ಬುರ್ಖಾ ಧರಿಸದೆ ಹೊರಗೆ ಹೋಗಿದ್ದಕ್ಕೆ ಪತ್ನಿ, ಮಕ್ಕಳನ್ನು ಗುಂಡಿಟ್ಟು ಕೊಂದು ಶೌಚಾಲಯದ ಗುಂಡಿಯಲ್ಲಿ ಶವ ಹೂತ ಪಾಪಿ
Crime News: ಬುರ್ಖಾ ಧರಿಸದೆ ಹೊರಗೆ ಹೋಗಿದ್ದಾಳೆ ಎಂಬ ಕಾರಣಕ್ಕೆ ಪಾಪಿಯೊಬ್ಬ ಪತ್ನಿ ಹಾಗೂ ಮಕ್ಕಳನ್ನೇ ಗುಂಡಿಟ್ಟು ಹತ್ಯೆಗೈದ ಆಘಾತಕಾರಿ ಘಟನೆ ನಡೆದಿದೆ. ಪತಿಯ ಈ ಭೀಕರ ಕೃತ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಕೊಂದ ಬಳಿಕ ಶವಗಳನ್ನು ಶೌಚಾಲಯದ ಗುಂಡಿಯಲ್ಲಿ ಹೂತಿದ್ದಾನೆ. ಉತ್ತರ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ -
ಲಖನೌ, ಡಿ. 17: ಬುರ್ಖಾ ಧರಿಸದೆ ಹೊರಗೆ ಬಂದಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ. ಫಾರೂಕ್ ಎಂಬ ವ್ಯಕ್ತಿ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳ ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆ. ನಂತರ ಶವಗಳನ್ನು ಅಂಗಳದಲ್ಲಿ ಶೌಚಾಲಯಕ್ಕಾಗಿ ಅಗೆದ ಗುಂಡಿಯಲ್ಲಿ ಹೂತು ಕಾಂಕ್ರೀಟ್‌ನಿಂದ ಮುಚ್ಚಿದ್ದಾನೆ. ಆರೋಪಿ ಫಾರೂಕ್‍ನ ಪತ್ನಿ ಮತ್ತು ಹೆಣ್ಣುಮಕ್ಕಳ ಶವಗಳನ್ನು ಹೊರತೆಗೆಯಲು ಅಧಿಕಾರಿಗಳು ಅಂಗಳದ ಕಾಂಕ್ರೀಟ್ ನೆಲವನ್ನು ಅಗೆಯುತ್ತಿರುವುದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ (viral video).
ಫಾರೂಕ್‍ನ ಪತ್ನಿ ತಾಹಿರಾ ಮತ್ತು ಪುತ್ರಿಯರಾದ ಅಫ್ರೀನ್ ಮತ್ತು ಸಹ್ರೀನ್ ಐದು ದಿನಗಳಿಂದ ನಾಪತ್ತೆಯಾದ ಕಾರಣ ಫಾರೂಕ್ ತಂದೆ ದಾವೂದ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ವಿಚಾರಣೆಯ ಸಮಯದಲ್ಲಿ, ಫಾರೂಕ್ ಹೇಳಿಕೆಗಳಲ್ಲಿ ವ್ಯತ್ಯಾಸವನ್ನು ಗಮನಿಸಿದ ಪೊಲೀಸರು, ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು.
ಗೆಳತಿಗಾಗಿ ಸತ್ತಿದ್ದೇನೆ ಎಂದು ನಾಟಕವಾಡಿದ ಆರೋಪಿ ಅಂದರ್; ಹಾಗಾದರೆ ಸತ್ತಿದ್ದು ಯಾರು?
ಫಾರೂಕ್ ತನ್ನ ಹೆಂಡತಿ ಮತ್ತು ಹಿರಿಯ ಮಗಳನ್ನು ಗುಂಡು ಹಾರಿಸಿ ಹಾಗೂ ಕಿರಿಯ ಮಗಳನ್ನು ಕತ್ತು ಹಿಸುಕಿ ಕೊಂದು, ಅಂಗಳದಲ್ಲಿ ಶೌಚಾಲಯಕ್ಕಾಗಿ ಅಗೆದ ಗುಂಡಿಯಲ್ಲಿ ಅವರ ಶವಗಳನ್ನು ಹೂತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಆತನ ಮನೆಗೆ ಧಾವಿಸಿದ ಪೊಲೀಸರು, ಶವಗಳನ್ನು ಹಾಕಿದ ಗುಂಡಿಯನ್ನು ಅಗೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಆರೋಪಿ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.
ಈ ವಿಡಿಯೊ ವೈರಲ್ ಆದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಪಿತೃಪ್ರಭುತ್ವದ ನಿಯಂತ್ರಣ ಮತ್ತು ಕೌಟುಂಬಿಕ ಹಿಂಸಾಚಾರದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಅನೇಕರು ಆರೋಪಿಗೆ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಒತ್ತಾಯಿಸಿದರು. ಕಾನೂನು ಮಾತ್ರವಲ್ಲ, ಸಮಾಜವೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದೆಲ್ಲಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಇಲ್ಲಿದೆ ವಿಡಿಯೊ:
A man killed his wife and two children, then buried their bodies in the courtyard.
— Krishna Chaudhary (@KrishnaTOI) December 17, 2025
Shamli, UP: After committing the crime, the accused, Mohd Farukh, lived normally for five days. He reportedly became angry when his wife went out without wearing a hijab. He shot his wife and… pic.twitter.com/9PDJN9vSaW
ಪುತ್ರಿಯನ್ನು ಕಟ್ಟಡದಿಂದ ಎಸೆದು ಕೊಲೆ ಮಾಡಿದ ತಾಯಿ
ಮಹಿಳೆಯೊಬ್ಬಳು ತನ್ನ 8 ವರ್ಷದ ಮಗಳನ್ನು ಕಟ್ಟಡದ ನಾಲ್ಕನೇ ಮಹಡಿಯಿಂದ ಎಸೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದಿದೆ. ಬಾಲಕಿ ಮೃತಪಟ್ಟಿದ್ದಾಳೆ. 37 ವರ್ಷದ ಮಹಿಳೆ ತನ್ನ ಕುಟುಂಬ ಸದಸ್ಯರೊಂದಿಗೆ ನಡೆದ ವಾಗ್ವಾದದ ನಂತರ ಪುತ್ರಿಯನ್ನು ಕೊಲೆ ಮಾಡಿದ್ದಾಳೆ.
ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಮಹಿಳೆಯು ಈ ಕೃತ್ಯ ಎಸಗಿದಾಕೆ. ಮನೆಯಲ್ಲಿ ಏನೋ ವಿಚಾರಕ್ಕೆ ಜಗಳ ಉಂಟಾಗಿದೆ. ಜಗಳದಿಂದಾಗಿ ಮಾನಸಿಕವಾಗಿ ನೊಂದ ನಂತರ, ಅವಳು ತನ್ನ ಮಗಳನ್ನು ಕಟ್ಟಡದ ನಾಲ್ಕನೇ ಮಹಡಿಗೆ ಕರೆದೊಯ್ದು ಅಲ್ಲಿಂದ ಕೆಳಕ್ಕೆ ಎಸೆದಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.