Self Harming: ಡಿಜಿಟಲ್ ಆರೆಸ್ಟ್‌ನಲ್ಲಿ 11 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ ಆತ್ಮಹತ್ಯೆ
Self Harming: ವಿಕ್ರಮ್ ಗೋಸ್ವಾಮಿ ಹೆಸರಿನ ವ್ಯಕ್ತಿ ಸಿಬಿಐ ಅಧಿಕಾರಿ ಎಂದು ಕರೆಮಾಡಿ, ನಿನ್ನ ಮೇಲೆ ಆರೆಸ್ಟ್ ವಾರಂಟ್ ಬಂದಿದೆ ಎಂದು ಹೆದರಿಸಿದ್ದ. ನಿನ್ನನ್ನು ಪ್ರಕರಣವೊಂದರಲ್ಲಿ ಬಂಧಿಸುತ್ತೇನೆ ಎಂಬ ಬೆದರಿಕೆ ಹಾಕಿ ನಂತರ ಸಹಾಯದ ನೆಪದಲ್ಲಿ 1.95 ಲಕ್ಷ ರೂ. ಗಳನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದ.

ಮೃತ ಕೆ. ಕುಮಾರ್

ಚನ್ನಪಟ್ಟಣ: ಇತ್ತೀಚಿಗೆ ಡಿಜಿಟಲ್ ಅರೆಸ್ಟ್ (Digital Arrest) ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಮತ್ತೊಬ್ಬ ವ್ಯಕ್ತಿ ಡಿಜಿಟಲ್ ಆರೆಸ್ಟ್‌ಗೆ ಬಲಿಯಾಗಿರುವ ಘಟನೆ ಚನ್ನಪಟ್ಟಣ (Channapatna) ತಾಲೂಕಿನಲ್ಲಿ ನಡೆದಿದೆ. ಚನ್ನಪಟ್ಟಣ ತಾಲೂಕಿನ ಕೆಲಗೆರೆ ಗ್ರಾಮದಲ್ಲಿ ಸೈಬರ್ ವಂಚನೆ ಜಾಲಕ್ಕೆ ಸಿಲುಕಿದ ವ್ಯಕ್ತಿಯೊಬ್ಬರು ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Self harming) ಶರಣಾಗಿದ್ದಾರೆ. ಕೆ. ಕುಮಾರ್ (48) ಮೃತ ವ್ಯಕ್ತಿ. ವಂಚನೆಯ ಬಗ್ಗೆ ಡೆತ್ ನೋಟ್ ಬರೆದಿಟ್ಟು, ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಮಾರ್ ಬೆಸ್ಕಾಂನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪತ್ನಿ ಹಾಗೂ ಗಂಡುಮಗುವಿನೊಂದಿಗೆ ಬೆಂಗಳೂರಿನ ಎಚ್ಎಸ್ಆರ್ ಲೇಔಟ್‌ನಲ್ಲಿ ವಾಸವಾಗಿದ್ದರು. ‘ವಿಕ್ರಮ್ ಗೋಸ್ವಾಮಿ ಹೆಸರಿನ ವ್ಯಕ್ತಿ ಸಿಬಿಐ ಅಧಿಕಾರಿ ಎಂದು ಕರೆಮಾಡಿ, ನಿನ್ನ ಮೇಲೆ ಆರೆಸ್ಟ್ ವಾರಂಟ್ ಬಂದಿದೆ ಎಂದು ಹೆದರಿಸಿದ್ದ. ನಿನ್ನನ್ನು ಪ್ರಕರಣವೊಂದರಲ್ಲಿ ಬಂಧಿಸುತ್ತೇನೆ ಎಂಬ ಬೆದರಿಕೆ ಹಾಕಿ ನಂತರ ಸಹಾಯದ ನೆಪದಲ್ಲಿ 1.95 ಲಕ್ಷ ರೂ. ಗಳನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದ. ಬಳಿಕ ವಿವಿಧ ಬ್ಯಾಂಕ್ ಖಾತೆಗಳಿಗೆ ಸುಮಾರು 11 ಲಕ್ಷ ರೂ.ವರೆಗೂ ಹಾಕಿಸಿಕೊಂಡಿದ್ದ. ಇಷ್ಟಕ್ಕೆ ಸುಮ್ಮನಾಗದೆ ಮತ್ತೆ 2.75 ಲಕ್ಷ ರೂ. ಹಾಕುವಂತೆ ಪೀಡಿಸುತ್ತಿದ್ದʼ ಎಂದು ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಇದರಿಂದ ಬೇಸತ್ತು ಡೆತ್ ನೋಟ್ ಬರೆದಿಟ್ಟು ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೋಸ ಹೋಗಬೇಡಿ
ಡಿಜಿಟಲ್ ಆರೆಸ್ಟ್ ಕುರಿತು ಈಗಾಗಲೇ ಸಾಕಷ್ಟು ಮಾಹಿತಿ ನೀಡಲಾಗಿದೆ. ಆದರೂ ಜನ ಮೊಸಹೋಗುತ್ತಿದ್ದಾರೆ. ʼನೀವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೀರಿʼ ಎಂದು ಆರೋಪಿಸಿ ವಂಚಕರು ಫೋನ್ ಕರೆ ಮಾಡುತ್ತಾರೆ. ಪೊಲೀಸ್ ಅಧಿಕಾರಿಗಳಂತೆ ವೇಷ ಧರಿಸಿ, ನಿಮ್ಮನ್ನು ವಿಡಿಯೋ ಕಾಲ್‌ನಲ್ಲಿಯೇ ಇರುವಂತೆ ಒತ್ತಾಯಿಸುತ್ತಾರೆ. ಬೆದರಿಸಿ, ಹಣ ಸುಲಿಗೆ ಮಾಡುತ್ತಾರೆ. ಅಪರಿಚಿತ ಆಡಿಯೋ, ವಿಡಿಯೋ ಕರೆಗಳನ್ನು ಸ್ವೀಕರಿಸದಿರುವುದು ಇವರಿಂದ ರಕ್ಷಿಸಿಕೊಳ್ಳುವ ಮೊದಲ ಹೆಜ್ಜೆ. ಹಣ ವರ್ಗಾವಣೆ ವೇಳೆ ಎಚ್ಚರದಿಂದಿರುವುದು, ವೈಯಕ್ತಿಕ ಬ್ಯಾಂಕ್ ಮಾಹಿತಿಯನ್ನು ನೀಡದಿರುವುದು, ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸುವುದು ಮುಖ್ಯ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Terrorist Arrested: 58 ಜನರನ್ನು ಸಾಯಿಸಿದ ಕೊಯಮತ್ತೂರು ಬಾಂಬ್ ಸ್ಫೋಟ ಆರೋಪಿ 27 ವರ್ಷಗಳ ಬಳಿಕ ಕರ್ನಾಟಕದಲ್ಲಿ ಸೆರೆ!