DK Shivakumar: ಕಬ್ಬನ್ ಪಾರ್ಕ್ ಅಭಿವೃದ್ಧಿಗೆ 5 ಕೋಟಿ ಅನುದಾನ: ಡಿ.ಕೆ. ಶಿವಕುಮಾರ್ ಘೋಷಣೆ
Cubbon Park: ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಬಿಡಿಎಯಿಂದ 5 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು. ಭಾನುವಾರ ಕಬ್ಬನ್ ಪಾರ್ಕ್‌ನಲ್ಲಿ ನಡೆದ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
-
Ramesh B
Oct 26, 2025 5:20 PM
ಬೆಂಗಳೂರು, ಅ. 26: "ಕಬ್ಬನ್ ಪಾರ್ಕ್ (Cubbon Park) ಮತ್ತು ಲಾಲ್ ಬಾಗ್ (Lal Bagh Park) ಕರ್ನಾಟಕ ಹಾಗೂ ದೇಶದ ಹೆಗ್ಗುರುತುಗಳು. ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಬಿಡಿಎಯಿಂದ 5 ಕೋಟಿ ರೂಪಾಯಿ ಅನುದಾನ ನೀಡಲಾಗುವುದು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ಕಬ್ಬನ್ ಪಾರ್ಕ್‌ನಲ್ಲಿ ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ಭಾನುವಾರ ನಡೆದ ನಾಗರಿಕರ ಜತೆ ಸಂವಾದದಲ್ಲಿ ಅವರು ಅಹವಾಲು ಸ್ವೀಕರಿಸಿ ಮಾತನಾಡಿದರು.
"ಕಬ್ಬನ್ ಉದ್ಯಾನವನದ ಉನ್ನತೀಕರಣಕ್ಕೆ ಹಣ ಬಿಡುಗಡೆ ಮಾಡುವಂತೆ ನಾಗರಿಕರು ಮನವಿ ಮಾಡಿದ್ದಾರೆ. ಅವರ ಮನವಿಯಂತೆ ಮಿಕ್ಕ ಅನುದಾನವನ್ನು ತೋಟಗಾರಿಕೆ ಇಲಾಖೆಯಿಂದ ನೀಡುವಂತೆ ವ್ಯವಸ್ಥೆ ಮಾಡಲಾಗುವುದು. ಈ ಉದ್ಯಾನದ ಆವರಣದಲ್ಲಿ ಯಾವುದೇ ರೀತಿಯ ನಿರ್ಮಾಣ ಕೆಲಸಗಳಿಗೆ ಸರ್ಕಾರ ಆಸ್ಪದ ನೀಡುವುದಿಲ್ಲ. ಇವುಗಳ ರಕ್ಷಣೆಗೆ ಏನು ಕೆಲಸ ಮಾಡಬೇಕು ಅದನ್ನು ಮಾಡುತ್ತೇವೆ" ಎಂದರು.
"ಉದ್ಯಾನದಲ್ಲಿ ಸರ್ಕಾರದ ವತಿಯಿಂದಲೇ ಒಂದಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಆಲೋಚನೆ ಮಾಡಲಾಗುವುದು. ನಾನು ನೋಡಿದಂತೆ ಕಬ್ಬನ್ ಪಾರ್ಕ್ ಅನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಲಾಗಿದೆ. ನಾನು ಮದುವೆಯಾದ ಹೊಸತರಲ್ಲಿ ನನ್ನ ಹೆಂಡತಿಯನ್ನ ಕಬ್ಬನ್ ಪಾರ್ಕ್ ತೋರಿಸಲು ಕರೆದುಕೊಂಡು ಬಂದಿದ್ದೆ. ವಿದ್ಯಾರ್ಥಿ ನಾಯಕನಾಗಿದ್ದಾಗಲೂ ಇಲ್ಲಿಗೆ ಬಂದು ಸಮಯ ಕಳೆಯುತ್ತಿದ್ದೆವು" ಎಂದು ಹೇಳಿದರು.
"ಅರಣ್ಯ ಇಲಾಖೆಯ ಜತೆ ಚರ್ಚೆ ಮಾಡಿ ನಗರದಾದ್ಯಂತ ಇರುವ ಅರಣ್ಯ ಇಲಾಖೆ ಜಾಗಗಳಲ್ಲಿ ಕಬ್ಬನ್ ಪಾರ್ಕ್ ಹಾಗೂ ಲಾಲ್ ಬಾಗ್ ಮಾದರಿಯಲ್ಲಿ ಉದ್ಯಾನಗಳ ಅಭಿವೃದ್ಧಿ ಮಾಡಿ, 'ಟ್ರೀ ಪಾರ್ಕ್' ಸ್ಥಾಪಿಸುವ ನಿರ್ಧಾರ ಮಾಡಲಾಗಿದೆ. ಇಲ್ಲಿ ಯಾವುದೇ ಮರಗಳನ್ನು ಕಡಿಯುವುದಿಲ್ಲ. ಇದರಿಂದ ಕಾಡಿನ ಸಂರಕ್ಷಣೆಯೂ ಆದಂತೆ ಆಗುತ್ತದೆ. ಲಾಲ್ ಬಾಗ್ ಅಭಿವೃದ್ಧಿಗೆ ಈಗಾಗಲೇ 10 ಕೋಟಿ ರೂಪಾಯಿ ಘೋಷಣೆ ಮಾಡಿದ್ದೇನೆ" ಎಂದರು.
ಈ ಸುದ್ದಿಯನ್ನೂ ಓದಿ: DK Shivakumar: ಟನಲ್ ರಸ್ತೆ ಯೋಜನೆ ಮುಂದುವರಿಸಿ; ಡಿಸಿಎಂಗೆ ಸಾರ್ವಜನಿಕರ ಬೆಂಬಲ
ನಗರದ ಒಳಗೆ ಹೈಕೋರ್ಟ್ ಸ್ಥಳಾಂತರಕ್ಕೆ ಸ್ಥಳ ಪರಿಶೀಲನೆ
"ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ಕಾರ್ಯಕ್ರಮಕ್ಕೆ ಹೋದ ಸಂದರ್ಭದಲ್ಲಿ ಹೈಕೋರ್ಟ್ ಸ್ಥಳಾಂತರಕ್ಕೆ 15- 20 ಎಕರೆ ಜಾಗ ನೀಡಿ ಎಂದು ವಕೀಲರು, ಮುಖ್ಯ ನ್ಯಾಯಮೂರ್ತಿಗಳು ಮನವಿ ಮಾಡಿದ್ದರು. ಸರ್ಕಾರದ ಮುಂದೆಯೂ ಇದರ ಬಗ್ಗೆ ಚರ್ಚೆ ನಡೆಸಲಾಗುವುದು. ನ್ಯಾಯಾಲಯದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹತ್ತಿರದಲ್ಲಿ ಎಲ್ಲಿ ಸ್ಥಳಾವಕಾಶ ದೊರೆಯಬಹುದು ಎಂದು ಪರಿಶೀಲನೆ ಮಾಡಲಾಗುವುದು. ಹಳೆಯ ಐತಿಹಾಸಿಕ ಕಟ್ಟಡವಾದ ಕಾರಣಕ್ಕೆ ಅದನ್ನು ಏನೂ ಮಾಡಲು ಸಾಧ್ಯವಿಲ್ಲ. ಆದರೆ ಸ್ಥಳವಾಕಾಶ ಚಿಕ್ಕದಿದೆ" ಎಂದರು.
ʼʼಹೈಕೋರ್ಟ್ ಅನ್ನು ನಗರದ ಹೊರಗೆ ಸ್ಥಾಪಿಸಲು ಸಾಧ್ಯವಿಲ್ಲ. ಅದಕ್ಕೆ ಸೂಕ್ತ ಸ್ಥಳಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಕಕ್ಷಿದಾರರು, ಲಾಯರ್ ಗಳಿಗೆ ಅನುಕೂಲವಾಗುವಂತಹ ಸ್ಥಳ ನೋಡಬೇಕಿದೆ. ಒಂದಷ್ಟು ಜನ ವಕೀಲರು ಭೇಟಿ ಮಾಡಿ ರೇಸ್ ಕೋರ್ಸ್ ಜಾಗ ಬಳಸಿಕೊಳ್ಳುವ ಬಗ್ಗೆ ತಿಳಿಸಿದರು. ಒಂದಷ್ಟು ಕಾನೂನಾತ್ಮಕ ತೊಡಕುಗಳು ಇರುವ ಕಾರಣಕ್ಕೆ ಆನಂತರ ಅದರ ಬಗ್ಗೆ ಆಲೋಚನೆ ಮಾಡೋಣ ಎಂದು ತಿಳಿಸಿದ್ದೇನೆ" ಎಂಬುದಾಗಿ ತಿಳಿಸಿದರು.

