ಯುಎಸ್ ಓಪನ್ ಮೊದಲ ಸುತ್ತಲ್ಲೇ ಸೋತು ಟೆನಿಸ್‌ಗೆ ವಿದಾಯ ಹೇಳಿದ ಪೆಟ್ರಾ ಕ್ವಿಟೋವಾ
2006 ರಲ್ಲಿ ಐಟಿಎಫ್ ಸರ್ಕ್ಯೂಟ್‌ನಲ್ಲಿ ವೃತ್ತಿಪರವಾಗಿ ಪದಾರ್ಪಣೆ ಮಾಡಿದ ಕ್ವಿಟೋವಾ, 2011 ರಲ್ಲಿ ಮಾರಿಯಾ ಶರಪೋವಾ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸುವ ಮೂಲಕ 1990 ರ ದಶಕದಲ್ಲಿ ಜನಿಸಿದ ಮೊದಲ ಮಹಿಳಾ ಸಿಂಗಲ್ಸ್ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಆಟಗಾರ್ತಿ ಎಂಬ ಇತಿಹಾಸ ಬರೆದರು. ಕ್ವಿಟೋವಾ 2014 ರಲ್ಲಿ ಯುಜೆನಿ ಬೌಚರ್ಡ್ ಅವರನ್ನು ಸೋಲಿಸುವ ಮೂಲಕ ಎರಡನೇ ಬಾರಿಗೆ ವಿಂಬಲ್ಡನ್ ಗೆದ್ದು ತನ್ನ ಸಾಧನೆಯನ್ನು ಪುನರಾವರ್ತಿಸಿದರು.

ನ್ಯೂಯಾರ್ಕ್: ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್, ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ(Petra Kvitova) ಅವರು ಯುಎಸ್ ಓಪನ್‌ನ(US Open) ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ಸೋತು ಕಣ್ಣೀರಿನ ಮೂಲಕ ಟೆನಿಸ್‌ಗೆ ವಿದಾಯ ಹೇಳಿದರು. ಯುಎಸ್ ಓಪನ್ ಆರಂಭಕ್ಕೂ ಮುನ್ನವೇ ಕ್ವಿಟೋವಾ ತಮ್ಮ ನಿವೃತ್ತಿಯನ್ನು ಘೋಷಿಸಿದ್ದರು.
35 ವರ್ಷದ ಜೆಕ್ ಟೆನಿಸ್ ತಾರೆ ಪೆಟ್ರಾ ಕ್ವಿಟೋವಾ ಅವರು ಕ್ರೀಡೆಗೆ ವಿದಾಯ ಹೇಳುವಾಗ ಭಾವನಾತ್ಮಕವಾಗಿ ಕಂಡುಬಂದರು. ಮಂಗಳವಾರ ನಡೆದ ಪಂದ್ಯದಲ್ಲಿ ಕ್ವಿಟೋವಾ ಅವರು ಡಯೇನ್ ಪೆರ್ರಿ ಎದುರು 6-1, 6-0 ಅಂತರದಿಂದ ಸೋತರು. ಸೋಲಿನೊಂದಿಗೆ ಅವರು 19 ವರ್ಷಗಳ ಕಾಲ ನಡೆಸಿದ್ದ ಸುಪ್ರಸಿದ್ಧ ಟೆನಿಸ್ ವೃತ್ತಿಜೀವನಕ್ಕೆ ಅಂತ್ಯ ಹಾಡಿದರು.
ವಿದಾಯ ಭಾಷಣದಲ್ಲಿ ಭಾವನಾತ್ಮಕವಾಗಿ ಮಾತನಾಡಿದ ಕ್ವಿಟೋವಾ, ಮೂರು ವಾರಗಳ ಹಿಂದೆ ನನಗೆ ಕೋವಿಡ್-19 ಸೋಂಕು ತಗುಲಿತ್ತು. ದೈಹಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರದಿದ್ದರೂ ನಾನು ಆಡಲು ನಿರ್ಧರಿಸಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
2006 ರಲ್ಲಿ ಐಟಿಎಫ್ ಸರ್ಕ್ಯೂಟ್‌ನಲ್ಲಿ ವೃತ್ತಿಪರವಾಗಿ ಪದಾರ್ಪಣೆ ಮಾಡಿದ ಕ್ವಿಟೋವಾ, 2011 ರಲ್ಲಿ ಮಾರಿಯಾ ಶರಪೋವಾ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸುವ ಮೂಲಕ 1990 ರ ದಶಕದಲ್ಲಿ ಜನಿಸಿದ ಮೊದಲ ಮಹಿಳಾ ಸಿಂಗಲ್ಸ್ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಆಟಗಾರ್ತಿ ಎಂಬ ಇತಿಹಾಸ ಬರೆದರು. ಕ್ವಿಟೋವಾ 2014 ರಲ್ಲಿ ಯುಜೆನಿ ಬೌಚರ್ಡ್ ಅವರನ್ನು ಸೋಲಿಸುವ ಮೂಲಕ ಎರಡನೇ ಬಾರಿಗೆ ವಿಂಬಲ್ಡನ್ ಗೆದ್ದು ತನ್ನ ಸಾಧನೆಯನ್ನು ಪುನರಾವರ್ತಿಸಿದರು.
31 WTA ಟೂರ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿರುವ ಕ್ವಿಟೋವಾ ಅವರ ಕೊನೆಯ ಪ್ರಶಸ್ತಿ 2023 ರಲ್ಲಿ ಬರ್ಲಿನ್‌ನಲ್ಲಿ ನಡೆದ ಹುಲ್ಲಿನ ಮೈದಾನದಲ್ಲಿ ಬಂದಿತ್ತು. 35 ವರ್ಷದ ಕ್ವಿಟೋವಾ ತಮ್ಮ ವೃತ್ತಿಜೀವನದಲ್ಲಿ ವಿಶ್ವ ನಂ. 1 ಶ್ರೇಯಾಂಕವನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಉಲ್ಲೇಖಿಸಿದ್ದಾರೆ. ಆದರೆ ಎರಡು ವಿಂಬಲ್ಡನ್ ಪ್ರಶಸ್ತಿಗಳನ್ನು ಅದಕ್ಕಿಂತ ಮೇಲಕ್ಕೆ ಇರಿಸಿದ್ದಾರೆ. ಕ್ವಿಟೋವಾ 2016 ರ ರಿಯೊ ಕ್ರೀಡಾಕೂಟದಿಂದ ಒಲಿಂಪಿಕ್ ಕಂಚಿನ ಪದಕವನ್ನು ಸಹ ಗೆದ್ದಿದರು.
2016 ರಲ್ಲಿ ಕ್ವಿಟೋವಾ ಅವರ ಮನೆಗೆ ನುಗ್ಗಿದ ದರೋಡೆಕೋರ ಚಾಕುವಿನಿಂದ ಇರಿದ ಪರಿಣಾಮ ಅವರ ಎಡಗೈಯಲ್ಲಿನ ಸ್ನಾಯುರಜ್ಜುಗಳು ಮತ್ತು ನರಗಳನ್ನು ಹಾನಿಗೊಳಿಸಿತ್ತು. ಇದು ಅವರ ಟೆನಿಸ್ ವೃತ್ತಿಜೀವನಕ್ಕೆ ಭಾರೀ ಹಾನಿ ಮಾಡಿತ್ತು. ಇದಾದ ಬಳಿಕ ಅವರು 2019 ರಲ್ಲಿ ಆಸ್ಟ್ರೇಲಿಯನ್ ಓಪನ್‌ನ ಫೈನಲ್ ತಲುಪಿದ್ದರು.