Al-Qaeda terrorist: ಬೆಂಗಳೂರಿನ ಜಿಹಾದಿ ಲೇಡಿ ಶಮಾ ಪರ್ವೀನ್‌ಗೆ ಇದ್ದಾರೆ 10,000 ಫಾಲೋವರ್ಸ್!
Shama Parveen Ansari: ಎಟಿಎಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಶಮಾ ಪರ್ವೀನ್ ಅನ್ಸಾರಿ ಭಾರತ ಸರ್ಕಾರದ ವಿರುದ್ಧ ‘ಸಶಸ್ತ್ರ ಕ್ರಾಂತಿ ಅಥವಾ ಜಿಹಾದ್’ಗೆ ಕರೆ ನೀಡುವ ವಿಷಯವನ್ನು ಪ್ರಸಾರ ಮಾಡಲು ಡಿಜಿಟಲ್ ವೇದಿಕೆಗಳನ್ನು ಬಳಸುತ್ತಿದ್ದಳು. ಧಾರ್ಮಿಕ ಭಿನ್ನಾಭಿಪ್ರಾಯವನ್ನು ಸೃಷ್ಟಿಸಲು ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಆಕೆ ಸಾಮಾಜಿಕ ಮಾಧ್ಯಮವನ್ನು ಸಕ್ರಿಯವಾಗಿ ಬಳಸುತ್ತಿದ್ದಳು.

ಶಮಾ ಪರ್ವೀನ್ ಅನ್ಸಾರಿ

ಬೆಂಗಳೂರು: ಅಲ್ ಕೈದಾ (Al-Qaeda) ಭಯೋತ್ಪಾದಕ ಸಂಘಟನೆಯ ಪರ ಬೆಂಗಳೂರಿನಿಂದ (Bengaluru) ಜಿಹಾದಿ (Jihad) ಚಟುವಟಿಕೆಗಳನ್ನು ನಡೆಸುತ್ತಿದ್ದ ಶಮಾ ಪರ್ವೀನ್ ಅನ್ಸಾರಿ (Shama Parveen Ansari) ಎಂಬ ಮಹಿಳೆಯನ್ನು ಗುಜರಾತ್ ಭಯೋತ್ಪಾದನೆ ನಿಗ್ರಹ ದಳದ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗುಜರಾತ್ ಎಟಿಎಸ್ ಆಕೆಯನ್ನು ಬಂಧಿಸಿದ್ದಲ್ಲದೆ, ಆಕೆಯ ಉಗ್ರ ಚಟುವಟಿಕೆ ಕುರಿತಾದ ಅನೇಕ ರಹಸ್ಯ ಮಾಹಿತಿಗಳನ್ನು ಬಯಲಿಗೆಳೆದಿದೆ. ಆನ್‌ಲೈನ್‌ನಲ್ಲಿ ಈಕೆ ಸಾಕಷ್ಟು ಪ್ರಮಾಣದ ಜಿಹಾದಿ ಮನಸ್ಥಿತಿಯ ಫಾಲೋವರ್ಸ್ ಪಡೆದಿದ್ದಳು ಎಂದು ಗೊತ್ತಾಗಿದೆ.
ಶಮಾ ಪರ್ವೀನ್ ಅನ್ಸಾರಿ ಜಾರ್ಖಂಡ್ ಮೂಲದವಳಾಗಿದ್ದು, ಪ್ರಸ್ತುತ ಬೆಂಗಳೂರಿನ ಆರ್‌ಟಿ ನಗರದಲ್ಲಿ ತಾಯಿ, ಸಹೋದರರ ಜೊತೆ ವಾಸವಿದ್ದಳು. ಇಲ್ಲಿದ್ದುಕೊಂಡೇ ಆನ್ಲೈನ್ ಮೂಲಕ ಜಿಹಾದಿ ಚಟುವಟಿಕೆಗಳನ್ನು ನಡೆಸುತ್ತಿದ್ದಳು. ಪ್ರಚೋದನಾಕಾರಿ ಸಂದೇಶಗಳನ್ನು ಹಂಚುತ್ತಿದ್ದಳು. ಎಟಿಎಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಶಮಾ ಪರ್ವೀನ್ ಅನ್ಸಾರಿ ಭಾರತ ಸರ್ಕಾರದ ವಿರುದ್ಧ ‘ಸಶಸ್ತ್ರ ಕ್ರಾಂತಿ ಅಥವಾ ಜಿಹಾದ್’ಗೆ ಕರೆ ನೀಡುವ ವಿಷಯವನ್ನು ಪ್ರಸಾರ ಮಾಡಲು ಡಿಜಿಟಲ್ ವೇದಿಕೆಗಳನ್ನು ಬಳಸುತ್ತಿದ್ದಳು. ಆಕೆಯ ಚಟುವಟಿಕೆಗಳು ಕೇವಲ ಸೈದ್ಧಾಂತಿಕ ಪ್ರಚಾರಕ್ಕಷ್ಟೇ ಸೀಮಿತವಾಗಿರಲಿಲ್ಲ. ಧಾರ್ಮಿಕ ಭಿನ್ನಾಭಿಪ್ರಾಯವನ್ನು ಸೃಷ್ಟಿಸಲು ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಪ್ರಚೋದನಕಾರಿ ಸಂದೇಶಗಳನ್ನು ಹರಡಲು ಆಕೆ ಸಾಮಾಜಿಕ ಮಾಧ್ಯಮವನ್ನು ಸಕ್ರಿಯವಾಗಿ ಬಳಸುತ್ತಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ.
