Fake Govt Job Scam: ಹಾವೇರಿಯಲ್ಲಿ ಸರ್ಕಾರಿ ಉದ್ಯೋಗದ ಆಮಿಷ ತೋರಿ 25 ನಿರುದ್ಯೋಗಿಗಳಿಗೆ ಕೋಟ್ಯಂತರ ರೂ. ವಂಚನೆ
ಹಾವೇರಿ ಜಿಲ್ಲೆಯಲ್ಲಿ ಸರ್ಕಾರಿ ಉದ್ಯೋಗದ ಆಮಿಷ ತೋರಿ 25ರಿಂದ 30 ನಿರುದ್ಯೋಗಿಗಳಿಗೆ ಕೋಟ್ಯಂತರ ರೂ. ವಂಚನೆ ಎಸಗಿರುವ ಪ್ರಕರಣ ನಡೆದಿದೆ. ಪ್ರತಿಯೊಬ್ಬರಿಂದ ನಾಲ್ಕೈದು ಲಕ್ಷ ಪಡೆದು, 1 ಕೋಟಿ ರೂ.ಗೂ ಹೆಚ್ಚು ಹಣ ಪಡೆದು ಖದೀಮರು ಮೋಸ ಮಾಡಿದ್ದಾರೆ. ಈ ಬಗ್ಗೆ ಮೋಸ ಹೋದ ಅಭ್ಯರ್ಥಿಗಳು ದೂರು ದಾಖಲಿಸಿದ್ದಾರೆ.
ಹಾವೇರಿಯಲ್ಲಿ ಸರ್ಕಾರಿ ಹುದ್ದೆ ಆಮಿಷದಿಂದ ವಂಚನೆಗೊಳಗಾದವರಿಂದ ಸುದ್ದಿಗೋಷ್ಠಿ. -
ಹಾವೇರಿ: ಸರ್ಕಾರಿ ಉದ್ಯೋಗದ ಆಮಿಷ ತೋರಿ 25 ನಿರುದ್ಯೋಗಿಗಳಿಗೆ ಕೋಟ್ಯಂತರ ರೂ. ವಂಚನೆ ಮಾಡಿರುವ ಪ್ರಕರಣ (Fake Govt Job Scam) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಬ್ಯಾಡಗಿ ತಾಲೂಕಿನ ಆಲೂರ ಗ್ರಾಮದ ಕರಿಬಸಪ್ಪ ಎಲಿ ಎಂಬುವವರು ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದ್ದಾರೆ.
ನಿರುದ್ಯೋಗಿಯಾದ ನನಗೆ, 2018ರಲ್ಲಿ ಸವಣೂರು ತಾಲೂಕಿನ ನದಿ ನೀರಲಗಿ ಗ್ರಾಮದ ಸರ್ಕಾರಿ ಉರ್ದು ಶಾಲೆಯ ಶಿಕ್ಷಕಿ ಸಮೀನಾ ಶೇಖ್ ಅವರ ಪತಿ, ಶಿರಸಿ ನಿವಾಸಿಯಾದ ವಾಸಿಂ ಹಿಂಡಸಗಿರಿ (ಚೌದರಿ) ಪರಿಚಯಾಗಿದ್ದರು. ಅವರೊಂದಿಗೆ ಕೈ ಜೋಡಿಸಿರುವ ಸರ್ಕಾರಿ ಶಾಲೆ ಶಿಕ್ಷಕ ರವಿ ಬಾರ್ಕಿ ನದಿನೀರಲಿಗಿಯಲ್ಲಿ ಪರಿಚಯವಾಗಿದ್ದರು. ಅವರು ರೈಲ್ವೆ ಇಲಾಖೆ, ಪೋಸ್ಟ್ ಆಫೀಸ್ ಹುದ್ದೆ, ವಿವಿಧ ಇಲಾಖೆಗಳಲ್ಲಿ ಎಫ್‌ಡಿಎ, ಎಸ್‌ಡಿಎ ಹುದ್ದೆ ಕೊಡಿಸುತ್ತೇವೆ ಎಂದು ಹಣ ಪಡೆದು ವಂಚಿಸಿದ್ದಾರೆ ಎಂದು ಕರಿಬಸಪ್ಪ ಎಲಿ ಆರೋಪಿಸಿದ್ದಾರೆ.
ಸರ್ಕಾರಿ ನೌಕರಿ ಕೊಡಿಸುತ್ತೇವೆ ಎಂದು ಒಬ್ಬೊಬ್ಬರ ಬಳಿ ನಾಲ್ಕೈದು ಲಕ್ಷ ದುಡ್ಡು ಪಡೆದಿದ್ದರು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ನಮ್ಮ ಬಳಿ ಹಣ ಪಡೆದಿದ್ದರು. ನಂತರ ನಕಲಿ ಆಯ್ಕೆ ಪಟ್ಟಿ ತೋರಿಸಿ ನಮಗೆ ನಂಬಿಸಿ ಮೋಸ ಮಾಡಿದ್ದಾರೆ. ಈ ವಂಚಕರ ಜತೆ ಇನ್ನೂ ಹಲವರು ಕೈ ಜೋಡಿಸಿರುವ ಶಂಕೆ ಇದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ಎಂದು ತಿಳಿಸಿದ್ದಾರೆ.
ಪ್ರೀತಿ-ಪ್ರೇಮ ಹೆಸರಲ್ಲಿ ಬ್ಲ್ಯಾಕ್‌ಮೇಲ್: ಡೇಟಿಂಗ್ ಆ್ಯಪ್‌ಗಳ ಮೂಲಕ 500 ಮಹಿಳೆಯರಿಗೆ 2 ಕೋಟಿ ರುಪಾಯಿ ವಂಚನೆ
ಸರ್ಕಾರಿ ನೌಕರಿ ಕೊಡಿಸುತ್ತೇವೆ ಎಂದು ಹಾವೇರಿ ಜಿಲ್ಲೆಯ ಸುಮಾರು 25 ಜನರಿಂದ 1 ಕೋಟಿಗೂ ಹೆಚ್ಚು ಹಣ ಪಡೆದು ವಂಚಿಸಿದ್ದಾರೆ. ದೂರು ನೀಡಿದರೂ ಪೊಲೀಸ್ ಇಲಾಖೆ ನ್ಯಾಯ ಒದಗಿಸಿಲ್ಲ. ಹೀಗಾಗಿ ಶಿಕ್ಷಕಿ ಸಮೀನಾ ಶೇಖ್, ಪತಿ ವಾಸಿಂ, ರವಿ ಬಾರ್ಕಿ ಹಾಗೂ ಅವರ ಅಳಿಯ ಸೇರಿ ನಾಲ್ವರನ್ನು ತಕ್ಷಣವೇ ಬಂಧಿಸಿ ನ್ಯಾಯ ಕೊಡಿಸುವಂತೆ ನೊಂದವರು ಮನವಿ ಮಾಡಿದ್ದಾರೆ.