ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Auto Gas: ಬೆಂಗಳೂರಿನಲ್ಲಿ 80% ಆಟೋ ಗ್ಯಾಸ್‌ ಬಂಕ್‌ ಬಂದ್‌, ಆಟೋ ಚಾಲಕರ ಪರದಾಟ

ಸೀಮಿತ ಸಂಖ್ಯೆಯ ಆಟೋ ಎಲ್‌ಪಿಜಿ ವಿತರಣಾ ಕೇಂದ್ರಗಳು, ಸೀಮಿತ ವಿತರಣಾ ಸಾಮರ್ಥ್ಯ ಮತ್ತು ಕಾರ್ಯಾಚರಣೆಯ ಸವಾಲುಗಳು, ಖಾಸಗಿ ಆಟೋ ಎಲ್‌ಪಿಜಿ ಕೇಂದ್ರಗಳ ಮುಚ್ಚಿರುವುದರಿಂದ ಆಟೋಗಳಿಗೆ ಎಲ್‌ಪಿಜಿ ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ. ಖಾಸಗಿ ಸಂಸ್ಥೆಗಳು ನಡೆಸುತ್ತಿರುವ 300ಕ್ಕೂ ಹೆಚ್ಚು ಬಂಕ್‌ಗಳ ಪೈಕಿ ಶೇ.80ರಷ್ಟು ಬಾಗಿಲು ಹಾಕಿವೆ.

ಬೆಂಗಳೂರಿನಲ್ಲಿ 80% ಆಟೋ ಗ್ಯಾಸ್‌ ಬಂಕ್‌ ಬಂದ್‌, ಆಟೋ ಚಾಲಕರ ಪರದಾಟ

ಆಟೋಗಳ ಕ್ಯೂ -

ಹರೀಶ್‌ ಕೇರ
ಹರೀಶ್‌ ಕೇರ Apr 6, 2026 9:22 AM

ಬೆಂಗಳೂರು, ಏ.06: ಇರಾನ್-‌ ಅಮೆರಿಕ- ಇಸ್ರೇಲ್‌ (Iran- israel war)ಯುದ್ಧದ ಪರಿಣಾಮ ನಗರದ ಶೇ.80 ಆಟೋ ಗ್ಯಾಸ್‌ (Auto Gas) ಬಂಕ್‌ಗಳು ಬಾಗಿಲು ಹಾಕಿವೆ. ಸದ್ಯ ಐಒಸಿಎಲ್‌ನ (IOCL) 55 ಬಂಕ್‌ಗಳಲ್ಲಿ ಮಾತ್ರ ಆಟೋ ಗ್ಯಾಸ್ ದೊರೆಯುತ್ತಿದೆ. ಗ್ಯಾಸ್ ಲಭ್ಯವಿದ್ದ ಬಂಕ್‌ಗಳ ಎದುರು ನೂರಾರು ಆಟೋಗಳು, ಸಿಎನ್‌ಜಿ (CNG) ಚಾಲಿತ ಕಾರುಗಳು ಸರತಿ ಸಾಲಿನಲ್ಲಿ ಭಾನುವಾರ ನಿಂತಿದ್ದವು.

ಮಧ್ಯಪ್ರಾಚ್ಯದ ಸಮರ ಸನ್ನಿವೇಶದಿಂದಾಗಿ ಬೇಡಿಕೆ ಹೆಚ್ಚಳವಾಗಿ ನಗರಕ್ಕೆ ಎಲ್‌ಪಿಜಿ ಪೂರೈಕೆಯಲ್ಲಿ ತೊಂದರೆಯಾಗಿದ್ದು, ಆಟೋ ಎಲ್‌ಪಿಜಿ ಸರಬರಾಜು ವ್ಯವಸ್ಥೆಯನ್ನು ಬಲಪಡಿಸುವ ಪ್ರಯತ್ನ ನಡೆದಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಹೇಳಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಐಒಸಿಎಲ್, ಸೀಮಿತ ಸಂಖ್ಯೆಯ ಆಟೋ ಎಲ್‌ಪಿಜಿ ವಿತರಣಾ ಕೇಂದ್ರಗಳು, ಸೀಮಿತ ವಿತರಣಾ ಸಾಮರ್ಥ್ಯ ಮತ್ತು ಕಾರ್ಯಾಚರಣೆಯ ಸವಾಲುಗಳು, ಖಾಸಗಿ ಆಟೋ ಎಲ್‌ಪಿಜಿ ಕೇಂದ್ರಗಳ ಮುಚ್ಚಿರುವುದರಿಂದ ಆಟೋಗಳಿಗೆ ಎಲ್‌ಪಿಜಿ ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ. ಕರ್ನಾಟಕದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಒಟ್ಟು 72 ಗ್ಯಾಸ್ ಬಂಕ್‌ಗಳನ್ನು ನಡೆಸುತ್ತಿವೆ. ಇದರಲ್ಲಿ ಐಒಸಿಎಲ್ 55 ಕೇಂದ್ರಗಳನ್ನು ಹೊಂದಿದೆ. ಮತ್ತೊಂದೆಡೆ ಖಾಸಗಿ ಸಂಸ್ಥೆಗಳು ನಡೆಸುತ್ತಿರುವ 300ಕ್ಕೂ ಹೆಚ್ಚು ಬಂಕ್‌ಗಳ ಪೈಕಿ ಶೇ.80ರಷ್ಟು ಬಾಗಿಲು ಹಾಕಿವೆ.

