2nd PUC Exam-3 result: ದ್ವಿತೀಯ PUC ಪರೀಕ್ಷೆ-3ರ ಫಲಿತಾಂಶ ಪ್ರಕಟ, ಹೀಗೆ ಚೆಕ್ ಮಾಡಿ
2nd PUC Exam-3: ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರಲ್ಲಿ ಉತ್ತೀರ್ಣರಾಗದ 82,683 ವಿದ್ಯಾರ್ಥಿಗಳು ಪರೀಕ್ಷೆ-3ಕ್ಕೆ ಹಾಜರಾಗಿದ್ದರು. ಜೂನ್ 9 ರಿಂದ ಜೂನ್ 20, 2025ರವರೆಗೆ ಒಟ್ಟು 262 ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್ ಅಳವಡಿಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲಾಯಿತು.


ಬೆಂಗಳೂರು: 2025ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶ (2nd PUC Exam-3 result) ಪ್ರಕಟಗೊಂಡಿದೆ. ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ಹಾಜರಾದ 82,683 ವಿದ್ಯಾರ್ಥಿಗಳಲ್ಲಿ 18,834 ಉತ್ತೀರ್ಣರಾಗಿದ್ದು, ಶೇಕಡಾ 22.78ರಷ್ಟು ಉತ್ತೀರ್ಣತಾ ಪ್ರಮಾಣ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪರೀಕ್ಷಾ ಅವಕಾಶವನ್ನು ಬಳಸಿಕೊಂಡಿರುವುದು ಸ್ಪಷ್ಟವಾಗಿದೆ.
ವಿಶೇಷವಾಗಿ, ಮೂರನೇ ಪರೀಕ್ಷೆಯ ಅವಕಾಶವು ಅನೇಕ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು, ಸಿಇಟಿ (KCET) ಮೂಲಕ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಆಕಾಂಕ್ಷೆಗಳಿಗೆ ಹೊಸ ಭರವಸೆ ಮೂಡಿಸಿದೆ. ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರಲ್ಲಿ ಉತ್ತೀರ್ಣರಾಗದ 82,683 ವಿದ್ಯಾರ್ಥಿಗಳು ಪರೀಕ್ಷೆ-3ಕ್ಕೆ ಹಾಜರಾಗಿದ್ದರು. ಜೂನ್ 9 ರಿಂದ ಜೂನ್ 20, 2025ರವರೆಗೆ ಒಟ್ಟು 262 ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್ ಅಳವಡಿಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲಾಯಿತು.
ಈ ಬಾರಿ, ಪರೀಕ್ಷೆಗೆ ಹೆಚ್ಚಿನ ವಿದ್ಯಾರ್ಥಿಗಳು ಹಾಜರಾಗುವಂತೆ ಮಾಡಲು ಪ್ರಾದೇಶಿಕ ಉಪನಿರ್ದೇಶಕರು, ಪ್ರಾಂಶುಪಾಲರು ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಕ್ರಿಯವಾಗಿ ಪ್ರಯತ್ನಿಸಲಾಗಿತ್ತು. ಪತ್ರಿಕಾ ಪ್ರಕಟಣೆಗಳು ಮತ್ತು ಗೋಷ್ಠಿಗಳನ್ನು ನಡೆಸಿ, ವಿದ್ಯಾರ್ಥಿಗಳಲ್ಲಿ ಉತ್ತೇಜನ ನೀಡಲಾಯಿತು. ಕಾಲೇಜು ಹಂತದಲ್ಲಿ ಫಲಿತಾಂಶ ಸುಧಾರಣೆಗೆ ಪರಿಹಾರ ಬೋಧನಾ ತರಗತಿಗಳನ್ನು (Remedial Classes) ನಡೆಸಿದ್ದು, ಇದು ವಿದ್ಯಾರ್ಥಿಗಳ ಕಾರ್ಯಕ್ಷಮತೆಗೆ ಸಹಕಾರಿಯಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-2 ರಲ್ಲಿ ಉತ್ತೀರ್ಣರಾಗದ ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ-3 ಕ್ಕೆ ಶುಲ್ಕ ವಿನಾಯಿತಿ ನೀಡಿದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು, ಪರೀಕ್ಷೆ-3 ಕ್ಕೆ ನೋಂದಾಯಿಸಿಕೊಳ್ಳಲು ಅನುಕೂಲವಾಯಿತು.
