ಇರಾನ್ ಜತೆ ಟ್ರಂಪ್ 2 ವಾರಗಳ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ತೈಲ ಬೆಲೆಯಲ್ಲಿ ಭಾರಿ ಕುಸಿತ
Big drop in oil prices: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ದಾಳಿಗೆ ಎರಡು ವಾರಗಳ ವಿರಾಮ ಘೋಷಿಸಿದ ನಂತರ ಬುಧವಾರ (ಏ. 8) ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 95.068 ಡಾಲರ್‌ಗೆ ಕುಸಿದಿದೆ. ಈ ಕದನ ವಿರಾಮ ಘೋಷಣೆಯಿಂದಾಗಿ ಹೊರ್ಮುಜ್ ಜಲಸಂಧಿ ತಕ್ಷಣವೇ ಪುನರಾರಂಭವಾಗುವ ಸಾಧ್ಯತೆ ಇದೆ.
ಹೊರ್ಮುಜ್ ಜಲಸಂಧಿ (ಸಂಗ್ರಹ ಚಿತ್ರ) -
ನವದೆಹಲಿ, ಏ. 8: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇರಾನ್ (Iran) ಮೇಲಿನ ದಾಳಿಗೆ ಎರಡು ವಾರಗಳ ವಿರಾಮ ಘೋಷಿಸಿದ ನಂತರ ಬುಧವಾರ (ಏ. 8) ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 109.77 ಡಾಲರ್‌ನಿಂದ 95.068 ಡಾಲರ್‌ಗೆ ತೀವ್ರವಾಗಿ ಕುಸಿದಿದೆ. ಅಲ್ಲದೆ ಅಮೆರಿಕ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯುಟಿಐ) ಕಚ್ಚಾ ತೈಲ ಕೂಡ ಬ್ಯಾರೆಲ್‌ಗೆ 20 ಡಾಲರ್‌ನಷ್ಟು ಇಳಿದಿದೆ.
ಈ ಕದನ ವಿರಾಮ ಘೋಷಣೆಯಿಂದಾಗಿ ಹೊರ್ಮುಜ್ ಜಲಸಂಧಿ (strait of Hormuz) ತಕ್ಷಣವೇ ಪುನರಾರಂಭವಾಗುವ ಸಾಧುಯೆ ಇದೆ. ಇದು ಕಿರಿದಾದ ಜಲಮಾರ್ಗವಾಗಿದ್ದು, ಇದರ ಮೂಲಕ ವಿಶ್ವದ ತೈಲ ಮತ್ತು ಅನಿಲದ ಸುಮಾರು ಐದನೇ ಒಂದು ಭಾಗ ಸಾಗಾಟವಾಗುತ್ತದೆ. 40 ದಿನಗಳಿಂದ ನಡೆಯುತ್ತಿದ್ದ ಯುದ್ಧ ನಿಲ್ಲುತ್ತಿದ್ದಂತೆ ತೈಲ ಬೆಲೆ ಕುಸಿತ, ಬಾಂಡ್‌ಗಳು ಮತ್ತು ಅಮೆರಿಕದ ಷೇರುಗಳು ಏರಿಕೆ ಕಂಡವು. ಹೂಡಿಕೆದಾರರು, ಈ ಕದನ ವಿರಾಮವು ಹಲವು ವಾರಗಳ ಅಸ್ತವ್ಯಸ್ತತೆಯ ನಂತರ ತೈಲ ಸರಬರಾಜು ಮತ್ತೆ ಸಾಮಾನ್ಯ ಸ್ಥಿತಿಗೆ ಬರಬಹುದು ಎಂದು ನಂಬಿದ್ದಾರೆ.
ಫೆಬ್ರವರಿ 28ರಿಂದ ಇರಾನ್ ಮೇಲೆ ಅಮೆರಿಕ-ಇಸ್ರೇಲಿ ನಡೆಸಿದ ಜಂಟಿ ದಾಳಿಯ ನಂತರ ಟೆಹರಾನ್ ಜಲಸಂಧಿಯನ್ನು ಮುಚ್ಚಿತು. ಟ್ಯಾಂಕರ್‌ಗಳು ಸಮುದ್ರದಲ್ಲೇ ಬಾಕಿಯಾದವು. ವಿಮಾ ವೆಚ್ಚಗಳು ಹೆಚ್ಚಾದವು. ಇದರಿಂದ ಮಾರ್ಚ್‌ನಲ್ಲಿ ತೈಲ ಬೆಲೆಗಳನ್ನು ಶೇಕಡಾ 50ಕ್ಕಿಂತ ಜಾಸ್ತಿ ಹೆಚ್ಚಾಯಿತು.
