ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Analogue Paneer Ban: ಕರ್ನಾಟಕದಲ್ಲಿ ಕೃತಕ ಪನೀರ್ ತಯಾರಿಕೆ, ಮಾರಾಟ ನಿಷೇಧ: ರಾಜ್ಯ ಸರ್ಕಾರ ಆದೇಶ

ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಅಸಲಿ ಡೈರಿ ಪನೀರ್ ಬದಲಿಗೆ ಕಡಿಮೆ ವೆಚ್ಚದ ಕೃತಕ ಪನೀರ್ ಬಳಸುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಅನಲಾಗ್‌ ಪನೀರ್‌ ಉತ್ಪಾದನೆ, ಮಾರಾಟ ನಿಷೇಧಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೃತಕ ಪನೀರ್ ತಯಾರಿಕೆ, ಮಾರಾಟ ನಿಷೇಧಿಸಿ ಸರ್ಕಾರ ಆದೇಶ

ಪನೀರ್‌ (ಸಂಗ್ರಹ ಚಿತ್ರ) -

Prabhakara R
Prabhakara R Aug 22, 2026 3:56 PM

ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಪನೀರ್ (Analogue Paneer Ban) ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿರುವ ಅನಲಾಗ್‌ ಪನೀರ್‌ (ಕೃತಕ ಪನೀರ್)‌ ತಯಾರಿಕೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ಒಂದು ವರ್ಷದ ಅವಧಿಗೆ ರಾಜ್ಯ ಸರ್ಕಾರ ನಿಷೇಧಿಸಿದೆ. ಈ ಸಂಬಂಧ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತೆ ವಿಭಾಗದಿಂದ ಸಾರ್ವಜನಿಕ ಆರೋಗ್ಯ ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ರಾಜ್ಯದಲ್ಲಿ ʼಪನೀರ್ʼ ಹೆಸರಿನಲ್ಲಿ ಮಾರಾಟವಾಗುವ ಅನಲಾಗ್ / ನಾನ್-ಡೈರಿ ಪನೀರ್‌ನ ಉತ್ಪಾದನೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ, ವಿತರಣೆ, ಸಾಗಣೆ, ಸಗಟು ಹಾಗೂ ಚಿಲ್ಲರೆ ಮಾರಾಟ, ಮಾರಾಟಕ್ಕಾಗಿ ಪ್ರದರ್ಶನ ಮತ್ತು ಪೂರೈಕೆಯನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿ ದಿನಾಂಕ:17.08.2026 ರಂದು ಸರ್ಕಾರಿ ಅಧಿಸೂಚನೆಯನ್ನು ಹೊರಡಿಸಿದ್ದು, ಸದರಿ ಅಧಿಸೂನೆಯು ಹೊರಡಿಸಿದ ದಿನಾಂಕದಿಂದ ಒಂದು ವರ್ಷದ ಅವಧಿಗೆ ಕರ್ನಾಟಕ ರಾಜ್ಯಾದಾದ್ಯಂತ ಜಾರಿಯಲ್ಲಿರುತ್ತದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಕಲಂ 30(2)(a), 18 ಮತ್ತು 29ರ ಅಡಿಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006, ನಿಮಯ 2011ರ Regulation 2.1.16ರ ಪ್ರಕಾರ ಪನೀರ್ ಎಂಬುದು ಹಾಲಿನಿಂದ ತಯಾರಿಸಲಾದ ಪ್ರಮಾಣೀಕೃತ ಆಹಾರ ಉತ್ಪನ್ನವಾಗಿದೆ. ಪನೀರ್‌ನಲ್ಲಿ ಹಾಲಿನ ಕೊಬ್ಬು (Milk Fat) ಪ್ರಮುಖ ಅಂಶವಾಗಿದ್ದು, ಅದರ ಬದಲಿಗೆ ಅಥವಾ ಅದರ ಜೊತೆಗೆ ಸಸ್ಯಜನ್ಯ ಎಣ್ಣೆ, ಸಸ್ಯಜನ್ಯ ಕೊಬ್ಬು ಅಥವಾ ಇತರೆ ನಾನ್-ಡೈರಿ ಪದಾರ್ಥಗಳನ್ನು ಬಳಸುವುದು ಅನುಮತಿಸಿಲ್ಲ.

