ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರೀತಿ-ಪ್ರೇಮ ಹೆಸರಲ್ಲಿ ಬ್ಲ್ಯಾಕ್‌ಮೇಲ್: ಡೇಟಿಂಗ್ ಆ್ಯಪ್‌ಗಳ ಮೂಲಕ 500 ಮಹಿಳೆಯರಿಗೆ 2 ಕೋಟಿ ರುಪಾಯಿ ವಂಚನೆ

Dating App Fraud: ಡೇಟಿಂಗ್ ಆ್ಯಪ್‌ಗಳ ಮೂಲಕ 500 ಮಹಿಳೆಯರಿಗೆ ವಂಚಿಸಿದ್ದ ಕುಖ್ಯಾತ ವಂಚಕನನ್ನು ಬಂಧಿಸಲಾಗಿದೆ. ಕುಖ್ಯಾತ ಸೈಬರ್ ವಂಚಕ ಆನಂದ್ ಕುಮಾರ್‌ನನ್ನು ಇದೀಗ ಬಂಧಿಸಲಾಗಿದೆ. ಯುವತಿಯೊಬ್ಬಳು ವಂಚನೆ ಬಗ್ಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಡೇಟಿಂಗ್ ಆ್ಯಪ್‌ಗಳ ಮೂಲಕ 500 ಮಹಿಳೆಯರಿಗೆ 2 ಕೋಟಿ ರುಪಾಯಿ ವಂಚನೆ

ಕುಖ್ಯಾತ ಸೈಬರ್ ವಂಚಕ ಆನಂದ್ ಕುಮಾರ್ -

Priyanka P
Priyanka P Apr 16, 2026 7:25 PM

ಕೋಲ್ಕತ್ತಾ, ಏ. 16: ಡೇಟಿಂಗ್ ಆ್ಯಪ್‌ ಮೂಲಕ 500 ಮಹಿಳೆಯರಿಗೆ ವಂಚಿಸಿದ್ದ ಕುಖ್ಯಾತ ವಂಚಕನನ್ನು ಬಂಧಿಸಲಾಗಿದೆ (Dating App Fraud). ದಕ್ಷಿಣ-ಪಶ್ಚಿಮ ಜಿಲ್ಲೆ ಸೈಬರ್ ಪೊಲೀಸ್ ತಂಡವು ಆರೋಪಿಯನ್ನು ಬಂಧಿಸಿದೆ (crime news). ದೇಶದಾದ್ಯಂತ ಮಹಿಳೆಯರನ್ನು ಗುರಿಯಾಗಿಸಿಕೊಂಡು ಹನಿ-ಟ್ರ್ಯಾಪಿಂಗ್, ರೋಮ್ಯಾನ್ಸ್ ಸ್ಕ್ಯಾಮ್ ಮತ್ತು ಆನ್‌ಲೈನ್ ಬ್ಲ್ಯಾಕ್‌ಮೇಲ್ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದ ಪಶ್ಚಿಮ ಬಂಗಾಳದ ಉತ್ತರ 24 ಪರ್ಗನಾಸ್ ನಿವಾಸಿ ಕುಖ್ಯಾತ ಸೈಬರ್ ವಂಚಕ ಆನಂದ್ ಕುಮಾರ್ (35) ಸದ್ಯ ಪೊಲೀಸರ ಬಲೆ ಬಿದ್ದಿದ್ದಾನೆ.