"ಈ ಮೊದಲು ಎಲ್ಲ ಹೋರಾಟಗಳು, ಪ್ರತಿಭಟನೆಗಳು ಕಬ್ಬನ್ ಪಾರ್ಕ್ ಅಲ್ಲಿಯೇ ನಡೆಯುತ್ತಿದ್ದವು. ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಇದನ್ನು ಸ್ವಾತಂತ್ರ್ಯ ಉದ್ಯಾನಕ್ಕೆ ಸ್ಥಳಾಂತರ ಮಾಡಲಾಯಿತು. ನಗರದ ಶ್ವಾಸಕೋಶದಂತೆ ಇರುವ ಈ ಉದ್ಯಾನ ಉಳಿಸಿಕೊಳ್ಳಲು ಏನು ಮಾಡಬೇಕೊ ಅದನ್ನು ನಾನು ಮಾಡುತ್ತೇನೆ. ಎಷ್ಟು ಗಂಟೆಗೆ ಯಾರು ಒಳ ಬಂದರು ಹೊರ ಹೋದರು ಎಂಬುದನ್ನು ದಾಖಲು ಮಾಡಲು ಕಬ್ಬನ್ ಪಾರ್ಕ್ ನಲ್ಲಿ ಹೈಟೆಕ್ ಕ್ಯಾಮರಾಗಳನ್ನು ಅಳವಡಿಸಬೇಕು. ಆಯುಕ್ತರ ಕಚೇರಿಯಲ್ಲಿಯೂ ಸಹ ಇದರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ" ಎಂದರು.
"ಬೆಂಗಳೂರು ನಗರದ ಉತ್ತಮ ಆಡಳಿತಕ್ಕಾಗಿ 5 ಪಾಲಿಕೆಗಳನ್ನು ರಚಿಸಲಾಗಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರದ ಎಲ್ಲ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಈ ಮೂಲಕ ಎಲ್ಲರ ಆಸ್ತಿಗಳನ್ನು ಭದ್ರಗೊಳಿಸಲಾಗುತ್ತಿದೆ. ಬಿ ಖಾತೆಯಿಂದ ಎ ಖಾತೆ ಬದಲಾವಣೆ ವಿಚಾರವಾಗಿ ಸಾವಿರಾರು ಜನರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೂ ಒಂದಷ್ಟು ಜನ ಟೀಕೆ ಮಾಡುತ್ತಿದ್ದಾರೆ. ಇದರಿಂದ ಅನೇಕರಿಗೆ ಉಪಯೋಗವಾಗಲಿದೆ. ಇದೊಂದು ಕ್ರಾಂತಿಕಾರಕ ಆಲೋಚನೆ" ಎಂದು ಬಣ್ಣಿಸಿದರು.

ಅಧಿಕಾರಿಗಳ ಜತೆ ಚರ್ಚೆ
"ಬೀದಿ ದೀಪ ವ್ಯವಸ್ಥೆ, ಪಾದಚಾರಿ ಮೇಲ್ಸೆತುವೆ ವ್ಯವಸ್ಥೆ ಹಾಗೂ ಕಾಚೇನಹಳ್ಳಿ ರಸ್ತೆ, ಹಾಳಾದ ಮರಗಳು ಹಾಗೂ ಕೊಂಬೆ ತೆರವು, ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೀದಿ ದೀಪ ಇಲ್ಲದಿರುವ ಬಗ್ಗೆ ಗಮನ ಸೆಳೆಯಲಾಗಿದೆ. ಬೀದಿ ನಾಯಿಗಳ ಸಮಸ್ಯೆ ಬಗ್ಗೆ ವಿಶೇಷವಾಗಿ ಗಮನ ಹರಿಸಬೇಕು ಎಂದು ಜನರು ಮನವಿ ಸಲ್ಲಿಸಿದ್ದಾರೆ. ಖಾಸಗಿ ಬಸ್ ಗಳ ಹಾವಳಿ, ಇಂದಿರಾಗಾಂಧಿ ಮಕ್ಕಳ ಗ್ರಂಥಾಲಯವನ್ನು ಉನ್ನತೀಕರಣ ಮಾಡಲು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುವುದು. ಆಯುರ್ವೇದ ಉದ್ಯಾನವನ್ನ ಸ್ಥಾಪಿಸಬೇಕು ಎಂದು ಮನವಿ ಮಾಡಲಾಗಿದೆ. ಈ ಎಲ್ಲ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಕಾಲಮಿತಿಯೊಳಗೆ ಬಗೆಹರಿಸಲಾಗುವುದು" ಎಂದರು.
