ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹನಿಟ್ರ್ಯಾಪ್‍ಗೆ ಒಳಗಾಗಿ ಮಿಲಿಟರಿ ಫೋಟೋ ಹಂಚಿಕೊಂಡ ವ್ಯಕ್ತಿ: ಜಮ್ಮು-ಕಾಶ್ಮೀರದಲ್ಲಿ ಆರೋಪಿ ಬಂಧನ

Man shares military photos: ಹನಿಟ್ರ್ಯಾಪ್‌ಗೆ ಬಲಿಯಾಗಿ ಪಾಕಿಸ್ತಾನದ ಐಎಸ್‌ಐ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ 23 ವರ್ಷದ ಯುವಕನನ್ನು ಬಂಧಿಸಲಾಗಿದೆ. ಐಎಸ್ಐ ಆಪರೇಟಿವ್ ಜಮ್ಮು ಪ್ರದೇಶದ ಬಳಿಯ ಸೇನಾ ಬಂಕರ್‌ಗಳು, ರಕ್ಷಣಾ ಸ್ಥಾಪನೆಗಳು ಮತ್ತು ಫ್ಲೈಓವರ್‌ಗಳ ಫೋಟೋಗಳು ಮತ್ತು ವಿಡಿಯೊಗಳನ್ನು ಕಳುಹಿಸಲು ಅವನನ್ನು ಒತ್ತಾಯಿಸಲಾಯಿತು.

ಮಿಲಿಟರಿ ಫೋಟೋ ಹಂಚಿಕೊಂಡ ಆರೋಪಿಯ ಬಂಧನ

ಪಾಕಿಸ್ತಾನ ಪರ ಬೇಹುಗಾರಿಕೆ ಆರೋಪದಲ್ಲಿ ಕರಣ್ ಬಂಧನ -

Priyanka P
Priyanka P May 28, 2026 2:21 PM

ಶ್ರೀನಗರ, ಮೇ 28: ಹನಿಟ್ರ್ಯಾಪ್‌ಗೆ ಬಲಿಯಾಗಿ ಪಾಕಿಸ್ತಾನದ (Pakistan) ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) 23 ವರ್ಷದ ಯುವಕನನ್ನು ಬಂಧಿಸಲಾಗಿದೆ. ಜಮ್ಮು ಪ್ರದೇಶದ ಮಕ್ವಾಲ್ ಗ್ರಾಮದ ನಿವಾಸಿ ಕರಣ್ ಎಂಬಾತ, ಕೆಲವು ತಿಂಗಳ ಹಿಂದೆ ಸ್ನ್ಯಾಪ್‌ಚಾಟ್‌ನಲ್ಲಿ ಮಹಿಳಾ ಐಎಸ್‌ಐ ಕಾರ್ಯಕರ್ತೆಯೊಬ್ಬಳಿಂದ ಆಮಿಷಕ್ಕೆ ಒಳಗಾಗಿದ್ದ. ಆಕೆ ತನ್ನನ್ನು ಪಂಜಾಬ್‌ನಲ್ಲಿ ನಿಯೋಜಿತವಾಗಿರುವ ಗಡಿ ಭದ್ರತಾ ಪಡೆ (BSF) ಯ ಮಹಿಳಾ ಸೈನಿಕಳಾಗಿ ಪರಿಚಯಿಸಿಕೊಂಡು, ನಿರಂತರ ಚಾಟ್‌ಗಳು ಮತ್ತು ಅಶ್ಲೀಲ ವಿಡಿಯೊ ಕರೆಗಳ ಮೂಲಕ ನಿಧಾನವಾಗಿ ಅವನ ವಿಶ್ವಾಸ ಗಳಿಸಿದಳು.

ಕರಣ್ ತನ್ನ ಬಲೆಗೆ ಬಿದ್ದಿರುವುದು ಖಚಿತವಾದ ನಂತರ, ಅವಳು ಅವನಿಂದ ಕುಟುಂಬ ಸದಸ್ಯರೊಬ್ಬರ ವಾಟ್ಸಾಪ್ ಒನ್-ಟೈಮ್ ಪಾಸ್‌ವರ್ಡ್ (OTP) ಕೇಳಿದ್ದಾಳೆ. ಮೊಬೈಲ್ ಸಂಪರ್ಕ ಸಿಗದ ರಾಜೌರಿಯ ಸುಂದರ್‌ಬನಿ ವಲಯಕ್ಕೆ ತನ್ನನ್ನು ವರ್ಗಾಯಿಸಲಾಗಿದೆ ಎಂದು ಹೇಳಿದ್ದಾಳೆ. ಹೀಗಾಗಿ, ಕರಣ್ ತನ್ನ ತಾಯಿಯ ಒಟಿಪಿಯನ್ನು ಹಂಚಿಕೊಂಡನು. ಇದರಿಂದಾಗಿ ಐಎಸ್‍ಐ ಹ್ಯಾಂಡ್ಲರ್ ಖಾತೆಗೆ ಪ್ರವೇಶ ಸಿಕ್ಕಿತು.

