Actress Shruthi: ವಿಷ್ಣುವರ್ಧನ್ ಸಮಾಧಿಗೆ ನನ್ನ ಜಾಗವನ್ನೇ ಕೊಡುತ್ತಿದ್ದೆ: ನಟಿ ಶ್ರುತಿ
Actress Shruthi: ನಟ ವಿಷ್ಣುವರ್ಧನ್ ಅವರು ನಮ್ಮೆಲ್ಲರ ಆರಾಧ್ಯ ದೈವ. ಎಷ್ಟೊಂದು ಮಂದಿ ಅವರ ಸಮಾಧಿಗೆ ಸ್ಥಳ ಕೊಡಲು ತಯಾರು ಇದ್ದಾರೆ. ಭೂಮಿ ವಿವಾದದ ಬಗ್ಗೆ ಮೊದಲೇ ಗೊತ್ತಿದ್ದರೆ, ನನ್ನ ಬಳಿಯೂ ಚಿಕ್ಕದೊಂದು ಜಮೀನು ಇದೆ. ಅಲ್ಲಿಯೇ ಜಾಗ ಕೊಡುತ್ತಿದ್ದೆ ಎಂದು ನಟಿ ಶೃತಿ ಹೇಳಿದ್ದಾರೆ.


ಬೆಂಗಳೂರು: ಕೆಂಗೇರಿಯ ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ವಿಷ್ಣುವರ್ಧನ್ (Actor Vishnuvardhan) ಅವರ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಿರುವುದು ಅವರ ಅಭಿಮಾನಿಗಳಿಗೆ ನೋವು ತಂದಿದೆ. ಈ ಬಗ್ಗೆ ಸ್ಯಾಂಡಲ್‌ವುಡ್‌ನ ಪ್ರಮುಖರು ಬೇಸರ ಹೊರಹಾಕುತ್ತಿದ್ದು, ಇದೀಗ ನಟಿ ಶೃತಿ (Actress Shruthi) ಅವರು ಪ್ರತಿಕ್ರಿಯಿಸಿ, ಜಮೀನಿನ ವಿವಾದ ಇರುವುದು ತಿಳಿದೇ ಇರಲಿಲ್ಲ. ಹಾಗೊಂದು ವೇಳೆ ಗೊತ್ತಿದ್ದರೆ ವಿಷ್ಣುವರ‍್ಧನ್ ಅವರ ಸಮಾಧಿಗೆ ನನ್ನ ಜಮೀನನ್ನೇ ಬಿಟ್ಟುಕೊಡುತ್ತಿದ್ದೆ ಎಂದು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ವಿಷ್ಣುವರ್ಧನ್ ಅವರು ನಮ್ಮೆಲ್ಲರ ಆರಾಧ್ಯ ದೈವ. ಎಷ್ಟೊಂದು ಮಂದಿ ಅವರ ಸಮಾಧಿಗೆ ಸ್ಥಳ ಕೊಡಲು ತಯಾರು ಇದ್ದಾರೆ. ನನ್ನ ಬಳಿಯೂ ಚಿಕ್ಕದೊಂದು ಜಮೀನು ಇದೆ. ಅಲ್ಲಿಯೇ ಜಾಗ ಕೊಡುತ್ತಿದ್ದೆ ಎಂದು ಹೇಳಿದ್ದಾರೆ.
ಅವರೆಲ್ಲಾ ಹೀಗೆ ಏಕೆ ಮಾಡುತ್ತಾರೋ ಗೊತ್ತಿಲ್ಲ: ನಟ ವಿಜಯ ರಾಘವೇಂದ್ರ
ವಿಷ್ಣು ಸಮಾಧಿ ತೆರವು ಬಗ್ಗೆ ನಟ ವಿಜಯ್ ರಾಘವೇಂದ್ರ ಪ್ರತಿಕ್ರಿಯಿಸಿ, ತುಂಬಾ ಪ್ರಾಮಾಣಿಕವಾಗಿ ಹೇಳುವುದಾದರೆ, ಇದನ್ನು ಯಾರು ಮಾಡಿದರೆ, ಯಾಕೆ ಮಾಡಿದ್ದಾರೆ ಎನ್ನುವುದು ನನಗೂ ಗೊತ್ತಿಲ್ಲ, ನಿಮಗೂ ಗೊತ್ತಿಲ್ಲ. ಈ ಬಗ್ಗೆ ದೂರವಾಣಿ ಕರೆ ಬಂದಿದೆ ಅಷ್ಟೇ. ಇದನ್ನು ಕೇಳಿದ ತಕ್ಷಣ ಭಾವನೆಗಳಿಗೆ ಹರ್ಟ್ ಆಗುವುದು ನಿಜ. ಇವುಗಳ ನಡುವೆಯೂ ಕೆಲವು ಕಿಡಿಗೇಡಿಗಳು ಇಂಥ ಕೆಲಸ ಮಾಡುತ್ತಾರೆ ಎನ್ನುತ್ತಲೇ, ಅವರೆಲ್ಲಾ ಹೀಗೆ ಏಕೆ ಮಾಡುತ್ತಾರೋ ಗೊತ್ತಿಲ್ಲ. ಆದರೆ, ಇಂಥ ಘಟನೆಯಿಂದಾಗಿ ಅವರ ಇಮ್ಮಿಡಿಯೇಟ್ ಕುಟುಂಬದವರಿಗೆ ತುಂಬಾ ಹರ್ಟ್ ಆಗಿರುತ್ತದೆ. ಅವರಿಗೆ ಆ್ಯಕ್ಷನ್ ತೆಗೆದುಕೊಳ್ಳಬೇಕು ಎನ್ನುವುದು ಮನಸ್ಸಿಗೆ ಬಂದಿರುತ್ತದೆ. ಅವರು ಕಾನೂನು ಹೋರಾಟ ಮಾಡಬಹುದು. ಆದ್ದರಿಂದ ಅವರ ಕೆಲಸವನ್ನು ಅವರಿಗೆ ಮಾಡಲು ಬಿಟ್ಟುಬಿಡಿ ಎಂದು ಹೇಳಿದ್ದಾರೆ.