Yadgir Breaking: ಯಾದಗಿರಿ: ಬಾಡಿಯಾಳ–ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ರಾಸಾಯನಿಕ ಸೋರಿಕೆ ದುರಂತ, ಮೂವರು ಕಾರ್ಮಿಕರ ದುರ್ಮರಣ
ಕೈಗಾರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ವಿಷಕಾರಿ ಅನಿಲ ಸೋರಿಕೆಯಾಗಿದ್ದು, ಅದರ ಪರಿಣಾಮ ಐವರು ಕಾರ್ಮಿಕರು ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮೂವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
-
ಯಾದಗಿರಿ : ಜಿಲ್ಲೆಯ ಬಾಡಿಯಾಳ–ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕೆಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ವಿಷಕಾರಿ ರಾಸಾಯನಿಕ ಸೋರಿಕೆ ದುರಂತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ.
ಕೈಗಾರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ವಿಷಕಾರಿ ಅನಿಲ ಸೋರಿಕೆಯಾಗಿದ್ದು, ಅದರ ಪರಿಣಾಮ ಐವರು ಕಾರ್ಮಿಕರು ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮೂವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: Yadgir News: ಯಾದಗಿರಿಯಲ್ಲಿ ಕ್ವಾರಿಗೆ ಬಿದ್ದು ಇಬ್ಬರು ಬಾಲಕಿಯರು ಸೇರಿ ಮೂವರ ಸಾವು; ಬಟ್ಟೆ ತೊಳೆಯುವ ವೇಳೆ ದುರಂತ!
ನೆರೆಯ ತೆಲಂಗಾಣ ರಾಜ್ಯದ ಮಹಬೂಬ್‌ನಗರ ಜಿಲ್ಲೆಯ ಆಲಂಪಳ್ಳಿ ಗ್ರಾಮದ ಕಟ್ಲಾ ಗಣೇಶ್ , ಮಧ್ಯೆ ಪ್ರದೇಶ ರಾಜ್ಯದ ವಿಕ್ರಮ್ ಸಿಂಗ್ ಗೋಂಡ, ಸಂಜಯ್ ಸಿಂಗ್ ಗೋಂಡ ಮೃತಪಟ್ಟ ಕಾರ್ಮಿಕರು ಎಂದು ಗುರುತಿಸಲಾಗಿದೆ. ಮಂಚಾಲ ಹೆಮಂತ್, ಮಂಚಾಲ ಶಿವಕುಮಾರ್ ಗಂಭೀರವಾಗಿ ಗಾಯಗೊಂಡಿರುವುರಾಗಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ, ಎಸ್ಪಿ ಪೃಥ್ವಿಕ್ ಶಂಕರ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಸಾಯನಿಕ ಸೋರಿಕೆಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದ್ದು, ತಜ್ಞರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.