ರಾಜ್ಯಾದ್ಯಂತ ಭುಗಿಲೆದ್ದ ಆಟೋ ಗ್ಯಾಸ್‌ ಸಮಸ್ಯೆ; ಬೆಂಗಳೂರಿನಲ್ಲಿ ಕಿಲೋ ಮೀಟರ್‌ಗಟ್ಟಲೆ ರಿಕ್ಷಾ ಸಾಲು

ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಐಒಸಿಎಲ್ ಕರ್ನಾಟಕದಲ್ಲಿ ತನ್ನ ಪೂರೈಕೆಯನ್ನು ಗಣನೀಯವಾಗಿ ಹೆಚ್ಚಿಸಿದೆ ಎಂದು ತಿಳಿಸಿದೆ. ಐಒಸಿಎಲ್ ಬಂಕ್‌ಗಳಿಗೆ ಫೆಬ್ರವರಿಯಲ್ಲಿ ಪ್ರತಿ ದಿನ ಸುಮಾರು 43.5 ಮೆಟ್ರಿಕ್ ಟನ್ ಗ್ಯಾಸ್ ಪೂರೈ ಸಲಾಗುತ್ತಿತ್ತು. ಮಾರ್ಚ್‌ನಲ್ಲಿ 59.53 ಮೆಟ್ರಿಕ್ ಟನ್ ಹಾಗೂ ಏ.4ರಂದು ಇದನ್ನು 68.53 ಮೆಟ್ರಿಕ್ ಟನ್‌ಗೆ ಹೆಚ್ಚಿಸಲಾಗಿದೆ. ಈ ಪ್ರಯತ್ನಗಳ ಹೊರತಾಗಿಯೂ, ಸೀಮಿತ ಸಂಖ್ಯೆಯ ಬಂಕ್‌ಗಳಿರುವ ಕಾರಣ ಬೇಡಿಕೆ ಮತ್ತು ಪೂರೈಕೆಯ ಅಂತರವನ್ನು ಸಂಪೂರ್ಣವಾಗಿ ಸರಿದೂಗಿಸಲು ಕಷ್ಟವಾಗುತ್ತಿದೆ.

ಐಒಸಿಎಲ್ ಬಂಕ್‌ಗಳಲ್ಲಿ ಗ್ಯಾಸ್ ದರ ₹89.52 ಇದೆ. ಆದರೆ, ಖಾಸಗಿ ಬಂಕ್‌ಗಳಲ್ಲಿ ₹99 ರಿಂದ 105 ಇದೆ. ಹೀಗಾಗಿ ಚಾಲಕರು ಖಾಸಗಿ ಬಂಕ್‌ಗಳತ್ತ ಬರುತ್ತಿದ್ದು, ದಟ್ಟಣೆ ಹೆಚ್ಚಾಗುತ್ತಿದೆ ಎಂದು ಐಒಸಿಎಲ್ ತಿಳಿಸಿದೆ.

ಪೆಟ್ರೋಲ್ ಬಳಸಲು ಕರೆ: ಸುಮಾರು ಶೇ.70ರಷ್ಟು ಆಟೋರಿಕ್ಷಾಗಳು ಡ್ಯುಯಲ್-ಫ್ಲ್ಯುಯೆಲ್ ಸಾಮರ್ಥ್ಯವನ್ನು ಹೊಂದಿದ್ದು, ಆಟೋ ಎಲ್‌ಪಿಜಿ ಮತ್ತು ಪೆಟ್ರೋಲ್ ಎರಡರಲ್ಲೂ ಚಲಿಸಬಲ್ಲವು. ಪ್ರಸ್ತುತ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು, ಚಾಲಕರು ತಾತ್ಕಾಲಿಕವಾಗಿ ಪೆಟ್ರೋಲ್ ಬಳಸುವಂತೆ ಐಒಸಿಎಲ್ ಹೇಳಿದೆ.

ಗ್ಯಾಸ್ ಶುಲ್ಕ ವಿಧಿಸುವ ಹೋಟೆಲ್‌ಗಳ ವಿರುದ್ಧ ಕಠಿಣ ಕ್ರಮ: ಕೇಂದ್ರ ಸರ್ಕಾರದಿಂದ ಎಚ್ಚರಿಕೆ, ಕಂಪ್ಲೇಂಟ್‌ ಮಾಡುವ ವಿಧಾನ ಇಲ್ಲಿದೆ

ಮುಂದುವರಿದ ಆಟೋಗಳ ಪರದಾಟ

ಆಟೋ ಗ್ಯಾಸ್‌ಗಾಗಿ ನಗರದಲ್ಲಿ ಭಾನುವಾರವೂ ಪರದಾಟ ಮುಂದುವರಿದಿತ್ತು. ಬಸವೇಶ್ವರ ನಗರ, ಶೇಷಾದ್ರಿಪುರ, ಮೈಸೂರು ರಸ್ತೆ, ಕೆಂಗೇರಿ ಸೇರಿದಂತೆ ನಗರದ ಬಹುತೇಕ ಕಡೆ ಗ್ಯಾಸ್ ಲಭ್ಯವಿದ್ದ ಬಂಕ್‌ಗಳ ಎದುರು ನೂರಾರು ಆಟೋಗಳು, ಸಿಎನ್‌ಜಿ ಚಾಲಿತ ಕಾರುಗಳು ಸರತಿ ಸಾಲಿನಲ್ಲಿ ನಿಂತಿದ್ದವು. ಕೆಲವು ಬಂಕ್‌ ಗಳಲ್ಲಿ ಗ್ಯಾಸ್ ಸಿಗುತ್ತದೆ ಎಂಬ ನಿರೀಕ್ಷೆಯೊಂದಿಗೆ ಚಾಲಕರು ಕಾಯುತ್ತಾ ನಿಂತಿದ್ದರು. ಅನೇಕ ಬಂಕ್‌ಗಳಲ್ಲಿ ನೋ ಸ್ಟಾಕ್ ಫಲಕಗಳು ನೇತಾಡುತ್ತಿದ್ದವು.