ಪ್ರತಿಭಟನೆ ವೇಳೆ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದಿಪ್ಕೆಗೆ ಧರ್ಮದೇಟು; ಜನರ ಮಧ್ಯೆಯೇ ಕಪಾಳಮೋಕ್ಷ: ವಿಡಿಯೊ ವೈರಲ್
Cockroach Janta Party: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನೇ ಅಸ್ತ್ರವಾಗಿಸಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿರುವ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜಿತ್ ದಿಪ್ಕೆ ಇದೀಗ ಜನಾಕ್ರೋಶಕ್ಕೆ ತುತ್ತಾಗಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಪ್ರತಿಭಟನೆ ವೇಳೆ ವ್ಯಕ್ತಿಯೊಬ್ಬ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.
ಜೈಪುರದಲ್ಲಿ ಅಭಿಜಿತ್ ದಿಪ್ಕೆ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ -
ಜೈಪುರ, ಜೂ. 15: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನೇ ಅಸ್ತ್ರವಾಗಿಸಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿರುವ ಕಾಕ್ರೋಚ್ ಜನತಾ ಪಾರ್ಟಿಯ (Cockroach Janta Party) ಸಂಸ್ಥಾಪಕ ಅಭಿಜಿತ್ ದಿಪ್ಕೆ (Abhijeet Dipke) ಇದೀಗ ಜನಾಕ್ರೋಶಕ್ಕೆ ತುತ್ತಾಗಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಪ್ರತಿಭಟನೆ ವೇಳೆ ಜನರ ಮಧ್ಯೆ ಬಂದ ವ್ಯಕ್ತಿಯೊಬ್ಬ ಅಭಿಜಿತ್ ದಿಪ್ಕೆ ಅವರಿಗೆ ಕಪಾಳ ಮೋಕ್ಷ ಮಾಡಿದ್ದಾನೆ. ಅವರ ಬೆಂಬಲಿಗರ ಸಮ್ಮುಖದಲ್ಲಿಯೇ ಈ ಘಟನೆ ನಡೆದಿದ್ದು, ಸದ್ಯ ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ದಿಪ್ಕೆ ಅವರನ್ನು ಆಕ್ರೋಶಗೊಂಡ ವ್ಯಕ್ತಿಯೊಬ್ಬರು ಥಳಿಸುತ್ತಿರುವುದು ಕಂಡು ಬಂದಿದೆ. ಕೂಡಲೇ ಸ್ಥಳದಲ್ಲಿ ನೆರೆದಿದ್ದ ದಿಪ್ಕೆ ಬೆಂಬಲಿಗರು ಕಪಾಳಮೋಕ್ಷ ಮಾಡಿದ ವ್ಯಕ್ತಿಯ ಮೇಲೇರಿ ಹೋಗಿದ್ದಾರೆ. ಕೂಡಲೇ ಪರಿಸ್ಥಿತಿ ಕೈಮೀರಿ ಹೋಗಿದ್ದು, ಕೆಲ ಹೊತ್ತು ಉದ್ವಿಗ್ನ ವಾತಾವರಣ ಕಂಡು ಬಂತು.
ಘಟನೆಯ ದೃಶ್ಯ:
In Jaipur, Rajasthan, Cockroach Janta Party (CJP) founder Abhijeet Dipke was slapped and roughed up by the public.
— Saffron Chargers (@SaffronChargers) June 15, 2026
Abhijeet Dipke had been surrounded by paid supporters and protesters for so long. Today, he finally came face to face with the real public. pic.twitter.com/ICHMNTZa5S
ಜೈಪುರದ ಶಹೀದ್ ಸ್ಮಾರಕ್‌ನಲ್ಲಿ ಸೋಮವಾರ (ಜೂನ್ 15) ನಡೆದ ಪ್ರತಿಭಟನೆಯ ವೇಳೆ ಈ ಘಟನೆ ಸಂಭವಿಸಿದೆ. ವೈರಲ್ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಧಾವಿಸಿ ದಿಪ್ಕೆ ಅವರಿಗೆ ಹೊಡೆದಿರುವುದು ಕಾಣಿಸಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ಬೆಂಬಲಿಗರು ಆರೋಪಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಿದರು.
