ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Road Rage: ಮಿರರ್‌ಗೆ ಟಚ್‌ ಆಗಿದ್ದಕ್ಕೆ ಕಾರು ಡಿಕ್ಕಿ ಹೊಡೆಸಿ ಬೈಕ್‌ ಸವಾರನ ಕೊಂದ ದಂಪತಿ!

Bengaluru News: ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ರೋಡ್ ರೇಜ್ ಪ್ರಕರಣದಲ್ಲಿ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಕಾರಿನ ಮಿರರ್‌ಗೆ ಟಚ್‌ ಆಗಿದ್ದಕ್ಕೆ ಹಿಂಬಾಲಿಸಿ ಕಾರಿನಿಂದ ಡಿಕ್ಕಿ ಹೊಡೆಸಿದ್ದರಿಂದ ಬೈಕ್‌ ಸವಾರ ಮೃತಪಟ್ಟಿದ್ದು, ಈ ಸಂಬಂಧ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ರೋಡ್‌ ರೇಜ್‌; ಕಾರು ಡಿಕ್ಕಿ ಹೊಡೆಸಿ ಬೈಕ್‌ ಸವಾರನ ಕೊಂದ ದಂಪತಿ!

-

Prabhakara R Prabhakara R Oct 29, 2025 3:00 PM

ಬೆಂಗಳೂರು, ಅ.29: ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ರೋಡ್ ರೇಜ್ ಪ್ರಕರಣಗಳು (Bengaluru Road Rage) ಹೆಚ್ಚಾಗುತ್ತಿವೆ. ಈ ನಡುವೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಒಂದು ರೋಡ್ ರೇಜ್ ಪ್ರಕರಣದಲ್ಲಿ ಯುವಕ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಕಾರಿನ ಮಿರರ್‌ಗೆ ಬೈಕ್‌ ಟಚ್ ಆಗಿದ್ದಕ್ಕೆ ಕೋಪಗೊಂಡ ದಂಪತಿ, ಬೆನ್ನಟ್ಟಿ ಹಿಂದಿನಿಂದ ಬೈಕ್‌ಗೆ ಡಿಕ್ಕಿ ಹೊಡೆಸಿದ್ದರಿಂದ ದರ್ಶನ್ ಎಂಬ ಯುವಕ ಮೃತಪಟ್ಟಿದ್ದಾನೆ. ವರುಣ್ ಎಂಬ ಮತ್ತೊಬ್ಬ ಯುವಕ ಗಾಯಗೊಂಡಿದ್ದಾನೆ.

ಅ. 27ರ ರಾತ್ರಿ ಶ್ರೀರಾಮ ಲೇಔಟ್‌ನಲ್ಲಿ ಘಟನೆ ನಡೆದಿದೆ. ದರ್ಶನ್ ಮತ್ತು ವರುಣ್ ಇಬ್ಬರೂ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ಕಾರಿನ ಮಿರರ್‌ಗೆ ಟಚ್‌ ಆಗಿದೆ. ಈ ವೇಳೆ ಮಿರರ್‌ ಒಡೆದಿದ್ದು, ಕಾರಿನಲ್ಲಿದ್ದ ಮನೋಜ್ ಕುಮಾರ್ ಮತ್ತು ಆರತಿ ಶರ್ಮ ದಂಪತಿ ಕೋಪಗೊಂಡು, ಸುಮಾರು ಎರಡು ಕಿಲೋಮೀಟರ್‌ನಷ್ಟು ಹಿಂಬಾಲಿಸಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.

ಕಾರು ಡಿಕ್ಕಿಯಾದ ರಭಸಕ್ಕೆ ದರ್ಶನ್ ಮತ್ತು ವರುಣ್ ಇಬ್ಬರೂ ರಸ್ತೆಗುರುಳಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ದರ್ಶನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪ್ರಾಥಮಿಕವಾಗಿ ಅಪಘಾತ ಎಂದು ಜೆಪಿ ನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಮೊದಲು ಇಬ್ಬರಿಗೂ ಡಿಕ್ಕಿ ಹೊಡೆದ ನಂತರ ತಪ್ಪಿಸಿಕೊಂಡ ದಂಪತಿ, ಮತ್ತೆ ಯೂ ಟರ್ನ್ ತೆಗೆದುಕೊಂಡು ಬಂದು ಮತ್ತೊಮ್ಮೆ ಡಿಕ್ಕಿ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ಕೆಲ ಸಮಯದ ಬಳಿಕ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸ್ಥಳಕ್ಕೆ ಮರಳಿ ಕಾರಿನ ಬಿಡಿ ಭಾಗಗಳನ್ನು ತೆಗೆದುಕೊಂಡು ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸ್ ತನಿಖೆಯ ವೇಳೆ ತಿಳಿದುಬಂದಿದೆ.

