ದೋಹಾದಲ್ಲಿ ಕರ್ನಾಟಕ ಸಂಘ ಕತಾರ್‌ನಿಂದ ಯಶಸ್ವಿಯಾಗಿ ನೆರವೇರಿದ ರಕ್ತದಾನ ಶಿಬಿರ
Blood Donation Camp: ರಕ್ತದಾನವು ಜೀವ ಉಳಿಸುವ ಮಹತ್ತರ ಮಾನವೀಯ ಕಾರ್ಯವಾಗಿದ್ದು, ಸಮುದಾಯದ ಪ್ರತಿಯೊಬ್ಬರೂ ನಿಯಮಿತವಾಗಿ ರಕ್ತದಾನದಲ್ಲಿ ಭಾಗವಹಿಸಬೇಕು ಎಂದು ಭಾರತೀಯ ರಾಯಭಾರ ಕಚೇರಿ, ದೋಹಾದ ಪ್ರಥಮ ಕಾರ್ಯದರ್ಶಿ ಈಶ್ ಸಿಂಘಾಲ್ ಕರೆ ನೀಡಿದ್ದಾರೆ.
ಕತಾರ್ ರಾಷ್ಟ್ರೀಯ ರಕ್ತದಾನ ಕೇಂದ್ರದಲ್ಲಿ ʼರಕ್ತದಾನ ಶಿಬಿರʼ ಜರುಗಿತು. -
ಕತಾರ್, ಮೇ 29: ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಹಾಗೂ ದೋಹಾದ ಭಾರತೀಯ ರಾಯಭಾರ ಕಚೇರಿ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸಂಘ ಕತಾರ್ (KSQ), ಹಮದ್ ಮೆಡಿಕಲ್ ಕಾರ್ಪೊರೇಷನ್ ಸಹಯೋಗದಲ್ಲಿ ದೋಹಾದ ಕತಾರ್ ರಾಷ್ಟ್ರೀಯ ರಕ್ತದಾನ ಕೇಂದ್ರದಲ್ಲಿ “Everyone Could Be a Hero” ಎಂಬ ಧ್ಯೇಯ ವಾಕ್ಯದೊಂದಿಗೆ ʼರಕ್ತದಾನ ಶಿಬಿರʼ ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ ರಾಯಭಾರ ಕಚೇರಿ, ದೋಹಾದ ಪ್ರಥಮ ಕಾರ್ಯದರ್ಶಿ ಈಶ್ ಸಿಂಘಾಲ್ ಹಾಗೂ ಹಮದ್ ಮೆಡಿಕಲ್ ಕಾರ್ಪೊರೇಷನ್‌ನ ವೈದ್ಯಕೀಯ ವ್ಯವಸ್ಥಾಪಕಿ ಮತ್ತು ಡೋನರ್ ರಿಕ್ರೂಟ್‌ಮೆಂಟ್ ಮುಖ್ಯಸ್ಥೆ ಸಾದಿಕಾ ಅಲ್ ಮಹ್ಮೂದಿ ಪಾಲ್ಗೊಂಡಿದ್ದರು.
ದೋಹಾದ ಭಾರತೀಯ ರಾಯಭಾರ ಕಚೇರಿ ಪ್ರಥಮ ಕಾರ್ಯದರ್ಶಿ ಈಶ್ ಸಿಂಘಾಲ್ ಕಾರ್ಯಕ್ರಮದಲ್ಲಿ ಮಾತನಾಡಿ, ರಕ್ತದಾನವು ಜೀವ ಉಳಿಸುವ ಮಹತ್ತರ ಮಾನವೀಯ ಕಾರ್ಯವಾಗಿದ್ದು, ಸಮುದಾಯದ ಪ್ರತಿಯೊಬ್ಬರೂ ನಿಯಮಿತವಾಗಿ ರಕ್ತದಾನದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಮಾತನಾಡಿ, ಸಂಘದ ಸಾಮಾಜಿಕ ಸೇವೆ ಹಾಗೂ ಸಮುದಾಯ ಕಲ್ಯಾಣದ ಬದ್ಧತೆಯನ್ನು ಒತ್ತಿ ಹೇಳಿದರು.
ಹಮದ್ ಮೆಡಿಕಲ್ ಕಾರ್ಪೊರೇಷನ್‌ನ ವೈದ್ಯಕೀಯ ವ್ಯವಸ್ಥಾಪಕಿ ಮತ್ತು ಡೋನರ್ ರಿಕ್ರೂಟ್‌ಮೆಂಟ್ ಮುಖ್ಯಸ್ಥೆ ಸಾದಿಕಾ ಅಲ್ ಮಹ್ಮೂದಿ, ಕತಾರ್ ಆಸ್ಪತ್ರೆಗಳಲ್ಲಿ ರಕ್ತ ಸಂಗ್ರಹದ ಅಗತ್ಯತೆ ಕುರಿತು ಮಾತನಾಡಿ, ಭಾರತೀಯ ಸಮುದಾಯದ ನಿರಂತರ ಬೆಂಬಲವನ್ನು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ತಜ್ಞ ಡಾ. ಅಮಿತ್ ವರ್ಮಾ, ರಕ್ತದಾನದ ಆರೋಗ್ಯಕರ ಪ್ರಯೋಜನಗಳು ಹಾಗೂ ಅದರ ಮಹತ್ವದ ಬಗ್ಗೆ ವಿವರವಾಗಿ ಮಾತನಾಡಿ, ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 25ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಹಿರಿಯ ದಾನಿಗಳಾದ ಡಾ. ಸಂಜಯ್ ಕುದರಿ, ಶ್ರೀಧರ್ ನಾಯಕ್ ಹಾಗೂ ಮೊಹಮ್ಮದ್ ಸೊಹೈಲ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಶಿಬಿರಕ್ಕೆ ಭಾರತೀಯ ಅನಿವಾಸಿ ಸಮುದಾಯದಿಂದ ಭಾರೀ ಸ್ಪಂದನೆ ದೊರೆತಿದ್ದು, ಸಂಗ್ರಹಿಸಲಾದ ರಕ್ತ ಘಟಕಗಳು ಹಮದ್ ಮೆಡಿಕಲ್ ಕಾರ್ಪೊರೇಷನ್‌ನ ಜೀವ ರಕ್ಷಕ ಸೇವೆಗಳಿಗೆ ನೆರವಾಗಲಿವೆ.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದವರ ಸಂಗೀತ ಕಾರ್ಯಕ್ರಮ ಸಂಭ್ರಮ 2026ರ ಪೋಸ್ಟರ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಲಾಯಿತು. ಈ ಕಾರ್ಯಕ್ರಮವು ಜೂನ್ 12, 2026 ರಂದು ದೋಹಾದ DPS MIS ಆಡಿಟೋರಿಯಂನಲ್ಲಿ ನಡೆಯಲಿದೆ.
ಕರ್ನಾಟಕ ಸಂಘ ಕತಾರ್‌ನ ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್ ಸ್ವಾಗತಿಸಿದರು. ಶುಭಾ ನಿರೂಪಿಸಿದರು. ಉಪಾಧ್ಯಕ್ಷ ಅನಿಲ್ ಭಾಸಗಿ ವಂದಿಸಿದರು. ಈ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದ ಎಲ್ಲಾ ಸ್ವಯಂಸೇವಕರು, ಬೆಂಬಲಿಗರು, ಮಾಧ್ಯಮ ಸಹಯೋಗಿಗಳು ಹಾಗೂ ರಕ್ತದಾನಿಗಳಿಗೆ ಕರ್ನಾಟಕ ಸಂಘ ಕತಾರ್ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.