ಕರ್ನಾಟಕವು ಹಲವಾರು ಪನೀರ್ ಮಾದರಿಗಳನ್ನು ಪರೀಕ್ಷಿಸಿದ್ದು, ಯಾವುದೇ ಕಲಬೆರಕೆ ಇಲ್ಲ ಎಂದು ಕಂಡುಬಂದಿದೆ. ಪನೀರ್‌ನಲ್ಲಿ ಸಸ್ಯಜನ್ಯ ಎಣ್ಣೆ, ಸಸ್ಯಜನ್ಯ ಕೊಬ್ಬು ಅಥವಾ ಇತರ ಡೈರಿ ಪದಾರ್ಥಗಳೊಂದಿಗೆ ಕಲಬೆರಕೆ ಇಲ್ಲದಿದ್ದರೂ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಉತ್ಪನ್ನಗಳನ್ನು ಬಳಸಬಾರದು, ಸಂಗ್ರಹಿಸಬಾರದು, ಸರಬರಾಜು ಮಾಡಬಾರದು, ಮಾರಾಟ ಮಾಡಬಾರದು ಅಥವಾ ಸಾಗಿಸಬಾರದು ಎಂಬ ಉದ್ದೇಶದಿಂದ ನಿಷೇಧ ಹೇರಲಾಗಿದೆ.

ಹಾಲಿನ ಕೊಬ್ಬು ಅಥವಾ ಹಾಲಿನ ಘನಾಂಶವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಸಸ್ಯಜನ್ಯ ಎಣ್ಣೆ, ಸಸ್ಯಜನ್ಯ ಕೊಬ್ಬು ಅಥವಾ ಇತರೆ ನಾನ್-ಡೈರಿ ಪದಾರ್ಥಗಳಿಂದ ಬದಲಾಯಿಸಿ ಪನೀರ್‌ನಂತೆ ತಯಾರಿಸಲಾದ ಉತ್ಪನ್ನವನ್ನು “ಅನಲಾಗ್ / ನಾನ್-ಡೈರಿ ಪನೀರ್" ಎಂದು ಪರಿಗಣಿಸಲಾಗುತ್ತದೆ. ಇಂತಹ ಉತ್ಪನ್ನವನ್ನು "ಪನೀರ್" ಎಂದು ಹೆಸರಿಸಿ, ಮಾರಾಟ ಮಾಡಿ ಅಥವಾ ಗ್ರಾಹಕರಿಗೆ ಪನೀರ್ ಎಂದು ಬಿಂಬಿಸುವಂತಿಲ್ಲ.

ಈ ನಿಷೇಧವು ನಿರ್ದಿಷ್ಟ ಗುಣಮಟ್ಟದ ಮಾನದಂಡಗಳನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಗದಿಪಡಿಸದ ಮತ್ತು ಪ್ರಮಾಣೀಕರಿಸದ ಡೈರಿ ಅನಲಾಗ್ ಉತ್ಪನ್ನಗಳಿಗೆ ಮಾತ್ರ ಅನ್ವಯಿಸುತ್ತದೆ. ಈಗಾಗಲೇ ಪ್ರತ್ಯೇಕ ಮಾನದಂಡಗಳನ್ನು ಹೊಂದಿರುವ Frozen Dessert, Processed Cheese ಮತ್ತು Mixed Fat Spread ಮುಂತಾದ ಪ್ರಮಾಣೀಕೃತ ಆಹಾರ ಉತ್ಪನ್ನಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ.

ಅಲ್ಲದೆ, ಯಾವುದೇ ಆಹಾರ ವ್ಯವಹಾರ ಸಂಸ್ಥೆಯು ಅನಲಾಗ್ / ನಾನ್-ಡೈರಿ ಪನೀರ್ ಅನ್ನು ಯಾವುದೇ ಆಹಾರ ಉತ್ಪನ್ನ ಅಥವಾ ಆಹಾರ ಪದಾರ್ಥದ ತಯಾರಿಕೆಯಲ್ಲಿ ಬಳಸುವುದು, ಸಂಗ್ರಹಿಸುವುದು, ಪೂರೈಸುವುದು ಅಥವಾ ಮಾರಾಟ ಮಾಡುವುದನ್ನು ಸಹ ನಿಷೇಧಿಸಲಾಗಿದೆ.

Vishwavani Editorial: ಅಡಿಕೆಗೆ ಹಾನಿಯಾಗದು

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ವತಿಯಿಂದ ರಾಜ್ಯಾದ್ಯಂತ ಈ ಆದೇಶದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಹಾಗೂ ಸಾರ್ವಜನಿಕರು ಹಾಗೂ ಆಹಾರ ವ್ಯವಹಾರ ನಿರ್ವಾಹಕರು ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಆಹಾರ ಸುರಕ್ಷತೆ ಆಯುಕ್ತರು ತಿಳಿಸಿದ್ದಾರೆ.