ನಂತರ ಐಎಸ್ಐ ಆಪರೇಟಿವ್ ಜಮ್ಮು ಪ್ರದೇಶದ ಬಳಿಯ ಸೇನಾ ಬಂಕರ್‌ಗಳು, ರಕ್ಷಣಾ ಸ್ಥಾಪನೆಗಳು ಮತ್ತು ಫ್ಲೈಓವರ್‌ಗಳ ಫೋಟೋಗಳು ಮತ್ತು ವಿಡಿಯೊಗಳನ್ನು ಕಳುಹಿಸಲು ಅವನನ್ನು ಒತ್ತಾಯಿಸಲಾಯಿತು. ಇದಕ್ಕಾಗಿ ಕರಣ್ 2,000 ರೂ.ಗಳನ್ನು ಪಡೆದಿದ್ದಾನೆ ಎನ್ನಲಾಗಿದೆ. ಅವಳು ಇನ್ನೂ ಹೆಚ್ಚು ಚಿತ್ರಗಳನ್ನು ಕೇಳಿದಾಗ ಮಿಲಿಟರಿ ಗುಪ್ತಚರ ಇಲಾಖೆಗೆ ಅನುಮಾನ ಬಂದಿದೆ.

ಮಧ್ಯ ರಾತ್ರಿ ಆಕಾಶದಿಂದ ಕಂಡ ಭಾರತ-ಪಾಕ್ ಗಡಿಯ ಅದ್ಬುತ ದೃಶ್ಯ: ಇಂಡಿಗೋ ಪೈಲಟ್ ಶೇರ್ ಮಾಡಿದ ವಿಡಿಯೊ ವೈರಲ್

ಮೂಲಗಳು ಹೇಳುವಂತೆ ಮಿಲಿಟರಿ ಗುಪ್ತಚರ ಆತನ ಚಲನವಲನಗಳನ್ನು ತೀವ್ರವಾಗಿ ಗಮನಿಸಿತು. ಆತನ ಬೇಹುಗಾರಿಕೆ ಚಟುವಟಿಕೆಗಳು ದೃಢಪಟ್ಟ ನಂತರ, ಸೇನೆಯು ಜಮ್ಮುವಿನ ಪೊಲೀಸರಿಗೆ ಮಾಹಿತಿ ನೀಡಿತು. ನಂತರ ಜಂಟಿ ತಂಡವು ಕರಣ್‌ನನ್ನು ಮಕ್ವಾಲ್‌ನಿಂದ ಬಂಧಿಸಿತು.

ಪೊಲೀಸರು ಆತನ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಆತನ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಡಿಜಿಟಲ್ ವಹಿವಾಟುಗಳನ್ನು ಪರಿಶೀಲಿಸುತ್ತಿದ್ದಾರೆ. ವಿಚಾರಣೆಯ ಸಮಯದಲ್ಲಿ, ಸೂಕ್ಷ್ಮ ವಿಷಯಗಳನ್ನು ಹಂಚಿಕೊಂಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಈ ಸಂಬಂಧ ಕರಣ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಇತ್ತೀಚೆಗೆ, ಪಂಜಾಬ್‌ನಲ್ಲೂ ವ್ಯಕ್ತಿಯೊಬ್ಬನನ್ನು ಇದೇ ಕಾರಣಕ್ಕೆ ಬಂಧಿಸಲಾಗಿತ್ತು. ಜಮ್ಮು-ಪಠಾಣ್‌ಕೋಟ್ ರಾಷ್ಟ್ರೀಯ ಹೆದ್ದಾರಿಯ ಮುಂದಿರುವ ಸುಜನ್‌ಪುರದ ಅಂಗಡಿಯ ಹೊರಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿ, ಗಡಿಯುದ್ದಕ್ಕೂ ಸೇನೆ ಮತ್ತು ಅರೆಸೈನಿಕ ಬೆಂಗಾವಲುಗಳ ಚಲನವಲನಗಳ ವಿಡಿಯೊವನ್ನು ಪಾಕ್ ಹ್ಯಾಂಡ್ಲರ್‌ಗಳಿಗೆ ಕಳುಹಿಸಿದ ಆರೋಪದ ಮೇಲೆ ಬಲ್ಜಿತ್ ಸಿಂಗ್ ಎಂಬ ವ್ಯಕ್ತಿಯನ್ನು ಪಠಾಣ್‌ಕೋಟ್‌ನ ಪೊಲೀಸರು ಬಂಧಿಸಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ಹನಿಟ್ರ್ಯಾಪ್ ಮಾಡ್ಯೂಲ್‌ಗಳ ಬಗ್ಗೆ ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ. ವೈಯಕ್ತಿಕ ವಿವರಗಳು, ಒಟಿಪಿ ಗಳು ಅಥವಾ ಸೂಕ್ಷ್ಮ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ. ಅನುಮಾನಾಸ್ಪದವೆಂಬುದು ಕಂಡು ಬಂದರೆ ಅಂತಹ ಪ್ರೊಫೈಲ್‌ಗಳನ್ನು ತಕ್ಷಣ ವರದಿ ಮಾಡಿ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.