Anti-national graffiti: ಭಾರತವನ್ನು ಸ್ಫೋಟಿಸುತ್ತೇನೆ; ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ದೇಶ ವಿರೋಧಿ ಗೋಡೆ ಬರಹ!
Bengaluru News: ಬೆಂಗಳೂರು ನಗರದ ಕೊಡಿಗೇಹಳ್ಳಿಯಲ್ಲಿಯ ಅಪಾರ್ಟ್ಮೆಂಟ್ನ ಗೋಡೆ ಮೇಲೆ ದೇಶ ವಿರೋಧಿ ಗೋಡೆ ಬರಹ ಪತ್ತೆಯಾಗಿದೆ. “ನಾನು ಭಾರತವನ್ನು ಸ್ಫೋಟಿಸುತ್ತೇನೆ” ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿದ್ದು, ಸ್ಥಳಕ್ಕೆ ಕೊಡಿಗೇಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಬೆಂಗಳೂರು: ರಾಮನಗರ, ಉಡುಪಿ ಬೆನ್ನಲ್ಲೇ ಬೆಂಗಳೂರಿನಲ್ಲೂ ದೇಶ ವಿರೋಧಿ ಬರಹ (Anti-national graffiti) ಕಂಡುಬಂದಿದೆ. ನಗರದ ಕೊಡಿಗೇಹಳ್ಳಿಯಲ್ಲಿಯ ಅಪಾರ್ಟ್ಮೆಂಟ್ನ ಗೋಡೆಯ ಮೇಲೆ “ನಾನು ಭಾರತವನ್ನು ಸ್ಫೋಟಿಸುತ್ತೇನೆ” (I am going to blast india) ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿದೆ. ಈ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೊಡಿಗೇಹಳ್ಳಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದು, ದೇಶ ವಿರೋಧಿ ಬರಹ ಬರೆದ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಇತ್ತೀಚಿಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಕಾಲೇಜಿನ ಮಹಿಳಾ ವಸತಿ ನಿಲಯದ ಶೌಚಾಲಯದ ಗೋಡೆಯ ಮೇಲೆ ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ ರೀತಿ “ಹಿಂದೂಸ್ಥಾನ್ ನಹಿ ಮುಸ್ಲಿಂಸ್ಥಾನ ಬೋಲ್”. “ಮುಸ್ಲಿಂ ಜಿಂದಾಬಾದ್ ಹಿಂದೂ ಫಕ್ ಆಫ್” ಎಂದು ಓರ್ವ ವಿದ್ಯಾರ್ಥಿನಿ ಬರೆದಿದ್ದಳು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಈ ಬಗ್ಗೆ ನಿಟ್ಟೆ ಕಾಲೇಜಿನ ಮಹಿಳಾ ವಸತಿ ನಿಲಯದ ಮ್ಯಾನೇಜರ್ ಕಾರ್ಕಳ ಪೊಲೀಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ನಡೆಸಿದ್ದರು. ಆದರೆ, ಸರಿಯಾದ ಸಾಕ್ಷ್ಯ ಸಿಕ್ಕಿರಲಿಲ್ಲ. ಕೊನೆಗೆ ಪೊಲೀಸರು ಕೈಬರಹ ತಜ್ಞರ ಸಹಾಯದಿಂದ ವಸತಿ ನಿಲಯದಲ್ಲಿನ ವಿದ್ಯಾರ್ಥಿನಿಗಳ ಅಸೈನ್ಮೆಂಟ್ಸ್ ಹಾಗೂ ಮತ್ತೊಮ್ಮೆ ಗೋಡೆ ಬರೆಸುವ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದರು. ಕೇರಳ ಕಾಸರಗೋಡು ಜಿಲ್ಲೆಯ ನಿವಾಸಿ ಫಾತಿಮಾ ಶಬ್ದಾಳನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿ ಫಾತಿಮಾ ಶಬ್ದಾಗೆ ಜಾಮೀನು ಮಂಜೂರು ಮಾಡಿತ್ತು.