ಆರೋಪಿಗಳಾದ ಮನೋಜ್ ಕುಮಾರ್ ಕಳರಿಪಯಟ್ಟು ಶಿಕ್ಷಕನಾಗಿದ್ದು, ಬನ್ನೇರುಘಟ್ಟ ರಸ್ತೆಯಲ್ಲಿ ಅಕಾಡೆಮಿ ನಡೆಸುತ್ತಿದ್ದಾನೆ. ಘಟನೆ ಬಳಿಕ ಸ್ಥಳದಿಂದ ಪಲಾಯನ ಮಾಡಿದ ದಂಪತಿಯನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Road Accident: ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಸಾಫ್ಟ್‌ವೇರ್‌ ಇಂಜಿನಿಯರ್‌ ಬಲಿ

ಮೊಬೈಲ್‌ ಕದಿಯುತ್ತಿದ್ದ ಗ್ಯಾಂಗ್‌ ಅರೆಸ್ಟ್‌; 3.36 ಕೋಟಿ ಮೌಲ್ಯದ ಪೋನ್‌ಗಳು ವಶಕ್ಕೆ

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ . ಮೊಬೈಲ್‌ ಕದಿಯುತ್ತಿದ್ದ ಖದೀಮರ ಗ್ಯಾಂಗ್‌ ಅನ್ನು ಬಂಧಿಸಿ, ಅವರಿಂದ 3.36 ಕೋಟಿ ಮೌಲ್ಯದ ಮೊಬೈಲ್‌ಗಳನ್ನು ಸೀಜ್ ಮಾಡಿದ್ದಾರೆ. ಒಟ್ಟು 42 ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

1,949 ಮೊಬೈಲ್ ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೇವಲ ಆರು ಮಂದಿ ಕಳ್ಳರಿಂದ 450 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಪ್ರಕರಣಗಳು ದಾಖಲಾಗಿದ್ದವು. ಬಸ್‌ನಲ್ಲಿ ಐದಾರು ಕಳ್ಳರು ಒಟ್ಟಿಗೆ ಬರುತ್ತಿದ್ದರು. ಪ್ರಯಾಣಿಕರ ಗಮನ ಬೇರೆ ಸೆಳೆದು ಮೊಬೈಲ್ ಕಳ್ಳತನ ಮಾಡುತ್ತಿದ್ದರು. ಬಳಿಕ ಒಬ್ಬರಿಂದ ಒಬ್ಬರಿಗೆ ಮೊಬೈಲ್ ಶಿಫ್ಟ್ ಆಗುತ್ತಿತ್ತು. ಬಳಿಕ ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಮೊಬೈಲ್ ಸುತ್ತಿಡುತ್ತಿದ್ದರು. ಇದರಿಂದ ಕೂಡಲೇ ಮೊಬೈಲ್ ನೆಟ್ವರ್ಕ್ ಜಾಮ್ ಆಗುತ್ತಿತ್ತು, ತಕ್ಷಣ ಯಾರೇ ಕರೆ ಮಾಡಿದರೂ ಕಾಲ್ ರಿಚ್ ಆಗುತ್ತಿರಲಿಲ್ಲ. ಮೊಬೈಲ್ ಸ್ವಿಚ್ ಆಫ್ ಅಥವಾ ಬ್ಯುಸಿ ಅಂತ ಬರುತ್ತದೆ. ಈ ಟೆಕ್ನಿಕ್ ಉಪಯೋಗಿಸಿ ಕಳ್ಳರು ಮೊಬೈಲ್ ಎಗರಿಸುತ್ತಿದ್ದರು.