ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶಾಲೆಯಲ್ಲಿ ಗುಂಡಿನ ದಾಳಿ: ಹದಿಹರೆಯದ ಬಾಲಕನಿಂದ ಫೈರಿಂಗ್, ಐವರು ಸಾವು

Thailand School Shooting: ಥೈಲ್ಯಾಂಡ್‌ನ ಶಾಲೆಯೊಂದರಲ್ಲಿ ಗುಂಡಿನ ಸದ್ದು ಕೇಳಿಬಂದಿದೆ. ಶಂಕಿತ ಹದಿಹರೆಯದ ಬಂದೂಕುಧಾರಿಯೊಬ್ಬ ತನ್ನ ಅಜ್ಜ-ಅಜ್ಜಿಯರ ಮೇಲೆ ಗುಂಡು ಹಾರಿಸಿದ್ದು, ಒಟ್ಟು ಐದು ಜನರನ್ನು ಹತ್ಯೆ ಮಾಡಿದ್ದಾನೆ. ಬ್ಯಾಂಗ್ ಕ್ರುವಾಯಿ ಜಿಲ್ಲೆಯ ಡೆಬ್‌ಸಿರಿನ್ ನೊಂಥಬುರಿ ಶಾಲೆಯಲ್ಲಿ ಈ ದಾಳಿ ನಡೆದಿದೆ.

ಶಾಲೆಯಲ್ಲಿ ಗುಂಡಿನ ದಾಳಿ: ಐವರು ಸಾವು

ಥೈಲ್ಯಾಂಡ್ ಶಾಲೆಯಲ್ಲಿ ಗುಂಡಿನ ದಾಳಿ -

Priyanka P
Priyanka P Aug 7, 2026 8:24 PM

ಬ್ಯಾಂಕಾಕ್, ಆ.7: ಥೈಲ್ಯಾಂಡ್‌ನ (Thailand) ಶಾಲೆಯೊಂದರಲ್ಲಿ ಗುಂಡಿನ ಸದ್ದು ಕೇಳಿಬಂದಿದೆ. ಶಂಕಿತ ಹದಿಹರೆಯದ ಬಂದೂಕುಧಾರಿಯೊಬ್ಬ ತನ್ನ ಅಜ್ಜ-ಅಜ್ಜಿಯರ ಮೇಲೆ ಗುಂಡು ಹಾರಿಸಿದ್ದು, ಒಟ್ಟು ಐದು ಜನರನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಂಕಾಕ್‌ನ ವಾಯುವ್ಯ ಹೊರವಲಯದಲ್ಲಿರುವ ಬ್ಯಾಂಗ್ ಕ್ರುವಾಯಿ ಜಿಲ್ಲೆಯ ಡೆಬ್‌ಸಿರಿನ್ ನೊಂಥಬುರಿ ಶಾಲೆಯಲ್ಲಿ ಈ ದಾಳಿ ನಡೆದಿದೆ (Thailand School Shooting) ಎಂದು ರಾಷ್ಟ್ರೀಯ ಪೊಲೀಸ್ ವಕ್ತಾರ ಟ್ರೈರೊಂಗ್ ⁠ಫಿವ್‌ಫಾನ್ ತಿಳಿಸಿದ್ದಾರೆ. ಶಂಕಿತ ಬಂದೂಕುಧಾರಿ ಕೂಡ ಮೃತಪಟ್ಟಿದ್ದಾನೆ ಎಂದು ಅವರು ಹೇಳಿದರು.

ಶಂಕಿತ ಬಂದೂಕುಧಾರಿ ಶಾಲೆಯಲ್ಲಿ ಗುಂಡು ಹಾರಿಸುವ ಮೊದಲು ತನ್ನ ಅಜ್ಜ-ಅಜ್ಜಿಯನ್ನು ಅವರ ಮನೆಯಲ್ಲಿಯೇ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶಂಕಿತ ಅಪರಾಧಿಯನ್ನು ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಆದರೆ ಹೆಚ್ಚಿನ ವಿವರಗಳನ್ನು ಒದಗಿಸಲಾಗಿಲ್ಲ. ದಾಳಿಯಲ್ಲಿ ಕನಿಷ್ಠ 23 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲು ಶಾಲೆಯಲ್ಲಿ ಆರು ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ನಂತರ ಸಾವಿನ ಸಂಖ್ಯೆಯನ್ನು ಐದಕ್ಕೆ ಪರಿಷ್ಕರಿಸಿದರು. ದಾಳಿಕೋರ ಕನಿಷ್ಠ 26 ಗುಂಡುಗಳನ್ನು ಹಾರಿಸಿದ್ದಾನೆ. ಅವನ ಬಳಿ 34 ಹೆಚ್ಚುವರಿ ಮದ್ದುಗುಂಡುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಬಂದೂಕು ಅವನ ಅಜ್ಜನಿಗೆ ಸೇರಿತ್ತು.

