ಮಮತಾ ಬ್ಯಾನರ್ಜಿ ಉತ್ತರಾಧಿಕಾರಿಯಾಗಿ ಮುಖ್ಯಮಂತ್ರಿ ಹುದ್ದೆಗೆ ಸುವೇಂದು ಅಧಿಕಾರಿ ಆಯ್ಕೆ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸ್ಥಾನಕ್ಕೆ ಸುವೇಂದು ಅಧಿಕಾರಿಯವರನ್ನು ಆಯ್ಕೆ ಮಾಡಲಾಗಿದೆ. ಇವರೊಂದಿಗೆ ಇಬ್ಬರು ಉಪಮುಖ್ಯಮಂತ್ರಿಗಳ ಆಯ್ಕೆ ಮಾಡಲಾಗುತ್ತದೆ ಎನ್ನಲಾಗುತ್ತಿದ್ದರೂ ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಾವುದೇ ಘೋಷಣೆಯನ್ನು ಮಾಡಲಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಶುಕ್ರವಾರ ಅಧಿಕಾರಿ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.
ಸಂಗ್ರಹ ಚಿತ್ರ -
ಕೋಲ್ಕತ್ತಾ: ತೃಣ ಮೂಲ ಕಾಂಗ್ರೆಸ್ ನಾಯಕಿ (Trinamool Congress leader) ಮಮತಾ ಬ್ಯಾನರ್ಜಿ (Mamata Banerjee) ಅವರ ಉತ್ತರಾಧಿಕಾರಿಯಾಗಿ, ಪಶ್ಚಿಮ ಬಂಗಾಳದ (west bengal) ಮುಖ್ಯಮಂತ್ರಿಯಾಗಿ (Chief Minister) ಮತ್ತು ಬಿಜೆಪಿ (BJP) ಶಾಸಕಾಂಗ ಪಕ್ಷದ ನಾಯಕರಾಗಿ ಹಿರಿಯ ಬಿಜೆಪಿ ನಾಯಕ (Senior BJP leader) ಸುವೇಂದು ಅಧಿಕಾರಿ (Suvendu Adhikari) ಅವರನ್ನು ಶುಕ್ರವಾರ ಆಯ್ಕೆ ಮಾಡಲಾಯಿತು. ಈ ಮೂಲಕ ಅವರು ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿದ್ದಾರೆ. ಕೋಲ್ಕತ್ತಾದಲ್ಲಿ ಶನಿವಾರ ನಡೆಯುವ ಸಮಾರಂಭದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಶುಕ್ರವಾರ ಸುವೇಂದು ಅಧಿಕಾರಿ ಅವರ ಹೆಸರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಔಪಚಾರಿಕವಾಗಿ ಘೋಷಿಸಿದರು
ಕೋಲ್ಕತ್ತಾದಲ್ಲಿ ಶುಕ್ರವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುವೇಂದು ಅಧಿಕಾರಿ ಅವರ ಹೆಸರನ್ನು ಪ್ರಸ್ತಾಪಿಸಲಾಗಿದ್ದು, ಬಿಜೆಪಿ ಶಾಸಕರು ಮತ್ತು ಪಕ್ಷದ ಹಿರಿಯ ನಾಯಕರ ಸಮ್ಮತಿಯೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಔಪಚಾರಿಕವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಸುವೇಂದು ಅಧಿಕಾರಿ ಹೆಸರನ್ನು ಘೋಷಿಸಿದರು.
ಬಂಗಾಳದ ಹೌರಾದಲ್ಲಿ ಚುನಾವಣೋತ್ತರ ಹಿಂಸಾಚಾರ: ಟಿಎಂಸಿಯಿಂದ ಬಾಂಬ್ ದಾಳಿ
ಬಂಗಾಳದ ಮಾಜಿ ಮುಖ್ಯಮಂತ್ರಿ ತಮ್ಲುಕ್‌ನ ಅಜಯ್ ಮುಖರ್ಜಿ ಅವರ ಬಳಿಕ ಪುರ್ಬಾ ಮೇದಿನಿಪುರದ ಎರಡನೇ ಮುಖ್ಯಮಂತ್ರಿಯಾಗಿ ಅಧಿಕಾರಿ ನೇಮಕವಾಗಿದ್ದಾರೆ. ಮುಖರ್ಜಿ ಅವರು ಬಂಗಾಳದಲ್ಲಿ ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ಅವರ ಕಾಲದಲ್ಲಿ ಮೇದಿನಿಪುರ ಅವಿಭಜಿತ ಜಿಲ್ಲೆಯಾಗಿತ್ತು.
ಸುವೇಂದು ಅಧಿಕಾರಿ ಅವರು ಬಂಗಾಳದ ಒಂಬತ್ತನೇ ಮುಖ್ಯಮಂತ್ರಿಯಾಗಿ ಶನಿವಾರ ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಎನ್ ಡಿಎ, ಬಿಜೆಪಿಯ ಹಿರಿಯ ನಾಯಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಸುವೇಂದು ಅಧಿಕಾರಿ ಅವರು ಒಂದು ಕಾಲದಲ್ಲಿ ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕಿ ಮಮತಾ ಬ್ಯಾನರ್ಜಿ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದರು. ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಯವರ ಭೂಸ್ವಾಧೀನ ವಿರೋಧಿ ಚಳವಳಿಯ ಮುಂಚೂಣಿಯ ನಾಯಕರಾಗಿದ್ದರು. ಇವರು ಬಿಜೆಪಿ ಸೇರಿದ ಬಳಿಕ ಮಮತಾ ಬ್ಯಾನರ್ಜಿ ಅವರಿಗೆ ಪ್ರತಿಸ್ಪರ್ಧಿಯಾಗಿದ್ದರು.
ಐದು ವರ್ಷಗಳ ಹಿಂದೆ ನಂದಿಗ್ರಾಮದಲ್ಲಿ ಬ್ಯಾನರ್ಜಿ ವಿರುದ್ಧವೇ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಅಧಿಕಾರಿ ಈ ಬಾರಿಯ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದರು. ಅವರ ಭದ್ರಕೋಟೆಯಾಗಿದ್ದ ಭವಾನಿಪುರದಲ್ಲಿ 15,105 ಮತಗಳ ಅಂತರದಲ್ಲಿ ಹಾಗೂ ನಂದಿಗ್ರಾಮದಲ್ಲಿ 9,665 ಮತಗಳ ಅಂತರದಲ್ಲಿ ಸೋಲಿಸಿದರು.
ಚುನಾವಣಾ ಪ್ರಚಾರದ ಸಮಯದಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಧಿಕಾರಿಯನ್ನು ಉನ್ನತ ಹುದ್ದೆಗೆ ಪರಿಗಣಿಸುವ ಸುಳಿವನ್ನು ನೀಡಿದ್ದರು. ಹೀಗಾಗಿ ಅವರು ಮಮತಾ ಬ್ಯಾನರ್ಜಿ ಅವರ ಪ್ರಬಲ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡರು.