ವರದಕ್ಷಿಣೆ ಕೊಡದ್ದಕ್ಕೆ ಪತಿ, ಅತ್ತೆ-ಮಾವನಿಂದ ಚಿತ್ರಹಿಂಸೆ ಆರೋಪ; ಸೊಸೆ ತಲೆ ಬೋಳಿಸಿ ದೌರ್ಜನ್ಯ ನೀಡಿದ ಕಿರಾತಕರು
Woman Alleges Torture: ವರದಕ್ಷಿಣೆ ಕೊಡದ ಕಾರಣ ಪತಿ ಮತ್ತು ಅತ್ತೆ ಮಾವಂದಿರು ತನ್ನ ತಲೆಯನ್ನು ಬಲವಂತವಾಗಿ ಬೋಳಿಸಿದ್ದಾರೆ ಎಂದು ಮಹಾರಾಷ್ಟ್ರದ ಕಲ್ಯಾಣ್‌ನ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಮಹಿಳೆಯ ಪತಿಯ ಕುಟುಂಬದ ಐದು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವರದಕ್ಷಿಣೆ ಕೊಡದ್ದಕ್ಕೆ ಪತಿ, ಅತ್ತೆ-ಮಾವನಿಂದ ಚಿತ್ರಹಿಂಸೆ ಆರೋಪ -
ಮುಂಬೈ, ಜೂ.17: ವರದಕ್ಷಿಣೆ ಕೊಡದ ಕಾರಣ (Dowry case) ಪತಿ ಮತ್ತು ಅತ್ತೆ ಮಾವಂದಿರು ತನ್ನ ತಲೆಯನ್ನು ಬಲವಂತವಾಗಿ ಬೋಳಿಸಿದ್ದಾರೆ ಎಂದು ಮಹಾರಾಷ್ಟ್ರ (Maharashtra) ದ ಕಲ್ಯಾಣ್‌ನ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಹಲವು ತಿಂಗಳುಗಳಿಂದ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಉಲ್ಹಾಸ್‌ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ, ಗರ್ಭಾವಸ್ಥೆಯಲ್ಲಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ. ಊಟವೂ ಕೊಡುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ. ಮಹಿಳೆಯ ಪತಿಯ ಕುಟುಂಬದ ಐದು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದೂರಿನ ಪ್ರಕಾರ, ಉಲ್ಲಾಸ್‌ನಗರದ ನಿವಾಸಿ ಅಫ್ಸಾನಾ, ಕಲ್ಯಾಣ್‌ನ ವಾಲ್ಧುನಿ ಪ್ರದೇಶದ ನಿವಾಸಿ ಸಮೀರ್ ಅನ್ಸಾರಿ ಅವರನ್ನು ನವೆಂಬರ್ 2025 ರಲ್ಲಿ ವಿವಾಹವಾದರು. ಮದುವೆಯ ಸಮಯದಲ್ಲಿ ವರದಕ್ಷಿಣೆ ನೀಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾಗಿ ಮಹಿಳೆಯ ಕುಟುಂಬಸ್ಥರು ಹೇಳಿದ್ದಾರೆ. ಆದರೆ, ಮದುವೆಯ ನಂತರ ವರದಕ್ಷಿಣೆ ಕೊಡುವಂತೆ ಬೇಡಿಕೆ ಹೆಚ್ಚಾಯಿತು.
ಗರ್ಭಿಣಿಯಾಗಿದ್ದಾಗಲೂ ಕಿರುಕುಳ ಮುಂದುವರೆದಿದೆ ಎಂದು ಅಫ್ಸಾನಾ ಆರೋಪಿಸಿದ್ದಾರೆ. ತನಗೆ ಸರಿಯಾಗಿ ಊಟ ಕೊಡುತ್ತಿರಲಿಲ್ಲ. ತನ್ನ ಪತಿ, ಅತ್ತೆ, ಮಾವ ಮತ್ತು ಅತ್ತಿಗೆ ಪದೇ ಪದೇ ಹಲ್ಲೆ ನಡೆಸುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ. ಇದಲ್ಲದೆ, ತನ್ನ ಕೈಗಳ ಮೇಲೆ ಬಿಸಿ ನೀರು ಎರಚಲಾಗಿದೆ. ಇದರಿಂದ ಸುಟ್ಟ ಗಾಯ ಉಂಟಾಗಿದೆ ಎಂದು ಅವರು ಹೇಳಿದರು. ಏನಾದರೂ ಬೇಕಿದ್ದರೆ ಹಣವನ್ನು ಕೂಡ ಕೊಡುತ್ತಿರಲಿಲ್ಲ ಎಂದವರು ದೂರಿದ್ದಾರೆ.
ಹೇನುಗಳಿವೆ ಎಂಬ ನೆಪದಲ್ಲಿ ತನ್ನ ಅತ್ತೆ-ಮಾವ ಬಲವಂತವಾಗಿ ತಲೆ ಬೋಳಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ತನ್ನ ಪತಿ, ಅತ್ತೆ, ಅತ್ತಿಗೆ ಮತ್ತು ಅತ್ತೆ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ದೂರಿದ್ದಾರೆ. ನಂತರ, ಸುಮಾರು ಒಂದು ವಾರದವರೆಗೆ ತನ್ನನ್ನು ಕೋಣೆಯಲ್ಲಿ ಬಂಧಿಸಿ ಮತ್ತಷ್ಟು ಕಿರುಕುಳ ನೀಡಲಾಯಿತು ಎಂದು ಆರೋಪಿಸಲಾಗಿದೆ.
ಅಫ್ಸಾನಾ ಕೊನೆಗೆ ತನ್ನ ಗಂಡನ ಮನೆಯಿಂದ ತಪ್ಪಿಸಿಕೊಂಡು ತನ್ನ ಸಹೋದರಿಯ ನಿವಾಸವನ್ನು ತಲುಪಿದಳು. ಅಲ್ಲಿ ಅವಳು ತನ್ನ ಕುಟುಂಬಕ್ಕೆ ನಡೆದ ದೌರ್ಜನ್ಯದ ಬಗ್ಗೆ ತಿಳಿಸಿದಳು. ನಂತರ ಆಕೆಯ ಕುಟುಂಬಸ್ಥರು ಆಕೆಯನ್ನು ಉಲ್ಹಾಸ್‌ನಗರದ ಸೆಂಟ್ರಲ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆಯ ಸಹೋದರ ಮಹಾರಾಷ್ಟ್ರ ಸರ್ಕಾರ ಮತ್ತು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಈ ಘಟನೆ ಸ್ಥಳೀಯ ನಿವಾಸಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಇನ್ನು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ದೊರೆತಿದ್ದು, ಆಕೆಯ ಹೇಳಿಕೆ ದಾಖಲಿಸಲು ತಂಡವನ್ನು ಕಳುಹಿಸಲಾಗಿದೆ ಎಂದು ಮಹಾತ್ಮ ಫುಲೆ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಬಲಿರಾಮ್ ಪರದೇಶಿ ತಿಳಿಸಿದ್ದಾರೆ.