ಒಟ್ಟಾರೆ ಪರೀಕ್ಷೆ-3ರ ಫಲಿತಾಂಶಗಳು
2025 ಪರೀಕ್ಷೆ-3: ಒಟ್ಟು 1,11,002 ವಿದ್ಯಾರ್ಥಿಗಳು ಹಾಜರಾಗಿದ್ದು, 22,446 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತೀರ್ಣತಾ ಪ್ರಮಾಣ ಶೇಕಡಾ 20.22. 2024 ಪರೀಕ್ಷೆ-3: ಒಟ್ಟು 71,716 ವಿದ್ಯಾರ್ಥಿಗಳು ಹಾಜರಾಗಿದ್ದು, 16,136 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಉತ್ತೀರ್ಣತಾ ಪ್ರಮಾಣ ಶೇಕಡಾ 22.5. ಫಲಿತಾಂಶ ಸುಧಾರಣೆಗಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಉತ್ತಮ ಸಾಧನೆ ಕಂಡುಬಂದಿದೆ. 2025ರ ಪರೀಕ್ಷೆ-3ರಲ್ಲಿ ಒಟ್ಟು 17,398 ವಿದ್ಯಾರ್ಥಿಗಳು ಅಂಕ ಸುಧಾರಣೆಗೆ ಹಾಜರಾಗಿದ್ದು, ಅವರಲ್ಲಿ 11,937 ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಹೆಚ್ಚಿಸಿಕೊಂಡಿದ್ದಾರೆ. 2024ರ ಪರೀಕ್ಷೆ-3ರಲ್ಲಿ ಈ ಸಂಖ್ಯೆ 7,420 ಆಗಿತ್ತು. ಇದು ವಿದ್ಯಾರ್ಥಿಗಳಿಗೆ ತಮ್ಮ ಶ್ರೇಣಿಯನ್ನು ಉತ್ತಮಪಡಿಸಿಕೊಳ್ಳಲು ಸರ್ಕಾರ ನೀಡಿದ ಅವಕಾಶದ ಸದ್ಬಳಕೆಯನ್ನು ತೋರಿಸುತ್ತದೆ. ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಅಂಕ ಸುಧಾರಣೆಗೆ ಮುಂದಾದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಇದು ಸಿಇಟಿ ರ್ಯಾಂಕಿಂಗ್ ಉತ್ತಮಪಡಿಸಿಕೊಳ್ಳುವ ಅವರ ಇಚ್ಛೆಯನ್ನು ಪ್ರತಿಬಿಂಬಿಸುತ್ತದೆ.
ದ್ವಿತೀಯ ಪಿಯುಸಿ ಪರೀಕ್ಷೆ-1, ಪರೀಕ್ಷೆ-2, ಮತ್ತು ಪರೀಕ್ಷೆ-3ರ ಕ್ರೋಢೀಕೃತ ಫಲಿತಾಂಶವು ರಾಜ್ಯದ ವಿದ್ಯಾರ್ಥಿಗಳ ಒಟ್ಟಾರೆ ಶೈಕ್ಷಣಿಕ ಪ್ರಗತಿಯನ್ನು ಎತ್ತಿ ತೋರಿಸುತ್ತದೆ.
ಹೊಸಬರು (Freshers): ಒಟ್ಟು 6,39,800 ವಿದ್ಯಾರ್ಥಿಗಳು ಹಾಜರಾಗಿದ್ದು, 5,45,032 ಮಂದಿ ಉತ್ತೀರ್ಣರಾಗಿದ್ದಾರೆ. ಉತ್ತೀರ್ಣತಾ ಪ್ರಮಾಣ ಶೇಕಡಾ 85.19.
ಒಟ್ಟಾರೆ ಕ್ರೋಢೀಕೃತ ಫಲಿತಾಂಶ (Including Repeater and Private Students): ಒಟ್ಟು 7,09,968 ವಿದ್ಯಾರ್ಥಿಗಳು ಹಾಜರಾಗಿದ್ದು, 5,66,636 ಮಂದಿ ಉತ್ತೀರ್ಣರಾಗಿದ್ದಾರೆ. ಉತ್ತೀರ್ಣತಾ ಪ್ರಮಾಣ ಶೇಕಡಾ 79.81.
ಮೂರನೇ ಪರೀಕ್ಷೆಯ ಅವಕಾಶ ನೀಡಿದುದರಿಂದ ಒಟ್ಟು 22,446 ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಉತ್ತೀರ್ಣರಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಸಿಇಟಿ (counselling/rounds) ನಂತರ ಲಭ್ಯವಿರುವ ಸೀಟುಗಳಿಗೆ ಭಾಗವಹಿಸಲು ಉತ್ತಮ ಅವಕಾಶವಾಗಲಿದೆ. ಇದು ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಿಗೆ ದಾಖಲಾಗಲು ಮತ್ತು ಭವಿಷ್ಯದಲ್ಲಿ ಪದವಿ ಹಾಗೂ ಉನ್ನತ ವ್ಯಾಸಂಗವನ್ನು ಮುಂದುವರಿಸಲು ಉತ್ತಮ ಅವಕಾಶವನ್ನು ಒದಗಿಸಿದೆ.
ಪರೀಕ್ಷೆ-3ರ ರಿಸಲ್ಟ್ ಈ ರೀತಿ ಚೆಕ್ ಮಾಡಿ
ವಿದ್ಯಾರ್ಥಿಗಳು ಮತ್ತು ಪೋಷಕರು ಜುಲೈ 1, 2025ರ ಇಂದು ಮಧ್ಯಾಹ್ನ 1:00 ಗಂಟೆಯ ನಂತರ ತಮ್ಮ ಫಲಿತಾಂಶಗಳನ್ನು https://karresults.nic.in ಜಾಲತಾಣದಲ್ಲಿ ಪಡೆಯಬಹುದಾಗಿದೆ. ಈ ಜಾಲತಾಣದಲ್ಲಿ ನಿಮ್ಮ ನೋಂದಣಿ ಸಂಖ್ಯೆ ಸೇರಿದಂತೆ ಇತರೆ ಮಾಹಿತಿಯನ್ನು ದಾಖಲಿಸುವ ಮೂಲಕ, ಫಲಿತಾಂಶವನ್ನು ಪಡೆಯಬಹುದಾಾಗಿದೆ.