Younes Zarou: ಅನುಮತಿಯಿಲ್ಲದೆ ಜನ ಸೇರಿಸಿದ ಜರ್ಮನ್ ಸೋಶಿಯಲ್ ಮೀಡಿಯಾ ಸ್ಟಾರ್‌ಗೆ ಚರ್ಚ್ ಸ್ಟ್ರೀಟ್‌ನಿಂದ ಗೇಟ್‌ಪಾಸ್
Church Street: ಇನ್‌ಸ್ಟಾಗ್ರಾಮ್‌ಲ್ಲಿ 2.1 ಕೋಟಿ ಅನುಯಾಯಿಗಳನ್ನು ಹೊಂದಿರುವ ಝರೌ, ದೊಡ್ಡ ಸಭೆಗೆ ಯಾವುದೇ ಅನುಮತಿಗಳನ್ನು ತೆಗೆದುಕೊಳ್ಳದೆ ಚರ್ಚ್ ಸ್ಟ್ರೀಟ್‌ಗೆ ಆಗಮಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲಿಗೆ ಬರುವ ಸ್ವಲ್ಪ ಸಮಯದ ಮೊದಲು, ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಾಕಿದ್ದರು.


ಬೆಂಗಳೂರು: ಅನುಮತಿಯಿಲ್ಲದೆ ಬೆಂಗಳೂರಿನ (Bengaluru) ಚರ್ಚ್ ಸ್ಟ್ರೀಟ್‌ನಲ್ಲಿ (Church Street) ಜನ ಸೇರಿಸಿ ಕಾರ್ಯಕ್ರಮ ನೀಡಲು ಮುಂದಾದ ಜರ್ಮನ್ ಸಾಮಾಜಿಕ ಮಾಧ್ಯಮ ತಾರೆ ಯೂನೆಸ್ ಝರೌ (Younes Zarou) ಅವರನ್ನು ಕಬ್ಬನ್ ಪಾರ್ಕ್ (Cubbon Park) ಪೊಲೀಸರು ಬುಧವಾರ ಸಂಜೆ ತಡೆದು ಅಲ್ಲಿಂದ ಕರೆದೊಯ್ದಿದ್ದಾರೆ. ಪೊಲೀಸ್ ಅನುಮತಿ ಹಾಗೂ ಸುರಕ್ಷತಾ ಕ್ರಮಗಳಿಲ್ಲದೆ ಕಾರ್ಯಕ್ರಮ ನೀಡುವಂತಿಲ್ಲ ಎಂದು ಮನವರಿಕೆ ಮಾಡಿಕೊಡಲಾಗಿದೆ. ಅನುಮತಿಯಿಲ್ಲದೆ ಚರ್ಚ್ ಸ್ಟ್ರೀಟ್‌ನಲ್ಲಿ ಪ್ರದರ್ಶನ ನೀಡದಂತೆ ಆಂಗ್ಲ ಗಾಯಕ ಎಡ್ ಶೀರಾನ್ (Ed Sheeran) ಅವರನ್ನು ತಡೆದ ಕೆಲವು ತಿಂಗಳ ನಂತರ ಈ ಘಟನೆ ನಡೆದಿದೆ.
ಇನ್‌ಸ್ಟಾಗ್ರಾಮ್‌ಲ್ಲಿ 2.1 ಕೋಟಿ ಅನುಯಾಯಿಗಳನ್ನು ಹೊಂದಿರುವ ಝರೌ, ದೊಡ್ಡ ಸಭೆಗೆ ಯಾವುದೇ ಅನುಮತಿಗಳನ್ನು ತೆಗೆದುಕೊಳ್ಳದೆ ಚರ್ಚ್ ಸ್ಟ್ರೀಟ್‌ಗೆ ಆಗಮಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲಿಗೆ ಬರುವ ಸ್ವಲ್ಪ ಸಮಯದ ಮೊದಲು, ಇನ್ಸ್ಟಾಗ್ರಾಮ್‌ನಲ್ಲಿ “ಚರ್ಚ್ ಸ್ಟ್ರೀಟ್, ನಾವು ಬರುತ್ತಿದ್ದೇವೆ” ಎಂದು ಪೋಸ್ಟ್ ಅನ್ನು ಹಾಕಿದ್ದರು. ಈ ಪೋಸ್ಟ್ ನೋಡಿದ ಅವರ ಅಭಿಮಾನಿಗಳ ದೊಡ್ಡ ಸಮೂಹ ಅಲ್ಲಿಗೆ ಆಗಮಿಸಿದೆ.
ಜನನಿಬಿಡ ಚರ್ಚ್ ಸ್ಟ್ರೀಟ್‌ನಲ್ಲಿ ಏಕಾಏಕಿ ಹೀಗೆ ಜನಜಂಗುಳಿ ಸೃಷ್ಟಿಯಾಗಿರುವುದು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿತ್ತು. ಇದರ ಬಗ್ಗೆ ಕೂಡಲೇ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರ್ಯಕ್ರಮವನ್ನು ತಡೆದರು.
ಇಂತಹ ದೊಡ್ಡ ಸಭೆಗಳಿಗೆ ಪೂರ್ವಾನುಮತಿ ಅಗತ್ಯವಿದೆ ಎಂದು ಪೊಲೀಸರು ಝರೌಗೆ ವಿವರಿಸಿದರು. ಆರ್‌ಸಿಬಿ ವಿಜಯೋತ್ಸವದ ಸಮಯದಲ್ಲಿ ನಡೆದ ಕಾಲ್ತುಳಿತವನ್ನು ಉಲ್ಲೇಖಿಸಿದರು. ಅದರಲ್ಲಿ 11 ಜನರು ಸಾವನ್ನಪ್ಪಿದ್ದಾರೆ, ಇದು ಸಂಭಾವ್ಯ ಅಪಾಯಗಳಿಗೆ ಉದಾಹರಣೆ ಎಂದು ಮನದಟ್ಟು ಮಾಡಿಸಿದರು. ಚರ್ಚ್ ಸ್ಟ್ರೀಟ್‌ಗೆ ಮರಳುವುದಿಲ್ಲ ಎಂದು ಅಧಿಕಾರಿಗಳಿಗೆ ಭರವಸೆ ನೀಡಿದ ನಂತರ ಅವರನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ದು ಮತ್ತೊಂದು ಸ್ಥಳದಲ್ಲಿ ಬಿಡಲಾಗಿದೆ.
ಇದನ್ನೂ ಓದಿ: ED Sheeran: ಬೆಂಗಳೂರಿನಲ್ಲಿ ಹಾಡು ಹಾಡುತ್ತಿದ್ದ ಎಡ್ ಶೀರನ್‌ರನ್ನು ತಡೆದ ಪೊಲೀಸರು!