Health Tips: ಬೇಸಿಗೆಗೂ ಕಣ್ಣಿನ ಸಮಸ್ಯೆಗೂ ಏನು ನಂಟು?
ಸಂಜೆಯ ಹೊತ್ತು ಆಗೀಗ ಮಳೆ ಬರುತ್ತಿದ್ದರೂ, ಹಗಲಿನಲ್ಲಿ ಬಿರುಬಿಸಿಲು ಕಡಿಮೆಯಾಗಿಲ್ಲ. ಅತಿಯಾದ ಬಿಸಿಲಿನ ದಿನಗಳಲ್ಲಿ ಕಾಡುವ ಹಲವು ತೊಂದರೆಗಳಲ್ಲಿ ಕಣ್ಣಿನ ತೊಂದರೆಯೂ ಒಂದು. ಏನು ತೊಂದರೆಯಿದು ಮತ್ತು ಹೀಗೆ ಆಗುವುದರಿಂದ ಏನಾಗುತ್ತದೆ ಎನ್ನುವ ವಿವರಗಳು ಇಲ್ಲಿದೆ.

summer eye problem

ನವದೆಹಲಿ: ಮುಂಗಾರು ಮಳೆಯ ಬಗ್ಗೆ ಈಗಾಗಲೇ ಭವಿಷ್ಯ ಹೇಳುವುದಕ್ಕೆ ಹವಾಮಾನ ಇಲಾಖೆ ಪ್ರಾರಂಭಿಸಿದೆ. ಇದರರ್ಥ ಬೇಸಿಗೆ ಮುಗಿದು, ತಂಪಾದ ಮಳೆಯ ದಿನಗಳು ಬಂದೇಬಿಟ್ಟವು ಎಂದಲ್ಲ. ಅದೊಂದು ಮುನ್ಸೂಚನೆ ಅಷ್ಟೇ. ಹಾಗೆಂದೇ ಸಂಜೆಯ ಹೊತ್ತು ಆಗೀಗ ಮಳೆ ಬರುತ್ತಿದ್ದರೂ, ಹಗಲಿನಲ್ಲಿ ಬಿರುಬಿಸಿಲು ಕಡಿಮೆಯಾಗಿಲ್ಲ. ಅತಿ ಯಾದ ಬಿಸಿಲಿನ ದಿನಗಳಲ್ಲಿ ಕಾಡುವ ಹಲವು ತೊಂದರೆಗಳಲ್ಲಿ ಕಣ್ಣಿನ ತೊಂದರೆಯೂ (Eye Problem) ಒಂದು. ಏನು ತೊಂದರೆಯಿದು ಮತ್ತು ಹೀಗೆ ಆಗುವುದರಿಂದ ಏನಾಗುತ್ತದೆ ಎನ್ನುವ ವಿವರಗಳು ಇಲ್ಲಿವೆ.
ಏನು ನಂಟು?: ಅತಿಯಾದ ಬಿಸಿಲಿನ ಅಥವಾ ಉಷ್ಣತೆಯ ಹೊಡೆತವೇ ಈ ಸಮಸ್ಯೆಗೆ ನೇರವಾದ ಕಾರಣವಲ್ಲ. ಇದರಿಂದಾಗಿ ಉಂಟಾಗುವ ನಿರ್ಜಲೀಕರಣದಿಂದ ರಕ್ತ ಮಂದವಾಗುವುದು ಅಥವಾ ಹೆಪ್ಪುಗಟ್ಟುವಂತಾಗಬಹುದು. ಹೀಗೆ ಹೆಪ್ಪು ಗಟ್ಟಿದ ರಕ್ತವು ಕಣ್ಣಿನ ಸಣ್ಣ ರಕ್ತನಾಳಗಳಲ್ಲಿ ಜಮೆಯಾಗಿ, ಕಣ್ಣಿಗೆ ಅಗತ್ಯವಾಗಿ ಬೇಕಾದ ರಕ್ತಸಂಚಾರ ವನ್ನು ತಡೆಯುತ್ತದೆ. ಇದರಿಂದ ಪಾರ್ಶ್ವವಾಯುವಿಗೆ ಕಾರಣವಾಗಿ, ಅಕ್ಯುಲರ್ ಸ್ಟ್ರೋಕ್ ಎಂದು ಕರೆಯಲಾಗುವ ಈ ಸಮಸ್ಯೆಯಿಂದ ದೃಷ್ಟಿ ಹೀನತೆಯೂ ಉಂಟಾಗಬಹುದು. ರಕ್ತ ಹೆಪ್ಪುಗಟ್ಟುವುದರಿಂದ ನಾಳಗಳು ಮುಚ್ಚಿಹೋಗಿ ಅಥವಾ ರಕ್ತಸಂಚಾರ ಸರಾಗ ಆಗದಿರುವಾಗ, ಮೆದುಳಿನಲ್ಲಿ ಸಂಭವಿಸುವ ಪಾರ್ಶ್ವವಾಯುವಿನ ಮಾದರಿಯಲ್ಲಿಯೇ ಇದು ಕಣ್ಣಿನಲ್ಲಿ ಸಂಭವಿಸುವಂಥದ್ದು. ಆಪ್ಟಿಕ್ ನರಗಳ ಮುಂಭಾಗಕ್ಕೆ ರಕ್ತಸಂಚಾರ ಇಲ್ಲದಿರುವಾಗ ಈ ತೊಂದರೆ ತಲೆದೋರುತ್ತದೆ. ಅಂದರೆ ಆಪ್ಟಿಕ್ ನರಗಳಿಗೆ ರಕ್ತ ಸಂಚಾರ ನಿಂತಾಗ ಹೀಗಾಗುತ್ತದೆ.
ಲಕ್ಷಣಗಳೇನು?: ಮೊದಲಿಗೆ ನಿರ್ಜಲೀಕರಣದ ಲಕ್ಷಣಗಳು ಕಂಡುಬರಬಹುದು. ಕೆಲವೊಮ್ಮೆ ಅದೂ ಕಾಣುವುದಿಲ್ಲ. ಬದಲಿಗೆ, ಯಾವುದೇ ನೋವಿಲ್ಲದೆ ಕಣ್ಣಿನ ಬೆಳಕು ಇದ್ದಕ್ಕಿದ್ದಂತೆ ಆರಬಹುದು. ಕಣ್ಣು ಪೂರ್ಣವಾಗಿ ಕಾಣದೆ ಹೋಗ ಬಹುದು ಅಥವಾ ಅರ್ಧ ಮಾತ್ರವೇ ಕಾಣಿಸಬಹುದು. ದೃಷ್ಟಿ ಮಸುಕಾಗಬಹುದು, ನೆರಳು ಬಿದ್ದಂತೆ ಕಾಣಬಹುದು, ಎದುರಿಗಿನ ವಸ್ತುವಿನ ನಡುವಿನ ಭಾಗ ಕಾಣದೆ ಕೇವಲ ಹೊರಗಿನ ಆವರಣವಷ್ಟೇ ಕಾಣಬಹುದು. ಕಪ್ಪಾಗಿ ಅಥವಾ ಅಸ್ಪಷ್ಟವಾಗಿ ಕಾಣಬಹುದು.
ಏನು ಮಾಡಬೇಕು?: ಇಂಥ ಸಂದರ್ಭದಲ್ಲಿ ಯಾವುದೇ ಮನೆಮದ್ದನ್ನೂ ಮಾಡದೆ ತ್ವರಿತವಾಗಿ ವೈದ್ಯರನ್ನು ಕಾಣ ಬೇಕು. ತಡಮಾಡಿದರೆ ದೃಷ್ಟಿಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಹೆಪ್ಪುಗಟ್ಟಿರುವ ರಕ್ತ ಕಣಗಳನ್ನು ಕರಗಿಸಲು ವೈದ್ಯರು ತುರ್ತಾಗಿ ಔಷಧಿ ನೀಡುತ್ತಾರೆ. ರೆಟಿನಾಗೆ ಶಾಶ್ವತ ಹಾನಿ ಆಗದಂತೆ, ದೇಹಕ್ಕೆ ಹೆಚ್ಚಿನ ಪ್ರಮಾಣದ ಆಮ್ಲಜನಕ ವನ್ನು ಪೂರೈಕೆ ಮಾಡುವ ಅಗತ್ಯ ಬರಬಹುದು. ಹೃದಯ ಸಮಸ್ಯೆಗಳಿದ್ದರೆ, ರಕ್ತ ನೀರಾಗಿಸುವ ಬಗ್ಗೆ ಮತ್ತು ರಕ್ತದೊತ್ತಡ ವನ್ನು ನಿರ್ವಹಿಸುವ ಬಗ್ಗೆ ಇನ್ನಷ್ಟು ಎಚ್ಚರಿಕೆಯನ್ನು ವೈದ್ಯರು ತೆಗೆದುಕೊಳ್ಳಬೇಕಾಗಬಹುದು.
ತಡೆಯುವುದು ಹೇಗೆ?: ಉಷ್ಣತೆ ತೀವ್ರವಾಗಿರುವಾಗ, ತಾಪಮಾನ ೪೨ ಡಿಗ್ರಿ ಸೆಲ್ಶಿಯಸ್ ದಾಟಿದರೆ, ಮನೆಯಿಂದ ಹೊರಗೆ ಹೋಗುವುದು ಅಪಾಯ ತರಬಹುದು. ಮನೆಯೊಳಗೇ ಇದ್ದರೂ ಚೆನ್ನಾಗಿ ನೀರು ಕುಡಿಯುವುದು ಕಡ್ಡಾಯ. ಬಿಸಿಲಿನಲ್ಲಿ ದ್ದರಂತೂ ನಿರ್ಜಲೀಕರಣದ ಅಪಾಯದಿಂದ ಪಾರಾಗಲು ಆ ಕುರಿತ ವೈದ್ಯಕೀಯ ಮಾರ್ಗಸೂಚಿಯನ್ನು ಪಾಲಿಸದಿದ್ದರೆ ಪ್ರಾಣಾಪಾಯವೇ ಉಂಟಾಗಬಹುದು.
ಜೀವನಶೈಲಿಯನ್ನು ಆರೋಗ್ಯವಾಗಿ ಇರಿಸಿಕೊಳ್ಳಿ. ಬೇಸಿಗೆಗೆ ಸೂಕ್ತವಾದ ಆಹಾರವನ್ನೇ ಸೇವಿಸಿ. ಎಣ್ಣೆ-ಜಿಡ್ಡಿನ ಆಹಾರ ಗಳು, ಕರಿದ ಪದಾರ್ಥಗಳು ಬೇಡ. ಋತುಮಾನದ ಹಣ್ಣು-ತರಕಾರಿ ಮತ್ತು ಡೇರಿ ಉತ್ಪನ್ನಗಳು ಆಹಾರದಲ್ಲಿ ಸೇರಿರಲಿ. ನೀರು ಕುಡಿಯುವುದಕ್ಕೆ ಬೋರು ಎನ್ನುವಂಥ ನೆವಗಳನ್ನು ಹೇಳಿ ಯದ್ವಾತದ್ವಾ ಬಾಟಲಿಯ ಫ್ರೂಟ್‌ಜ್ಯೂಸ್ ಗಳನ್ನು ಕುಡಿ ಯಬೇಡಿ. ಇದರಿಂದ ರಕ್ತದಲ್ಲಿನ ಸಕ್ಕರೆಯಂಶ ಹೆಚ್ಚಾಗಿ, ಮಧುಮೇಹವಿದ್ದರೆ ಕಣ್ಣಿಗೆ ಇನ್ನಷ್ಟು ಸಮಸ್ಯೆ ಬರಬಹುದು. ಮಧು ಮೇಹ, ಹೃದ್ರೋಗಗಳಿದ್ದರೆ ಕಾಲಕಾಲಕ್ಕೆ ಕಣ್ಣಿನ ತಪಾಸಣೆಯನ್ನೂ ಮಾಡಿಸಿಕೊಳ್ಳಿ. ಧೂಮಪಾನ ಬೇಡ, ಆಲ್ಕೋಹಾಲ್ ನಿರ್ಜಲೀಕರಣವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ನೆನಪಿಡಿ. ಬೇಸಿಗೆಯಲ್ಲಿ ಕಣ್ಣಿನ ಆರೋಗ್ಯವನ್ನು ಕಡೆಗಣಿಸುವಂತಿಲ್ಲ ಎನ್ನುವುದನ್ನು ಮರೆಯಬೇಡಿ.