ಇಂಧನ ಕೊರತೆಯ ವದಂತಿ: 20 ಲೀಟರ್ ನೀರಿನ ಕ್ಯಾನಿನಲ್ಲಿ ಪೆಟ್ರೋಲ್ ತುಂಬಿಸಿಕೊಂಡ ವ್ಯಕ್ತಿ; ವೈರಲ್ ವಿಡಿಯೊ ಕಂಡು ಬೆಚ್ಚಿಬಿದ್ದ ನೆಟ್ಟಿಗರು
ಪಶ್ಚಿಮ ಏಷ್ಯಾದ ಯುದ್ಧದ ಹಿನ್ನೆಲೆದಲ್ಲಿ ಭಾರತದಲ್ಲಿ ಪೆಟ್ರೋಲ್ ಅಭಾವ ಉಂಟಾಗಬಹುದು ಎಂಬ ವದಂತಿಗಳ ನಡುವೆ ತಮಿಳುನಾಡಿನ ವಿಲ್ಲುಪುರಂ ಪೆಟ್ರೋಲ್ ಪಂಪ್‌ನಲ್ಲಿ ವ್ಯಕ್ತಿಯೊಬ್ಬ 20 ಲೀಟರ್ ನೀರಿನ ಕ್ಯಾನ್‌ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಆತಂಕದ ಖರೀದಿ ನಡೆಯುತ್ತಿರುವ ಬಗ್ಗೆ ಚರ್ಚೆ ಹೆಚ್ಚಾಗಿದ್ದು, ಪ್ಲಾಸ್ಟಿಕ್ ಕಂಟೇನರ್‌ನಲ್ಲಿ ಪೆಟ್ರೋಲ್ ಸಂಗ್ರಹಿಸುವುದು ಅಪಾಯಕಾರಿ ಮತ್ತು ನಿಯಮ ವಿರೋಧಿ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಪ್ಲಾಸ್ಟಿಕ್ ಕ್ಯಾನ್‌ಗೆ ಪರಟ್ರೋಲ್ ತುಂಬಿಸಿಕೊಂಡ ವ್ಯಕ್ತಿ -
ಚೆನ್ನೈ, ಮಾ. 13: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಭಾರತದಲ್ಲಿ ಪೆಟ್ರೋಲ್ (Petrol) ಅಭಾವ ಉಂಟಾಗಬಹುದು ಎಂಬ ವದಂತಿಗಳು ಹಬ್ಬಿರುವ ಬೆನ್ನಲ್ಲೇ, ತಮಿಳುನಾಡಿನ ವಿಲ್ಲುಪುರಂನ (Villupuram) ಪೆಟ್ರೋಲ್ ಬಂಕ್ ಒಂದರಲ್ಲಿ ವ್ಯಕ್ತಿಯೊಬ್ಬ 20 ಲೀಟರ್ ಸಾಮರ್ಥ್ಯದ ಪ್ಲಾಸ್ಟಿಕ್ ನೀರಿನ ಕ್ಯಾನ್‌ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರಿ ಚರ್ಚೆಗೆ ಕಾರಣವಾಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ, ವ್ಯಕ್ತಿಯೊಬ್ಬ ತನ್ನ ಬೈಕ್‌ನಲ್ಲಿ ಕುಳಿತು ದೊಡ್ಡ ಪ್ಲಾಸ್ಟಿಕ್ ಕ್ಯಾನ್ ಹಿಡಿದಿರುವುದು ಕಂಡುಬರುತ್ತದೆ. ಪೆಟ್ರೋಲ್ ಪಂಪ್ ಉದ್ಯೋಗಿಯೊಬ್ಬ ಆ ಕಂಟೇನರ್‌ಗೆ ಪೆಟ್ರೋಲ್ ತುಂಬಿಸುತ್ತಿರುವುದನ್ನು ಜನ ನೋಡುತ್ತಾ ನಿಂತಿದ್ದಾರೆ. ಅಷ್ಟೇ ಅಲ್ಲದೆ, ಮತ್ತೊಬ್ಬ ವ್ಯಕ್ತಿ ಬಂದು 2 ಲೀಟರ್‌ನ ಸಣ್ಣ ಪ್ಲಾಸ್ಟಿಕ್ ಬಾಟಲಿಗೂ ಪೆಟ್ರೋಲ್ ತುಂಬಿಸುವಂತೆ ಕೇಳುವುದು ವಿಡಿಯೊದಲ್ಲಿದೆ.