"ಚಿಕ್ಕಪೇಟೆ ಸೇರಿದಂತೆ ಪ್ರಮುಖ ಪೇಟೆ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಬದಲಾವಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಇದರ ಸಾಧಕ ಬಾಧಕಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ತಿಳಿಸಲಾಗುವುದು. ರಸ್ತೆ ನಿಯಮ ಉಲ್ಲಂಘನೆ ಮಾಡಿದವರ ದಂಡದ ಪ್ರಮಾಣ ಹೆಚ್ಚಿಸಬೇಕು. ಹೈಕೋರ್ಟ್ ಸುತ್ತಲು ಪಾರ್ಕಿಂಗ್ ಹಾಗೂ ಕಸದ ಸಮಸ್ಯೆ ಹೆಚ್ಚಿದೆ ಎಂದು ಗಮನ ಸೆಳೆಯಲಾಗಿದೆ. ಆದಷ್ಟು ಬೇಗ ಇದನ್ನು ಬಗೆಹರಿಸಲಾಗುವುದು. ಈ ಎಲ್ಲ ಸಮಸ್ಯೆಗಳ ಬಗ್ಗೆ ಸ್ಥಳೀಯ ಶಾಸಕರ ಜತೆ ಚರ್ಚೆ ನಡೆಸಿ ಯಾವ ಅನುದಾನದ ಮೂಲಕ ಇವುಗಳನ್ನು ಬಗೆಹರಿಸಬಹುದು ಎಂದು ಚರ್ಚೆ ನಡೆಸಲಾಗುವುದು" ಎಂದು ಹೇಳಿದರು.
ಅರ್ಜಿ ಸ್ವೀಕಾರ
"ಜೆಪಿ ಪಾರ್ಕ್, ಕೋರಮಂಗಲ, ಕೆ.ಆರ್. ಪುರಂ, ಕೆಂಗೇರಿ ಭಾಗದ ಪಾರ್ಕ್‌ಗಳಲ್ಲಿ ಸಾವಿರಾರು ಜನರ ಸಮಸ್ಯೆಗಳನ್ನು ಈಗಾಗಲೇ ಆಲಿಸಿದ್ದೇನೆ. ಲಾಲ್ ಬಾಗ್‌ನಲ್ಲಿ 50 ಮನವಿಗಳು, ಜೆಪಿ ಪಾರ್ಕ್‌ನಲ್ಲಿ 68 ಮನವಿಗಳು, ಕೆ.ಆರ್.ಪುರಂನಲ್ಲಿ 99 ಮನವಿಗಳು, ಕೋರಮಂಗಲ 42, ಕೆಂಗೇರಿಯಲ್ಲಿ 85, ಕಬ್ಬನ್ ಪಾರ್ಕ್‌ನಲ್ಲಿ 35 ಮಂದಿ ಅರ್ಜಿ ನೀಡಿದ್ದಾರೆ. ನಗರದಾದ್ಯಂತ ಹೆಚ್ಚು, ಹೆಚ್ಚು ಜನರು ಭಾಗವಹಿಸಬೇಕು ಎಂಬುದು ನಮ್ಮ ಅಭಿಲಾಷೆ. ಈ ಹಿಂದೆ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮದ ಮೂಲಕ ಸಾವಿರಾರು ಸಮಸ್ಯೆಗಳನ್ನು ಬಗೆಹರಿಸಲಾಗಿತ್ತು. ಹೆಚ್ಚು ಜನರು ಭಾಗವಹಿಸಿದಷ್ಟು ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬಹುದು" ಎಂದರು.
"ಸರ್ಕಾರ ಏನೇ ತಪ್ಪು ಮಾಡಿದ್ದರು ತಿದ್ದಿಕೊಳ್ಳಲು ನಾವು ತಯಾರಿದ್ದೇವೆ. ಜನರು ಅದನ್ನು ತಿಳಿಸುವ ಕೆಲಸ ಮಾಡಬೇಕು. ಶಾಸಕರಾದ ಬೈರತಿ ಬಸವರಾಜು, ರಿಜ್ವಾನ್, ಹ್ಯಾರಿಸ್, ಎಸ್.ಟಿ.ಸೋಮಶೇಖರ್ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದಾರೆ" ಎಂದು ತಿಳಿಸಿದರು.
