ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆಯಿಂದ 11,403 ‘ಗ್ರಾಹಕ ಸೇವಾ ಸಹಾಯಕ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

Banking Recruitment: ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ ದೇಶದ 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಸರಿ ಸುಮಾರು 11,403 ಹುದ್ದೆಗಳಿಗೆ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ರಾಜ್ಯದ ವಿವಿಧ ಬ್ಯಾಂಕುಗಳಲ್ಲಿ ಖಾಲಿ ಇರುವ 1,414 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಗ್ರಾಹಕ ಸೇವಾ ಸಹಾಯಕ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ಸಾಂದರ್ಭಿಕ ಚಿತ್ರ. ಒಳಚಿತ್ರದಲ್ಲಿ ಆರ್.ಕೆ. ಬಾಲಚಂದ್ರ -

Priyanka P
Priyanka P Aug 7, 2026 8:09 PM

ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಉದ್ಯೋಗದ ಕನಸು ಕಾಣುತ್ತಿರುವ ಲಕ್ಷಾಂತರ ಅಭ್ಯರ್ಥಿಗಳು ಎದುರು ನೋಡುತ್ತಿದ್ದ IBPS Customer Service Associate (CSA) (ಹಿಂದಿನ ಕ್ಲರ್ಕ್) ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಈ ಬಾರಿಯ ಅಧಿಸೂಚನೆ ಕೇವಲ ಹುದ್ದೆಗಳ ಪ್ರಕಟಣೆಗೆ ಸೀಮಿತವಾಗಿಲ್ಲ; ಅರ್ಜಿ ಪ್ರಕ್ರಿಯೆ, ಸ್ಥಳೀಯ ಭಾಷೆ, ಮುಖ್ಯ ಪರೀಕ್ಷೆಯ ಮಾದರಿ ಹಾಗೂ ದಾಖಲೆ ಪರಿಶೀಲನೆ ಸೇರಿದಂತೆ ಹಲವು ಅಂಶಗಳಲ್ಲಿ ಅಭ್ಯರ್ಥಿಗಳು ಗಮನಿಸಬೇಕಾದ ಬದಲಾವಣೆಗಳಿವೆ. ಈ ಬಾರಿ ಅಭ್ಯರ್ಥಿಗಳು ಗಮನಿಸಬೇಕಾದ ಮೊದಲ ಅಂಶ ಅರ್ಹತಾ ಷರತ್ತುಗಳು (Banking Recruitment) ಮತ್ತು ದಾಖಲೆಗಳ ಸಿದ್ಧತೆ. ಪದವಿ ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ ಪ್ರಮಾಣಪತ್ರಗಳು, ಛಾಯಾಚಿತ್ರ, ಸಹಿ ಹಾಗೂ ಅಗತ್ಯ ದಾಖಲೆಗಳನ್ನು ಮೊದಲೇ ಸಿದ್ಧಪಡಿಸಿಕೊಳ್ಳುವುದು ಉತ್ತಮ. ಅರ್ಜಿ ಸಲ್ಲಿಸುವ ಕೊನೆಯ ದಿನದವರೆಗೆ ಕಾಯುವುದು ತಾಂತ್ರಿಕ ಸಮಸ್ಯೆಗಳಿಗೆ ಕಾರಣವಾಗಬಹುದು.

ಎರಡನೆಯ ಪ್ರಮುಖ ಅಂಶ ಸ್ಥಳೀಯ ಭಾಷಾ ಪ್ರಾವೀಣ್ಯತೆ (LLPT). ಗ್ರಾಹಕ ಸೇವಾ ಸಹಾಯಕರ ಹುದ್ದೆಯಲ್ಲಿ ಸ್ಥಳೀಯ ಜನರೊಂದಿಗೆ ನೇರ ಸಂಪರ್ಕ ಇರುವುದರಿಂದ ಸ್ಥಳೀಯ ಭಾಷೆಯ ಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ರಾಜ್ಯದ ಭಾಷೆಯ ಕುರಿತು ಅಧಿಸೂಚನೆಯಲ್ಲಿ ನೀಡಿರುವ ಸೂಚನೆಗಳನ್ನು ಗಮನದಿಂದ ಓದಬೇಕು. ಕರ್ನಾಟಕದಲ್ಲಿ ಕನ್ನಡದ ಜೊತೆಗೆ ಅಧಿಸೂಚನೆಯಲ್ಲಿ ಸೂಚಿಸಿರುವ ಇತರೆ ಭಾಷೆಗಳಿಗೂ ಅವಕಾಶವಿದೆ.