ವೈರಲ್ ವಿಡಿಯೊ ಇಲ್ಲಿದೆ:
India is not for beginners. 🇮🇳
— 🔥 Satz 🔥 (@thala_speaks) March 12, 2026
Global crisis? No problem. We’ll just turn our water tanks into a gas station. Problem solved! ⛽️💀
Good Morning Friends pic.twitter.com/rIjnQwIXNI
ಆತಂಕದ ಖರೀದಿ (Panic Buying)
ಇರಾನ್ ಯುದ್ಧದ ಕಾರಣದಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಆನ್‌ಲೈನ್ ವದಂತಿಗಳಿಂದಾಗಿ ಜನರಲ್ಲಿ ಆತಂಕ ಮೂಡಿದೆ. ಇಂತಹ ಸಮಯಗಳಲ್ಲಿ ಜನರು ಅಗತ್ಯಕ್ಕಿಂತ ಹೆಚ್ಚು ಇಂಧನವನ್ನು ಸಂಗ್ರಹಿಸಲು ಮುಂದಾಗುತ್ತಿದ್ದಾರೆ. ಇದು ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಲು ಕಾರಣವಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ತೈಲ ಬೆಲೆ ಏರಿಕೆ, ಮಾರುಕಟ್ಟೆ ಕುಸಿತ: ಜಾಗತಿಕ ಆರ್ಥಿಕತೆಗೆ ಭಾರಿ ಪೆಟ್ಟು ಕೊಟ್ಟ ಇರಾನ್ ಯುದ್ಧ
ಭಾರತದ ಕಾನೂನು ಏನು ಹೇಳುತ್ತದೆ?
ಪ್ಲಾಸ್ಟಿಕ್ ಕಂಟೇನರ್‌ಗಳಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುವುದು ಭಾರತದಲ್ಲಿ ಕಾನೂನುಬದ್ಧವೇ ಎಂಬ ಪ್ರಶ್ನೆ ನೆಟ್ಟಿಗರಲ್ಲಿ ಮೂಡಿದೆ. ಭಾರತದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ನಿಯಮಗಳ ಪ್ರಕಾರ ಪೆಟ್ರೋಲ್ ಅತ್ಯಂತ ಹೆಚ್ಚು ಜ್ವಲನಶೀಲ ದ್ರವವಾಗಿದ್ದು, ಇದನ್ನು ಸಾಮಾನ್ಯ ಪ್ಲಾಸ್ಟಿಕ್ ಬಾಟಲಿ ಅಥವಾ ಕ್ಯಾನುಗಳಲ್ಲಿ ಸಂಗ್ರಹಿಸುವುದು ಅಪಾಯಕಾರಿ. ಇದರಿಂದ ಬೆಂಕಿ ಆಕಸ್ಮಿಕಗಳು ಸಂಭವಿಸುವ ಸಾಧ್ಯತೆ ಹೆಚ್ಚು.
ನಿಯಮಗಳ ಪ್ರಕಾರ, ಪೆಟ್ರೋಲಿಯಂ ಉತ್ಪನ್ನಗಳನ್ನು ಸಂಗ್ರಹಿಸುವ ಪಾತ್ರೆಗಳು 'ಚೀಫ್ ಕಂಟ್ರೋಲರ್ ಆಫ್ ಎಕ್ಸ್‌ಪ್ಲೋಸಿವ್ಸ್' (Chief Controller of Explosives) ಅವರಿಂದ ಅನುಮೋದಿತವಾಗಿರಬೇಕು. ಸಾಮಾನ್ಯವಾಗಿ ಪೆಟ್ರೋಲ್ ಪಂಪ್‌ಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳಿಗೆ ಇಂಧನ ನೀಡುವುದನ್ನು ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸುವ ಪೆಟ್ರೋಲ್ ಬಂಕ್‌ಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಅವಕಾಶವಿದೆ.
ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ನಡುವೆಯೂ ಭಾರತದ ಇಂಧನ ಪೂರೈಕೆ ಸುಭದ್ರವಾಗಿದೆ ಎಂದು ಸರ್ಕಾರ ಈಗಾಗಲೇ ಭರವಸೆ ನೀಡಿದೆ. ಹೀಗಾಗಿ ಸಾರ್ವಜನಿಕರು ವದಂತಿಗಳಿಗೆ ಕಿವಿಗೊಟ್ಟು ಇಂತಹ ಅಪಾಯಕಾರಿ ಸಂಗ್ರಹಣೆಯಲ್ಲಿ ತೊಡಗಬಾರದು ಎಂದು ಅಧಿಕಾರಿಗಳು ವಿನಂತಿಸಿದ್ದಾರೆ.