ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bike Taxi service: ಬೈಕ್ ಟ್ಯಾಕ್ಸಿ ಆ್ಯಪ್‌ ನಿಷೇಧಕ್ಕೆ ಆಟೋ, ಟ್ಯಾಕ್ಸಿ ಚಾಲಕರ ಆಗ್ರಹ; ಸರ್ಕಾರಕ್ಕೆ 15 ದಿನಗಳ ಗಡುವು

ಟ್ಯಾಕ್ಸಿ ಸೇವೆ ನೀಡುತ್ತಿರುವ ಅಗ್ರಿಗೇಟರ್‌ ಸಂಸ್ಥೆಗಳು ಬೈಕ್ ಟ್ಯಾಕ್ಸಿ ಸೇವೆಗೆ ಪರವಾನಗಿ ಪಡೆದಿಲ್ಲ. ಹೀಗಾಗಿ ಕಾನೂನು ಪ್ರಕಾರ ಸಂಬಂಧಿಸಿದ ಆ್ಯಪ್/ಅಗ್ರಿಗೇಟರ್ ವಿರುದ್ಧವೂ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಆಗ್ರಹಿಸಿದೆ.

ಬೈಕ್ ಟ್ಯಾಕ್ಸಿ ಆ್ಯಪ್‌ ನಿಷೇಧಕ್ಕೆ ಆಟೋ, ಟ್ಯಾಕ್ಸಿ ಚಾಲಕರ ಆಗ್ರಹ

ಸಾಂದರ್ಭಿಕ ಚಿತ್ರ. -

Prabhakara R
Prabhakara R Aug 29, 2026 4:02 PM

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಿರುವ ಬೈಕ್ ಟ್ಯಾಕ್ಸಿ (Bike taxi) ಆ್ಯಪ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರದ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳು ಆಗ್ರಹಿಸಿವೆ. ಈ ಸಂಬಂಧ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟವು ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದು, ಕ್ರಮ ಕೈಗೊಳ್ಳಲು 15 ದಿನಗಳ ಗಡುವು ನೀಡಿದೆ.

ಬೈಕ್ ಟ್ಯಾಕ್ಸಿ ಸೇವೆಗಳನ್ನು ಒದಗಿಸುತ್ತಿರುವ ಮೊಬೈಲ್ ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ತಕ್ಷಣವೇ ತೆಗೆದುಹಾಕಬೇಕು ಎಂದು ಒಕ್ಕೂಟವು ಗಂಭೀರವಾಗಿ ಒತ್ತಾಯಿಸಿದೆ. ಸಾರಿಗೆ ಆಯುಕ್ತರ ಕಚೇರಿ ಮುಂದೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಒಕ್ಕೂಟದ ಸದಸ್ಯರು, ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದ್ದಾರೆ. ಒಂದು ವೇಳೆ ಈ ಅವಧಿಯಲ್ಲಿ ಸೂಕ್ತ ಕ್ರಮ ಜರುಗದಿದ್ದರೆ ತಮ್ಮ ವಾಹನಗಳಿಗೆ ಕಪ್ಪು ಬಾವುಟ ಅಳವಡಿಸಿ ಶಾಂತಿಯುತ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ.

ಬೈಕ್ ಟ್ಯಾಕ್ಸಿಗಳು ಯಾವುದೇ ಸೂಕ್ತ ಕಾನೂನು ಚೌಕಟ್ಟು ಅಥವಾ ಸಾರಿಗೆ ಪರವಾನಗಿ (ಪರ್ಮಿಟ್) ಇಲ್ಲದೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಂಘಟನೆಗಳು ಆರೋಪಿಸಿವೆ. ಖಾಸಗಿ ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಬಳಕೆಗೆ ಉಪಯೋಗಿಸುತ್ತಿರುವುದರಿಂದ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾಗುತ್ತಿದೆ. ಜೊತೆಗೆ ಚಾಲಕರ ಪೊಲೀಸ್ ಪರಿಶೀಲನೆ ಹಾಗೂ ಸೂಕ್ತ ವಿಮೆ ವ್ಯವಸ್ಥೆ ಇಲ್ಲದಿರುವುದು ಅಪಾಯಕಾರಿ ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.

Kasturi Rangan Report: ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶ ನೀಡಲ್ಲ: ಪರಮೇಶ್ವರ

ಇನ್ನು ಆಟೋ ಮತ್ತು ಕ್ಯಾಬ್ ಆ್ಯಪ್‌ಗಳು ಸರ್ಕಾರ ನಿಗದಿಪಡಿಸಿದ ದರಗಳನ್ನು ಮೀರಿ ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿವೆ ಎಂದು ಚಾಲಕರು ಆರೋಪಿಸಿದ್ದು, ನಗರದಲ್ಲಿ “ಒಂದು ನಗರ, ಒಂದೇ ದರ” (One City, One Fare) ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.