Deepavali 2025: ಫ್ಲೋರಿಡಾ ರಾಜಧಾನಿಯಲ್ಲಿ ದೀಪಾವಳಿ ಆಚರಣೆ; ಭಾರತೀಯ ಸಂಸ್ಕೃತಿಗೆ ಗೌರವ
Diwali celebration in Florida: ಫ್ಲೋರಿಡಾ ರಾಜ್ಯ ಸೆನೇಟರ್ ಫೆಂಟ್ರಿಸ್ ಡ್ರಿಸ್ಕೆಲ್ ಅವರ ಮಾರ್ಗದರ್ಶನದಲ್ಲಿ ಫ್ಲೋರಿಡಾ ಸರ್ಕಾರದ ಸಹಕಾರದೊಂದಿಗೆ ದೀಪಾವಳಿಯನ್ನು ಮೊದಲ ಬಾರಿಗೆ ಸರ್ಕಾರಿ ಮಟ್ಟದಲ್ಲಿ ಆಚರಿಸಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಶ್ರಿಗಂಧ ಕನ್ನಡ ಕೂಟದ ಪ್ರಮುಖರು ಮತ್ತು ಸದಸ್ಯರು ಕನ್ನಡ ಸಮುದಾಯವನ್ನು ಗೌರವಪೂರ್ವಕವಾಗಿ ಪ್ರತಿನಿಧಿಸಿದರು.

-

| ಬೆಂಕಿ ಬಸಣ್ಣ, ನ್ಯೂಯಾರ್ಕ್
ಅಮೆರಿಕದ ಫ್ಲೋರಿಡಾ ರಾಜ್ಯ ರಾಜಧಾನಿ ಟಲ್ಲಾಹಾಸ್ಸಿಯಲ್ಲಿ ದೀಪಾವಳಿ ಹಬ್ಬವನ್ನು (Deepavali 2025) ಸಂಭ್ರಮದಿಂದ ಆಚರಿಸಲಾಗಿದೆ. ಟಲ್ಲಾಹಾಸ್ಸಿ ವಿಧಾನಸೌಧದಲ್ಲಿ ದೀಪಾವಳಿ ಹಬ್ಬದ ಮೊದಲ ಬೆಳಕು ಮೂಡಿದ್ದು, ಈ ಮೂಲಕ ಭಾರತೀಯ ಸಂಸ್ಕೃತಿಗೆ ಗೌರವ ನೀಡಲಾಗಿದೆ. ಫ್ಲೋರಿಡಾ ರಾಜ್ಯ ಸೆನೇಟರ್ ಫೆಂಟ್ರಿಸ್ ಡ್ರಿಸ್ಕೆಲ್ ಅವರ ಮಾರ್ಗದರ್ಶನದಲ್ಲಿ ಫ್ಲೋರಿಡಾ ಸರ್ಕಾರದ ಸಹಕಾರದೊಂದಿಗೆ ದೀಪಾವಳಿಯನ್ನು ಮೊದಲ ಬಾರಿಗೆ ಸರ್ಕಾರಿ ಮಟ್ಟದಲ್ಲಿ ಆಚರಿಸಲಾಗಿದೆ.

ಇದು ಕೇವಲ ಹಬ್ಬವಲ್ಲ, ಭಾರತೀಯ ಸಂಸ್ಕೃತಿಯ ವಿಜಯೋತ್ಸವ. ಅಮೆರಿಕದ ಹೃದಯಭಾಗದಲ್ಲಿ ಭಾರತದ ಬೆಳಕು ಹೊಳೆಯುವ ಮಹತ್ವದ ಕ್ಷಣಕ್ಕೆ ಹಲವು ಗಣ್ಯರು ಸಾಕ್ಷಿಯಾದರು. ಟಲ್ಲಾಹಾಸ್ಸಿಯ ಫ್ಲೋರಿಡಾ ರಾಜ್ಯ ವಿಧಾನಸೌಧ ಈ ದೀಪಾವಳಿಗೆ ಸಾಕ್ಷಿಯಾದಾಗ, ಅದು ಕೇವಲ ದೀಪದ ಬೆಳಕು ಮಾತ್ರವಲ್ಲ – ಅದು ನಮ್ಮ ಸಂಸ್ಕೃತಿಯ, ಸಮುದಾಯದ ಮತ್ತು ಹೆಮ್ಮೆಯ ಬೆಳಕಾಗಿತ್ತು.

