Physical Assault: ಬಾಲಕನನ್ನು ಅಪಹರಿಸಿ ಲೈಂಗಿಕ ಕಿರುಕುಳ; ಆರೋಪಿ ಮಹಿಳೆಗೆ 54 ವರ್ಷಗಳ ಜೈಲು ಶಿಕ್ಷೆ!
Tamil Nadu Physical assault case: ತಮಿಳುನಾಡಿನಲ್ಲಿ 14 ವರ್ಷದ ಬಾಲಕನನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಮಹಿಳೆಯೊಬ್ಬಳಿಗೆ ನ್ಯಾಯಾಲಯವು 54 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ ಆಕೆ ಬಾಲಕನನ್ನು ಬಲವಂತವಾಗಿ ಲೈಂಗಿಕ ಸಂಬಂಧಕ್ಕೆ ಒಳಪಡಿಸಿದ್ದಾಳೆ ಎಂದು ಆರೋಪಿಸಲಾಗಿದೆ.
ಸಾಂದರ್ಭಿಕ ಚಿತ್ರ -
ಚೆನ್ನೈ: 10ನೇ ತರಗತಿಯ ಅಪ್ರಾಪ್ತ ಬಾಲಕನನ್ನು ಅಪಹರಿಸಿ ಲೈಂಗಿಕ ಕಿರುಕುಳ ಎಸಗಿದ ಪ್ರಕರಣದಲ್ಲಿ (Physical Assault) 38 ವರ್ಷದ ಅಂಗನವಾಡಿ ಕಾರ್ಯಕರ್ತೆಗೆ 54 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. ತಮಿಳುನಾಡಿನ (Tamil Nadu) ತಿರುವರೂರಿನಲ್ಲಿ 2021ರಲ್ಲಿ ಈ ಘಟನೆ ನಡೆದಿತ್ತು. ಆಗ 10ನೇ ತರಗತಿ ವಿದ್ಯಾರ್ಥಿಯಾಗಿದ್ದ ಬಾಲಕನಿಗೆ ಈಕೆ ಲೈಂಗಿಕ ಕ್ರಿಯೆಗೆ ಕಿರುಕುಳ ನೀಡಿದ್ದಳು.
ತಿರುವರೂರು ಜಿಲ್ಲೆಯ ಕುಡವಾಸಲ್ ತಾಲೂಕಿನ ಎಲವಂಚೇರಿ ಬಳಿ ಆರೋಪಿ ಲಲಿತಾ ತನ್ನ ಪತಿ ಮತ್ತು ಅಪ್ರಾಪ್ತ ಮಗಳೊಂದಿಗೆ ವಾಸಿಸುತ್ತಿದ್ದಳು. ಆಗ 15ನೇ ವಯಸ್ಸಿನ ಬಾಲಕ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿದ್ದ ಹಾಗೂ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ. 2021ರ ಸುಮಾರಿಗೆ ಆರೋಪಿ ಲಲಿತಾಗೆ ಬಾಲಕನ ಪರಿಚಯವಾಗಿದೆ. ಈ ವೇಳೆ ಆಕೆ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾಳೆ. ಈ ವಿಚಾರವನ್ನು ಸಂತ್ರಸ್ತ ಮನೆಯಲ್ಲಿ ತಿಳಿಸಿದ್ದ. ಇದರಿಂದ ಸಿಟ್ಟಿಗೆದ್ದ ಕುಟುಂಬಸ್ಥರು, ಆಕೆ ಜೊತೆ ಹೆಚ್ಚಿನ ಸಂಪರ್ಕವಾದಂತೆ ತಡೆಯುವುದಕ್ಕಾಗಿ ಬಾಲಕನನ್ನು ಸಂಬಂಧಿಕರ ಮನೆಗೆ ಕಳುಹಿಸಿದರು.
ಇದನ್ನೂ ಓದಿ: Police Firing: ಆನೇಕಲ್‌ನಲ್ಲಿ ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರ ಫೈರಿಂಗ್
ಒಂದು ದಿನ ಬಾಲಕ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಅಕ್ಟೋಬರ್ 26, 2021ರಂದು ಈ ಸಂಬಂಧ ಬಾಲಕನ ಪೋಷಕರು ಎರವಂಚೇರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದರು. ತಮ್ಮ ಮಗನನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಲಲತಾ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಈ ಸಂಬಂಧ ತನಿಖೆ ಕೈಗೆತ್ತಿಕೊಂಡ ಪೊಲೀಸರು ಬಾಲಕ ಹಾಗೂ ಆರೋಪಿ ಲಲಿತಾಗಾಗಿ ಎಲ್ಲೆಡೆ ಹುಡುಕಾಟ ಪ್ರಾರಂಭಿಸಿತು. ಒಂದು ವಾರದ ನಂತರ, ವಿಶೇಷ ತಂಡವು ನಾಗಪಟ್ಟಣಂ ಜಿಲ್ಲೆಯ ವೇಲಂಕಣಿಯಲ್ಲಿ ಅವರನ್ನು ಪತ್ತೆ ಮಾಡಿತು. ನವೆಂಬರ್ 4, 2021ರಂದು ಬಾಲಕನನ್ನು ರಕ್ಷಿಸಿದ ಪೊಲೀಸರು, ಆರೋಪಿ ಲಲಿತಾಳನ್ನು ಬಂಧಿಸಿದರು.