ಆರೋಪಿಯು ಡೇಟಿಂಗ್ ಮತ್ತು ವೈವಾಹಿಕ ವೇದಿಕೆಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಲ್ಲಿ ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಿ, ವೈದ್ಯ, ಉದ್ಯಮಿ, ವಕೀಲ, ಚಲನಚಿತ್ರ ನಿರ್ಮಾಪಕ ಮತ್ತು ಇತರ ವೃತ್ತಿಪರರಂತೆ ನಟಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಗುರುತುಗಳನ್ನು ಬಳಸಿಕೊಂಡು ಸಂತ್ರಸ್ತರೊಂದಿಗೆ ವಿಶ್ವಾಸ ಬೆಳೆಸುತ್ತಿದ್ದ, ಭಾವನಾತ್ಮಕ ಸಂಬಂಧ ಹೊಂದುತ್ತಿದ್ದ. ಬಳಿಕ ವಿವಾಹ ಪ್ರಸ್ತಾಪ, ವೈದ್ಯಕೀಯ ತುರ್ತು ಪರಿಸ್ಥಿತಿ, ವ್ಯವಹಾರ ನಷ್ಟ ಮತ್ತು ವೃತ್ತಿಪರ ಅವಕಾಶಗಳು ಸೇರಿದಂತೆ ವಿವಿಧ ನೆಪಗಳ ಅಡಿಯಲ್ಲಿ ಹಣವನ್ನು ಸುಲಿಗೆ ಮಾಡುತ್ತಿದ್ದ.

ಆನಂದ್ ಕುಮಾರ್ 500ಕ್ಕೂ ಹೆಚ್ಚು ಮಹಿಳೆಯರನ್ನು ಗುರಿಯಾಗಿಸಿಕೊಂಡು ಸುಮಾರು 2 ಕೋಟಿ ರುಪಾಯಿ ವಂಚಿಸಿದ್ದಾನೆ ಅಥವಾ ಸುಲಿಗೆ ಮಾಡಿದ್ದಾನೆ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಹಲವು ಸಂದರ್ಭಗಳಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಸಂವಹನದ ಸಮಯದಲ್ಲಿ ಹಂಚಿಕೊಂಡ ಖಾಸಗಿ ಫೋಟೊಗಳು ಮತ್ತು ವಿಡಿಯೊ ಮೂಲಕ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.

ಎಂಜಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಿಂದ ಸೈಬರ್‌ ಕ್ರೈಂ.... ಇವ್ರು ಕೊಳ್ಳೆ ಹೊಡೆದಿದ್ದು ಎಷ್ಟು ಗೊತ್ತಾ?

'ವೈಭವ್ ಅರೋರಾ' ಎಂಬ ನಕಲಿ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಿಂದ ಸುಮಾರು 7 ಲಕ್ಷ ರುಪಾಯಿ ವಂಚನೆ ನಡೆದಿದೆ ಎಂದು ಸಂತ್ರಸ್ತೆಯೊಬ್ಬರು ಇ-ಎಫ್‌ಐಆರ್ ಸಲ್ಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಆರಂಭದಲ್ಲಿ ಆಕೆಯನ್ನು ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಸಂಪರ್ಕಿಸಿ, ವಿಶ್ವಾಸ ಗಳಿಸಿದ್ದ. ನಂತರ ಬಹು ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್ ಮಾಡಲು ಆರಂಭಿಸಿದ್ದ. ಜತೆಗೆ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ.

ನಂತರ ಆತ ಆರ್ಥಿಕ ಸಹಾಯ ಪಡೆಯಲು ಅನಾರೋಗ್ಯ ಮತ್ತು ವ್ಯವಹಾರ ನಷ್ಟಗಳ ಬಗ್ಗೆ ಕಥೆಗಳನ್ನು ಹೆಣೆದಿದ್ದ. ಸಂತ್ರಸ್ತೆ ತನ್ನ ಹಣವನ್ನು ಹಿಂತಿರುಗಿಸುವಂತೆ ಒತ್ತಾಯಿಸಿದಾಗ, ಅವನು ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದ. ನಂತರ ಸಂಪರ್ಕವನ್ನು ಕಡಿತಗೊಳಿಸಲು ವೈಭವ್ ಮೃತಪಟ್ಟಿದ್ದಾನೆ ಎಂದು ವಾಟ್ಸ್‌ಆ್ಯಪ್‌ ಮೂಲಕ ಸುಳ್ಳು ಮಾಹಿತಿ ನೀಡಿದ್ದ.