ಇದು ದಶಕಗಳ ಹಿಂದಿನಿಂದ ಅಮೆರಿಕದಲ್ಲಿ ಬೆಳೆದು ಬಂದ ಭಾರತೀಯ ಸಮುದಾಯದ ದುಡಿಮೆ, ಕೊಡುಗೆ ಮತ್ತು ನಿಷ್ಠೆಗೆ ನೀಡಲಾದ ಗೌರವ. ಫ್ಲೋರಿಡಾ ರಾಜಧಾನಿಯ ಉನ್ನತ ರಾಜ್ಯ ಸಾಂಸ್ಥಿಕ ಕೇಂದ್ರದಲ್ಲಿ ನಡೆದಿರುವುದು. ನಮ್ಮ ಅಸ್ತಿತ್ವಕ್ಕೆ ದೊರೆತ ಘನತೆಯ ಸಂಕೇತವಾಗಿದೆ ಎಂದು ಅನಿವಾಸಿ ಕನ್ನಡಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಶ್ರಿಗಂಧ ಕನ್ನಡ ಕೂಟದ ಪ್ರಮುಖರು ಮತ್ತು ಸದಸ್ಯರು ಕನ್ನಡ ಸಮುದಾಯವನ್ನು ಗೌರವಪೂರ್ವಕವಾಗಿ ಪ್ರತಿನಿಧಿಸಿದರು. ಶ್ರಿಗಂಧ ಕನ್ನಡ ಕೂಟದ ಪರವಾಗಿ ಚೇರ್‌ಮನ್ ಪದ್ಮನಾಭ ಬೇಡರಹಳ್ಳಿ, ಟ್ರಸ್ಟಿ ಗಂಗಾಧರ ಗಂಗಾ, ಉಪಾಧ್ಯಕ್ಷರು ಹರ್ಷಿತ್ ಗೌಡ, ವೀಣಾ ಗೌಡ, ರೂಪಾ ಗಂಗಾಧರ, ನವನೀತಾ ಗೌಡ ಭಾಗಿಯಾಗಿದ್ದರು.
ಈ ಸುದ್ದಿಯನ್ನೂ ಓದಿ | Deepavali Decoration 2025: ಬೆಳಕಿನ ಹಬ್ಬದ ಅಲಂಕಾರಕ್ಕೆ ಲಗ್ಗೆ ಇಟ್ಟ ಆಕಾಶ ದೀಪಗಳು
ಈ ದೀಪಾವಳಿ ಆಚರಣೆಯಲ್ಲಿ ಫ್ಲೋರಿಡಾದ ಅನೇಕ ಭಾರತೀಯ ಸಂಘಟನೆಗಳು ಹಾಗೂ ಫ್ಲೋರಿಡಾ ರಾಜ್ಯದ ಶಾಸಕರು ಭಾಗವಹಿಸಿದ್ದು, ಭಾರತೀಯರ ಸಾಂಸ್ಕೃತಿಕ ಛಾಯೆ ಫ್ಲೋರಿಡಾದ ಆಡಳಿತ ಕೇಂದ್ರದಲ್ಲಿ ಪ್ರತಿಧ್ವನಿಸಿದ ಕ್ಷಣವಾಯಿತು. ಭಾರತೀಯರು ಈಗ ಕೇವಲ ವಲಸೆವಾಸಿಗಳು ಅಲ್ಲ, ನಾವು ಅಮೆರಿಕದ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಸಮುದಾಯ. ಈ ಬೆಳಕು ಎಲ್ಲೆಡೆ ಹರಡಲಿ, ಸಮಾನತೆ ಮತ್ತು ಗೌರವದ ಬೆಳಕು ಆಗಲಿ, ಭಾರತೀಯರ ಸಾಧನೆಗೆ ಪ್ರೇರಣೆ ನೀಡುವ ಬೆಳಕು ಆಗಲಿ. ಎಲ್ಲರಿಗೂ ಹೃದಯಪೂರ್ವಕ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಶ್ರಿಗಂಧ ಕನ್ನಡ ಕೂಟ ತಿಳಿಸಿದೆ.