆಕೆಯ ಗಂಡ ವರದಕ್ಷಿಣೆಗಾಗಿ ಪ್ರತಿನಿತ್ಯವೂ ಕಿರುಕುಳ ನೀಡುತ್ತಿದ್ದ.


ಭೋಪಾಲ್: ವರದಕ್ಷಿಣೆ ಸಂಬಂಧಿತ ದೌರ್ಜನ್ಯ ಪ್ರಕರಣವೊಂದರಲ್ಲಿ, 23 ವರ್ಷದ ಮಹಿಳೆಯೊಬ್ಬಳಿಗೆ ಆಕೆಯ ಪತಿ ಚಿತ್ರ ಹಿಂಸೆ ನೀಡಿದ್ದಾನೆ. ಆಕೆಯನ್ನು ಕಟ್ಟಿಹಾಕಿ, ಬಾಯಿಗೆ ಬಿಸಿಮಾಡಿದ ಚಾಕುವನ್ನು ಇರಿಸಿದ್ದಾನೆ. ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ಪತಿ ಆಕೆಯ ಮುಂಡ, ತೋಳುಗಳು ಮತ್ತು ಕಾಲುಗಳಿಗೆ ಬಿಸಿ ಚಾಕುವಿನಿಂದ ಸುಟ್ಟು ಹಾಕಿದ್ದಾನೆ. ನೋವಿನಿಂದ ಆಕೆ ಜೋರಾಗಿ ಕಿರುಚಿದಾಗ ಅಲ್ಲಿಂದ ಪರಾರಿಯಾಗಿದ್ದಾನೆ. ಆಕೆಯ ದೇಹದ ತುಂಬಾ ಸುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಸಂತ್ರಸ್ತೆಯ ಪ್ರಕಾರ, ಆಕೆಯ ಗಂಡ ವರದಕ್ಷಿಣೆಗಾಗಿ ಪ್ರತಿನಿತ್ಯವೂ ಕಿರುಕುಳ ನೀಡುತ್ತಿದ್ದ. ಅಷ್ಟೇ ಅಲ್ಲದೆ ಆತನಿಗೆ ಬೇರೆ ಸಂಬಂಧವಿತ್ತು ಎಂದು ಮಹಿಳೆ ದೂರಿದ್ದಾಳೆ. ಕಿರುಕುಳ ನೀಡುವುದನ್ನು ಯಾರಿಗೂ ಹೇಳಬಾರದು ಎಂದು ಆಕೆಯ ಫೋನ್ ಕೂಡ ಎತ್ತಿಟ್ಟುಕೊಂಡಿದ್ದ. ಪದೇ ಪದೇ ಕಿರುಕುಳ ಅನುಭವಿಸಿದ ನಂತರ, ಖುಷ್ಬೂ ಪಿಪ್ಲಿಯಾ ಸೋಮವಾರ ಮುಂಜಾನೆ ಮನೆಯಿಂದ ತಪ್ಪಿಸಿಕೊಂಡಿದ್ದಾಳೆ.
ಮನೆ ಕೆಲಸಗಾರರಿಂದ ಮೊಬೈಲ್ ಫೋನ್ ತೆಗೆದುಕೊಂಡು ಆಕೆಯ ಕುಟುಂಬಸ್ಥರನ್ನು ಸಂಪರ್ಕಿಸಿದ್ದಾಳೆ. ನಂತರ ಅವಳನ್ನು ಚಿಕಿತ್ಸೆಗಾಗಿ ಅವರ್ಕಚ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕ್ರೂರ ಹಲ್ಲೆಗೆ ಕಾರಣರಾದ ಪತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತೆಯ ಕುಟುಂಬ ಒತ್ತಾಯಿಸಿದೆ.
ಪ್ರತ್ಯೇಕ ಘಟನೆಯಲ್ಲಿ, ಗ್ರೇಟರ್ ನೊಯ್ಡಾದಲ್ಲಿ ವರದಕ್ಷಿಣೆ ಆಸೆಗೆ ಪತಿಯೇ ಪತ್ನಿಗೆ ಬೆಂಕಿ ಹಚ್ಚಿದ ಘಟನಡ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ವರೆಗೆ ಮೂವರನ್ನು ಬಂಧಿಸಿದ್ದಾರೆ. ಹತ್ತು ವರ್ಷಗಳ ಹಿಂದೆ ಉತ್ತರ ಪ್ರದೇಶದ ಗೇಟರ್ ನೊಯ್ಡಾದ ಸಿರ್ಸಾ ಗ್ರಾಮದ ವಿಪಿನ್ ಎಂಬಾತನಿಗೆ ನಿಕ್ಕಿಯನ್ನು ಮದುವೆ ಮಾಡಿಕೊಡಲಾಗಿತ್ತು. ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದ ಗಂಡ ಮತ್ತು ಅತ್ತೆ ಪ್ರತಿದಿನ ನಿಕ್ಕಿ ಮೇಲೆ ದೌರ್ಜನ್ಯ ನಡೆಸುತ್ತಿದ್ದರು. ಕಳೆದ ಗುರುವಾರ ವರದಕ್ಷಿಣೆ ವಿಚಾರವಾಗಿ ಕಲಹವಾಗಿದೆ. ಹಣ ತರಲು ನಿರಾಕರಿಸಿದ ನಿಕ್ಕಿ ಮೇಲೆ ಹಲ್ಲೆ ನಡೆಸಿದ ಗಂಡ ವಿಪಿನ್ ಮತ್ತವರ ತಾಯಿ ಸೇರಿಕೊಂಡು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ತೀವ್ರ ಸುಟ್ಟ ಗಾಯಗಳಿಂದ ನಿಕ್ಕಿ ಸಾವನ್ನಪ್ಪಿದರು.
ಈ ಸುದ್ದಿಯನ್ನೂ ಓದಿ: Greater Noida Dowry Case: ನೋಯ್ಡಾ ವರದಕ್ಷಿಣೆ ಕೊಲೆ ಪ್ರಕರಣ: ನಿಕ್ಕಿ ಹತ್ಯೆಗೆ ನಡೆದಿತ್ತು ಬಹುದೊಡ್ಡ ಸಂಚು
ಮಗಳನನ್ನು ಕೊಂದ ಪಾಪಿಯನ್ನು ಎನ್‌ಕೌಂಟರ್ ಮಾಡಿ ಕೊಲ್ಲಬೇಕೆಂದು ಮೃತ ನಿಕ್ಕಿ ತಂದೆ ಕಣ್ಣೀರು ಹಾಕಿದ್ದಾರೆ. ಮಗಳ ಗಂಡ ವಿಪಿನ್ ಭಾಟಿ, ಬೇರೊಬ್ಬರೊಂದಿಗೆ ಸಂಬಂಧ ಹೊಂದಿದ್ದ. ಆದ್ದರಿಂದ ನಿಕ್ಕಿಯನ್ನು ದೂರವಿಡಲು ಬಯಸುತ್ತಿದ್ದ. ವಿಪಿನ್ ಭಾಟಿ ಹಾಗೂ ಆತನ ಕುಟುಂಬಸ್ಥರು ಕೊಲೆಗಾರರು ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದಿದ್ದಾರೆ.