ಗಣಿಗಾರಿಕೆ ವಿವಾದ: ಬಿಜೆಪಿ ಮಾಜಿ ಶಾಸಕನನ್ನೇ ಹತ್ಯೆಗೈದ ಉದ್ರಿಕ್ತ ಗ್ರಾಮಸ್ಥರು
BJP Former MLA Killed: ಗಣಿಗಾರಿಕೆ ಮತ್ತು ಕ್ರಷರ್ ಘಟಕದ ಬಗ್ಗೆ ಗ್ರಾಮಸ್ಥರೊಂದಿಗೆ ನಡೆದ ಜಗಳದಲ್ಲಿ ಬಿಜೆಪಿ ಮಾಜಿ ಶಾಸಕ ಅತಾರ್ ಸಿಂಗ್ ಭದಾನಾ ಸಾವಿಗೀಡಾಗಿದ್ದಾರೆ. ಭೋಂಡಾ ಗ್ರಾಮದ ನೂರಾರು ಗ್ರಾಮಸ್ಥರು ಒಟ್ಟುಗೂಡಿ ಅವರ ಮೇಲೆ ಲಾಠಿಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಅತಾರ್ ಸಿಂಗ್ ಭದಾನಾ (ಸಂಗ್ರಹ ಚಿತ್ರ) -
ಜೈಪುರ, ಅ. 12: ಗಣಿಗಾರಿಕೆ ಮತ್ತು ಕ್ರಷರ್ ಘಟಕದ ಬಗ್ಗೆ ಗ್ರಾಮಸ್ಥರೊಂದಿಗೆ ನಡೆದ ಜಗಳದಲ್ಲಿ (Mining Dispute) ಬಿಜೆಪಿ ಮಾಜಿ ಶಾಸಕ ಅತಾರ್ ಸಿಂಗ್ ಭದಾನಾ (Atar Singh Bhadana) ಮೃತಪಟ್ಟಿದ್ದಾರೆ. ರಾಜಸ್ಥಾನದ ಭರತ್‌ಪುರದಲ್ಲಿ ಈ ಘಟನೆ ನಡೆದಿದೆ (Crime News). ಹರಿಯಾಣ ಮೂಲದ ಭದಾನಾ 2003ರಲ್ಲಿ ರಾಜಸ್ಥಾನದ ಬಯಾನಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. 2008ರವರೆಗೆ ಅವರು ಆ ಸ್ಥಾನವನ್ನು ಹೊಂದಿದ್ದರು
ಭಾನುವಾರ (ಅ. 11) ಸಂಜೆ ವೀರ್ ಪೊಲೀಸ್ ಠಾಣೆ ವ್ಯಾಪ್ತಿಯ ಭೋಂಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅತಾರ್ ಸಿಂಗ್ ಭದಾನಾ ತಮ್ಮ ಗಣಿಗಾರಿಕೆ ಗುತ್ತಿಗೆ ಪ್ರದೇಶಕ್ಕೆ ತಲುಪಿದಾಗ ಈ ಘಟನೆ ಸಂಭವಿಸಿದೆ. ಭೋಂಡಾ ಗ್ರಾಮದ ನೂರಾರು ಗ್ರಾಮಸ್ಥರು ಒಟ್ಟುಗೂಡಿ ಅವರ ಮೇಲೆ ಲಾಠಿಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೂಡಲೇ ಅವರನ್ನು ವೀರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅವರ ಸ್ಥಿತಿ ಗಂಭೀರವಾಗಿದ್ದ ಕಾರಣ ವೈದ್ಯರು ಅವರನ್ನು ಜೈಪುರಕ್ಕೆ ಕರೆದೊಯ್ಯಲು ಸೂಚಿಸಿದರು.
ಭದಾನಾ ಅವರ ಅಂಗರಕ್ಷಕ ಗಗನ್ ಶರ್ಮಾ ಕೂಡಲೇ ಅವರನ್ನು ಜಿಲ್ಲಾ ರಾಜ್ ಬಹದ್ದೂರ್ ಸ್ಮಾರಕ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಧ್ಯರಾತ್ರಿ ಜೈಪುರದ ಸ್ವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಭದಾನಾ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಪೊಲೀಸರ ಮಾನವೀಯತೆ: 112 ವಾಹನದಲ್ಲಿ ಗಾಯಾಳು ಆಸ್ಪತ್ರೆಗೆ ದಾಖಲು
ಭೋಂಡಾ ಗ್ರಾಮದ ಬೆಟ್ಟಗಳ ಬಳಿ ಅವರಿಗೆ ಗಣಿಗಾರಿಕೆ ಘಟಕವಿತ್ತು. ಗಣಿಗಾರಿಕೆ ಗುತ್ತಿಗೆ ಅವರ ಪತ್ನಿ ಕಮಲೇಶ್ ಭದಾನ ಅವರ ಹೆಸರಿನಲ್ಲಿತ್ತು. ಭೋಂಡಾ ಮತ್ತು ರಾಯ್‌ಪುರ ಗ್ರಾಮಗಳ ಗ್ರಾಮಸ್ಥರು ಎರಡು ವರ್ಷಗಳಿಂದ ಗಣಿಗಾರಿಕೆ ಗುತ್ತಿಗೆ ಮತ್ತು ಕ್ರಷರ್ ಘಟಕದ ವಿರುದ್ಧ ಆಂದೋಲನ ನಡೆಸುತ್ತಿದ್ದಾರೆ. ಅವರು ಹಲವು ಬಾರಿ ಧರಣಿಗಳನ್ನು ನಡೆಸಿದ್ದಾರೆ.
ಗಣಿಗಾರಿಕೆ ವಾಹನಗಳ ಸಂಚಾರಕ್ಕಾಗಿ ಭದಾನಾ ಗ್ರಾಮ ಪಂಚಾಯತ್‌ನ ಗೋಮಾಳ ಜಮೀನನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾನಿರತ ಗ್ರಾಮಸ್ಥರು ಆರೋಪಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಗ್ರಾಮಸ್ಥರು ಕ್ರಷರ್ ಘಟಕದ ಕಾರ್ಯಾಚರಣೆಯನ್ನು ತಡೆದಿದ್ದರು. ಕ್ರಷರ್ ಘಟಕವನ್ನು ನಡೆಸಲು ನ್ಯಾಯಾಲಯದಿಂದ ಅನುಮತಿ ಪಡೆದ ಬಳಿಕ ಭದಾನಾ ಭಾನುವಾರ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ, ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಅವರ ಮೇಲೆ ಮಾರಣಾಂತಿಕ ದಾಳಿ ನಡೆಸಿದರು.
ಗ್ರಾಮಸ್ಥರು ಮತ್ತು ಕ್ರಷರ್ ಪ್ಲಾಂಟ್ ಮಾಲೀಕರ ನಡುವಿನ ಘರ್ಷಣೆಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ತಲುಪಿದರು ಎಂದು ವೀರ್ ಪೊಲೀಸ್ ಠಾಣೆಯ ಉಸ್ತುವಾರಿ ಧೀರೇಂದ್ರ ಸಿಂಗ್ ತಿಳಿಸಿದ್ದಾರೆ. ಭದಾನ ಅವರನ್ನು ವೈದ್ಯರು ಜೈಪುರಕ್ಕೆ ಕರೆದೊಯ್ಯಲು ಸೂಚಿಸಿದರು. ಆದರೆ ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.