ದೂರಿನ ನಂತರ, ಪೊಲೀಸರು ಐಪಿ ಲಾಗ್‌ಗಳು, ಸಾಮಾಜಿಕ ಮಾಧ್ಯಮ ಖಾತೆಗಳು, ಮೊಬೈಲ್ ಸಂಖ್ಯೆಗಳು ಮತ್ತು ಹಣಕಾಸು ವಹಿವಾಟು ಸೇರಿದಂತೆ ಡಿಜಿಟಲ್ ಮಾಹಿತಿ ಕಲೆ ಹಾಕಿದರು. ಪಶ್ಚಿಮ ಬಂಗಾಳದ 24 ಪರಗಣ ಪ್ರದೇಶದಲ್ಲಿ ಆರೋಪಿಗೆ ಸಂಬಂಧಿಸಿದ ಎರಡು ಸಂಖ್ಯೆಗಳು ಸಕ್ರಿಯವಾಗಿವೆ ಎಂಬ ವಿಚಾರ ಗೊತ್ತಾಯಿತು. ಪೊಲೀಸ್ ತಂಡಗಳು ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿ ನಿರಂತರ ಟ್ರ್ಯಾಕಿಂಗ್ ಮತ್ತು ಸಂಘಟಿತ ಕಾರ್ಯಾಚರಣೆಗಳ ನಂತರ ಅಂತಿಮವಾಗಿ ಆತನನ್ನು ಬಂಧಿಸಿತು.

ಆತನಿಗೆ ಸೇರಿದ ಮೊಬೈಲ್‌, ಲ್ಯಾಪ್‌ಟಾಪ್‌ ಪರಿಶೀಲಿಸಿದಾಗ ವೈಭವ್ ಅರೋರಾ, ಡಾ. ರೋಹಿತ್ ಬೆಹ್ಲ್, ತರುಣ್, ಆನಂದ್ ಶರ್ಮಾ ಮತ್ತು ಶಿಖಾ ಮುಂತಾದ ಹೆಸರಿನ ಮೂಲಕ ಹಲವು ನಕಲಿ ಗುರುತುಗಳ ಮೂಲಕ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂತು. ಆತ ಹಲವು ಮೊಬೈಲ್ ಫೋನ್‌, ವಿಭಿನ್ನ ಗುರುತುಗಳ ಅಡಿಯಲ್ಲಿ ಪಡೆಯಲಾದ ಸಿಮ್ ಕಾರ್ಡ್‌ಗಳನ್ನು ಬಳಸುತ್ತಿದ್ದ.

ಬೆಳಗಾವಿಯಲ್ಲಿ ವೃದ್ಧ ಉದ್ಯಮಿಯ ಡಿಜಿಟಲ್ ಅರೆಸ್ಟ್‌; ಬರೋಬ್ಬರಿ 15 ಕೋಟಿ ರೂ. ಪೀಕಿದ ಸೈಬರ್‌ ವಂಚಕರು!

ವಂಚಿಸಿದ ಹಣದಿಂದ ಖರೀದಿಸಿದ ನಾಲ್ಕು ಸ್ಮಾರ್ಟ್‌ ಫೋನ್‌ಗಳು, ಎಂಟು ಸಿಮ್ ಕಾರ್ಡ್‌ಗಳು, ಮೂರು ಡೆಬಿಟ್ ಕಾರ್ಡ್‌ಗಳು, ನಾಲ್ಕು ಚಿನ್ನದ ಬಳೆಗಳು ಮತ್ತು ಐದು ಚಿನ್ನದ ಸರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಣದ ಹೆಚ್ಚಿನ ಭಾಗವನ್ನು ಆನ್‌ಲೈನ್ ಗೇಮಿಂಗ್ ಮತ್ತು ವೈಯಕ್ತಿಕ ವಿಚಾರಕ್ಕೆ ಖರ್ಚು ಮಾಡಿದ್ದ ಎಂದು ತಿಳಿದುಬಂದಿದೆ.

ಆರೋಪಿಯು ದೆಹಲಿ ಮತ್ತು ಗಾಜಿಯಾಬಾದ್‌ನಲ್ಲಿ ಇದೇ ರೀತಿಯ ಎರಡು ಸೈಬರ್ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.