ಬೆಂಗಳೂರಲ್ಲಿ ಕಾಕ್ರೋಚ್ ಪಾರ್ಟಿ ಪ್ರತಿಭಟನೆ; ನಟ ಪ್ರಕಾಶ್ ರಾಜ್ ಬೆಂಬಲ
ಸ್ಥಳೀಯರ ಪ್ರಕಾರ ಆರೋಪಿ ದಿಪ್ಕೆ ಮೇಲೆ ಹಲ್ಲೆ ನಡೆಸುತ್ತಿದ್ದಂತೆ ಗೊಂದಲ ಮೂಡಿತು. ದಿಪ್ಕೆ ಅವರನ್ನು ಹೊಡೆದ ಆರೋಪಿಯನ್ನು ಬೆಂಬಲಿಗರು ಸುತ್ತುವರೆದು ಕೈ ಮಿಲಾಯಿಸಿದರು. ಈ ವೇಳೆ ದಿಪ್ಕೆ ತಮ್ಮ ಬೆಂಬಲಿಗರನ್ನು ಸಮಾಧಾನಗೊಳಿಸಲು ಯತ್ನಿಸಿದರು. ಪ್ರತಿ ದಾಳಿ ನಡೆಸದಂತೆ ಮನವಿ ಮಾಡಿದರು. ಅದಾಗ್ಯೂ ಸ್ಥಳದಲ್ಲಿ ಕೆಲ ಹೊತ್ತು ಸಂಘರ್ಷ ಮುಂದುವರಿಯಿತು. ಬಳಿಕ ಪೊಲೀಸ್ ಅಧಿಕಾರಿಗಳು ಧಾವಿಸಿ ಪರಿಸ್ಥಿತಿಯನು ನಿಯಂತ್ರಿಸಿದರು.
ಯಾಕಾಗಿ ಪ್ರತಿಭಟನೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಸಿಬಿಎಸ್‌ಇ, ಸಿಯುಇಟಿ ಮತ್ತು ಎಸ್‌ಎಸ್‌ಸಿ ಮುಂತಾದ ಪ್ರಮುಖ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಆರೋಪಿಸಿ ಸಿಜೆಪಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎನ್ನುವುದು ಇವರ ಪ್ರಮುಖ ಬೇಡಿಕೆ. ಈಗಾಗಲೇ ಬೆಂಗಳೂರು, ದೆಹಲಿ, ಹೈದರಾಬಾದ್ ಮುಂತಾದ ಕಡೆಗಳಲ್ಲಿ ಪ್ರತಿಭಟನೆ ನಡೆದಿವೆ. ಧರ್ಮೆಂದ್ರ ಪ್ರಧಾನ್ ರಾಜೀನಾಮೆಗೆ ಡೆಡ್‌ಲೈನ್ ನೀಡಿದ್ದು, ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.
ಬೆಂಗಳೂರು ಪ್ರತಿಭಟನೆಗೆ ನಟ ಪ್ರಕಾಶ್ ರಾಜ್ ಬೆಂಬಲ
ಕಾಕ್ರೋಚ್ ಜನತಾ ಪಾರ್ಟಿ ಜೂನ್ 14ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆಯಲ್ಲಿ ನಟ ಪ್ರಕಾಶ್ ರಾಜ್ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ ಅವರು, ʼʼಇದು ಕೇವಲ ಒಂದು ಪರೀಕ್ಷೆಯ ಅಕ್ರಮವಲ್ಲ, ದೇಶದ ಯುವ ಪೀಳಿಗೆಯ ಭವಿಷ್ಯಕ್ಕೆ ಮಾಡುತ್ತಿರುವ ದ್ರೋಹ. ಇಂತಹ ಅನ್ಯಾಯಗಳ ವಿರುದ್ಧ ಪ್ರತಿಯೊಬ್ಬ ನಾಗರಿಕನೂ ಧ್ವನಿ ಎತ್ತಬೇಕಿದೆʼʼ ಎಂದು ಕರೆ ನೀಡಿದ್ದರು.
ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.