Thailand-Cambodia War: ಗಡಿ ಪ್ರದೇಶಕ್ಕೆ ತೆರಳಬೇಡಿ; ರಾಯಭಾರಿ ಕಚೇರಿಯಿಂದ ಕಾಂಬೋಡಿಯಾದಲ್ಲಿರುವ ಭಾರತೀಯರಿಗೆ ಸೂಚನೆ

ಘಟನೆ ಬಗ್ಗೆ ಪ್ರಧಾನಿ ಅನುತಿನ್ ಚರ್ಣವಿರಕುಲ್ ಅವರು ಸಂತಾಪ ಸೂಚಿಸಿದ್ದು, ಸಂತ್ರಸ್ತರ ಆರೋಗ್ಯವನ್ನು ನೋಡಿಕೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ಹೇಳಿದರು. ಇನ್ನು ಗುಂಡಿನ ಸದ್ದು ಕೇಳಿಬಂದಾಗ ಯಾರಾದರೂ ಪಟಾಕಿ ಸಿಡಿಸುತ್ತಿರಬಹುದು ಎಂಬುದಾಗಿ ಭಾವಿಸಿದ್ದೆ ಎಂದು ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ.

ಈ ವರ್ಷದ ಫೆಬ್ರವರಿಯಲ್ಲಿ, ದಕ್ಷಿಣ ಥೈಲ್ಯಾಂಡ್‌ನ ಹ್ಯಾಟ್ ಯೈ ಜಿಲ್ಲೆಯಲ್ಲಿ ಶಾಲೆಯೊಂದರ ಮೇಲೆ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ್ದ. ಘಟನೆಯಲ್ಲಿ ಒಬ್ಬ ಶಿಕ್ಷಕ ಮೃತಪಟ್ಟು, ಮತ್ತೊಬ್ಬ ವಿದ್ಯಾರ್ಥಿ ಗಾಯಗೊಂಡಿದ್ದರು. ಅಕ್ಟೋಬರ್ 2022 ರಲ್ಲಿ, ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ನಾಂಗ್ ಬುವಾ ಲ್ಯಾಂಫು ಪ್ರಾಂತ್ಯದಲ್ಲಿ ಬಂದೂಕು ಮತ್ತು ಚಾಕು ದಾಳಿಯಲ್ಲಿ ಮಕ್ಕಳು ಸೇರಿದಂತೆ ಹಲವಾರು ಜನರನ್ನು ಹತ್ಯೆ ಮಾಡಿದ್ದರು.

ಅಂದಹಾಗೆ, ಥೈಲ್ಯಾಂಡ್‌ನಲ್ಲಿ ಬಂದೂಕು ಕಾನೂನುಗಳು ಕಟ್ಟುನಿಟ್ಟಾಗಿವೆ. ಅಲ್ಲಿ ಅಕ್ರಮ ಬಂದೂಕನ್ನು ಹೊಂದಿರುವುದು 10 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಥೈಲ್ಯಾಂಡ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯ ನಂತರ ಕಾನೂನುಗಳು ಬಿಗಿಗೊಂಡಿವೆ. ಇದರಲ್ಲಿ ಬಂದೂಕು ಖರೀದಿಸಲು ಅಥವಾ ತಮ್ಮ ಬಂದೂಕು ಪರವಾನಗಿಯನ್ನು ನವೀಕರಿಸಲು ಬಯಸುವವರಿಗೆ ವೈದ್ಯಕೀಯ ಮೌಲ್ಯಮಾಪನದ ಅವಶ್ಯಕತೆಯೂ ಸೇರಿದೆ.

ಥೈಲ್ಯಾಂಡ್‌ನಲ್ಲಿ ಅಂದಾಜು 10.3 ಮಿಲಿಯನ್ ಬಂದೂಕುಗಳಿವೆ. ಅವುಗಳಲ್ಲಿ ಸುಮಾರು ಶೇ. 40 ರಷ್ಟು ನೋಂದಾಯಿಸಲಾಗಿಲ್ಲ. ಈ ಘಟನೆಯು ಬಂದೂಕು ನಿಯಂತ್ರಣಗಳ ಕುರಿತು ಹೊಸ ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.