Actor Prakash raj: ಮಾಸ್ಕ್ ಮ್ಯಾನ್ ಚಿನ್ನಯ್ಯ ನನಗೆ ಫೋನ್ ಮಾಡಿದ್ದು ನಿಜ: ಧರ್ಮಸ್ಥಳ ಕೇಸ್ ಬಗ್ಗೆ ನಟ ಪ್ರಕಾಶ್ ರಾಜ್ ಸ್ಪಷ್ಟನೆ
ಧರ್ಮಸ್ಥಳ ಪ್ರಕರಣದ ಮಾಸ್ಕ್ ಮ್ಯಾನ್ ಚಿನ್ನಯ್ಯ ನನಗೆ ಫೋನ್ ಮಾಡಿದ್ದು ನಿಜ. ಆತ ನನ್ನನ್ನು ಭೇಟಿಯಾಗಬೇಕು ಎಂದು ಕೇಳಿದ್ದ. ಆದರೆ, ನಾನು ನಿರಾಕರಿಸಿದ್ದೆ. ಈ ಬಗ್ಗೆ ಎಸ್‌ಐಟಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ. ಈ ವಿವಾದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ನಟ ಪ್ರಕಾಶ್ ರಾಜ್ ತಿಳಿಸಿದ್ದಾರೆ.
ನಟ ಪ್ರಕಾಶ್ ರಾಜ್ -
ಬೆಂಗಳೂರು: ನಾನು ಯಾವತ್ತೂ ಧರ್ಮಸ್ಥಳಕ್ಕೆ ಹೋದವನಲ್ಲ. ಆದರೆ, ಧರ್ಮಸ್ಥಳದಲ್ಲಿ ಸರಣಿ ಸಾವುಗಳು ನಡೆದಿರುವ ಬಗ್ಗೆ ಆತಂಕ ಪಟ್ಟಿದ್ದು ನಿಜ. ಈ ಬಗ್ಗೆ ತನಿಖೆಗೆ ಎಸ್‌ಐಟಿ ರಚನೆ ಮಾಡಲು ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೆ, ಪ್ರಕರಣದಲ್ಲಿ ಕೇಳಿಬರುತ್ತಿರುವ ಗಿರೀಶ್ ಮಟ್ಟಣ್ಣನವರ್, ಮಾಸ್ಕ್ ಮ್ಯಾನ್‌ನನ್ನು ನಾನು ಎಂದಿಗೂ ಭೇಟಿ ಮಾಡಿಲ್ಲ ಎಂದು ನಟ ಪ್ರಕಾಶ್ ರಾಜ್ (Actor Prakash raj) ಸ್ಪಷ್ಟನೆ ನೀಡಿದ್ದಾರೆ.
ಧರ್ಮಸ್ಥಳ ಪ್ರಕರಣ ಮತ್ತು ಚಿನ್ನಯ್ಯನ ಹೇಳಿಕೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ರಾಜ್ ಮಾತನಾಡಿದ್ದಾರೆ. ಮಾಸ್ಕ್ ಮ್ಯಾನ್ ಚಿನ್ನಯ್ಯ ನನಗೆ ಫೋನ್ ಮಾಡಿದ್ದು ನಿಜ. ಆತ ನನ್ನನ್ನು ಭೇಟಿಯಾಗಬೇಕು ಎಂದು ಕೇಳಿದ್ದ. ಆದರೆ, ನಾನು ಭೇಟಿಯಾಗುವುದು ಬೇಡ, ಏನಾದರೂ ಹೇಳಬೇಕಿದ್ದರೆ ರೆಕಾರ್ಡ್ ಮಾಡಿ ಕಳುಹಿಸು ಎಂದು ಹೇಳಿದ್ದೆ. ಬಳಿಕ ರೆಕಾರ್ಡ್‌ನಲ್ಲಿ ಏನೇನೋ ಕಳುಹಿಸಿದ್ದ. ಈ ಬಗ್ಗೆ ಎಸ್‌ಐಟಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ. ನಾನು ಯಾವ ಹೋರಾಟಕ್ಕೂ ಹೋಗಿಲ್ಲ, ಈ ವಿವಾದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಚಿನ್ನಯ್ಯ ವಾಯ್ಸ್ ಸ್ಯಾಂಪಲ್ಸ್ ಅನ್ನು ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರಿಗೆ ಕಳುಹಿಸಿದ್ದೆ. ನಂತರ ತನಿಖೆಯ ಬಗ್ಗೆ ಕೇಳಿದಾಗ, ಚಿನ್ನಯ್ಯ ರಿವರ್ಸ್ ಹೊಡೆಯುತ್ತಿದ್ದಾನೆ. ನೀವು ಅವನ ಫೋನ್ ಸ್ವೀಕರಿಸಬೇಡಿ ಎಂದು ಮೊಹಾಂತಿ ಹೇಳಿದ್ದರು.
ಎಸ್‌ಐಟಿ ರಿಪೋರ್ಟ್ ಬಂದಿದ್ದು, ಮಾಸ್ಕ್ ಮ್ಯಾನ್ ಚಿನ್ನಯ್ಯ ಪೊಲೀಸ್ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿದ್ದಾನೆ ಎಂಬುವುದು ಗೊತ್ತಾಗಿದೆ. ಈ ಬಗ್ಗೆ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಇನ್ನೊಂದು ರಿಪೋರ್ಟ್‌ನಲ್ಲಿ 30 ಹೆಣಗಳಿಗೆ ಅಲ್ಲಿ ಸಿಕ್ಕ ಮೂಳೆಗಳು ತಾಳೆಯಾಗುತ್ತಿಲ್ಲ ಎಂದು ಉಲ್ಲೇಖಿಸಲಾಗಿದೆ. ಮತ್ತೊಂದು ವರದಿಯಲ್ಲಿ ಬಾಲಕಿ ಸೇರಿ 400ಕ್ಕೂ ಹೆಚ್ಚು ಸಾವು ನಡೆದಿದೆ ಎಂದು ಹೇಳಲಾಗಿದೆ. ಹೀಗಾಗಿ ಈ ಸಾವುಗಳಿಗೆ ಕಾರಣ ಯಾರು ಎಂಬುವುದು ನಮಗೆ ಗೊತ್ತಾಗಬೇಕಿದೆ. ಅದನ್ನು ನಾನು ಪ್ರಶ್ನಿಸಿದ್ದೇನೆ ಎಂದು ತಿಳಿಸಿದ್ದಾರೆ.
ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಲು 200 ಕೋಟಿ ಡೀಲ್ ಪ್ರಕಾಶ್ ರಾಜ್ ಮಾಡಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಆದರೆ 200 ಕೋಟಿ ರೂಪಾಯಿ ಹಣವನ್ನು ನಾನೆಲ್ಲಿಂದ ತರಲಿ? ಎಂದು ಪ್ರಶ್ನಿಸಿದ ಪ್ರಕಾಶ್ ರಾಜ್, ವಿಷಯವನ್ನು ತಿರುಚಿ ನನಗೆ ಧರ್ಮಸ್ಥಳದ ಮೇಲೆ ಪ್ರೀತಿ ಇಲ್ಲ, ನಾನು ಧರ್ಮ ವಿರೋಧಿ ಅಂತೆಲ್ಲಾ ಯಾಕೆ ಬಣ್ಣ ಬಳಿಯುತ್ತಿದ್ದೀರಾ? ನಾನು ಎಲ್ಲರ ಭಾವನೆಗಳನ್ನು ಗೌರವಿಸುತ್ತೇನೆ ಎಂದಿದ್ದಾರೆ.