''ಯುದ್ಧ ಮುಗಿದಿಲ್ಲʼʼ: ಕದನ ವಿರಾಮ ಒಪ್ಪಂದದ ಬೆನ್ನಲ್ಲೇ ಇರಾನ್‌ನಿಂದ ಅಚ್ಚರಿಯ ಹೇಳಿಕೆ
ತೈಲ ಬೆಲೆ ಏರಿಕೆಯು ದೇಶಾದ್ಯಂತ ಹಣದುಬ್ಬರದ ಭೀತಿಯನ್ನು ಹೆಚ್ಚಿಸಿತ್ತು. ಇರಾನ್ ಜತೆಗಿನ ದೀರ್ಘಾವಧಿಯ ಶಾಂತಿ ಒಪ್ಪಂದವು ಪ್ರಗತಿಯಲ್ಲಿದೆ. ಇಸ್ಲಾಮಿಕ್ ರಾಷ್ಟ್ರದ 10 ಅಂಶಗಳ ಪ್ರಸ್ತಾಪವು ಕಾರ್ಯಸಾಧ್ಯವೆಂದು ತೋರುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಪ್ರತಿಯಾಗಿ, ದಾಳಿಗಳು ನಿಂತರೆ ಎರಡು ವಾರಗಳವರೆಗೆ ಜಲಸಂಧಿಯ ಮೂಲಕ ಸುರಕ್ಷಿತ ಸಾಗಣೆಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ಇರಾನ್ ಹೇಳಿದೆ. ಈ ಹೇಳಿಕೆಯಿಂದ ವ್ಯಾಪಾರಿಗಳು ಕೊಂಚ ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ.
ಹೊರ್ಮುಜ್ ಜಲಸಂಧಿ ಏಕೆ ಇಷ್ಟೊಂದು ಮುಖ್ಯ?
ಹೊರ್ಮುಜ್ ಜಲಸಂಧಿಯು ಕೇವಲ ಹಡಗು ಮಾರ್ಗವಲ್ಲ. ಇದು ಸೌದಿ ಅರೇಬಿಯಾ, ಯುಎಇ, ಕುವೈತ್, ಇರಾಕ್ ಮತ್ತು ಇರಾನ್‌ನಿಂದ ತೈಲವನ್ನು ಪಡೆಯುವ ಪ್ರಮುಖ ನಿರ್ಗಮನ ಮಾರ್ಗವಾಗಿದೆ. ಇಲ್ಲಿ ಯಾವುದೇ ಅಡಚಣೆಯು ಜಾಗತಿಕ ಬೆಲೆಗಳ ಮೇಲೆ ತ್ವರಿತವಾಗಿ ಪರಿಣಾಮ ಬೀರುತ್ತದೆ.
ಕದನ ವಿರಾಮ ಘೋಷಣೆಯಿಂದ ಮತ್ತೆ ಜಲಸಂಧಿ ತೆರೆಯುವುದರಿಂದ, ವ್ಯಾಪಾರಿಗಳು ಈಗ ಟ್ಯಾಂಕರ್‌ಗಳು ಚಲನೆಯನ್ನು ಪುನರಾರಂಭಿಸುವ ನಿರೀಕ್ಷೆಯಲ್ಲಿದ್ದಾರೆ. ಕದನ ವಿರಾಮ ಇರುವುದು ಕೇವಲ ಎರಡು ವಾರಗಳವರೆಗೆ ಮಾತ್ರ. ದೀರ್ಘಾವಧಿಯ ಒಪ್ಪಂದವು ಇನ್ನೂ ಮಾತುಕತೆ ಹಂತದಲ್ಲಿದೆ. ಮಾತುಕತೆ ವಿಫಲವಾದರೆ ಪರಿಹಾರವು ತಾತ್ಕಾಲಿಕವಾಗಿರಬಹುದು ಎಂಬುದು ವಿಶ್ಲೇಷಕರ ಅನಿಸಿಕೆ. ಆದರೆ, ಇದೀಗ ತೈಲ ಆಘಾತದ ಕೆಟ್ಟ ಅವಧಿ ಮುಗಿದಿದೆ ಎಂದು ಹಣಕಾಸು ತಜ್ಞರು ಹೇಳಿದ್ದಾರೆ.