ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jerusalem Shooting: ಜೆರುಸಲೇಂನಲ್ಲಿ ಪ್ಯಾಲೆಸ್ಟಿನ್ ಭಯೋತ್ಪಾದಕರ ದಾಳಿ; ನಾಲ್ವರು ಸಾವು

ಇಸ್ರೇಲ್‌ ರಾಜಧಾನಿ ಜೆರುಸಲೇಂನಲ್ಲಿ ನಡೆದ ಪ್ಯಾಲೆಸ್ಟಿನ್ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಕನಿಷ್ಠ 4 ಮಂದಿ ಮೃತಪಟ್ಟು 15 ಮಂದಿ ಗಾಯಗೊಂಡಿದ್ದಾರೆ. ಜೆರುಸಲೇಂ ನಗರದ ಹೊರವಲಯದ ರಾಮೋತ್‌ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ದಾಳಿ ನಡೆಸಿದ ಇಬ್ಬರನ್ನೂ ಹೊಡೆದುರುಳಿಸಲಾಗಿದೆ.

ಜೆರುಸಲೇಂನಲ್ಲಿ ಪ್ಯಾಲೆಸ್ಟಿನ್ ಭಯೋತ್ಪಾದಕರ ದಾಳಿ

-

Ramesh B Ramesh B Sep 8, 2025 2:10 PM

ಜೆರುಸಲೇಂ: ಇಸ್ರೇಲ್‌ ರಾಜಧಾನಿ ಜೆರುಸಲೇಂನಲ್ಲಿ (Jerusalem) ನಡೆದ ಪ್ಯಾಲೆಸ್ಟಿನ್ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಕನಿಷ್ಠ 4 ಮಂದಿ ಮೃತಪಟ್ಟು 15 ಮಂದಿ ಗಾಯಗೊಂಡಿದ್ದಾರೆ. ಜೆರುಸಲೇಂ ನಗರದ ಹೊರವಲಯದ ರಾಮೋತ್‌ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ಜನಸಂದಣಿಯ ಬಸ್‌ ಸ್ಟಾಪ್‌ ಬಳಿ ಇಬ್ಬರು ದುಷ್ಕರ್ಮಿಗಳು ದಾಳಿ ನಡೆಸಿದರು ಎಂದು ಮೂಲಗಳು ತಿಳಿಸಿವೆ (Jerusalem Shooting). ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ದಾಳಿ ನಡೆಸಿದ ಇಬ್ಬರನ್ನೂ ಹೊಡೆದುರುಳಿಸಲಾಗಿದೆ.

ಇಸ್ರೇಲ್‌ನ ರಾಷ್ಟ್ರೀಯ ತುರ್ತು ವೈದ್ಯಕೀಯ ಸೇವೆ ಮ್ಯಾಗೆನ್ ಡೇವಿಡ್ ಅಡೋಮ್ (MDA) ಪ್ರಕಾರ, ಘಟನೆ ಸ್ಥಳದಲ್ಲಿ ಹಲವು ಮಂದಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. "ನಾವು ಆಗಮಿಸಿದಾಗ, ಸಂತ್ರಸ್ತರು ರಸ್ತೆ ಮತ್ತು ಪಾದಚಾರಿ ಮಾರ್ಗದಲ್ಲಿ ಬಿದ್ದಿರುವುದು ಕಂಡುಬಂತು. ಈ ವೇಳೆ ಕೆಲವರು ಪ್ರಜ್ಞಾಶೂನ್ಯರಾಗಿದ್ದರುʼʼ ಎಂದು ಜೆರುಸಲೆಮ್ ಪೋಸ್ಟ್ ಉಲ್ಲೇಖಿಸಿ ಎಂಡಿಎ ಪ್ಯಾರಾಮೆಡಿಕ್‌ನ ನಾದವ್ ತೈಬ್ ಹೇಳಿದ್ದಾರೆ. "ನಾವು ಸ್ಥಳದಲ್ಲೇ ಚಿಕಿತ್ಸೆ ನೀಡಲು ಪ್ರಾರಂಭಿಸಿದ್ದೇವೆ ಮತ್ತು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಿದ್ದೇವೆʼʼ ಎಂದು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.



ದಾಳಿಕೋರರು ಎಗ್ಡ್ ಬಸ್ 62 ಅನ್ನು ಹತ್ತಿ ಪ್ರಯಾಣಿಕರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು ಮತ್ತು ನಂತರ ಭದ್ರತಾ ಪಡೆಗಳು ಅವರನ್ನು ಹೊಡೆದುರುಳಿಸಿದರು ಎಂದು ವರದಿಯಾಗಿದೆ. ʼಟೈಮ್ಸ್ ಆಫ್ ಇಸ್ರೇಲ್ʼ ಪ್ರಕಾರ, ದಾಳಿಕೋರರು ವೆಸ್ಟ್ ಬ್ಯಾಂಕ್ ಪ್ಯಾಲೆಸ್ಟೀನಿಯನ್ನರು ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್‌ ಪೊಲೀಸರು ಅವರನ್ನು ಭಯೋತ್ಪಾದಕರು ಎಂದು ಗುರುತಿಸಿದ್ದಾರೆ. ಆದರೆ ಅವರ ಗುರುತು ಇನ್ನೂ ಪತ್ತೆಯಾಗಿಲ್ಲ. ಉದ್ದೇಶವು ಸ್ಪಷ್ಟವಾಗಿಲ್ಲ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಕ್ರಿಯಿಸಿ, ಪ್ರಸ್ತುತ ಹಿರಿಯ ಭದ್ರತಾ ಅಧಿಕಾರಿಗಳೊಂದಿಗೆ ಪರಿಸ್ಥಿತಿಯ ಮೌಲ್ಯಮಾಪನ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಹೆಚ್ಚುವರಿ ಶಂಕಿತರು ಭಾಗಿಯಾಗಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಲು ಭದ್ರತಾ ಪಡೆಗಳು ಜೆರುಸಲೆಮ್‌ಗೆ ತೆರಳುವ ಮತ್ತು ಅಲ್ಲಿಂದ ನಿರ್ಹಮಿಸುವ ಮಾರ್ಗಗಳನ್ನು ಮುಚ್ಚಿವೆ.

ಗಾಜಾದಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿದ ವ್ಯಾಪಕ ಹಿಂಸಾಚಾರದ ಮಧ್ಯೆ ಈ ದಾಳಿ ನಡೆದಿದ್ದು, ಆತಂಕ ಮೂಡಿಸಿದೆ. ಈ ದಾಳಿಯು 2024ರ ಅಕ್ಟೋಬರ್‌ ನಂತರ ನಡೆದ ಅತ್ಯಂತ ಮಾರಕ ಸಾಮೂಹಿಕ ಗುಂಡಿನ ದಾಳಿ ಎನಿಸಿಕೊಂಡಿದೆ. ಅಂದು ವೆಸ್ಟ್ ಬ್ಯಾಂಕ್‌ನ ಇಬ್ಬರು ಪ್ಯಾಲೆಸ್ಟೀನಿಯನ್ನರು ಟೆಲ್ ಅವೀವ್‌ನ ಜನನಿಬಿಡ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿ 7 ಮಂದಿಯನ್ನು ಹತ್ಯೆ ಮಾಡಿದ್ದರು.