ನಡಿಗೆ ಕಾರ್ಯಕ್ರಮದ ನಂತರ ನಡೆದ ಮನವಿ ಸಲ್ಲಿಕೆ ಕಾರ್ಯಕ್ರಮದಲ್ಲಿ ನಾಗರಿಕರು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಈ ವೇಳೆ ಮಾತನಾಡಿದ ನಾಗರಿಕರೊಬ್ಬರು ಹಣ ಪಡೆದು ಪಕ್ಷದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತಿದೆ. ಇದರಿಂದ ಉತ್ತಮ ಅಭ್ಯರ್ಥಿಗಳ ಆಯ್ಕೆ ಕಷ್ಟವಾಗಿದೆ ಎಂದಾಗ ಉತ್ತರಿಸಿದ ಡಿಸಿಎಂ, "ಯಾವ ಪಕ್ಷದವರು ಸಹ ಹಣ ಪಡೆದು ಟಿಕೆಟ್ ನೀಡುವುದನ್ನು ನಾನು ನೋಡಿಲ್ಲ. ಅರ್ಜಿ ಸಲ್ಲಿಕೆಗೆ ಹಣ ಇಂತಿಷ್ಟು ಹಣ ಪಡೆಯಲಾಗುವುದು. ಇದರ ಬಗ್ಗೆ ಮಾಹಿತಿ ಇದ್ದರೆ ಇಂದು ಸಂಜೆಯೇ ತನಿಖೆಗೆ ಆದೇಶ ನೀಡುತ್ತೇನೆ" ಎಂದರು.
"ಜಿಬಿಎ ಚುನಾವಣೆ ವೇಳೆ ಜನರಿಗೆ ಹೆಚ್ಚು ಸ್ಪಂದಿಸುವವರು ಅರ್ಜಿ ಸಲ್ಲಿಸಲಿ. ಅಂತಹವರಿಗೆ ಅವಕಾಶ ಕಲ್ಲಿಸಿಕೊಡಲಾಗುವುದು" ಎಂದರು. ಆಗ ನಾಗರಿಕರು ಕಳೆದ 10-15 ವರ್ಷಗಳಿಂದಲೂ ಒಬ್ಬರೇ ಪಾಲಿಕೆ ಸದಸ್ಯರಿದ್ದಾರೆ ಎಂದಾಗ, "ನಾನು 35 ವರ್ಷಗಳಿಂದ ಶಾಸಕನಿದ್ದೇನೆ" ಎಂದು ಹಾಸ್ಯ ಚಟಾಕಿ ಹಾರಿಸಿದರು.
ಈ ಸುದ್ದಿಯನ್ನೂ ಓದಿ: DK Shivakumar: ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಚರ್ಚೆ ಬೇಡ: ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ
ಬೆಸ್ಕಾಂನಿಂದ ಅಕ್ರಮ ಕಟ್ಟಡಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿ ಸಂಸ್ಥೆಗೆ ನಷ್ಟ ಉಂಟು ಮಾಡಲಾಗುತ್ತಿದೆ ಎನ್ನುವ ದೂರಿನ ಬಗ್ಗೆ ನಾಗರಿಕರು ಮನವಿ ಸಲ್ಲಿಸಿದರು. "ಕೂಡಲೇ ಇದರ ಬಗ್ಗೆ ಕ್ರಮ ವಹಿಸಲು ಸೂಚಿಸುವೆ" ಎಂದರು. "ದೇವನಹಳ್ಳಿ, ನೈಸ್ ರಸ್ತೆ ಸಂತ್ರಸ್ತ ರೈತರ ಪರವಾಗಿ ಡಿಸಿಎಂ ನಿಲ್ಲಬೇಕು" ಎಂದು ರೈತ ಮುಖಂಡರೊಬ್ಬರು ಮನವಿ ಮಾಡಿದರು.
ಕಬ್ಬನ್ ಪಾರ್ಕ್ ಉಳಿವಿಗೆ ಕ್ರಮ
"330 ಎಕರೆ ವಿಸ್ತೀರ್ಣದ ಕಬ್ಬನ್ ಪಾರ್ಕ್ ಈಗ 196 ಎಕರೆಗೆ ಕುಗ್ಗಿದೆ. ಇದನ್ನು ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ಪಾರ್ಕಿನ ಒಳಗೆ ಇರುವ ಎಲ್ಲ ಗುತ್ತಿಗೆ ಕಟ್ಟಡಗಳನ್ನು ತೆರವುಗೊಳಿಸಬೇಕು, ವಾಣಿಜ್ಯೀಕರಣ ಮಾಡಬೇಡಿʼʼ ಎಂದು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ನಾಗರಿಕರೊಬ್ಬರು ಮನವಿ ಸಲ್ಲಿಸಿದರು.