ಇನ್ನು ಪ್ರಕರಣ ಸಂಬಂಧ ಆರೋಪಿ ಲಲಿತಾ ವಿರುದ್ಧ ಫೋಕ್ಸೋ ಕಾಯ್ದೆಯ ಹಲವು ಸೆಕ್ಷನ್‍ಗಳ ಅಡಿಯಲ್ಲಿ ಆರೋಪ ಹೊರಿಸಲಾಯಿತು. ಇದರ ವಿಚಾರಣೆ ತಿರುವರೂರಿನ ಜಿಲ್ಲಾ ಮಹಿಳಾ ನ್ಯಾಯಾಲಯದಲ್ಲಿ ನಡೆಯಿತು. ಗುರುವಾರ ನ್ಯಾಯಾಧೀಶರು ಲಲಿತಾ ಅವರನ್ನು ದೋಷಿ ಎಂದು ಘೋಷಿಸಿ, ಫೋಕ್ಸ್ ಕಾಯ್ದೆಯಡಿ ಒಟ್ಟು 54 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಇದರಲ್ಲಿ ಸೆಕ್ಷನ್ 5(I) (ಲೈಂಗಿಕ ದೌರ್ಜನ್ಯ) ಮತ್ತು 5(c) (ಸಾರ್ವಜನಿಕ ಸೇವಕರಿಂದ ಲೈಂಗಿಕ ದೌರ್ಜನ್ಯ) ಅಡಿಯಲ್ಲಿನ ಅಪರಾಧಗಳಿಗೆ ತಲಾ 20 ವರ್ಷಗಳು, ಜೊತೆಗೆ ಸೆಕ್ಷನ್ 9(c) ಅಡಿಯಲ್ಲಿ 5 ವರ್ಷಗಳ ಜೈಲು ಶಿಕ್ಷೆ ಸೇರಿವೆ.
ಭಾರತೀಯ ದಂಡ ಸಂಹಿತೆ ಅಡಿಯಲ್ಲಿ, ಅಪಹರಣಕ್ಕಾಗಿ ಸೆಕ್ಷನ್ 363ರ ಅಡಿಯಲ್ಲಿ 5 ವರ್ಷಗಳು ಮತ್ತು ಲೈಂಗಿಕ ದೌರ್ಜನ್ಯ ನಡೆಸುವ ಉದ್ದೇಶದಿಂದ ಅಪಹರಣಕ್ಕಾಗಿ ಸೆಕ್ಷನ್ 367ರ ಅಡಿಯಲ್ಲಿ ನಾಲ್ಕು ವರ್ಷಗಳ ಶಿಕ್ಷೆ ಸೇರಿವೆ. ಜೈಲು ಶಿಕ್ಷೆ ಜೊತೆಗೆ ಲಲಿತಾಗೆ 18,000 ರೂ. ದಂಡ ವಿಧಿಸಲಾಗಿದೆ. ಹಾಗೆಯೇ ಸರ್ಕಾರವು ಬಾಲಕನಿಗೆ 6 ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿತು.
ಇನ್ನು ಆರೋಪಿ ಲಲಿತಾಳನ್ನು ತಿರುಚಿಯ ಮಹಿಳೆಯರ ವಿಶೇಷ ಜೈಲಿನಲ್ಲಿ ಇರಿಸಲಾಯಿತು. ತಿರುಚ್ಚಿ ಪೊಲೀಸ್ ವರಿಷ್ಠಾಧಿಕಾರಿ ಕರುಣ್ ಗರಾದ್ ಅವರು ತನಿಖಾ ತಂಡಗಳನ್ನು ಶ್ಲಾಘಿಸಿ, ಮಕ್ಕಳ ವಿರುದ್ಧ ಅಪರಾಧ ಎಸಗುವವರಿಗೆ ಕಠಿಣ ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಿದರು.