Kasturirangan Report: ಕಸ್ತೂರಿ ರಂಗನ್ ವರದಿ ಬಗ್ಗೆ ಎಲ್ಲಾ ಪಕ್ಷಗಳ ಒಗ್ಗಟ್ಟಿನ ಹೋರಾಟ ಅಗತ್ಯ: ಎಚ್.ಡಿ.ಕುಮಾರಸ್ವಾಮಿ
ಕಸ್ತೂರಿ ರಂಗನ್ ವರದಿಯ ಬಗ್ಗೆ ಚರ್ಚೆ ನಡೆಯುತ್ತಿರುವುದು ಸಂತೋಷದ ವಿಚಾರವೇ. ಆದರೆ ಈ ಸರಕಾರ ಅದೆಷ್ಟು ದೃಢವಾಗಿ ರೈತರ ಪರ ನಿಲ್ಲುತ್ತದೆ ಎಂಬುದನ್ನು ನಾವು ಗಮನಿಸಬೇಕಾಗಿದೆ. ರಾಜ್ಯ ಸರ್ಕಾರ ಜನಾಭಿಪ್ರಾಯಕ್ಕೆ ಅನುಗುಣವಾಗಿ ನಡೆಯಬೇಕಾಗುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
-
ಬೆಂಗಳೂರು, ಸೆಪ್ಟೆಂಬರ್ 19: ಕಸ್ತೂರಿ ರಂಗನ್ ವರದಿ (Kasturirangan Report) ವಿಚಾರದಲ್ಲಿ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ನಿಲುವು ಒಂದೇ ಆಗಿದೆ ಎಂದು ಹೇಳಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು, ಯಾವುದೇ ಕಾರಣಕ್ಕೂ ಈ ವರದಿಯನ್ನು ಅನುಷ್ಠಾನಕ್ಕೆ ತರಬಾರದು ಈ ವರದಿಯಿಂದ ರೈತರಿಗೆ ಧಕ್ಕೆ ಆಗಲಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಶನಿವಾರ ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ಸೋಮವಾರದಿಂದ ವಿಧಾನಮಂಡಲದ ವಿಶೇಷ ಅಧಿವೇಶನ ನಡೆಯುತ್ತಿದೆ. ಅಧಿವೇಶನದಲ್ಲಿ ಈ ಬಗ್ಗೆ ಏನು ಚರ್ಚೆಯಾಗುತ್ತದೆ ಎಂಬುದನ್ನು ಕಾದು ನೋಡೋಣ ಎಂದರು.
ಕಸ್ತೂರಿ ರಂಗನ್ ವರದಿಯ ಬಗ್ಗೆ ಚರ್ಚೆ ನಡೆಯುತ್ತಿರುವುದು ಸಂತೋಷದ ವಿಚಾರವೇ. ಆದರೆ ಈ ಸರಕಾರ ಅದೆಷ್ಟು ದೃಢವಾಗಿ ರೈತರ ಪರ ನಿಲ್ಲುತ್ತದೆ ಎಂಬುದನ್ನು ನಾವು ಗಮನಿಸಬೇಕಾಗಿದೆ ಎಂದು ಸಚಿವರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.
ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇವಂತಿಯೇ ವಿವಿಧ ಜಿಲ್ಲೆಗಳ ಜನರು ಮತ್ತು ಬಹುಮುಖ್ಯವಾಗಿ ರೈತರು ಈ ವರದಿಯನ್ನು ಕಠಿಣವಾಗಿ ವಿರೋಧ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಜನಾಭಿಪ್ರಾಯಕ್ಕೆ ಅನುಗುಣವಾಗಿ ನಡೆಯಬೇಕಾಗುತ್ತದೆ ಎಂದು ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.
ವಿಚಿತ್ರವೆಂದರೆ ತಕ್ಷಣವೇ ಈ ಬಗ್ಗೆ ಸ್ಪಂದಿಸುವುದನ್ನು ಬಿಟ್ಟು ಮುಖ್ಯಮಂತ್ರಿಯ ಬರಗಾಲ ಮತ್ತು ಕಸ್ತೂರಿ ರಂಗನ್ ವರದಿಗಳ ಬಗೆಯೇ ಹಲವು ದಿನಗಳಿಂದ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಟೀಕಿಸಿದ ಕೇಂದ್ರ ಸಚಿವರು; ಜೆಡಿಎಸ್ ಪಕ್ಷದ ನಿಲುವು ರೈತರ ನಿಲುವೇ ಆಗಿದೆ. ನಾವು ರೈತರ ಪರ ಗಟ್ಟಿಯಾಗಿ ನಿಲ್ಲುತ್ತೇವೆ. ಎಲ್ಲಾ ಪಕ್ಷಗಳು ಈ ವಿಷಯದಲ್ಲಿ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಪಾದಿಸಿದರು.
ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲ:
ಜನರ ಹಿತವನ್ನು ಬದಿಗೊತ್ತಿ ಬೇರೆ ಬೇರೆ ವಿಷಯಗಳನ್ನು ಮಗ್ನವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರನ್ನು ಮತ್ತು ರಾಜ್ಯದ ಜನರ ಹಿತವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಆರೋಪ ಮಾಡಿದರು.
ಬರದ ಬಗ್ಗೆ ಚರ್ಚೆ ಮಾಡಲು ಇವರಿಗೆ ಸಮಯ ಎಲ್ಲಿದೆ? ಬರೀ ಪ್ರಚಾರ ಗಿಟ್ಟಿಸುವುದರಲ್ಲಿಯೇ ಇವರು ಸಂಪೂರ್ಣ ಸಮಯ ವ್ಯಯ ಮಾಡಿಸುತ್ತಿದ್ದಾರೆ. ಇದುವರೆಗೂ ರೈತರ ಕಷ್ಟವನ್ನು ಆಲಿಸಿಲ್ಲ ಅವರಿಗೆ ಪರಿಹಾರವನ್ನು ಕೊಡುವ ಸಣ್ಣ ಪ್ರಯತ್ನವನ್ನು ಮಾಡಿಲ್ಲ. ರಾಜ್ಯದ ಉದ್ದಗಳು ಬೆಳೆಯು ಮೊಳಕೆ ಹಂತದಲ್ಲಿ ಸುಟ್ಟು ಭಸ್ಮವಾಗಿದೆ. ರೈತರ ದುಡಿಮೆ ದುಡ್ಡು ಮಣ್ಣುಪಾಲಾಗಿದೆ. ಸರಕಾರ ಇಷ್ಟೊತ್ತುಗಾಗ್ಲಿ ಪರಿಹಾರ ನೀಡಬೇಕಾಗಿತ್ತು, ಅಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದರು.
ಸದ್ಯಕ್ಕೆ ರೈತರ ಸಾಲ ವಸೂಲಿ ಮಾಡಬೇಡಿ ಎಂದು ಮುಖ್ಯ ಕಾರ್ಯದರ್ಶಿ ಸಭೆ ಮಾಡಿ ಬ್ಯಾಂಕ್‌ಗಳಿಗೆ ಸೂಚನೆ ನೀಡಿರುವುದು ಒಂದೇ ಸಮಾಧಾನ. ನಾನು ಮಂಡ್ಯ ಮತ್ತು ಮೈಸೂರು ಲೋಕಸಭಾ ಕ್ಷೇತ್ರಗಳ ದಿಶಾ ಸಭೆಗಳಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ರೈತರ ಸಾಲ ವಸೂಲಿಗೆ ಕಿರುಕುಳ ನೀಡಬಾರದೆಂದು ಕಟ್ಟುನಿಟ್ಟಾಗಿ ಅಧಿಕಾರಿಗಳಿಗೆ ಸೂಚಿಸಿದ್ದೆ. ರೈತರ ನೆರವಿಗೆ ಬರುವುದಕ್ಕೆ ಈ ಸರ್ಕಾರಕ್ಕೆ ದುಡ್ಡಿಲ್ಲವಂತೆ! ಆದರೆ ಅನಗತ್ಯ ವಿಚಾರಗಳಿಗೆ ದುಂದು ವೆಚ್ಚ ಮಾಡುವುದಕ್ಕೆ ಹಣವಿದೆ. ಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸರಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಅವರು ಕಟುವಾಗಿ ತೆಗೆದುಕೊಂಡರು.
ಸ್ವಂತ ಹಣದಿಂದಲೇ ಸಿಎಂ ಸಾಲಮನ್ನಾ ಮಾಡಬಹುದು!
ರಾಜ್ಯ ಯಾವ ಸ್ಥಿತಿಯಲ್ಲಿದೆ ಎಂಬುದು ಈ ಮುಖ್ಯಮಂತ್ರಿಗೆ ಗೊತ್ತಿಲ್ಲವೇ? ಜನ ಜಾನುವಾರುಗಳಿಗೆ ನೀರಿಲ್ಲ, ದನ ಕರುಗಳಿಗೆ ಮೇವು ಸಿಗುತ್ತಿಲ್ಲ. ಏನೋ ಕುಮಾರಸ್ವಾಮಿ ಅವರು ಸಾಲಮನ್ನಾ ಮಾಡಿದ್ದಾರೆ, ಸಿದ್ದರಾಮಯ್ಯ ಸಾಲಮನ್ನಾ ಮಾಡಿದ್ದಾರೆ. ಹೀಗಾಗಿ ನಾನು ಕೂಡ ಸಾಲಮನ್ನಾ ಮಾಡಬೇಕು ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರಂತೆ. ಬೆಂಗಳೂರು ಸುತ್ತಮುತ್ತ ಬೇಕಾದಷ್ಟು ಲೂಟಿ ಹೊಡೆಯಲು ಹೊರಟಿದ್ದರಲ್ಲಾ? ಡಿಎಲ್‌ಎಫ್ ತಾವರೆಕೆರೆಯ ಡಿವೈನಿಟಿ, ನೈಸ್ ವಿಚಾರದಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆಯಲು ಹೊರಟೀದಾರಲ್ಲಾ? ಮನಸ್ಸು ಮಾಡಿದರೆ ಮುಖ್ಯಮಂತ್ರಿಗಳೇ ತಮ್ಮ ಕೈಯಿಂದಲೇ ಸಾಲಮನ್ನಾ ಮಾಡಬಹುದು! ಸರಕಾರದ ಆರ್ಥಿಕ ಇಲಾಖೆ ಯಾಕೆ? ಅವರ ಕೈಯಿಂದಲೇ, ವೈಯಕ್ತಿಕವಾಗೇ ಸಾಲಮನ್ನಾ ಮಾಡಬಹುದು ಎಂದು ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.
ಊರಿಗೊಂದು ಕ್ಯಾಬಿನೆಟ್ ಮಾಡುವುದು ವಿಧಾನಸೌಧವೇನು ಟೂರಿಂಗ್ ಟಾಕೀಸಾ?
ಈ ಸರ್ಕಾರ ಬಂದ ಮೇಲೆ ಊರಿಗೊಂದು ಸಂಪುಟ ಸಭೆ ಮಾಡುತ್ತಿರುವ ಬಗ್ಗೆ ಲೇವಡಿ ಮಾಡಿದ ಕೇಂದ್ರ ಸಚಿವರು; ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಲು ಕೆಂಗಲ್ ಹನುಮಂತಯ್ಯನವರು ಆ ಕಟ್ಟಡವನ್ನು ನಿರ್ಮಿಸಿದ್ದರು. ಈಗ ಜಿಲ್ಲೆಗಳಿಗೆ ದಂಡು ದಂಡಾಗಿ ಹೋಗಿ ದುಂದುವೆಚ್ಚ ಮಾಡಿಕೊಂಡು ಸಂಪುಟ ಸಭೆ ಮಾಡುತ್ತಿದ್ದಾರೆ. ಇದು ಪ್ರಚಾರದ ಸ್ಟಂಟ್ ಬಿಟ್ಟರೆ ಬೇರೆ ಏನೂ ಅಲ್ಲ. ಕೊನೇಪಕ್ಷ ಹೊರಗೆ ಕ್ಯಾಬಿನೆಟ್ ಮಾಡುವುದಕ್ಕೆ ಇವರು ಖರ್ಚು ಮಾಡುತ್ತಿರುವ ಹಣವನ್ನು ರೈತರಿಗಾದರೂ ಕೊಟ್ಟಿದ್ದಿದ್ದರೆ ಅವರಿಗೆ ಸಹಾಯ ಆಗುತ್ತಿತ್ತು ಎಂದರು.
ಬರ, ಕಸ್ತೂರಿ ರಂಗನ್ ವರದಿ ಕುರಿತ ಚರ್ಚೆಗೆ 3 ದಿನ ವಿಶೇಷ ಅಧಿವೇಶನ: ಡಿಸಿಎಂ ಡಾ. ಜಿ.ಪರಮೇಶ್ವರ್
ಮೊದಲೇ ರಾಜ್ಯದ ಬೊಕ್ಕಸಕ್ಕೆ ಭಾರ ಹೆಚ್ಚಾಗಿದೆ. ಅದರ ಜತೆಗೆ ಇಂಥ ದುಂದುವೆಚ್ಚ ಬೇರೆ. ಇಂತಹ ಪ್ರವಾಸಗಳು ಸರಕಾರಕ್ಕೆ ಹೊರೆಯೇ ಹೊರತು ಬೇರೆ ಏನೂ ಅಲ್ಲ. ಜನರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ. ಇಂತಹ ಸಭೆಗಳಿಂದ ರಾಜ್ಯ ಉದ್ಧಾರ ಆಗುವುದಿಲ್ಲ ಎಂದು ಸಚಿವರು ಹರಿಹಾಯ್ದರು.