ಇತ್ತೀಚಿನ ಅಧಿಕಾರಿಗಳ ಹಾಗೂ ಸ್ಪೆಷಲಿಸ್ಟ್ ಅಧಿಕಾರಿಗಳ ನೇಮಕಾತಿಗಳಲ್ಲಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅಪ್‌ಲೋಡ್ ಕಡ್ಡಾಯಗೊಳಿಸಿರುವುದೂ ಇದೇ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ. ಅಭ್ಯರ್ಥಿಯು ಸಂಬಂಧಿತ ಸ್ಥಳೀಯ ಭಾಷೆಯನ್ನು ಶಾಲಾ ಹಂತದಲ್ಲಿ ಅಧ್ಯಯನ ಮಾಡಿರುವುದನ್ನು ಸುಲಭವಾಗಿ ಪರಿಶೀಲಿಸಲು ಇದು ನೆರವಾಗುತ್ತದೆ.

2026ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 36.23% ಏರಿಕೆ, ಬ್ಯಾಂಕ್ ಆಫ್ ಇಂಡಿಯಾದ ನಿವ್ವಳ ಲಾಭ ₹3,068 ಕೋಟಿ

ದೇಶಾದ್ಯಂತ ಎಷ್ಟು ಹುದ್ದೆ?

ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ ದೇಶದ 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಸರಿ ಸುಮಾರು 11,403 ಹುದ್ದೆಗಳಿಗೆ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ರಾಜ್ಯದ ವಿವಿಧ ಬ್ಯಾಂಕುಗಳಲ್ಲಿ ಖಾಲಿ ಇರುವ 1,414 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯದ ಯಾವ ಬ್ಯಾಂಕಿನಲ್ಲಿ ಎಷ್ಟು ಹುದ್ದೆ?

ಕೆನರಾ ಬ್ಯಾಂಕ್ -800, ಬ್ಯಾಂಕ್ ಆಫ್ ಬರೋಡ-100, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ-ಇಲ್ಲ, ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ-29, ಬ್ಯಾಂಕ್ ಆಫ್ ಇಂಡಿಯಾ-40, ಇಂಡಿಯನ್ ಓವರ್ಸೀಸ್ ಬ್ಯಾಂಕ್-61, ಪಂಜಾಬ್ ಎಂಡ್ ಸಿಂಧ ಬ್ಯಾಂಕ್-5,ಬ್ಯಾಂಕ್ ಆಫ್ ಮಹಾರಾಷ್ಟ್ರ-17, ಪಂಜಾಬ್ ನ್ಯಾಶನಲ್ ಬ್ಯಾಂಕ್-6, ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿವೆ.

ಶೈಕ್ಷಣಿಕ ಅರ್ಹತೆ ಏನು?:

ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಈ ಪರೀಕ್ಷೆ ಬರೆಯಬಹುದು, ಅಭ್ಯರ್ಥಿಯು ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವ ಜ್ಞಾನ ಹೊಂದಿರುವುದು ಕಡ್ಡಾಯ, ಹೀಗಾಗಿ ಕಂಪ್ಯೂಟರ್ ಕಲಿಕೆಯ ಬಗ್ಗೆ ದೃಢೀಕರಣ ಪತ್ರವನ್ನು ಕೂಡ ಅಭ್ಯರ್ಥಿಯು ಹೊಂದಿರಬೇಕಾಗುತ್ತದೆ. (ಕಂಪ್ಯೂಟರ್‌ಗೆ ಸಂಬಂಧಿಸಿದ ವಿಷಯದಲ್ಲಿ ಸರ್ಟಿಫಿಕೇಟ್/ ಡಿಪ್ಲೊಮಾ ಅಥವಾ ಡಿಗ್ರಿ ಪಡೆದಿರುವುದು ಅಥವಾ ಶಾಲೆ ಅಥವಾ ಕಾಲೇಜಿನಲ್ಲಿ ಕಂಪ್ಯೂಟರ್ ಅಥವಾ ಐಟಿ (Information Technology) ಯನ್ನು ಒಂದು ವಿಷಯವಾಗಿ ಓದಿರಬೇಕು. ಅಲ್ಲದೆ, ರಾಜ್ಯದ ಅಧಿಕೃತ ಭಾಷೆಯಲ್ಲಿ ಮಾತನಾಡುವ, ಬರೆಯುವ ಸಾಮರ್ಥ್ಯ ಹೊಂದಿರಬೇಕು. ಪದವಿಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕಾಗಿರುತ್ತದೆ.

ವಯೋಮಿತಿ ಎಷ್ಟು?:

20 ವರ್ಷದಿಂದ 28 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು 1998ರ ಆಗಸ್ಟ್ 2 ಮತ್ತು 2006ರ ಆಗಸ್ಟ್ 1ರ ನಡುವೆ ಜನಿಸಿರಬೇಕು. ನಿಯಮಾನುಸಾರ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಶೇಷಚೇತನರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಗಮನಿಸಿ:

ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಿಮ್ಮ ಆಯ್ಕೆಯ ಆದ್ಯತೆಯ ಆದೇಶವನ್ನು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಳವಡಿಸಲಾಗಿದೆ. ಅಭ್ಯರ್ಥಿಗಳು ಈ ಹಂತದಲ್ಲಿ ಅವರ ಬ್ಯಾಂಕ್‌ಗಳ ಆದ್ಯತೆಯ ಕ್ರಮವನ್ನು ಅಗತ್ಯವಾಗಿ ಸೂಚಿಸಬೇಕು. ಯಾವ್ಯಾವ ಬ್ಯಾಂಕ್‌ಗಳಲ್ಲಿ ಎಷ್ಟೆಷ್ಟು ಹುದ್ದೆಗಳಿವೆ ಎಂಬುದರ ಮೇಲೆ ನಿಮ್ಮ ಆದ್ಯತೆಯ ಆಯ್ಕೆ ಇರಲಿ. ಒಮ್ಮೆ ನೀವು ಆಯ್ಕೆಯಾದರೆ ಬ್ಯಾಂಕ್ ಬದಲಾವಣೆಗೆ ಯಾವುದೇ ವಿನಂತಿಯನ್ನು ನಂತರದ ದಿನಗಳಲ್ಲಿ ಪರಿಗಣಿಸಲಾಗುವುದಿಲ್ಲ. ಆಯ್ಕೆ ಪ್ರಕ್ರಿಯೆಯ ಹಂತದಲ್ಲಿ ಅಥವಾ ಅಪಾಯಿಂಟ್‌ಮೆಂಟ್‌ನ ನಂತರ ನಿಮ್ಮ ಕೈಬರಹದ ಘೋಷಣೆ ಹಾಗೂ ನಿಮ್ಮ ಕೈಬರಹದಲ್ಲಿ ಭಿನ್ನವಾಗಿರುವುದು ತಜ್ಞರ ವಿಶ್ಲೇಷಣೆಯಲ್ಲಿ ಕಂಡುಬಂದರೆ, ಅಭ್ಯರ್ಥಿಯ ಉಮೇದುವಾರಿಕೆಯನ್ನ ರದ್ದುಗೊಳಿಸ ಲಾಗುವುದು. ಹೀಗಾಗಿ ಅರ್ಜಿ ಸಲ್ಲಿಸುವ ಹಂತದಲ್ಲಿಯೇ ಬಹಳ ಎಚ್ಚರಿಕೆಯಿಂದ ಅರ್ಜಿ ಸಲ್ಲಿಸುವುದು ಒಳಿತು. ಯಾವ ರಾಜ್ಯದ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದೇವೆ ಎಂಬುದನ್ನು ಸ್ಪಷ್ಟಪಡಿಸತಕ್ಕದ್ದು. ಈ ಆಯ್ಕೆಯನ್ನು ಬದಲಾಯಿಸಲು ಅವಕಾಶವಿರುವುದಿಲ್ಲ.

ಪರೀಕ್ಷೆಯ ಮಾಧ್ಯಮ:

ಆನ್‌ಲೈನ್ ಅರ್ಜಿಯಲ್ಲಿ, ಅಭ್ಯರ್ಥಿಗಳಿಗೆ ಅನ್ವಯವಾಗುವ ಪರೀಕ್ಷೆಗಳ ಆವೃತ್ತಿಯನ್ನು (ಪರೀಕ್ಷಾ ಮಾಧ್ಯಮ) ಸೂಚಿಸುವ ಆಯ್ಕೆಯನ್ನು ಒದಗಿಸಲಾಗುವುದು. ಅಭ್ಯರ್ಥಿಗಳು ಪರೀಕ್ಷೆಯ ಮಾಧ್ಯಮವನ್ನು ಸೂಚಿಸುವ ಈ ಆಯ್ಕೆಯನ್ನು ಬಳಸುವಾಗ ಜಾಗರೂಕರಾಗಿರಬೇಕು.

HDFC Layoff: ಸ್ವಯಂ ಚಾಲಿತ ತಂತ್ರಜ್ಞಾನ ಅಳವಡಿಕೆ; ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ 3 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗೇಟ್‌ಪಾಸ್‌

ಪರೀಕ್ಷಾ ಪೂರ್ವ ತರಬೇತಿ:

ಎಸ್‌ಸಿ/ಎಸ್‌ಟಿ/ಅಲ್ಪಸಂಖ್ಯಾತಅಭ್ಯರ್ಥಿಗಳಿಗೆ/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ/ವಿಶೇಷಚೇತನ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿಯನ್ನು ಐಬಿಪಿಎಸ್ ನೀಡುತ್ತವೆ. ಒಂದು ವೇಳೆ ಅಭ್ಯರ್ಥಿಗಳು ಪರೀಕ್ಷಾ ಪೂರ್ವ ತರಬೇತಿ ಬಯಸಿದಲ್ಲಿ ಅಂಥವರು ಆನ್‌ಲೈನ್ ಅರ್ಜಿ ಸಲ್ಲಿಸುವಾಗಲೇ ತರಬೇತಿ ಪಡೆಯುವ ಬಗ್ಗೆ ಅರ್ಜಿಯಲ್ಲಿ ನಮೂದಿಸಬೇಕು.

ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕ:

ಈ ಬಾರಿ ಅರ್ಜಿ ಸಲ್ಲಿಕೆ 2026ರ ಆಗಸ್ಟ್‌ 1ರಿಂದ ಆರಂಭವಾಗಿ ಆಗಸ್ಟ್‌ 21ರಂದು ಮುಕ್ತಾಯವಾಗಲಿದೆ. ಇದೇ ಅವಧಿಯಲ್ಲಿ ಅರ್ಜಿ ಶುಲ್ಕವನ್ನೂ ಪಾವತಿಸಬೇಕು. ನೋಂದಣಿ ಮುಕ್ತಾಯವಾದ ಬಳಿಕ ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಪ್ರತ್ಯೇಕ Edit Window ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಕೊನೆಯ ದಿನದವರೆಗೆ ಕಾಯದೆ ಮೊದಲ ವಾರದಲ್ಲೇ ಅರ್ಜಿ ಸಲ್ಲಿಸುವುದು ಉತ್ತಮ.

ಪ್ರಿಲಿಮ್ಸ್ ನಡೆಯುವ ದಿನಾಂಕ: - ಸೆಪ್ಟೆಂಬರ್ 2026.

ಮುಖ್ಯ ಪರೀಕ್ಷೆ ನಡೆಯುವ ದಿನಾಂಕ: ನವೆಂಬರ್ 2026.

ಪ್ರಿಲಿಮ್ಸ್‌ ಹಾಗೂ ಮೇನ್ಸ್ ಪರೀಕ್ಷೆ ನಡೆಯುವ ಕೇಂದ್ರಗಳು : ಬೆಳಗಾವಿ, ಬೆಂಗಳೂರು, ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ.

ಅರ್ಜಿ ಶುಲ್ಕವೆಷ್ಟು?:

ಅರ್ಜಿ ಶುಲ್ಕ: ಜಿಎಸ್‌ಟಿ ಸೇರಿ ಎಸ್‌ಸಿ/ ಎಸ್‌ಟಿ/ವಿಶೇಚೇತನ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 175 ರೂ. ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 850 ರೂ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿಯೇ ಅರ್ಜಿ ಶುಲ್ಕವನ್ನೂ ಪಾವತಿಸಬೇಕಿರುತ್ತದೆ.

ನೆನಪಿಡಿ:

ಒಬಿಸಿ ವರ್ಗಕ್ಕೆ ಸೇರಿದ ಆದರೆ ಕೆನೆ ಪದರದ ಅಡಿಯಲ್ಲಿ ಬರುವ ಅಭ್ಯರ್ಥಿಗಳು ಒಬಿಸಿ ಮೀಸಲಾತಿಗೆ ಅರ್ಹರಾಗಿರುವುದಿಲ್ಲ. ಅವರು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ತಮ್ಮ ವರ್ಗವನ್ನು ಸಾಮಾನ್ಯ ಎಂದು ಸೂಚಿಸಬೇಕು. ಅಭ್ಯರ್ಥಿಯು ಕಾಲಕಾಲಕ್ಕೆ ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕೆನೆರಹಿತ ಲೇಯರ್ (Non-creamy layer) ಷರತ್ತಿನೊಂದಿಗೆ OBC ಪ್ರಮಾಣಪತ್ರವನ್ನು ಹೊಂದಿರಬೇಕು.

ವೇತನ ಶ್ರೇಣಿ:

24,050-64.480 ರೂ. ಅಭ್ಯರ್ಥಿಗಳು ಆಯಾ ಬ್ಯಾಂಕ್‌ನ ನಿಯಮಾನುಸಾರ ಇತರ ಭತ್ಯೆಗಳಿಗೆ ಅರ್ಹರಾಗಿರುತ್ತಾರೆ.

ಪರೀಕ್ಷೆ ಹೇಗೆ? :

ಬ್ಯಾಂಕಿಂಗ್ ಪರೀಕ್ಷೆಗಳು ಎರಡು ಹಂತಗಳಲ್ಲಿ ನಡೆಯಲಿವೆ. ಪೂರ್ವಭಾವಿ (prelims), ಮುಖ್ಯ ಪರೀಕ್ಷೆ (mains). ಐಬಿಪಿಎಸ್‌ ನ ಗುಮಾಸ್ತರ ಹುದ್ದೆಗೆ ಸಂದರ್ಶನ ಇರುವುದಿಲ್ಲ. ಪೂರ್ವಭಾವಿ ಪರೀಕ್ಷೆ ಮೊದಲ ಹಂತದ ಅರ್ಹತಾ ಪರೀಕ್ಷೆಯಾಗಿದ್ದು, ಇದರಲ್ಲಿ ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ.

ಪ್ರಾಥಮಿಕ ಪರೀಕ್ಷೆ ಹೇಗಿರುತ್ತದೆ?

ಪ್ರಾಥಮಿಕ ಪರೀಕ್ಷೆಯಲ್ಲಿ ಇಂಗ್ಲಿಷ್ ಭಾಷೆ, ಸಂಖ್ಯಾತ್ಮಕ ಸಾಮರ್ಥ್ಯ (Numerical Ability) ಮತ್ತು ರೀಸನಿಂಗ್ ಸಾಮರ್ಥ್ಯ (Reasoning Ability) ವಿಭಾಗಗಳಿಂದ ಪ್ರಶ್ನೆಗಳು ಕೇಳಲಾಗುತ್ತವೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಮುಖ್ಯ ಪರೀಕ್ಷೆಗೆ ಅವಕಾಶ ದೊರೆಯುತ್ತದೆ. ಪೂರ್ವಭಾವಿಯಲ್ಲಿ ಪಡೆದ ಅಂಕಗಳು ಅರ್ಹತಾ ಪಟ್ಟಿಗೆ ಮಾತ್ರ ಮೀಸಲಾಗಿದ್ದು ಅದರಲ್ಲಿ ಪಡೆದ ಅಂಕಗಳನ್ನು ಮುಂದೆ ಪರಿಗಣಿಸಲಾಗುವುದಿಲ್ಲ. ಎರಡೂ ಪರೀಕ್ಷೆಗೂ ಅಷ್ಟೆ ಮಹತ್ವ ನೀಡಬೇಕು ಎಂಬುದನ್ನು ಖಂಡಿತ ಮರೆಯದಿರಿ.

ನಿಗದಿತ ದಿನದಂದು ಆನ್‌ಲೈನ್‌ನಲ್ಲಿಯೇ ಎರಡೂ ಲಿಖಿತ ಪರೀಕ್ಷೆಗಳು ನಡೆಯಲಿವೆ. ಪೂರ್ವಭಾವಿ ಪರೀಕ್ಷೆ ಒಂದು ಗಂಟೆಗಳ ಕಾಲ ನಡೆಯಲಿದ್ದು, (ಪ್ರತಿ ಪತ್ರಿಕೆಗೂ 20 ನಿಮಿಷಗಳಂತೆ ಒಟ್ಟಾರೆ 60 ನಿಮಿಷಗಳು) 100 ಅಂಕಗಳಿಗೆ 100 ಪ್ರಶ್ನೆಗಳನ್ನು ಕೇಳಲಾಗುತ್ತದೆ. (ಅಂದರೆ ಪ್ರತಿ ಪ್ರಶ್ನೆಗೆ ಒಂದೊಂದು ಅಂಕ ನಿಗದಿಯಾಗಿರುತ್ತದೆ) ಇದರಲ್ಲಿ ಇಂಗ್ಲೀಷ್ ಲಾಂಗ್ವೇಜ್‌ಗೆ 30, ನ್ಯೂಮರಿಕಲ್ ಎಬಿಲಿಟಿಯ 35 ಹಾಗೂ ರೀಸನಿಂಗ್ ಎಬಿಲಿಟಿಯ 35 ಪ್ರಶ್ನೆಗಳಿರಲಿವೆ. ಇಂಗ್ಲೀಷ್ ಹೊರತುಪಡಿಸಿ ಉಳಿದ ಎರಡು ಪ್ರಶ್ನೆ ಪತ್ರಿಕೆಗಳು ಕನ್ನಡ, ಕೊಂಕಣಿ, ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಲಭ್ಯವಿದೆ.

ಅಭ್ಯರ್ಥಿಗಳು ಮತ್ತೊಂದು ವಿಷಯವನ್ನು ನೆನಪಿಡಬೇಕು. ಪ್ರಾಥಮಿಕ ಪರೀಕ್ಷೆಯಲ್ಲಿ ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ಅರ್ಹತಾ ಮಾನದಂಡ (Sectional Cut-off) ಇರುವುದರಿಂದ, ಒಂದೇ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದರೆ ಸಾಕು ಎನ್ನುವ ಮನೋಭಾವ ಸರಿಯಲ್ಲ. ಇಂಗ್ಲಿಷ್, ರೀಸನಿಂಗ್ ಮತ್ತು ಸಂಖ್ಯಾತ್ಮಕ ಸಾಮರ್ಥ್ಯ—ಮೂರು ವಿಭಾಗಗಳಲ್ಲಿಯೂ ಸಮಾನ ಸಿದ್ಧತೆ ಅಗತ್ಯ.

