Pourakarmikas: ಎಲ್ಲಾ ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸುವ ಕಾರ್ಯ ನಡೆಯುತ್ತಿದೆ: ಸಿಎಂ ಸಿದ್ದರಾಮಯ್ಯ
Pourakarmikas: ಈಗಾಗಲೇ ಗುತ್ತಿಗೆ ನೌಕರರನ್ನು ಕನಿಷ್ಠ ವೇತನ ಅಡಿಯಲ್ಲಿ ತರಲಾಗಿದೆ. ಇದನ್ನು ಮಾಡಿದ್ದು ನಮ್ಮ ಸರ್ಕಾರವೇ, ಈಗ ಪೌರಕಾರ್ಮಿಕರ ಸೇವೆಯನ್ನು ಕೂಡ ಕಾಯಂ ಮಾಡುವುದೂ ನಮ್ಮ ಕಾಂಗ್ರೆಸ್ ಸರ್ಕಾರವೇ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.


ಬೆಳಗಾವಿ: ಎಲ್ಲಾ ಪೌರ ಕಾರ್ಮಿಕರ (Pourakarmikas) ಸೇವೆಯನ್ನು ಕಾಯಂಗೊಳಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಗುತ್ತಿಗೆ ನೌಕರರನ್ನು ಕನಿಷ್ಠ ವೇತನ ಅಡಿಯಲ್ಲಿ ತರಲಾಗಿದೆ. ಇದನ್ನು ಮಾಡಿದ್ದು ನಮ್ಮ ಸರ್ಕಾರವೇ, ಈಗ ಕಾಯಂ ಮಾಡುವುದೂ ಕೂಡ ನಮ್ಮ ಸರ್ಕಾರವೇ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಸ್ಮಾರ್ಟ್ ಸಿಟಿ ಅನುದಾನದ ಅಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬೆಳಗಾವಿಯ ಟಿಳಕವಾಡಿಯಲ್ಲಿ ಆಧುನಿಕ ಸೌಲಭ್ಯಗಳುಳ್ಳ ಬಹುಮಹಡಿ ಕಲಾ ಮಂದಿರವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಸಿಎಂ ಮಾತನಾಡಿದರು.
ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ 150 ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಇದರಲ್ಲಿ 102 ಪೂರ್ಣಗೊಂಡಿವೆ. ಉಳಿದವು ಸದ್ಯದಲ್ಲೇ ಪೂರ್ಣಗೊಳ್ಳಲಿವೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 6928 ಕೋಟಿ ಮೊತ್ತದ ಕೆಲಸಗಳು ನಡೆಯುತ್ತಿವೆ ಎಂದರು.
ಬೆಳಗಾವಿಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ನಿರಂತರವಾಗಿ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುತ್ತಿದೆ ಎಂದರು.
ಈ ಸುದ್ದಿಯನ್ನು ಓದಿ | Caste Census: ಜಾತಿ ಸಮೀಕ್ಷೆ ಅವೈಜ್ಞಾನಿಕ; ವರದಿ ತಿರಸ್ಕಾರಕ್ಕೆ ಹವ್ಯಕ ಮಹಾಸಭಾ ಆಗ್ರಹ

ಜಾತಿ ಗಣತಿ ಅವೈಜ್ಞಾನಿಕ ಎಂದ ಬಿಜೆಪಿ ವಿರುದ್ಧ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ

ಬೆಳಗಾವಿ: ಜಾತಿ ಗಣತಿ ವರದಿ ಅವೈಜ್ಞಾನಿಕ ಎಂದಿರುವ ಬಿಜೆಪಿ ವಿರುದ್ಧ ಕಿಡಿಕಾರಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಬಿಜೆಪಿ ನಾಯಕರು ರಾಜ್ಯದ ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲೇ. ಜಾತಿ ಗಣತಿ ಅಧ್ಯಯನ ಮಾಡಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲೇ. ಆಗಲೇ ಬಿಜೆಪಿಯವರೇ ಜಾತಿಗಣತಿಯನ್ನು ತಿರಸ್ಕರಿಸಬಹುದಿತ್ತು. ಆದರೀಗ ಬಿಜೆಪಿ ನಾಯಕರು ಜಾತಿಗಣತಿಯನ್ನು ಅವೈಜ್ಞಾನಿಕ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಕಿಡಿಕಾರಿದರು.
ಪೂರ್ಣ ಚರ್ಚೆಯ ಬಳಿಕವಷ್ಟೇ ಪ್ರತಿಕ್ರಿಯಿಸುವೆ
ಜಾತಿ ಗಣತಿ ವರದಿ ಇನ್ನೂ ಚರ್ಚೆಯ ಹಂತದಲ್ಲಿದೆ. ಮೊನ್ನೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಬಗ್ಗೆ ಚರ್ಚೆಯಷ್ಟೇ ಆಗಿದೆ. ಇದರ ಬಗ್ಗೆ ಇನ್ನಷ್ಟು ಚರ್ಚೆ ಆಗಬೇಕಿದೆ. ಸಂಪೂರ್ಣವಾಗಿ ಕ್ಯಾಬಿನೆಟ್ ನಲ್ಲಿ ಚರ್ಚೆ ಆದ ಬಳಿಕವಷ್ಟೇ ಪ್ರತಿಕ್ರಿಯಿಸುವುದಾಗಿ ಹೇಳಿದರು.
ಜಾತಿಗಣತಿ ವರದಿ ಬಗ್ಗೆ ಇರುವ ಉಹಾಪೋಹಗಳಿಗೆ ಎಡೆಮಾಡಿಕೊಡುವುದು ಬೇಡ. ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಎಲ್ಲರಿಗೂ ನ್ಯಾಯ ಸಿಗಬೇಕು ಎಂಬುದೇ ನಮ್ಮ ಉದ್ದೇಶ. ಜಾತಿಗಣತಿಗೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯ ವೇಳೆ ಸಚಿವರ ನಡುವೆ ಗಲಾಟೆ, ವಾಗ್ವಾದ ನಡೆದಿಲ್ಲ ಸಚಿವರು ಸ್ಪಷ್ಟಪಡಿಸಿದರು.
ತನಿಖೆ ಬಳಿಕ ಸತ್ಯಾಂಶ ಬಯಲು
ಕಳೆದ ಜನವರಿ 14 ರಂದು ಕಾರು ಅಪಘಾತಕ್ಕೆ ಕಾರಣವಾಗಿದ್ದ ಟ್ರಕ್ ಚಾಲಕನನ್ನು ಪೊಲೀಸರು ಬಂಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅಪಘಾತದ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ನಡೆದ ಬಳಿಕವಷ್ಟೇ ಸತ್ಯಾಸತ್ಯತೆ ತಿಳಿಯಲಿದೆ ಎಂದರು.
ನಾನು ಕೂಡ ನಿದ್ದೆಗಣ್ಣಿನಲ್ಲಿದ್ದೆ, ನನಗೆ ಯಾವ ರೀತಿಯ ಅನುಮಾನವಿಲ್ಲ. ಚಾಲಕನನ್ನು ಹಿಡಿಯಲು ಪೊಲೀಸರು ಸಾಕಷ್ಟು ಶ್ರಮ ಹಾಕಿದ್ದಾರೆ. ಚಾಲಕ ಮಹಾರಾಷ್ಟ್ರದ ಪುಣೆ ಮೂಲದವರು ಎಂದು ತಿಳಿದು ಬಂದಿದೆ. ಬೆಳಗಾವಿ ಪೊಲೀಸರು ಬಹಳ ಚುರುಕಾಗಿ ತನಿಖೆ ನಡೆಸಿ ಚಾಲಕನನ್ನು ಹಿಡಿದಿದ್ದಾರೆ. ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಸಚಿವರು ಹೇಳಿದರು.