Belagavi News: ಅಣಬೆ ತಿನ್ನೋ ಮುನ್ನ ಎಚ್ಚರ; ಮಶ್ರೂಮ್ ಸೇವಿಸಿ ಒಂದೇ ಕುಟುಂಬದ 9 ಮಂದಿ ಅಸ್ವಸ್ಥ!
ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಬೆಳೆಯುವ ಅಣಬೆಗಳ ಬಗ್ಗೆ ಜಾಗ್ರತೆ ಇರಬೇಕಾಗುತ್ತದೆ. ಹೊಲಗಳಲ್ಲಿ ಬೆಳೆಯುವ ಅಣಬೆಗಳ ಮೇಲೆ ಕ್ರಿಮಿನಾಶಕಗಳು ಬಿದ್ದಿರುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು ಕೆಲವು ಜಾತಿಯ ಅಣಬೆಗಳು ನೈಸರ್ಗಿಕವಾಗಿಯೇ ವಿಷಕಾರಿಯಾಗಿರುತ್ತವೆ. ಹೀಗಾಗಿ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.
-
ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಅಣಬೆ ಸೇವಿಸಿ ಒಂದೇ ಕುಟುಂಬದ 9 ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ. ಉಮರಾಣಿ ಗ್ರಾಮದ ಜಿದ್ದಿಮನಿ ಹಾಗೂ ಕೋಳಿ ಕುಟುಂಬದ ಸದಸ್ಯರು, ಹೊಲದಲ್ಲಿ ಸಿಕ್ಕ ಅಣಬೆಗಳನ್ನು (mushroom) ಸೇವಿಸಿದ ಹಿನ್ನೆಲೆಯಲ್ಲಿ ಎಲ್ಲರಿಗೂ ವಾಂತಿ ಹಾಗೂ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ.
ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುವಾಗ, ಅಲ್ಲಿ ಬೆಳೆದಿದ್ದ ಅಣಬೆಗಳನ್ನು ಕಿತ್ತು ತರಲಾಗಿತ್ತು. ಆದರೆ, ಊಟ ಮಾಡಿದ ಕೆಲವೇ ಹೊತ್ತಿನಲ್ಲಿ ಎಲ್ಲರೂ ಅಸ್ವಸ್ಥಗೊಂಡಿದ್ದಾರೆ. ವರದಿಗಳ ಪ್ರಕಾರ, ಅಣಬೆ ಬೆಳೆದಿದ್ದ ಹೊಲಕ್ಕೆ ಅದರ ಮಾಲೀಕರು ಕ್ರಿಮಿನಾಶಕ ಔಷಧಿಯನ್ನು ಸಿಂಪಡಿಸಿದ್ದರು. ಔಷಧಿ ಹೊಡೆದ ವಿಷಯ ತಿಳಿಯದ ಕುಟುಂಬದ ಸದಸ್ಯರು ಆ ಅಣಬೆಯನ್ನು ಕಿತ್ತು ತಂದು ಸೇವಿಸಿದ್ದಾರೆ. ಕೀಟನಾಶಕದ ಅಂಶ ಅಣಬೆಯೊಳಗೆ ಸೇರಿದ ಪರಿಣಾಮ ಅದು ವಿಷವಾಗಿ ಮಾರ್ಪಟ್ಟು ಇಡೀ ಕುಟುಂಬ ಅಸ್ವಸ್ಥಗೊಳ್ಳಲು ಕಾರಣವಾಗಿದೆ.
Vijayapura Car Accident: ವಿಜಯಪುರದಲ್ಲಿ ಭೀಕರ ಅಪಘಾತ; ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ತಾಯಿ, ಇಬ್ಬರು ಮಕ್ಕಳ ಸಾವು
ತೀವ್ರ ಅಸ್ವಸ್ಥಗೊಂಡ 9 ಜನರನ್ನು ತಕ್ಷಣವೇ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥರಲ್ಲಿ ಒಬ್ಬರು ಗರ್ಭಿಣಿ ಮಹಿಳೆಯಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಜೋಕಾಲಿಯಲ್ಲಿ ಆಟವಾಡುತ್ತಿದ್ದಾಗ ದುರಂತ; 14 ವರ್ಷದ ವಿದ್ಯಾರ್ಥಿನಿ ಸಾವು
ಚಿಕ್ಕೋಡಿ: ನಿಪ್ಪಾಣಿ ತಾಲೂಕಿನ ಕೊಡನಿ ಗ್ರಾಮದಲ್ಲಿ ಸೀರೆಯ ಜೋಕಾಲಿ ಆಟವಾಡುತ್ತಿದ್ದ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಆಕಸ್ಮಿಕವಾಗಿ ಸೀರೆ ಕುತ್ತಿಗೆಗೆ ಬಿಗಿದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಮೃತ ಬಾಲಕಿಯನ್ನು ಶುಭ್ರಾ ಯುವರಾಜ್ ರಾವುತ್ ಪಾಟೀಲ್ (14 ವರ್ಷ) ಎಂದು ಗುರುತಿಸಲಾಗಿದೆ. ಈ ದುರ್ಘಟನೆಯಿಂದಾಗಿ ಇಡೀ ಕೊಡನಿ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.
ಸ್ಥಳಕ್ಕೆ ನಿಪ್ಪಾಣಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿರಶೀಲನೆ ನಡೆಸಿದ್ದು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.