Asha Workers Protest: ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ರಮ್ಯಾ ಬೆಂಬಲ; ರಾಜ್ಯ ಸರ್ಕಾರಕ್ಕೆ ನಟಿ ಹೇಳಿದ್ದೇನು?
Actress Ramya: ಆಶಾ ಕಾರ್ಯಕರ್ತೆಯರು ಕಳೆದ ಐದು ದಿನದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ಮಾಡುತ್ತಿದ್ದಾರೆ. ಗೌರವ ಧನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
-
ಬೆಂಗಳೂರು: 15000 ರೂ. ಗೌರವ ಧನ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಗೆ (Asha Workers Protest) ಸ್ಯಾಂಡಲ್ವುಡ್ ನಟಿ, ಮಾಜಿ ಸಂಸದೆ ರಮ್ಯಾ (Actress Ramya) ಅವರು ಬೆಂಬಲ ಸೂಚಿಸಿದ್ದಾರೆ.
ಕಳೆದ 5 ದಿನಗಳಿಂದ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆತರ ಪ್ರತಿಭಟನೆಗೆ ಧ್ವನಿಗೂಡಿಸಿರುವ ನಟಿ, ಆಶಾ ಕಾರ್ಯಕರ್ತರ ಹೋರಾಟದ ಒಂದು ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟಿ, ಆಶಾ ಕಾರ್ಯಕರ್ತೆಯರು ನಮ್ಮ ಸಾವರ್ಜನಿಕ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು ಆಗಿದ್ದಾರೆ. ಇವರಿಗೆ ಗೌರವಯುತವಾದ ಮತ್ತು ನ್ಯಾಯಯುತವಾದ ವೇತನ ಸರಿಯಾದ ಸಮಯಕ್ಕೆ ಸಿಗಬೇಕು ಎಂದು ಬರೆದುಕೊಂಡಿದ್ದಾರೆ.
ಸರ್ಕಾರದ ಲಿಖಿತ ರೂಪದ ಭರವಸೆಗೆ ಪಟ್ಟು
ಬೇಡಿಕೆಗಳ ಈಡೇರಿಕೆ ಕುರಿತು ರಾಜ್ಯ ಸರ್ಕಾರ ಲಿಖಿತ ರೂಪದಲ್ಲಿ ಭರವಸೆ ಪತ್ರ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರತಿಭಟನೆಗೆ ಸಾವಿರಾರು ಆಶಾ ಕಾರ್ಯಕರ್ತೆಯರು ಪ್ರತಿಭಟನೆಗೆ ಆಗಮಿಸಿದ್ದಾರೆ.
ಇನ್ನು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ ಎಸ್ಯುಸಿಐ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಉಮಾ, ರಾಜ್ಯ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಆಶಾ ಕಾರ್ಯಕರ್ತೆಯರು ತಮ್ಮ ಸಮಸ್ಯೆಗಳನ್ನು ಆಲಿಸುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದರೆ, ಗೌರವಧನ ಹೆಚ್ಚಳಕ್ಕೆ ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ಕಾರಣವಾಗಿ ಮುಂದಿಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿದರೆ ಇತರೆ ಯೋಜನಾ ಕಾರ್ಯಕರ್ತೆಯರಿಗೂ ಹೆಚ್ಚಿಸಬೇಕಾಗುತ್ತದೆ ಎಂಬ ವಾದವನ್ನು ಸರ್ಕಾರ ಮಾಡುತ್ತಿದೆ. ಆದರೆ, ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವುದು ಅಧಿಕಾರದಲ್ಲಿರುವವರ ಕರ್ತವ್ಯ ಎಂದು ಆಗ್ರಹಿಸಿದ್ದಾರೆ.
ಇದು ನ್ಯಾಯ ಮತ್ತು ಅನ್ಯಾಯ, ಸತ್ಯ ಮತ್ತು ಸುಳ್ಳಿನ ನಡುವಿನ ಹೋರಾಟವಾಗಿದೆ. ದೆಹಲಿಯ ರೈತರ ಹೋರಾಟ ಹಾಗೂ ದೇಶದ ಸ್ವಾತಂತ್ರ್ಯ ಸಂಗ್ರಾಮ ಈ ಚಳವಳಿಗೆ ಸ್ಫೂರ್ತಿಯಾಗಲಿ. ಆಶಾ ಕಾರ್ಯಕರ್ತೆಯರ ಹೋರಾಟ ಇತಿಹಾಸ ಸೃಷ್ಟಿಸಲಿ ಎಂದು ಆಶಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಬೇಡಿಕೆಗಳೇನು?
- 15 ಸಾವಿರ ಮಾಸಿಕ ಗೌರವಧನ ನಿಗದಿಯಾಗಬೇಕು
- ಸಮಸ್ತ ಆ್ಯಪ್ ಮೂಲಕ ಒತ್ತಾಯದ ಕೆಲಸ ಕೈಬಿಡಬೇಕು
- ಆಶಾ ನಿಧಿಯಲ್ಲಿ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು
- ಬಾಕಿ ಇರುವ ಇಡಿಗಂಟು ಕೂಡಲೇ ಬಿಡುಗಡೆ ಮಾಡಿ
- ಸೇವಾ ನಿವೃತ್ತಿ ಇಡಿಗಂಟು 5 ಲಕ್ಷಕ್ಕೆ ಹೆಚ್ಚಿಸಿ
- ಆಶಾ ಸುಗಮಕಾರರನ್ನು ಮರುನೇಮಕ ಮಾಡಿ
- NIOS ತರಬೇತಿ ಪೂರ್ಣಗೊಳಿಸಿದವರಿಗೆ 5000 ಪ್ರೋತ್ಸಾಹ ಧನ ನೀಡಿ
- ತೀವ್ರ ಅನಾರೋಗ್ಯವಿದ್ದರೆ 3 ತಿಂಗಳ ಗೌರವ ಬೇಕು.