10 ಸಾವಿರಕ್ಕೂ ಹೆಚ್ಚು ಫಾಲೋವರ್ಸ್
ಶಮಾ ಪರ್ವೀನ್ ಅನ್ಸಾರಿ ಎರಡು ಫೇಸ್‌ಬುಕ್ ಪುಟಗಳು ಮತ್ತು ಒಂದು ಇನ್‌ಸ್ಟಾಗ್ರಾಮ್ ಖಾತೆಯನ್ನು ನಿರ್ವಹಿಸುತ್ತಿದ್ದಳು. ಒಟ್ಟಾರೆಯಾಗಿ 10,000 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಳು. ಈ ವೇದಿಕೆಗಳ ಮೂಲಕ, ಅಲ್ ಕೈದಾ ಮತ್ತು ಇತರ ಮೂಲಭೂತವಾದಿ ಪ್ರಚಾರಕರಿಗೆ ಸಂಬಂಧಿಸಿದ ವಿಷಯವನ್ನು ಹಂಚಿಕೊಂಡಿದ್ದಳು ಎಂದು ಎಟಿಎಸ್‌ನ ಅಧಿಕೃತ ಪ್ರಕಟಣೆ ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ‘ಪಿಟಿಐ’ ವರದಿ ಮಾಡಿದೆ.
ಎಕ್ಯೂಐಎಸ್ (ಅಲ್ ಕೈದಾ ಇಂಡಿಯನ್ ಸಬ್ ಕಂಟಿನೆಂಟ್) ನಾಯಕಿ ಮೌಲಾನಾ ಅಸಿಮ್ ಉಮರ್, ಹತ್ಯೆಗೀಡಾದ ಅಲ್-ಕೈದಾ ಉಗ್ರ ಅನ್ವರ್ ಅಲ್-ಅವ್ಲಾಕಿ ಮತ್ತು ಲಾಹೋರ್‌ನ ಲಾಲ್ ಮಸೀದಿಯ ಮೌಲಾನಾ ಅಬ್ದುಲ್ ಅಜೀಜ್ ಭಾಷಣಗಳು ಮತ್ತು ವೀಡಿಯೊಗಳನ್ನು ಪರ್ವೀನ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಳು. ಘಜ್ವಾ-ಎ-ಹಿಂದ್‌ನಂತಹ ವಿಷಯಗಳನ್ನು ಪ್ರಚಾರ ಮಾಡಿದ್ದಳು. ʼಕಾಫಿರ್ʼಗಳ ಮೇಲೆ ದಾಳಿಗೆ ಕರೆ ನೀಡಿ ಮತ್ತು ಭಾರತ ಸರ್ಕಾರವನ್ನು ಉರುಳಿಸಲು ಪ್ರತಿಪಾದಿಸಿದ ಸಂದೇಶಗಳನ್ನೂ ಹಂಚಿಕೊಂಡಿದ್ದಳು.
ಶಮಾ ಪರ್ವೀನ್ ಅನ್ಸಾರಿ ಪಾಕಿಸ್ತಾನಿ ಸಂಸ್ಥೆಗಳೊಂದಿಗೆ ಫೋನ್ ಮತ್ತು ಇಮೇಲ್ ಮೂಲಕ ನಿರಂತರ ಸಂಪರ್ಕದಲ್ಲಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಜುಲೈ ಆರಂಭದಲ್ಲಿ ಎಟಿಎಸ್ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯ ಸಂದರ್ಭದಲ್ಲಿ ಈಕೆಯ ಸಂಚುಗಳ ಬಗ್ಗೆ ತಿಳಿದುಬಂದಿತ್ತು.
ಗುಜರಾತ್ ಎಟಿಎಸ್ ಜುಲೈ 23 ರಂದು ದೆಹಲಿ, ನೋಯ್ಡಾ, ಅಹಮದಾಬಾದ್ ಮತ್ತು ಮೋಡಸಾದ ನಾಲ್ವರನ್ನು ಎಕ್ಯೂಐಎಸ್ ಪರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಮೂಲಭೂತವಾದಿ ಮತ್ತು ಜಿಹಾದಿ ಪ್ರಚಾರದ ವೀಡಿಯೊಗಳನ್ನು ಹಂಚಿಕೊಂಡ ಆರೋಪದ ಮೇಲೆ ಬಂಧಿಸಿತ್ತು. ಈ ವೀಡಿಯೊಗಳು ಭಾರತೀಯ ಮುಸ್ಲಿಂ ಯುವಕರನ್ನು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಿರಸ್ಕರಿಸಲು ಮತ್ತು ಸಶಸ್ತ್ರ ದಂಗೆಯ ಮೂಲಕ ಷರಿಯಾ (ಇಸ್ಲಾಮಿಕ್ ಕಾನೂನು) ಹೇರಲು ಪ್ರಚೋದಿಸುವ ಗುರಿಯನ್ನು ಹೊಂದಿವೆ ಎಂದು ಎಟಿಎಸ್ ಹೇಳಿದೆ.
ಇದನ್ನೂ ಓದಿ: Terrorist in bengaluru: ಬೆಂಗಳೂರಿನಲ್ಲಿದ್ದ ಅಲ್ ಖೈದಾ ಮಾಸ್ಟರ್ ಮೈಂಡ್ ಭಯೋತ್ಪಾದಕಿ ಬಂಧನ!