ಮುಖ್ಯ ಪರೀಕ್ಷೆ:

ಈ ಬಾರಿಯ ಅಧಿಸೂಚನೆಯಲ್ಲಿ ಅಭ್ಯರ್ಥಿಗಳು ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ ಮುಖ್ಯ ಪರೀಕ್ಷೆಯ ಪ್ರಶ್ನೆಗಳ ಸಂಖ್ಯೆಯಲ್ಲಿ ಮಾಡಿರುವ ಬದಲಾವಣೆ. ಕಳೆದ ವರ್ಷದೊಂದಿಗೆ ಹೋಲಿಸಿದರೆ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ವಿಭಾಗಗಳಲ್ಲಿ ಪ್ರಶ್ನೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಆದರೆ ಒಟ್ಟು ಅಂಕಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದರ ಅರ್ಥ, ಅಭ್ಯರ್ಥಿಗಳು ಹಿಂದಿಗಿಂತ ಕಡಿಮೆ ಸಮಯದಲ್ಲಿ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು.

ಅಂದರೆ ಕೇವಲ ವಿಷಯಜ್ಞಾನ ಸಾಕಾಗುವುದಿಲ್ಲ; ಸಮಯ ನಿರ್ವಹಣೆ (Time Management) ಮತ್ತು ವೇಗದ ಜೊತೆಗೆ ನಿಖರತೆ (Speed with Accuracy) ಯಶಸ್ಸಿನ ಪ್ರಮುಖ ಅಂಶಗಳಾಗಲಿವೆ. ಈ ಬದಲಾವಣೆಗೆ ಅನುಗುಣವಾಗಿ ಈಗಿನಿಂದಲೇ ಅಣಕು ಪರೀಕ್ಷೆಗಳನ್ನು (Mock Tests) ಸಮಯದ ಮಿತಿಯಲ್ಲಿ ಬರೆಯುವ ಅಭ್ಯಾಸ ಮಾಡುವುದು ಅಗತ್ಯ.

ಮುಖ್ಯ ಪರೀಕ್ಷೆಯು ಎರಡು ಗಂಟೆಗಳ ಕಾಲ ನಡೆಯಲಿದ್ದು, 160 ಪ್ರಶ್ನೆಗಳನ್ನು 200 ಅಂಕಗಳಿಗೆ ಬಿಡಿಸಬೇಕು.

  1. General/ Financial Awareness (ಸಾಮಾನ್ಯ/ಆರ್ಥಿಕ ಅರಿವು} 40 ಪ್ರಶ್ನೆ 50 ಅಂಕಗಳು 20 ನಿಮಿಷಗಳು.
  2. General English (ಸಾಮಾನ್ಯ ಇಂಗ್ಲೀಷ್) 40 ಪ್ರಶ್ನೆ 40 ಅಂಕಗಳು 35 ನಿಮಿಷಗಳು.
  3. Reasoning Ability (ತಾರ್ಕಿಕ ಸಾಮರ್ಥ್ಯ) 40 ಪ್ರಶ್ನೆ 60ಅಂಕಗಳು 35 ನಿಮಿಷಗಳು.
  4. Quantitative Aptitude (ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್) 40 ಪ್ರಶ್ನೆ 50 ಅಂಕಗಳು 35 ನಿಮಿಷಗಳು.

ಹೀಗೆ ಒಟ್ಟಾರೆ 160 ಪ್ರಶ್ನೆಗಳಿದ್ದು 200 ಅಂಕಗಳು ಹಾಗೂ 125 ನಿಮಿಷದ ಪರೀಕ್ಷೆಯಾಗಿದೆ.

