ರಾಜ್ಯಕ್ಕೆ ಕೇಂದ್ರದಿಂದ ಬಂಪರ್ ಕೊಡುಗೆ; ಕರ್ನಾಟಕಕ್ಕೆ ಮತ್ತೊಂದು ಹೈ ಸ್ಪೀಡ್ ರೈಲು ಕಾರಿಡಾರ್ ಸಾಧ್ಯತೆ
Pralhad Joshi: ಬೆಂಗಳೂರು ಮತ್ತು ಪುಣೆ ನಡುವೆ ಹೈ ಸ್ಪೀಡ್ ರೈಲು ಕಾರಿಡಾರ್ ನಿರ್ಮಾಣಕ್ಕಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಈ ಬಗ್ಗೆ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಪ್ರಲ್ಹಾದ್ ಜೋಶಿ. -
ನವದೆಹಲಿ, ಫೆ. 6: ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ದೇಶದಲ್ಲಿ ಒಟ್ಟು ಏಳು ಹೈ ಸ್ಪೀಡ್ ರೈಲು ಕಾರಿಡಾರ್ ನಿರ್ಮಿಸುವುದಾಗಿ ಘೋಷಿಸಲಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರದಿಂದ ಇದೀಗ ಕರ್ನಾಟಕಕ್ಕೆ ಮತ್ತೊಂದು ಹೈ ಸ್ಪೀಡ್ ರೈಲು ಕಾರಿಡಾರ್ ಕೊಡುಗೆಯ ಶುಭ ಸೂಚನೆ ಸಿಕ್ಕಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರ ಒತ್ತಾಸೆ ಮೇರೆಗೆ ಬೆಂಗಳೂರು ಮತ್ತು ಪುಣೆ ನಡುವೆ ಮತ್ತೊಂದು ಹೈ ಸ್ಪೀಡ್ ರೈಲು ಕಾರಿಡಾರ್‌ಗೆ ಚಿಂತನೆ ನಡೆದಿದ್ದು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಬೆಂಗಳೂರು ಮತ್ತು ಪುಣೆ ನಡುವೆ ಹೈ ಸ್ಪೀಡ್ ರೈಲು ಕಾರಿಡಾರ್ ನಿರ್ಮಾಣಕ್ಕಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಇದಕ್ಕೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಜೋಶಿ ತಿಳಿಸಿದ್ದಾರೆ.
ಬೆಂಗಳೂರು-ಪುಣೆ ಮಧ್ಯೆ ಹೈ ಸ್ಪೀಡ್ ರೈಲು ಕಾರಿಡಾರ್ ನಿರ್ಮಾಣವಾದಲ್ಲಿ ಕರ್ನಾಟಕದ ಬಹುತೇಕ ಪ್ರದೇಶದ ಒಟ್ಟಾರೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಸಚಿವ ಪ್ರಲ್ಹಾದ್ ಜೋಶಿ ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಆಲಮಟ್ಟಿ-ಕುಷ್ಟಗಿ ನೂತನ ರೈಲು ಮಾರ್ಗಕ್ಕೆ ಶೀಘ್ರ ಡಿಪಿಆರ್: ಪ್ರಲ್ಹಾದ್ ಜೋಶಿ
ಈ ರೈಲು ಕಾರಿಡಾರ್ ನಿರ್ಮಾಣದಿಂದ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಪ್ರಯೋಜನ ಆಗಲಿದೆ. ರಾಜ್ಯದ ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ.
ಅಲ್ಲದೇ ಪುಣೆಯಿಂದ ಕರ್ನಾಟಕದ ಆರೇಳು ಜಿಲ್ಲೆಗಳಿಗೆ ತ್ವರಿತ ಪ್ರಯಾಣ, ಸಂಪರ್ಕ ಸಾಧ್ಯವಾಗಲಿದೆ. ಹಾಗಾಗಿ ಇದೊಂದು ಹೊಸ ಹೈ ಸ್ಪೀಡ್ ರೈಲು ಕಾರಿಡಾರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸಚಿವ ಪ್ರಲ್ಹಾದ್ ಜೋಶಿ ಒತ್ತಾಯಿಸಿದ್ದಾರೆ. ಜೋಶಿ ಅವರ ಮನವಿಗೆ ರೈಲ್ವೆ ಸಚಿವರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಭರವಸೆ ನೀಡಿದ್ದಾರೆ.