ಇಂಗ್ಲೀಷ್ ಭಾಷೆಯೊಂದನ್ನು ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳು ಇಂಗ್ಲಿಷ್, ಹಿಂದಿ, ಕನ್ನಡ ಮತ್ತು ಕೊಂಕಣಿ ಭಾಷೆಯಲ್ಲಿ ಇರುತ್ತದೆ. ಆದರೆ ಬ್ಯಾಂಕ್ ಪರೀಕ್ಷೆಯಲ್ಲಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರಶ್ನೆಗಳಿಗೆ ಉತ್ತರ ಗುರುತಿಸಬೇಕಿರುತ್ತದೆ. ಅಲ್ಲದೆ ಬಿಡಿಸಿದ ಪ್ರಶ್ನೆಗಳಿಗೆ ಉತ್ತರಸರಿಯಾಗಿರಲೇಬೇಕಾದುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಬ್ಯಾಂಕ್ ಪರೀಕ್ಷೆಗಳಲ್ಲಿ ನೆಗೆಟಿವ್ ಮಾಕ್ಸ್ (ಋಣಾತ್ಮಕ ಮೌಲ್ಯಮಾಪನ) ಇರುತ್ತದೆ. ಪದವಿ ಪರೀಕ್ಷೆಗಳಲ್ಲಿ ಈ ರೀತಿಯಾಗಿ ಇರೋದಿಲ್ಲ. ಹಾಗಾಗಿ ಋಣಾತ್ಮಕ ಮೌಲ್ಯಮಾಪನದ ಕುರಿತಂತೆ ಧನಾತ್ಮಕ ಚಿಂತನೆ ಇರಬೇಕಾದುದು ಮೊದಲ ಆದ್ಯತೆ. ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು (ಋಣಾತ್ಮಕ ಅಂಕ) ಕಳೆಯಲಾಗುತ್ತದೆ.

ಪರೀಕ್ಷೆಯಲ್ಲಿ ನೀವು ಯಶಸ್ವಿಯಾಗಬೇಕಾದರೆ ಎಲ್ಲವನ್ನೂ ಉತ್ತರಿಸಲು ಹೋಗದೆ ಗೊತ್ತಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರವನ್ನು ಗುರುತಿಸಿದರೆ ಸಾಕು. ಅತ್ಯಂತ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸುವುದಕ್ಕಿಂತ ನಿಖರವಾಗಿ ಗೊತ್ತಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕಾದುದು ಅಗತ್ಯ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವಾಗ ಎಲ್ಲ ಅಭ್ಯರ್ಥಿಗಳೂ 'ಲಿಖಿತ ದೃಢೀಕರಣ' ಅಪ್‌ಲೋಡ್ ಮಾಡಬೇಕಿರುತ್ತದೆ. ಅಭ್ಯರ್ಥಿಗಳು ಅಧಿಸೂಚನೆಯಲ್ಲಿರುವಂತೆಯೇ ಕೈಯಲ್ಲಿ ಬರೆದು ಸಹಿ ಮಾಡಿ,ಅದನ್ನು ಸ್ಕ್ಯಾನ್ ಮಾಡಿಟ್ಟುಕೊಂಡು ಅಪ್ ಲೋಡ್ ಮಾಡಬೇಕು. ಇಂಗ್ಲಿಷ್‌ನಲ್ಲಿ ಮಾತ್ರ ಈ ದೃಢೀಕರಣ ಪತ್ರ ಇರಬೇಕೆಂದು ಸೂಚಿಸಲಾಗಿದೆ. ಭಾವಚಿತ್ರ, ಸಹಿ, ಎಡಗೈ ಹೆಬ್ಬರಳ ಗುರುತು, ಸ್ವಯಂದೃಡೀಕರಣದ ಲಿಖಿತ ಪತ್ರ, ಅಂಕಪಟ್ಟಿಗಳ ಸ್ಕ್ಯಾನ್ ಪ್ರತಿಯನ್ನು ಅಪ್‌ಲೋಡ್ ಮಾಡತಕ್ಕದ್ದು. ದಾಖಲಾತಿಗಳ ಅಪ್‌ಲೋಡ್ ಗೆ ಡಿಜಿ ಲಾಕರ್ ಸೌಲಭ್ಯವನ್ನು ಬಳಸಿಕೊಳ್ಳಬಹುದು.

ಅಧಿಸೂಚನೆಯ ಲಿಂಕ್‌:

https://www.ibps.in/wp-content/uploads/Notification_CRP_CSA_XVI-Final.pdf

ಹೆಚ್ಚಿನಮಾಹಿತಿಗೆವೆಬ್:

https://www.ibps.in/